Assembly Election: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿ ಆರಂಭ, ಸಿದ್ದು-ಡಿಕೆಶಿ ಜೊತೆ ರಾಹುಲ್ ಗಾಂಧಿ ಚರ್ಚೆ

ಎಐಸಿಸಿ ವತಿಯಿಂದ ಚುನಾವಣಾ ತಂತ್ರಜ್ಞ ಸುನೀಲ್ ಕುನಗೋಲು ನೇತೃತ್ವದ ತಂಡ ಸಮೀಕ್ಷೆ ನಡೆಸಿದೆ. ಇದು ಹಲವು ಆಯಾಮಗಳಿಂದ ನಡೆಸಿರುವ ಸಮೀಕ್ಷೆ ಎನ್ನಲಾಗಿದ್ದು ಆ ಸಮೀಕ್ಷೆ ಆಧರಿಸಿ ರಾಹುಲ್ ಗಾಂಧಿ ರಾಜ್ಯದ ನಾಯಕರ ಜೊತೆ ಚರ್ಚೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ರಾಹುಲ್ ಗಾಂಧಿ ಜೊತೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾಮಾರ್ ಮಾತುಕತೆ

ರಾಹುಲ್ ಗಾಂಧಿ ಜೊತೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾಮಾರ್ ಮಾತುಕತೆ

  • Share this:
ನವದೆಹಲಿ(ಜೂ. 29): ಮುಂದಿನ‌ ವರ್ಷ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections) ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ (Congress High Command) ಈಗಾಗಲೇ ತಯಾರಿ ಆರಂಭಿಸಿದೆ. ನಿನ್ನೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ (Opposition Leader Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (KPCC President D.K. Shivakumar) ಅವರ ಜೊತೆ ಸುದೀರ್ಘ ಚರ್ಚೆ ನಡೆಸಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Former President of AICC, Rahul Gandhi) ಇಂದು ಕೂಡ ಅದೇ ಕಸರತ್ತು ನಡೆಸಲಿದ್ದಾರೆ.

ನಿನ್ನೆ 4 ಗಂಟೆ ಸಮಾಲೋಚನೆ

ದೆಹಲಿಯ ತುಘಲಕ್ ಲೇನ್ ನಲ್ಲಿ ಇರುವ ರಾಹುಲ್ ಗಾಂಧಿ ಅವರ ನಿವಾಸದಲ್ಲಿ ಸಂಜೆ 4.30ಕ್ಕೆ ಸಭೆ ಸೇರಿದ ನಾಯಕರು ರಾತ್ರಿ 8.30ರವರೆಗೂ ಸಮಾಲೋಚನೆ ನಡೆಸಿದರು. ಕರ್ನಾಟಕದ ಸ್ಥಿತಿಗತಿ ಅರಿಯಲು ಇತ್ತೀಚೆಗೆ ಎಐಸಿಸಿ ವತಿಯಿಂದ ಚುನಾವಣಾ ತಂತ್ರಜ್ಞ ಸುನೀಲ್ ಕುನಗೋಲು ನೇತೃತ್ವದ ತಂಡ ಸಮೀಕ್ಷೆ ನಡೆಸಿದೆ. ಇದು ಹಲವು ಆಯಾಮಗಳಿಂದ ನಡೆಸಿರುವ ಸಮೀಕ್ಷೆ ಎನ್ನಲಾಗಿದ್ದು ಆ ಸಮೀಕ್ಷೆ ಆಧರಿಸಿ ರಾಹುಲ್ ಗಾಂಧಿ ರಾಜ್ಯದ ನಾಯಕರ ಜೊತೆ ಚರ್ಚೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರತಿ ವಿಧಾನಸಭಾ ಕ್ಷೇತ್ರದ ಬಗ್ಗೆಯೂ ಚರ್ಚೆ

ಸಮೀಕ್ಷೆಯಲ್ಲಿ ಇರುವಂತೆ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದ ಬಗ್ಗೆಯೂ ಸಮಾಲೋಚನೆ ನಡೆಸಲಾಗುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿರುವ ಮತ್ತು ವಿರೋಧ ಇರುವ ಅಂಶಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಅಭಿಪ್ರಾಯ ಮತ್ತು ಅವರು ಮಾಡಿಕೊಂಡಿರುವ ತಯಾರಿಗಳ ಬಗ್ಗೆ ರಾಹುಲ್ ಗಾಂಧಿ ಸ್ಪಷ್ಟೀಕರಣ ಕೇಳುತ್ತಿದ್ದಾರೆ‌. ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಕೂಡ ಉಪಸ್ಥಿತರಿದ್ದು ಅವರಿಂದಲೂ ಸಲಹೆ ಸೂಚನೆ ಪಡೆಯಲಾಗುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ವ್ಯಕ್ತಿಯ ಶಿರಚ್ಛೇದನ, ಪ್ರಧಾನಿ ಮೋದಿಗೆ ಬೆದರಿಕೆ; ನೂಪುರ್ ಶರ್ಮಾ ಪರ ಪೋಸ್ಟ್​ಗೆ ಹಾಡಹಗಲೆ ಮರ್ಡರ್

ಇಂದು ಮತ್ತೆ ಸಭೆ ಸೇರಲಿರುವ ನಾಯಕರು

ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಬಗ್ಗೆಯೂ ಚರ್ಚೆ ಮಾಡುತ್ತಿರುವುದರಿಂದ ಹೆಚ್ಚಿನ ಸಮಯ ಹಿಡಿಯುತ್ತಿದೆ‌. ಇಂದು ಕೂಡ ಸಭೆ ನಡೆಯಲಿದೆ. ಕ್ಷೇತ್ರವಾರು ಸಮಾಲೋಚನೆ ಬಳಿಕ ಸೋಷಿಯಲ್ ಇಂಜನಿಯರಿಂಗ್, ರಾಜ್ಯ ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರ, ದುರ್ಬಲ ಮುಖ್ಯಮಂತ್ರಿ ಮತ್ತಿತರ ವಿಚಾರಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಗುತ್ತಿದೆ. ಸುದೀರ್ಘ ಚರ್ಚೆಯ ಬಳಿಕ‌ ಮುಂದಿನ‌ ಕಾರ್ಯತಂತ್ರ ರೂಪಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆ ಸಭೆಯ ಬಳಿಕ ಕರ್ನಾಟಕ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, 'ಕರ್ನಾಟಕದಲ್ಲಿ ಪಕ್ಷದ ಸಂಘಟನೆ ಮಾಡುವ ಬಗ್ಗೆ ರಾಹುಲ್ ಗಾಂಧಿ ಅವರ ಜೊತೆ ಚರ್ಚೆ ನಡೆಯಿತು. ರಾಜ್ಯದ ಬಿಜೆಪಿ ಸರ್ಕಾರ ಮಾಡುತ್ತಿರುವ ಭ್ರಷ್ಟಾಚಾರದ ಬಗ್ಗೆಯೂ ಸಮಾಲೋಚನೆ ಆಯಿತು.

ಇದನ್ನೂ ಓದಿ: Maharashtra Politics: ಜೂನ್ 30ಕ್ಕೆ ಉದ್ಧವ್ ಠಾಕ್ರೆಗೆ ಮಹಾ ಪರೀಕ್ಷೆ! ವಿಶ್ವಾಸಮತ ಸಾಬೀತಿಗೆ ರಾಜ್ಯಪಾಲರ ಸೂಚನೆ

ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯದಾಗುವ ಹಲವು ವಿಚಾರಗಳನ್ನು ಚರ್ಚೆ ಮಾಡಲಾಯಿತು' ಎಂದಷ್ಟೇ ಹೇಳಿದರು. ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಲು ಮನಸ್ಸು ಮಾಡಲಿಲ್ಲ. ನಿನ್ನೆಯ ಸಭೆಯನ್ನು ಕಾಂಗ್ರೆಸ್ ನಾಯಕರು 'ಮುಂಬರುವ ವಿಧಾನಸಭಾ ಚುನಾವಣೆಯ ಕಿಕ್ ಸ್ಟಾರ್ಟ್' ಎಂದು ಹೇಳುತ್ತಿದ್ದಾರೆ.
Published by:Divya D
First published: