ಅಭಿವೃದ್ಧಿ ಹಿನ್ನಡೆಗೆ ಹಿಂದಿನ ಆರ್​ಬಿಐ ಗವರ್ನರ್ ಅವರ ನೀತಿಗಳೇ ಕಾರಣವಾದವಾ?


Updated:September 3, 2018, 6:22 PM IST
ಅಭಿವೃದ್ಧಿ ಹಿನ್ನಡೆಗೆ ಹಿಂದಿನ ಆರ್​ಬಿಐ ಗವರ್ನರ್ ಅವರ ನೀತಿಗಳೇ ಕಾರಣವಾದವಾ?
ರಘುರಾಮ್ ರಾಜನ್ ಮತ್ತು ರಾಜೀವ್ ಕುಮಾರ್

Updated: September 3, 2018, 6:22 PM IST
- ನ್ಯೂಸ್18 ಕನ್ನಡ

ನವದೆಹಲಿ(ಸೆ. 03): ನೋಟ್ ಬ್ಯಾನ್​ನಿಂದ ದೇಶದ ಅರ್ಥವ್ಯವಸ್ಥೆಗೆ ಭಾರೀ ಹಿನ್ನಡೆಯಾಗಿದೆ ಎಂಬ ಟೀಕೆಗಳು ಮೋದಿ ಸರಕಾರದ ವಿರುದ್ಧ ಪದೇಪದೇ ಕೇಳಿಬರುತ್ತಿವೆ. ಈ ವಿಚಾರದಲ್ಲಿ ಸರಕಾರ ಮತ್ತು ವಿಪಕ್ಷಗಳ ಮಧ್ಯೆ ಆರೋಪ-ಪ್ರತ್ಯಾರೋಪಗಳು ನಡೆಯುತ್ತಲೇ ಇವೆ. ಇದೀಗ ಸರಕಾರದ ಪರವಾಗಿ ನೀತಿ ಆಯೋಗದ ವೈಸ್ ಛೇರ್ಮನ್ ರಾಜೀವ್ ಕುಮಾರ್ ಬ್ಯಾಟಿಂಗ್ ಮಾಡಿದ್ದಾರೆ. ಮೋದಿ ಸರಕಾರದ ಅವಧಿಯಲ್ಲಿ ದೇಶದ ಅಭಿವೃದ್ಧಿ ಕುಂಠಿತವಾಗಲು ನೋಟ್ ಬ್ಯಾನ್ ಆಗಲೀ, ಸರಕಾರದ ನೀತಿಗಳಾಗಲೀ ಕಾರಣವಲ್ಲ. ಹಿಂದಿನ ಆರ್​ಬಿಐ ಗವರ್ನರ್ ರಘುರಾಮ್ ರಾಜನ್ ಅವರ ಕೆಲ ನೀತಿಗಳೇ ಈ ದುಸ್ಥಿತಿಗೆ ಕಾರಣ ಎಂದು ರಾಜೀವ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

“ದೇಶದ ಬ್ಯಾಂಕುಗಳ ಅನುತ್ಪಾದಕ ಸಾಲಗಳು ಹೆಚ್ಚಾಗಲು, ಹಾಗೂ ಉದ್ದಿಮೆಗಳಿಗೆ ಬ್ಯಾಂಕುಗಳ ಸಾಲ ನೀಡಿಕೆ ಪ್ರಮಾಣ ಕಡಿಮೆಯಾಗಲು ರಘುರಾಮ್ ರಾಜನ್ ಅವರೇ ಕಾರಣ,” ಎಂದು ನೀತಿ ಆಯೋಗ್ ಉಪಾಧ್ಯಕ್ಷರು ದೂಷಿಸಿದ್ದಾರೆ. ರಘುರಾಮ್ ರಾಜನ್ ಅವರು ಆರ್​ಬಿಐ ಗವರ್ನರ್ ಆಗಿದ್ದಾಗ ಅನುತ್ಪಾದಕ ಸಾಲಗಳನ್ನ(ಎನ್​ಪಿಎ) ಗುರುತಿಸಲು ಹೊಸ ವ್ಯವಸ್ಥೆ ರಚಿಸಿದ್ದರು. ಇದರಿಂದ ಎನ್​ಪಿಎಗಳ ಪ್ರಮಾಣವು ವರ್ಷದಿಂದ ವರ್ಷಕ್ಕೆ ಏರತೊಡಗಿತು. 2014ರಲ್ಲಿ 4 ಲಕ್ಷ ಕೋಟಿ ಇದ್ದ ಎನ್​ಪಿಎಗಳು 2017ರಷ್ಟರಲ್ಲಿ 10.5 ಲಕ್ಷಕ್ಕೆ ಏರಿದವು. ಅನುತ್ಪಾದಕ ಸಾಲಗಳು ಯಾವಾಗ ವಿಪರೀತ ಏರಿದವೋ ಆಗ ಬ್ಯಾಂಕುಗಳು ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಸಾಲ ನೀಡುವ ಪ್ರಮಾಣವನ್ನು ಕಡಿಮೆ ಮಾಡಿದವು. ಈ ಉದ್ದಿಮೆಗಳಿಗೆ ಹೆಚ್ಚಿನ ಬಂಡವಾಳ ಸಿಗದೇ ಹೋಗಿದ್ದು ಆರ್ಥಿಕ ಪ್ರಗತಿಯ ಹಿನ್ನಡೆಗೆ ಕಾರಣವಾಯಿತು ಎಂದು ರಾಜೀವ್ ಕುಮಾರ್ ವಿಶ್ಲೇಷಿಸಿದ್ದಾರೆ.

ಮೋದಿ ಸರಕಾರ ಅಸ್ತಿತ್ವಕ್ಕೆ ಬರುವ ಮುಂಚೆಯೇ ಆರ್ಥಿಕ ಪ್ರಗತಿ ಇಳಿಮುಖವಾಗತೊಡಗಿತು. ಮೋದಿ ಸರಕಾರ ಬಂದ ನಂತರ ಅದೇ ಇಳಿಮುಖ ಟ್ರೆಂಡ್ ಮುಂದುವರಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷರು ಹೇಳಿದ್ದಾರೆ.

ಕೇಂದ್ರ ಸರಕಾರದ ಕೆಲ ಆರ್ಥಿಕ ನೀತಿಗಳು ಹಾಗೂ ನೋಟ್ ಬ್ಯಾನ್​ನಂಥ ಕ್ರಮವನ್ನು ರಘುರಾಮ್ ರಾಜನ್ ಅವರು ವಿರೋಧಿಸಿದ್ದರು. ರಘುರಾಮ್ ರಾಜನ್ ಅವರ ಅಧಿಕಾರಾವಧಿಯ ನಂತರ ಕೇಂದ್ರ ಸರಕಾರವು ದಿಢೀರನೇ ನಗದು ಅಪಮೌಲ್ಯದ ಕ್ರಮದ ಘೋಷಣೆ ಹೊರಡಿಸಿ ಇಡೀ ದೇಶಕ್ಕೆ ಶಾಕ್ ಕೊಟ್ಟಿತ್ತು.

ವಿಜಯ್ ಮಲ್ಯ, ನೀರವ್ ಮೊದಲಾದ ಉದ್ಯಮಪತಿಗಳು ಬ್ಯಾಂಕುಗಳಿಂದ ಪಡೆದ ಸಾಲ ತೀರಿಸದೆ ದೇಶ ಬಿಟ್ಟುಹೋದ ನಂತರ ಬ್ಯಾಂಕುಗಳ ಅನುತ್ಪಾದಕ ಸಾಲಗಳ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಅನುತ್ಪಾದಕ ಸಾಲವು ಬ್ಯಾಂಕುಗಳಿಗಷ್ಟೇ ಅಲ್ಲ, ದೇಶದ ಉದ್ಯಮ ವ್ಯವಸ್ಥೆಗೆ ಮಾರಕವಾಗುತ್ತದೆ. ಆ ಮೂಲಕ ದೇಶದ ಅರ್ಥವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ