ರೈತರಿಗೆ ಸುಳ್ಳು ಆಶ್ವಾಸನೆ ನೀಡಿದ ರಾಹುಲ್ ಗಾಂಧಿ ಜನರ ಕ್ಷಮೆ ಕೇಳಲಿ; ದಿಗ್ವಿಜಯ್ ಸಿಂಗ್ ಸಹೋದರ ಕಾಂಗ್ರೆಸ್​ ಶಾಸಕ ಲಕ್ಷ್ಮಣ್​ ಸಿಂಗ್ ಒತ್ತಾಯ

ಕಳೆದ ವರ್ಷ ಜೂನ್ ತಿಂಗಳಲ್ಲಿ ಮಂಡಸೌರ್ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್ಯಾಲಿ ಸಂದರ್ಭದಲ್ಲಿ ತಾವು ಅಧಿಕಾರಕ್ಕೆ ಬಂದರೆ ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತ್ತೀಸ್​ಘಡ ರಾಜ್ಯದ ರೈತರ ಸಾಲವನ್ನು ಕೇವಲ 10 ದಿನದಲ್ಲಿ ಮನ್ನಾ ಮಾಡಲಾಗುವುದು ಎಂದು ರಾಹುಲ್ ಗಾಂಧಿ ಏಕಾಏಕಿ ಆಶ್ವಾಸನೆ ನೀಡಿದರು. ಆದರೆ, ಈವರೆಗೆ ಸರ್ಕಾರ ರೈತರ ಸಾಲಮನ್ನಾ ಮಾಡಿಲ್ಲ ಎಂದು ಮಧ್ಯಪ್ರದೇಶದ ಕಾಂಗ್ರೆಸ್​ ಶಾಸಕ ಲಕ್ಷ್ಮಣ್​ ಸಿಂಗ್ ಸ್ವತಃ ತಮ್ಮ ಸರ್ಕಾರದ ವಿರುದ್ಧವೇ ಕಿಡಿಕಾರಿದ್ದಾರೆ.

MAshok Kumar | news18-kannada
Updated:September 19, 2019, 8:32 PM IST
ರೈತರಿಗೆ ಸುಳ್ಳು ಆಶ್ವಾಸನೆ ನೀಡಿದ ರಾಹುಲ್ ಗಾಂಧಿ ಜನರ ಕ್ಷಮೆ ಕೇಳಲಿ; ದಿಗ್ವಿಜಯ್ ಸಿಂಗ್ ಸಹೋದರ ಕಾಂಗ್ರೆಸ್​ ಶಾಸಕ ಲಕ್ಷ್ಮಣ್​ ಸಿಂಗ್ ಒತ್ತಾಯ
ಮಧ್ಯಪ್ರದೇಶದ ಕಾಂಗ್ರೆಸ್​ ಶಾಸಕ ಲಕ್ಷ್ಮಣ್​ ಸಿಂಗ್.
  • Share this:
ಭೋಪಾಲ್ (ಸೆಪ್ಟೆಂಬರ್.19); ಮಧ್ಯಪ್ರದೇಶದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಕೇವಲ 10 ದಿನದಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಸುಳ್ಳು ಆಶ್ವಾಸನೆ ನೀಡಿದ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಇಲ್ಲಿನ ರೈತರ ಕ್ಷಮೆ ಕೇಳಲಿ ಎಂದು ಸ್ವತಃ ಕಾಂಗ್ರೆಸ್ ಶಾಸಕ, ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರ ಸಹೋದರ ಲಕ್ಷ್ಮಣ್ ಸಿಂಗ್ ಒತ್ತಾಯಿಸಿದ್ದಾರೆ.

ಇಂದು ಭೋಪಾಲ್​ನಲ್ಲಿ ಸಾಲಮನ್ನಾ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, “ಚುನಾವಣಾ ಸಂದರ್ಭದಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೇರಿದರೆ ಕೇವಲ 10 ದಿನದಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದ್ದರು. ಆದರೆ, ಈವರೆಗೆ ಸಾಲ ಮನ್ನಾ ಆಗಿಲ್ಲ. ರಾಜಕಾರಣಿಗಳು ಇಂತಹ ಆಶ್ವಾಸನೆ ನೀಡಬಾರದು. ಹಾಗೆ ನೀಡುವುದಾರೂ ನಿರ್ದಿಷ್ಟ ಕಾಲ ಹಾಗೂ ಸಮಯವನ್ನು ಸೂಚಿಸಬೇಕು. ಆದರೆ, ರಾಹುಲ್ ಗಾಂಧಿ ಇದ್ಯಾವುದನ್ನೂ ಮಾಡಲಿಲ್ಲ.

ಬದಲಿಗೆ ಕಳೆದ ವರ್ಷ ಜೂನ್ ತಿಂಗಳಲ್ಲಿ ಮಂಡಸೌರ್ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್ಯಾಲಿ ಸಂದರ್ಭದಲ್ಲಿ ತಾವು ಅಧಿಕಾರಕ್ಕೆ ಬಂದರೆ ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತ್ತೀಸ್​ಘಡ ರಾಜ್ಯದ ರೈತರ ಸಾಲವನ್ನು ಕೇವಲ 10 ದಿನದಲ್ಲಿ ಮನ್ನಾ ಮಾಡಲಾಗುವುದು ಎಂದು ಏಕಾಏಕಿ ಆಶ್ವಾಸನೆ ನೀಡಿದರು. ಆದರೆ, ಈವರೆಗೆ ಸರ್ಕಾರ ರೈತರ ಸಾಲಮನ್ನಾ ಮಾಡಿಲ್ಲ.

ಪರಿಣಾಮ ನಾನೂ ಸೇರಿದಂತೆ ಯಾವುದೇ ಕಾಂಗ್ರೆಸ್​ ಪಕ್ಷದ ಶಾಸಕರು ತಮ್ಮ ಕ್ಷೇತ್ರಕ್ಕೆ ತೆರಳಿದರು ರೈತರು ಸಾಲಮನ್ನಾ ಕುರಿತು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ, ಸಾಲ ಪಾವತಿ ಮಾಡುವಂತೆ ಬ್ಯಾಂಕ್ ನೀಡಿದ ನೊಟೀಸ್ ಅನ್ನು ನಮ್ಮ ಮುಂದಿಡುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಶೀಘ್ರದಲ್ಲಿ ಇದಕ್ಕೊಂದು ಪರಿಹಾರ ನೀಡಬೇಕು. ಸಾಲಮನ್ನಾ ಜಾರಿಗೆ ತರಲಾಗುತ್ತದೆಯೇ? ಇಲ್ಲವೇ? ಎಂಬುದನ್ನು ಜನರಿಗೆ ಸ್ಪಷ್ಟಪಡಿಸಬೇಕು ಹಾಗೂ ರಾಹುಲ್ ಗಾಂಧಿ ಇಲ್ಲಿನ ಜನರ ಕ್ಷಮೆ ಕೇಳಬೇಕು" ಎಂದು ಲಕ್ಷ್ಮಣ್​ ಸಿಂಗ್ ಆಗ್ರಹಿಸಿದ್ದಾರೆ.

ಮಧ್ಯಪ್ರದೇಶದ ಚಚ್ಚೋಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಲಕ್ಷ್ಮಣ್ ಸಿಂಗ್ ಅಲ್ಲಿನ ರಾಜ್ಯ ಸರ್ಕಾರದಲ್ಲಿ ಪ್ರಮುಖ ಸಚಿವಾಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಸಚಿವ ಸ್ಥಾನ ನೀಡದ ಕಾರಣ ಸಿಎಂ ಕಮಲ್​ನಾಥ್​ ವಿರುದ್ಧ ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರದ ಎಲ್ಲಾ ನೀತಿಗಳನ್ನೂ ಹೆಜ್ಜೆ ಹೆಜ್ಜೆಗೂ ಅವರು ಟೀಕಿಸುತ್ತಿದ್ದಾರೆ. ಈ ಹಿಂದೆ ಕಾಶ್ಮೀರಕ್ಕೆ ನೀಡಲಾಗುತ್ತಿದ್ದ 370 ಕಲಂ ಅನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದಾಗ ಆ ತೀರ್ಮಾನವನ್ನು ಲಕ್ಷ್ಮಣ್ ಸಿಂಗ್ ಪ್ರಶಂಸಿಸಿದ್ದರು. ಅಲ್ಲದೆ, ಇವರು ಶೀಘ್ರದಲ್ಲಿ ಬಿಜೆಪಿ ಪಕ್ಷಕ್ಕೆ ಪಕ್ಷಾಂತರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಪ್ರತಿ ಕಾಶ್ಮೀರಿಗಳನ್ನು ಪ್ರೀತಿಯಿಂದ ಕಾಣಬೇಕು, ಕಣಿವೆ ರಾಜ್ಯದಲ್ಲಿ ಹೊಸ ಸ್ವರ್ಗವನ್ನು ನಿರ್ಮಿಸಬೇಕು: ಪ್ರಧಾನಿ ನರೇಂದ್ರ ಮೋದಿ ಕರೆ

First published:September 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading