news18-kannada Updated:January 14, 2021, 5:01 PM IST
ಜಲ್ಲಿಕಟ್ಟು ವೀಕ್ಷಣೆಯಲ್ಲಿ ರಾಹುಲ್ ಗಾಂಧಿ
ಮಧುರೈ (ಜ. 14): ತಮಿಳುನಾಡು ವಿಧಾನಸಭಾ ಚುನಾವಣೆಗೆ ತಿಂಗಳುಗಳು ಬಾಕಿ ಇದ್ದು, ಈಗಾಗಲೇ ಎಲ್ಲಾ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಇದೇ ಸಂದರ್ಭದಲ್ಲಿ ಪೊಂಗಲ್ ಹಬ್ಬದಂದು ತಮಿಳುನಾಡಿಗೆ ಭೇಟಿ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಲ್ಲಿನ ಸಂಪ್ರಾದಾಯಿಕ ಕ್ರೀಡೆಯಾದ ಜಲ್ಲಿಕಟ್ಟನ್ನು ವೀಕ್ಷಣೆ ಮಾಡಿದ್ದಾರೆ. ಮಧುರೈನಲ್ಲಿ ಡಿಎಂಕೆ ಯುವ ಘಟಕ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಜೊತೆ ಜಲ್ಲಿಕಟ್ಟು ವೀಕ್ಷಣೆ ಮಾಡಿದ್ದಾರೆ. ಈ ವೇಳೆ ಮಾತನಾಡಿರುವ ವೈಯನಾಡು ಶಾಸಕ ರಾಹುಲ್ ಗಾಂಧಿ, ತಮಿಳು ಸಂಸ್ಕೃತಿ ಮತ್ತು ಇತಿಹಾಸ ಭಾರತದ ಭವಿಷ್ಯಕ್ಕೆ ಅವಶ್ಯವಾಗಿದ್ದು, ಅದನ್ನು ಗೌರವಿಸಬೇಕಿದೆ ಎಂದರು. ಇದೇ ವೇಳೆ ಇಲ್ಲಿಗೆ ತಮ್ಮನ್ನು ಆಹ್ವಾನಿಸಿದ್ದಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ ಎಂದರು. ಜಲ್ಲಿಕಟ್ಟನ್ನು ಸಂಘಟಿತ ಮತ್ತು ಸುರಕ್ಷಿತ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿರುವುದು ನೋಡಿ ಸಂತೋಷವಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.
ಭಾರತದ ಭವಿಷ್ಯಕ್ಕಾಗಿ ತಮಿಳು ಸಂಸ್ಕೃತಿ, ಭಾಷೆ ಮತ್ತು ಇತಿಹಾಸ ಮುಖ್ಯವಾಗಿದೆ. ಇದನ್ನು ಗೌರವಿಸುವುದಕ್ಕೆ ನಾನು ಇಲ್ಲಿಗೆ ಬಂದಿದ್ದೇನೆ. ಪ್ರತಿಯೊಬ್ಬರೂ ಇದನ್ನು ಗೌರವಿಸಬೇಕಿದೆ. ತಮಿಳು ಭಾಷೆ ಮತ್ತು ಸಂಸ್ಕೃತಿಯನ್ನು ನಾವು ಮೂಲೆಗೆ ಸರಿಸಿದ್ದೇವೆ ಎಂಬ ಟೀಕೆ ಮಾಡುವವರಿಗೆ ಉತ್ತರಿಸಲು ನಾನು ಇಲ್ಲಿಗೆ ಬಂದಿದ್ದೇನೆ ಎಂದರು.
ತಮಿಳರ ಅಪಾರ ಪ್ರೀತಿ ಮತ್ತು ವಾತ್ಸಲ್ಯವನ್ನು ಪಡೆದಿದ್ದೇನೆ. ಇಲ್ಲಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ತಮಿಳುನಾಡು ಜನರೊಂದಿಗೆ ನಿಲ್ಲುವುದು ನನ್ನ ಕರ್ತವ್ಯ. ಇಲ್ಲಿನ ಜನರ ಇತಿಹಾಸ, ಭಾವನೆ ಮತ್ತು ಸಂಸ್ಕೃತಿಯನ್ನು ಕಲಿಯಲು ಇಲ್ಲಿಗೆ ಬಂದಿದ್ದೇನೆ ಎಂದು ತಮಿಳುನಾಡಿನ ಜನರಿಗೆ ಪೊಂಗಲ್ ಶುಭಾಶಯಗಳನ್ನು ತಿಳಿಸಿದರು.ರಾಹುಲ್ ಗಾಂಧಿ ಜೊತೆ ಸ್ಟಾಲಿನ್ ಕಂಡು ಬಂದ ಹಿನ್ನಲೆ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಜೊತೆ ಕಾಂಗ್ರೆಸ್ ಮೈತ್ರಿ ಮುಂದುವರೆಯಲಿದೆಯಾ ಎಂಬ ಪ್ರಶ್ನೆ ಮೂಡಿಸಿದೆ. ಆದರೆ, ಈ ಬಗ್ಗೆ ಎರಡು ಪಕ್ಷದ ನಾಯಕರು ಇನ್ನು ಸ್ಪಷ್ಟಪಡಿಸಿಲ್ಲ.
ಇನ್ನು ರಾಹುಲ್ ಗಾಂಧಿ ಜಲ್ಲಿಕಟ್ಟು ವೀಕ್ಷಣೆಗೆ ಮುಂದಾಗುತ್ತಿದ್ದಂತೆ ಟ್ವೀಟರ್ನಲ್ಲಿ ಗೋ ಬ್ಯಾಕ್ ರಾಹುಲ್ಗಾಂಧಿ ಟ್ರೆಂಡ್ ಆಗಿತ್ತು. ಈ ಹಿಂದೆ ಯುಪಿಎ ಸರ್ಕಾರ ಪ್ರಾಣಿಗಳ ಹಿಂಸೆ ಹಿನ್ನಲೆ ಜಲ್ಲಿಕಟ್ಟು ಕ್ರೀಡೆಯನ್ನು 2011 ರದ್ದು ಮಾಡಿತ್ತು. ಈಗ ರಾಹುಲ್ ಗಾಂಧಿ ಚುನಾವಣೆ ಹಿನ್ನಲೆ ಜಲ್ಲಿಕಟ್ಟು ಕ್ರೀಡೆ ವೀಕ್ಷಣೆಗೆ ಮುಂದಾಗಿ ಮೆಚ್ಚುಗೆ ಮಾತನಾಡುತ್ತಿದ್ದಾರೆ. ಅವರೊಬ್ಬ ಅವಕಾಶವಾದಿ ಎಂಬ ಟೀಕೆಗಳನ್ನು ಬಲಪಂಥೀಯ ನಾಯಕರು ಆರೋಪಿಸಿದ್ದಾರೆ.
Published by:
Seema R
First published:
January 14, 2021, 4:32 PM IST