'ಕಾಂಗ್ರೆಸ್​ ಅಧಿಕಾರಕ್ಕೆ ಬಂದಕೂಡಲೆ ಆಂಧ್ರಕ್ಕೆ ವಿಶೇಷ ಮಾನ್ಯತೆ ನೀಡುವುದು ಖಚಿತ'; ರಾಹುಲ್ ಗಾಂಧಿ ಭರವಸೆ

ಎರಡು ದಿನಗಳ ಭೇಟಿಗೆಂದು ಯುಎಇಗೆ ತೆರಳಿರುವ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಜಯಭೇರಿ ಬಾರಿಸಿದ ನಂತರ ಮಾಡುವ ಮೊದಲ ಕೆಲಸವೇ ಆಂಧ್ರಪ್ರದೇಶಕ್ಕೆ ವಿಶೇಷ ಮಾನ್ಯತೆ ಸಿಗುವಂತೆ ಮಾಡುವುದು ಎಂದು ಆಶ್ವಾಸನೆ ನೀಡಿದ್ದಾರೆ.

sushma chakre | news18
Updated:January 12, 2019, 9:22 AM IST
'ಕಾಂಗ್ರೆಸ್​ ಅಧಿಕಾರಕ್ಕೆ ಬಂದಕೂಡಲೆ ಆಂಧ್ರಕ್ಕೆ ವಿಶೇಷ ಮಾನ್ಯತೆ ನೀಡುವುದು ಖಚಿತ'; ರಾಹುಲ್ ಗಾಂಧಿ ಭರವಸೆ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
sushma chakre | news18
Updated: January 12, 2019, 9:22 AM IST
ನವದೆಹಲಿ (ಜ. 12): ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಜೊತೆಗೆ ಕೈಜೋಡಿಸಿ ಜಯ ಸಾಧಿಸಿದರೆ ಖಂಡಿತವಾಗಿಯೂ ಆಂಧ್ರಪ್ರದೇಶಕ್ಕೆ ವಿಶೇಷ ಮಾನ್ಯತೆ ಒದಗಿಸಿಕೊಡುವುದಾಗಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.

ದುಬೈನಲ್ಲಿ ನಡೆದ ಅನಿವಾಸಿ ಭಾರತೀಯರ ಸಮಾವೇಶದಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಜಯ ಸಾಧಿಸಲು ಆಂಧ್ರದ ಜನರು ಸಹಕಾರ ನೀಡಿದರೆ ಅವರಿಗೆ ಬೇಕಾದ ವಿಶೇಷ ಮಾನ್ಯತೆಯನ್ನು ನೀಡುವ ಹೊಣೆಯನ್ನು ನಾವು ಹೊರುತ್ತೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಕೂಡಲೆ ಆಂಧ್ರಪ್ರದೇಶಕ್ಕೆ ವಿಶೇಷ ಮಾನ್ಯತೆ ನೀಡಲಿದ್ದೇವೆ ಎಂದು ಹೇಳಿದ್ದಾರೆ.

2014ರಲ್ಲಿ ಆಂಧ್ರಪ್ರದೇಶದ ಮತ್ತು ತೆಲಂಗಾಣ ಎಂದು ಎರಡು ರಾಜ್ಯಗಳಾಗಿ ವಿಂಗಡಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ತನಗೆ ವಿಶೇಷ ಸಾಂವಿಧಾನಿಕ ಮಾನ್ಯತೆ ಸಿಗಬೇಕೆಂದು ಕೇಂದ್ರದ ಮೇಲೆ ಒತ್ತಡ ಹೇರಿತ್ತು. ಆದರೆ, ಆ ಬೇಡಿಕೆ ಇನ್ನೂ ಈಡೇರಿಲ್ಲ. ಎನ್​ಡಿಎ ಸರ್ಕಾರ ಈ ಬೇಡಿಕೆಯನ್ನು ಈಡೇರಿಸಲು ಒಪ್ಪದ ಕಾರಣ ತೆಲುಗು ದೇಶಂ ಪಾರ್ಟಿ ಎನ್​ಡಿಎ ಜೊತೆಗಿನ ಸಂಬಂಧವನ್ನು ಮುರಿದುಕೊಂಡಿತ್ತು.

ಇದನ್ನೂ ಓದಿ: ದುಬೈನಲ್ಲಿ ರಾಹುಲ್​​​: ನಿಮ್ಮ ಮನದ ಮಾತು ಆಲಿಸುವೆ; ಅನಿವಾಸಿ ಭಾರತೀಯರಿಗೆ ಕಾಂಗ್ರೆಸ್​​ ಅಧ್ಯಕ್ಷ ಭರವಸೆ!

ಕಳೆದ ವರ್ಷ ಮಾರ್ಚ್​ ತಿಂಗಳಲ್ಲಿ ಜಂತರ್​ ಮಂತರ್​ನಲ್ಲಿ ಆಂಧ್ರಪ್ರದೇಶದ ಜನರು ತಮಗೆ ವಿಶೇಷ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದರು. ಆಗ ಅಲ್ಲಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, 2019ರಲ್ಲಿ ನಾವು ಅಧಿಕಾರಕ್ಕೆ ಬಂದ ಕೂಡಲೆ ಮಾಡುವ ಮೊದಲ ಕಾರ್ಯವೇ ನಿಮಗೆ ವಿಶೇಷ ಮಾನ್ಯತೆ ಸಿಗುವಂತೆ ಮಾಡುವುದು ಎಂದು ಹೇಳಿಬಂದಿದ್ದರು. ನಾವೆಲ್ಲ ಒಗ್ಗಟ್ಟಾಗಿ ನಿಂತರೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಂಧ್ರಪ್ರದೇಶದ ಜನರ ಸಾಮರ್ಥ್ಯವೇನು ಮತ್ತು ಅವರಿಗೆ ಸರ್ಕಾರದಿಂದ ಏನು ಸಿಗಬೇಕೆಂಬುದನ್ನು ಅರ್ಥ ಮಾಡಿಸಲು ಸಾಧ್ಯವಿದೆ. ಹಾಗೇ, ಆಂಧ್ರದ ಜನರ ವಿರೋಧ ಕಟ್ಟಿಕೊಂಡರೆ ಏನಾಗುತ್ತದೆ ಎಂಬುದನ್ನೂ ಬಿಜೆಪಿಗೆ ಅರ್ಥ ಮಾಡಿಸಲು ಒಂದೊಳ್ಳೆ ಅವಕಾಶ ಸಿಕ್ಕಿದೆ ಎಂದು ರಾಹುಲ್ ಹೇಳಿದ್ದರು.

ಭಾರತ ಅಸಹಿಷ್ಣುತೆಯನ್ನು ಅನುಭವಿಸುತ್ತಿದೆ:

ಯುಎಇಯಲ್ಲಿ ಮಾತನಾಡುವಾಗ ಅಸಹಿಷ್ಣುತೆಯ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ, ಯುಎಇಯಲ್ಲಿ ಸಹಿಷ್ಣುತೆಯನ್ನು ಕಾಣುತ್ತಿದ್ದೇನೆ. ಅದೇ ನನ್ನ ದೇಶದಲ್ಲಿ ಅಸಹಿಷ್ಣುತೆಗೆ ಸಾಕ್ಷಿಯಾಗುತ್ತಿದ್ದೇವೆ. ಕಳೆದ ನಾಲ್ಕೂವರೆ ವರ್ಷಗಳಿಂದಲೂ ನಾವು ಈ ಅಸಹಿಷ್ಣುತೆಯನ್ನು ಅನುಭವಿಸುತ್ತಲೇ ಇದ್ದೇವೆ ಎಂದು ಹೇಳಿದ್ದಾರೆ.
Loading...

ಒಬ್ಬರ ಯೋಚನೆ ಮಾತ್ರ ಸರಿ, ಉಳಿದವರೆಲ್ಲ ಮೂರ್ಖರು ಎಂಬಂತಹ ಮನಸ್ಥಿತಿಯಿರುವ ಕೈಯಲ್ಲಿ ದೇಶವನ್ನು ಕೊಟ್ಟು ಭಾರತವನ್ನು ಮುನ್ನಡೆಸಲು ಸಾಧ್ಯವೇ ಇಲ್ಲ. ನನ್ನ ಪ್ರೀತಿಯ ದೇಶವಾದ ಭಾರತ ಇಂದು ರಾಜಕೀಯ ಕುತಂತ್ರಗಳಿಂದಾಗಿ ಇಬ್ಭಾಗವಾಗಿಹೋಗಿದೆ.

ಇದನ್ನೂ ಓದಿ: ಠಾಕ್ರೆ ಮಗನ ಮದುವೆಗೆ ಪ್ರಧಾನಿ ಮೋದಿಗಿಲ್ಲ ಆಹ್ವಾನ; ಏನಿದರ ಹಿಂದಿನ ರಾಜಕೀಯ ಲೆಕ್ಕಾಚಾರ?

ಬಿಜೆಪಿಯವರು 'ಕಾಂಗ್ರೆಸ್​ಮುಕ್ತ ಭಾರತ' ನಿರ್ಮಾಣ ಮಾಡಬೇಕೆಂದು ಅಭಿಯಾನ ಮಾಡುತ್ತಿದ್ದಾರೆ. ಆದರೆ, ನಮಗೆ 'ಬಿಜೆಪಿಮುಕ್ತ ಭಾರತ' ಬೇಕಾಗಿಲ್ಲ. ನಮಗೆ ನಮ್ಮ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯೂ ಮೊದಲು ನಾನೊಬ್ಬ ಭಾರತೀಯ, ಆಮೇಲೆ ಉಳಿದಿದ್ದೆಲ್ಲ ಎಂದು ಹೇಳುವಂತಾಗಬೇಕು. ಅಂತಹ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಬೇಕೆಂಬುದು ನಮ್ಮ ಗುರಿ ಎಂದಿದ್ದಾರೆ.

ಗಾಂಧೀಜಿ ಕೂಡ ಎನ್​ಆರ್​ಐ:

ಅನಿವಾಸಿ ಭಾರತೀಯರ ( ಎನ್​ಆರ್​ಐ) ಸಹಕಾರವಿಲ್ಲದೆ ಭಾರತವನ್ನು ಮುನ್ನಡೆಸಲು ಸಾಧ್ಯವಿಲ್ಲ. ಕಳೆದ ಶತಮಾನದಲ್ಲಿ ಭಾರತೀಯರು ಎದ್ದುನಿಂತು ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಪಡೆದುಕೊಂಡರು. ಈ ಹೋರಾಟದ ನೇತೃತ್ವ ವಹಿಸಿದ್ದ ಮಹಾತ್ಮಾ ಗಾಂಧೀಜಿ ಕೂಡ ಓರ್ವ ಎನ್​ಆರ್​ಐ. ಅವರು ಇಡೀ ದೇಶದ ಜನರನ್ನು ಒಗ್ಗೂಡಿಸಿ ಅಹಿಂಸೆಯ ಮೂಲಕವೇ ದೇಶಕ್ಕೆ ಸ್ವಾತಂತ್ರ್ಯ ಸಿಗುವಂತೆ ಮಾಡಿದರು. ಹಿಂಸೆಯಿಂದ ಏನೂ ಮಾಡಲು ಸಾಧ್ಯವಿಲ್ಲ ಎಂಬುದು ಎಲ್ಲ ದೇಶಗಳಿಗೂ, ಎಲ್ಲ ಧರ್ಮಗಳಿಗೂ ಅನ್ವಯವಾಗುವ ಬಹುದೊಡ್ಡ ಸತ್ಯ ಎಂದು ಹೇಳಿದರು.

ಇದನ್ನೂ ಓದಿ: ಲೋಕಸಭಾ ಚುನಾವಣೆ: ಸಿಎಂ ಕೇಜ್ರಿವಾಲ್​​​- ಪ್ರಕಾಶ್​​ ರೈ ಭೇಟಿ: ಸಂಪೂರ್ಣ ಬೆಂಬಲ ನೀಡುವುದಾಗಿ ಆಪ್​​ ಘೋಷಣೆ!

ನಮ್ಮ ದೇಶದ ಭವಿಷ್ಯ ಎನ್​ಆರ್​ಐಗಳ ಭವಿಷ್ಯದ ನಡುವೆ ಸಂಬಂಧವಿದೆ. ಬೇರೆ ದೇಶಗಳಲ್ಲಿ ನೆಲೆಸಿರುವ ಭಾರತೀಯರು ಖುಷಿಯಾಗಿಲ್ಲದಿದ್ದರೆ, ತೊಂದರೆ ಅನುಭವಿಸುತ್ತಿದ್ದರೆ ಭಾರತ ಕೂಡ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ತಾಳ್ಮೆ, ಸಹೋದರತ್ವ, ಅಹಿಂಸೆಗಳೆಲ್ಲ ನಮ್ಮ ರಕ್ತದಲ್ಲೇ ಬಂದಿದೆ. ನಾವು ನಮ್ಮ ದೇಶದ ಅಭಿವೃದ್ಧಿಗೆ ಮಾತ್ರ ನೀಲನಕ್ಷೆ ರೂಪಿಸಿಕೊಂಡಿಲ್ಲ. ಇಡೀ ವಿಶ್ವದ ಅಭಿವೃದ್ಧಿಯ ನೀಲನಕ್ಷೆ ರೂಪಿಸುತ್ತಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

First published:January 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ