ಕೈಲಾಸ ಯಾತ್ರೆಗೆ ಹೊರಟ ರಾಹುಲ್ ಗಾಂಧಿ; ಯಾತ್ರೆಗೆ ಕಾರಣವಾಯ್ತಾ ಕರ್ನಾಟಕದ ಘಟನೆ?


Updated:August 31, 2018, 2:32 PM IST
ಕೈಲಾಸ ಯಾತ್ರೆಗೆ ಹೊರಟ ರಾಹುಲ್ ಗಾಂಧಿ; ಯಾತ್ರೆಗೆ ಕಾರಣವಾಯ್ತಾ ಕರ್ನಾಟಕದ ಘಟನೆ?
ಶೃಂಗೇರಿ ಜಗದ್ಗುರುಗಳೊಂದಿಗೆ ರಾಹುಲ್ ಗಾಂಧಿ

Updated: August 31, 2018, 2:32 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 31): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದಾರೆ. ದಿಲ್ಲಿಯಿಂದ ಇಂದು ಶುಕ್ರವಾರ ವಿಮಾನದ ಮೂಲಕ ನೇಪಾಳದ ಕಠ್ಮಂಡು ನಗರಕ್ಕೆ ತೆರಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ಅಲ್ಲಿಂದ ಟಿಬೆಟ್​ಗೆ ಹೋಗಿ ಯಾತ್ರೆ ಶುರು ಮಾಡಲಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ರಾಹುಲ್ ಗಾಂಧಿ ಅವರು ದೈವಭಕ್ತರಾಗಿ ಬದಲಾಗಿದ್ದಾರೆ. ಅವರು ಹಲವು ಬಾರಿ ತಮ್ಮನ್ನು ತಾವು ಶಿವಭಕ್ತ ಎಂದು ಹೇಳಿಕೊಂಡಿದ್ದು ಇದೆ. ವರ್ಷದ ಹಿಂದೆ ಗುಜರಾತ್ ಚುನಾವಣೆಯಲ್ಲಿ ರಾಹುಲ್ ಗಾಂಧಿ ಟೆಂಪಲ್ ರನ್ ಮಾಡಿದಾಗ ಅದು ಗಿಮಿಕ್ ಎಂದು ಬಿಂಬಿತವಾಗಿತ್ತು. ಕರ್ನಾಟಕ ವಿಧಾನಸಭಾ ಚನಾವಣೆ ವೇಳೆಯೂ ಅವರು ರಾಜ್ಯಾದ್ಯಂತ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಅದನ್ನೂ ವಿರೋಧಿಗಳು ಸಾಫ್ಟ್ ಹಿಂದುತ್ವದ ಮುಖವಾಡ ಎಂದು ಜರಿದಿದ್ದರು. ಆದರೆ, ಇದೀಗ ಮಾನಸ ಸರೋವರ ಯಾತ್ರೆ ಕೈಗೊಂಡಿರುವುದು ಅವರಲ್ಲಿ ನೈಜ ದೈವನಂಬಿಕೆ ಇರುವುದು ರುಜುವಾತಾಗಿದೆ.

ಕೈಲಾಸ ಮಾನಸ ಸರೋವರ ಯಾತ್ರೆಯು ಹಿಂದೂಗಳ ಅತ್ಯಂತ ಪವಿತ್ರ ಹಾಗೂ ಕಠಿಣ ಯಾತ್ರೆಯಾಗಿದೆ. ಹಿಂದೂಗಳಷ್ಟೇ ಅಲ್ಲ ಬೌದ್ಧರು, ಜೈನರಿಗೂ ಇದು ಪವಿತ್ರ ತೀರ್ಥ ಕ್ಷೇತ್ರವಾಗಿದೆ. ಸಮುದ್ರ ಮಟ್ಟದಿಂದ 22 ಸಾವಿರ ಅಡಿ ಎತ್ತರದಲ್ಲಿರುವ ಕೈಲಾಸ ಪರ್ವತದಲ್ಲಿ ಕೈಲಾಸವಾಸಿ ಈಶ್ವರ ನೆಲಸಿದ್ದಾನೆಂಬ ನಂಬಿಕೆ ಹಿಂದೂಗಳಲ್ಲಿದೆ. ಜೈನರ ಆದಿ ತೀರ್ಥಂಕರರಿಗೆ ಇಲ್ಲಿಯೇ ನಿರ್ವಾಣವಾಯಿತೆಂಬ ಕಥೆ ಇದೆ. ಹಾಗೆಯೇ, ಬೌದ್ಧ ಧರ್ಮ ಸಂಸ್ಥಾಪಕ ಗೌತಮ ಬುದ್ಧರಿಗೂ ಇಲ್ಲಿಯೇ ನಿರ್ವಾಣವಾಯಿತೆಂಬ ಪ್ರತೀತಿ ಇದೆ.

ಪರ್ವತದಲ್ಲಿರುವ ಮಾನಸ ಸರೋವರ ಎಂಬ ತಿಳಿಗೊಳ ನೋಡಲು ನಯನ ಮನೋಹರವೂ ಹೌದು, ಪವಿತ್ರವೂ ಹೌದು. ಇದು ಪ್ರಪಂಚದ ಅತೀ ಎತ್ತರದ ಸಿಹಿನೀರಿನ ಕೊಳವಾಗಿದೆ. ಕೈಲಾಸ ಪರ್ವತದ ನೆತ್ತಿಯಲ್ಲಿ ಸುತ್ತು ಹಾಕಿದರೆ (ಪರಿಕ್ರಮ) ಸಕಲ ಪಾಪ ನಿವಾರಣೆಯಾಗುತ್ತದೆಂಬ ನಂಬಿಕೆ ಹಿಂದೂಗಳದ್ದು. ಈ ಪರಿಕ್ರಮಕ್ಕೇ 3 ದಿನಗಳು ತಗುಲುತ್ತದೆ. ಅತ್ಯಂತ ಕಠಿಣವಾದ ಈ ಯಾತ್ರೆಗೆ ಹೊರಡುವವರನ್ನ ಸಕಲ ವೈದ್ಯಕೀಯ ಪರೀಕ್ಷೆಗೊಳಪಡಿಸಿದ ಬಳಿಕವೇ ಅನುಮತಿ ಕೊಡಲಾಗುತ್ತದೆ.

ರಾಹುಲ್ ಈ ಯಾತ್ರೆ ಕೈಗೊಳ್ಳಲು ಕಾರಣವೇನು?
ರಾಹುಲ್ ಗಾಂಧಿ ಅವರು 12 ದಿನಗಳ ಕಾಲ ಯಾತ್ರೆ ಕೈಗೊಂಡಿದ್ದಾರೆ. ಅವರು ಈ ಪವಿತ್ರ ಯಾತ್ರೆ ಕೈಗೊಳ್ಳಲು ಕಾರಣ ಕರ್ನಾಟಕವೇ ಎಂಬುದು ಕುತೂಹಲದ ವಿಚಾರ. ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ನಿಮಿತ್ತವಾಗಿ ಏಪ್ರಿಲ್ 26ರಂದು ರಾಹುಲ್ ಗಾಂಧಿ ಅವರು ದೆಹಲಿಯಿಂದ ಹುಬ್ಬಳ್ಳಿಗೆ ಬರುತ್ತಿದ್ದಾಗ, ಅವರಿದ್ದ ವಿಮಾನ ತಾಂತ್ರಿಕ ದೋಷದಿಂದ ತುರ್ತು ಲ್ಯಾಂಡಿಂಗ್ ಆಗಬೇಕಾಯಿತು. ಆಗ ರಾಹುಲ್ ಗಾಂಧಿ ಅವರಿಗೆ ಸಾವಿನ ದರ್ಶನವೇ ಆಗಿಹೋಗಿತ್ತಂತೆ.  ಆ ಸಂದರ್ಭದಲ್ಲಿ ರಾಹುಲ್ ಮನಸಲ್ಲಿ ಮಾನಸ ಸರೋವರ ಯಾತ್ರೆ ಮಾಡಬೇಕೆಂಬ ಸಂಕಲ್ಪ ಮೂಡಿದಂತೆ. ಎರಡು ದಿನಗಳ ನಂತರ ಅವರು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಘಟನೆಯನ್ನು ಮೆಲುಕು ಹಾಕಿದ್ದುಂಟು. ಅಂದು ಆದ ದೈವ ಸಂಕಲ್ಪದಲ್ಲಿ ತಾನು ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳಬೇಕೆಂದು ಸಾರ್ವಜನಿಕವಾಗಿಯೇ ತಿಳಿಸಿದ್ದರು.
Loading...

ಸತತ ರಾಜಕೀಯ ವಿದ್ಯಮಾನಗಳಿಂದಾಗಿ ರಾಹುಲ್ ಗಾಂಧಿ ಅವರಿಗೆ ಯಾತ್ರೆ ಕೈಗೊಳ್ಳಲು ಬಿಡುವು ಸಿಕ್ಕಿರಲಿಲ್ಲ. ಈಗ ಅವರು 12 ದಿನಗಳ ಯಾತ್ರೆಯನ್ನು ಕೊನೆಗೂ ಕೈಗೊಂಡಿದ್ದಾರೆ.

ವಿಮಾನ ದುರಂತದಿಂದ ರಾಹುಲ್ ಗಾಂಧಿ ಜಸ್ಟ್ ಮಿಸ್; 20 ಸೆಕೆಂಡ್ ತಡವಾಗಿದ್ದರೆ ಉಳಿಯುತ್ತಿರಲಿಲ್ಲ ಜೀವ!
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ