IAF Rafale: ರಫೇಲ್‌ ಹಗರಣ?; ಕೇಂದ್ರ ಸರ್ಕಾರದ ಎದುರು ಮತ್ತೆ ಮೂರು ಪ್ರಶ್ನೆಗಳನ್ನಿಟ್ಟ ರಾಹುಲ್‌ ಗಾಂಧಿ

ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲೂ ಸಹ ಇದೇ ವಿಚಾರವನ್ನು ಮುಂದಿಟ್ಟಿದ್ದ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಆಗಮಿಸಿರುವ ಹಿನ್ನೆಲೆಯಲ್ಲಿ ಮತ್ತೆ ಅವೇ ಮೂರು ಪ್ರಶ್ನೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ.

MAshok Kumar | news18-kannada
Updated:July 30, 2020, 9:12 AM IST
IAF Rafale: ರಫೇಲ್‌ ಹಗರಣ?; ಕೇಂದ್ರ ಸರ್ಕಾರದ ಎದುರು ಮತ್ತೆ ಮೂರು ಪ್ರಶ್ನೆಗಳನ್ನಿಟ್ಟ ರಾಹುಲ್‌ ಗಾಂಧಿ
ರಾಹುಲ್ ಗಾಂಧಿ
  • Share this:
ನವ ದೆಹಲಿ (ಜುಲೈ 30); ನಿರೀಕ್ಷೆಯಂತೆಯೇ ರಫೇಲ್ ಜೆಟ್ ಯುದ್ಧ ವಿಮಾನ ನಿನ್ನೆ ಮಧ್ಯಾಹ್ನದ ವೇಳೆಗೆ ಹರಿಯಾಣದಲ್ಲಿರುವ ಅಂಬಾಲಾ ವಾಯುನೆಲೆಗೆ ಬಂದು ಸೇರಿದೆ. ಆದರೆ, ರಫೇಲ್ ಜೆಟ್ ಭಾರತದ ನೆಲ ಸ್ಪರ್ಶಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ರಫೇಲ್ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಫ್ರಾನ್ಸ್ ಮೂಲದ ಡಸಾಲ್ಟ್ ಕಂಪೆನಿ ಜೊತೆಗೆ 59,000 ಕೋಟಿ ರೂ.ಗಳ ರಫೇಲ್ ಒಪ್ಪಂದ ಮಾಡಿಕೊಂಡು ಅದಕ್ಕೆ ಉದ್ಯಮಿ ಅನಿಲ್ ಅಂಬಾನಿಯನ್ನು ಮಧ್ಯವರ್ತಿಯನ್ನಾಗಿ ನೇಮಕ ಮಾಡಿದ ದಿನದಿಂದ, ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಎದುರು ಅನೇಕ ಪ್ರಶ್ನೆಗಳನ್ನು ಮುಂದಿಡುತ್ತಲೇ ಇದ್ದಾರೆ.

ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲೂ ಸಹ ಇದೇ ವಿಚಾರವನ್ನು ಮುಂದಿಟ್ಟಿದ್ದ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಆಗಮಿಸಿರುವ ಹಿನ್ನೆಲೆಯಲ್ಲಿ ಮತ್ತೆ ಅವೇ ಮೂರು ಪ್ರಶ್ನೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ.



ಟ್ವೀಟ್ ಮೂಲಕ ಹಿಂದಿ ಮತ್ತು ಇಂಗ್ಲೀಷ್‌ ಭಾಷೆಯಲ್ಲಿ ಮೂರು ಪ್ರಶ್ನೆಗಳನ್ನು ಮುಂದಿಟ್ಟಿರುವ ರಾಹುಲ್ ಗಾಂಧಿ, “ರಫೇಲ್ ಯುದ್ಧ ವಿಮಾನಕ್ಕಾಗಿ ಭಾರತೀಯ ವಾಯುಪಡೆಗೆ ಅಭಿನಂದನೆಗಳು. ಆದರೂ, ಈ ಮೂರು ಪ್ರಶ್ನೆಗಳಿಗೆ ಭಾರತ ಸರ್ಕಾರ ಉತ್ತರಿಸಬಹುದು: 1) ಪ್ರತಿ ವಿಮಾನಕ್ಕೂ ರೂ .526 ಕೋಟಿಗಳ ಬದಲು ರೂ .1670 ಕೋಟಿ ವೆಚ್ಚ ಏಕೆ? 2) 126 ಯುದ್ಧ ವಿಮಾನಗಳ ಬದಲು ಕೇವಲ 36 ವಿಮಾನಗಳನ್ನು ಏಕೆ ಖರೀದಿಸಲಾಗುತ್ತಿದೆ ? 3) 30,000 ಕೋಟಿ ರಫೇಲ್ ಗುತ್ತಿಗೆಯನ್ನು ಹೆಚ್ಎಎಲ್ ಬದಲು ಬ್ಯಾಂಕ್ ದಿವಾಳಿಯಾಗಿರುವ ಅನಿಲ್ ಅಂಬಾನಿಗೆ ಏಕೆ ನೀಡಲಾಯಿತು?” ಎಂದು ಮೂರು ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಇದನ್ನೂ ಓದಿ : Rafale Jets: ಭಾರತಕ್ಕೆ ಬಂದಿಳಿದ ರಫೇಲ್ ಯುದ್ಧ ವಿಮಾನಗಳು; ನಮ್ಮ ಸೇನಾ ಇತಿಹಾಸದಲ್ಲಿ ಹೊಸ ಶಕೆ ಆರಂಭ ಎಂದ ರಾಜನಾಥ ಸಿಂಗ್

ಉದ್ಯಮಿ ಅನಿಲ್ ಅಂಬಾನಿ ಅವರ ಅನನುಭವಿ ರಕ್ಷಣಾ ಕಂಪೆನಿಗೆ ರಫೇಲ್ ಒಪ್ಪಂದವನ್ನು ನೀಡಲು ಅನುಕೂಲವಾಗುವಂತೆ ಪ್ರಧಾನಿ ಮೋದಿ ನೋಡಿಕೊಂಡಿದ್ದಾರೆ. ಅಲ್ಲದೆ, ಅಧಿಕ ದರದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಕಳೆದ ಹಲವು ವರ್ಷಗಳಿಂದ ರಾಹುಲ್ ಗಾಂಧಿ ವಿಮರ್ಶಿಸುತ್ತಲೇ ಬಂದಿದ್ದಾರೆ. ಈ ನಡುವೆ ರಫೇಲ್ ಸಂಬಂಧ ಕೆಲವು ದಾಖಲೆಗಳು ರಕ್ಷಣಾ ಸಚಿವಾಲಯದಿಂದ ಕಳುವಾಗಿದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

ಹೀಗಾಗಿ ಇದೇ ವಿಚಾರವನ್ನು ಮುಂದಿಟ್ಟು ರಾಹುಲ್ ಗಾಂಧಿ ಕಳೆದ ಲೋಕಸಭಾ ಚುನಾವಣೆಯಲ್ಲಿ “ಚೌಕಿದಾರ್ ಚೋರ್ ಹೈ” ಎಂದು ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಅಭಿಯಾನವನ್ನೇ ಆರಂಭಿಸಿದ್ದರು. ಆದರೆ, ಈ ಹಗರಣವನ್ನು ಮತಗಳಾಗಿ ಪರಿವರ್ತಿಸುವಲ್ಲಿ ಕಾಂಗ್ರೆಸ್ ಸೋಲನುಭವಿಸಿತ್ತು. ಆದರೆ, ಪ್ರಸ್ತುತ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಆಗಮಿಸಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಮತ್ತೊಮ್ಮೆ ಈ ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಈಗಲಾದರೂ ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.
Published by: MAshok Kumar
First published: July 30, 2020, 8:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading