ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಇಡೀ ಇತರ ಹಿಂದುಳಿದ ವರ್ಗ (Other Backward Class) ಸಮುದಾಯವನ್ನು ಅವಮಾನಿಸಿದ್ದಾರೆ, ಆದರೂ ಅವರು ಕ್ಷಮೆಯಾಚಿಸಿಲ್ಲ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ( Piyush Goyal) ಅವರು ಬುಧವಾರ ನಡೆದ ನ್ಯೂಸ್ 18 ರೈಸಿಂಗ್ ಇಂಡಿಯಾ (News18 Rising India ) ಕಾನ್ಕ್ಲೇವ್‌ನ ಮೂರನೇ ಆವೃತ್ತಿಯಲ್ಲಿ ಮಾತನಾಡುವ ವೇಳೆ ಹೇಳಿದ್ದಾರೆ. ರಾಹುಲ್ ಗಾಂಧಿಯವರ ಮೋದಿ ಸರ್ನೇಮ್ ವಿವಾದದ ಬಗ್ಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಒಬಿಸಿ ಸಮುದಾಯವನ್ನು ಅವಮಾನಿಸಿದೂ ಇಲ್ಲಿಯವರೆಗೆ ಕ್ಷಮೆಯಾಚಿಸಿಲ್ಲ ಎಂದು ತಿಳಿಸಿದ್ದಾರೆ.
" ಎಲ್ಲಾ ಕಳ್ಳರು ಮೋದಿ ಎಂಬ ಸಾಮಾನ್ಯ ಸರ್ನೇಮ್ ಹೋಂದಿರುವುದಾದರೂ ಹೇಗೆ ? " ಎಂಬ ರಾಹುಲ್ ಹೇಳಿಕೆಗಾಗಿ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಸೂರತ್‌ನ ನ್ಯಾಯಾಲಯವು ಗುರುವಾರ ಕಾಂಗ್ರೆಸ್ ನಾಯಕನಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಲಿಲಿ ಥಾಮಸ್ ಪ್ರಕರಣದಲ್ಲಿ 2013 ರ ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿ, 2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಶಿಕ್ಷೆಗೆ ಒಳಗಾದ ಒಂದು ದಿನದ ನಂತರ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಗಿತ್ತು.
ಮೋದಿ ದೂಷಿಸುವುದರಲ್ಲಿ ಅರ್ಥವಿಲ್ಲ
ರಾಹುಲ್ ಗಾಂಧಿ ಅವರು ತಮ್ಮ ಅನರ್ಹತೆಗೆ ಮೋದಿಯನ್ನು ದೂಷಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಗೋಯಲ್, ಬಡವರನ್ನು ಮೇಲಕ್ಕೆತ್ತುವುದು, ರಫ್ತುಗಳನ್ನು ಹೆಚ್ಚಿಸುವುದು, ಭ್ರಷ್ಟಾಚಾರದ ಮೇಲೆ ದಾಳಿ ಮಾಡುವುದು, ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವುದಕ್ಕೆ ಪ್ರಧಾನ ಮಂತ್ರಿಯವರ ಜವಾಬ್ದಾರಿಯಾಗಿದೆ ಹೊರೆತು, ಬೇರೆ ಪಕ್ಷದ ನಾಯಕರ ಬಗ್ಗೆ ಆಲೋಚಿಸುವುದಲ್ಲ ಎಂದು ತಿಳಿಸಿದ್ದಾರೆ.
ಒಬಿಸಿ ಸಮೂದಾಯವನ್ನು ಅವಮಾನಿಸಿದರೂ ಕ್ಷಮೆಯಾಚಿಸಲಿಲ್ಲ
ಗಾಂಧಿಯವರು ಒಬಿಸಿ ಸಮುದಾಯವನ್ನು ಅವಮಾನಿಸಿದ್ದಾರೆ, ಅವರ ವಿರುದ್ಧ ಆರೋಪಗಳನ್ನು ಮಾಡಿ ಮಾನಹಾನಿ ಮಾಡಿದ್ದಾರೆ. ಈ ಪ್ರಕರಣದ ವಿಚಾರಣೆ ನಾಲ್ಕು ವರ್ಷಗಳ ಕಾಲ ನಡೆದಿತ್ತು. ತೀರ್ಪು ಪ್ರಕಟವಾಗುವ ಮುನ್ನ ಕಾಂಗ್ರೆಸ್ ನಾಯಕರೊಬ್ಬರು ರಾಹುಲ್ ಬಳಿ ನ್ಯಾಯಾಲಯದಲ್ಲಿ ಕ್ಷಮೆಯಾಚಿಸುವಂತೆ ಕೇಳಿಕೊಂಡಿದ್ದರು. ಆದರೆ ರಾಹುಲ್ ಗಾಂಧಿ ಕ್ಷೆಮೆ ಕೇಳಲಿಲ್ಲ. ಹಾಗಾಗಿ ನ್ಯಾಯಾಲಯದ ಮುಂದೆ ಶಿಕ್ಷೆ ವಿಧಿಸದೇ ಬೇರೆ ಯಾವ ಆಯ್ಕೆ ಇರಲಿಲ್ಲ. ಕಾಂಗ್ರೆಸ್ ಸರ್ಕಾರವು ಅನರ್ಹತೆಯಿಂದ ಪಾರಾಗಲು 2013ರಲ್ಲಿ ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿತು. ಅದನ್ನು ಸ್ವತಃ ರಾಹುಲ್ ಸಾರ್ವಜನಿಕ ವೇದಿಕೆಯಲ್ಲಿ ಹರಿದು ಹಾಕಿದ್ದರು ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕನ ಅನರ್ಹತೆಯಲ್ಲಿ ಸರ್ಕಾರದ ಅಥವಾ ಪಕ್ಷದ ಪಾತ್ರವಿಲ್ಲ ಎಂದು ಗೋಯಲ್ ವಿವರಿಸಿದ್ದಾರೆ.
ಇದನ್ನೂ ಓದಿ: Rising India: ವೇಗವಾಗಿ ಬೆಳೆಯುತ್ತಿರುವ ಭಾರತಕ್ಕೆ ಮತ್ತಷ್ಟು ಬಲ ತುಂಬುವ ಕಾರ್ಯಕ್ರಮ!
ಅಧಿಕೃತ ಬಂಗಲೆ ತೆರವಿಗೆ ನೋಟಿಸ್
ಕಾನೂನಿನ ಪ್ರಕಾರ ಅಧಿಕೃತ ಬಂಗಲೆಯನ್ನು ತೆರವು ಮಾಡುವಂತೆ ರಾಹುಲ್ ಗಾಂಧಿ ಅವರಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಗೋಯಲ್ ಹೇಳಿದ್ದಾರೆ. ಸಂಸದ ಸ್ಥಾನದಲ್ಲಿಲ್ಲದಿದ್ದರೆ ಯಾರೇ ಆದರೂ 30 ದಿನಗಳಲ್ಲಿ ಮನೆ ಖಾಲಿ ಮಾಡಬೇಕೆಂಬುದು ನಿಯಮ. ಒಂದು ವೇಳೆ ಅವರು ವಿಸ್ತರಣೆ ಬಯಸಿದರೆ, ಅವರು ಅದನ್ನು ವಸತಿ ಸಮಿತಿ ಬಳಿ ವಿನಂತಿಸಬಹುದು. ರಾಹುಲ್ ಅವರು ದೆಹಲಿಯಲ್ಲಿ ಮೂರು ಮನೆಗಳನ್ನು ಹೊಂದಿದ್ದಾರೆ. ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಕೂಡ ತಮ್ಮ ಮನೆ ಕೊಡುವುದಾಗಿ ಘೋಷಿಸಿದ್ದಾರೆ ಎಂದು ಗೋಯಲ್ ತಿಳಿಸಿದರು.
ಸೇಡಿನ ರಾಜಕೀಯ ಆರೋಪಕ್ಕೆ ತಿರುಗೇಟು
ರಾಜಕೀಯ ಸೇಡು ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳ ದುರುಪಯೋಗದ ಪ್ರತಿಪಕ್ಷದ ಆರೋಪಗಳ ಬಗ್ಗೆ ಮಾತನಾಡಿದ ಗೋಯಲ್ " ರಾಹುಲ್ ಗಾಂಧಿ ಏಳು ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರಿಗೆ ಜಾಮೀನು ನೀಡಿದ ನ್ಯಾಯಾಲಯಗಳು ನಮ್ಮ ಪ್ರಭಾವಕ್ಕೆ ಒಳಗಾಗಿವೆಯೇ? ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲೂ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ ಎಂದರು.
ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬ ಪ್ರತಿಪಕ್ಷಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, " ಪ್ರಜಾಪ್ರಭುತ್ವವಲ್ಲ, ಕೇವಲ ಭ್ರಷ್ಟರು ಅಪಾಯದಲ್ಲಿದ್ದಾರೆ ಎಂದು ನಾನು ನಂಬುತ್ತೇನೆ ಎಂದು ತಿಳಿಸಿದ್ದಾರೆ.
ನನಗೆ ಮೋದಿಯವರೇ ಹೀರೋ
ನಿಮ್ಮ ಹೀರೋ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ " ಪ್ರತಿಯೊಬ್ಬರಿಗೂ ಅವರ ಜೀವನದಲ್ಲಿ ಹಲವಾರು ಹೀರೋಗಳಿರುತ್ತಾರೆ. ಒಬ್ಬರ ಸಿದ್ಧಾಂತವನ್ನು ಮಾತ್ರ ಅನುಸರಿಸುವುದು ಒಳ್ಳೆಯದಲ್ಲ. ಇಂದು ನಾನು ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದೇನೆ. ನಾವು ಅವರಿಂದ ಬಹಳಷ್ಟು ಕಲಿಯುತ್ತಿದ್ದೇವೆ. ಪ್ರಧಾನಿ ಮೋದಿಯವರೇ ನನಗೆ ಸ್ಪೂರ್ತಿಯಾಗಿದ್ದಾರೆ. ನಾನು ಒಬ್ಬ ನಾಯಕನನ್ನು ಹೀರೋ ಆಗಿ ಗುರುತಿಸಬೇಕೆಂದರೆ, ಪ್ರಧಾನಿ ಮೋದಿಯವರೇ ನನಗೆ ನಂಬರ್ 1 ಹೀರೋ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ