ಸಿಡ್ನಿ: ಸಾಮಾನ್ಯವಾಗಿ ಆಯಾ ದೇಶಗಳಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಮೇಲೆ ಮತ್ತು ನೋಟಿನ (Currency Note) ಮೇಲೆ ಆಯಾ ದೇಶದಲ್ಲಿರುವ ಪ್ರಮುಖ ವ್ಯಕ್ತಿಗಳ ಚಿತ್ರಗಳು ಇರುವುದನ್ನು ನಾವು ನೋಡುತ್ತೇವೆ. ಎಷ್ಟೋ ವರ್ಷಗಳು ಕಳೆದರೂ ಸಹ ಈ ನೋಟಿನ ಮತ್ತು ನಾಣ್ಯದ ಮೇಲಿರುವ ಚಿತ್ರಗಳು ಮಾತ್ರ ಬದಲಾಗುವುದಿಲ್ಲ ಅಂತ ಹೇಳಬಹುದು. ಆದರೆ ಈ ಮಾತು ಇಲ್ಲೊಂದು ದೇಶದಲ್ಲಿ ಸುಳ್ಳಾಗುವ ಅವಕಾಶಗಳು ಬಹಳಷ್ಟಿವೆ ಅಂತ ಹೇಳಲಾಗುತ್ತಿದೆ ನೋಡಿ.
ಹೌದು, ಆಸ್ಟ್ರೇಲಿಯಾ ದೇಶದಲ್ಲಿ ಚಲಾವಣೆಯಲ್ಲಿರುವಂತಹ ನೋಟಿನ ಮೇಲೆ ಇರುವಂತಹ ರಾಣಿ ಎಲಿಜಬೆತ್ ಅವರ ಚಿತ್ರ ಮುಂದಿನ ದಿನಗಳಲ್ಲಿ ನೋಡಲು ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ.
ರಿಸರ್ವ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾದ ನಿರ್ಧಾರದ ನಂತರ ಆಸ್ಟ್ರೇಲಿಯಾದಲ್ಲಿ ಚಲಾವಣೆಯಲ್ಲಿರುವ 5 ಡಾಲರ್ ನೋಟು ಸಂಪೂರ್ಣವಾಗಿ ಬದಲಾಗಲಿದೆ ಎಂದು ಹೇಳಲಾಗುತ್ತಿದೆ. ಈ ಹೊಸ ನವೀಕರಣದ ಪ್ರಕಾರ ಕ್ವೀನ್ ಎಲಿಜಬೆತ್ ಅವರ ಚಿತ್ರ ಇನ್ಮುಂದೆ ಆ ನೋಟಿನ ಮೇಲೆ ಕಾಣಿಸಿಕೊಳ್ಳುವುದಿಲ್ಲ.
ನೋಟಿನ ಮೇಲೆ ರಾಣಿ ಎಲಿಜಬೆತ್ ಅವರ ಚಿತ್ರ ಇರೋದಿಲ್ವಂತೆ
1992ರ ಜುಲೈನಲ್ಲಿ ರಾಣಿ ಎಲಿಜಬೆತ್ ತನ್ನ 40ನೇ ವಾರ್ಷಿಕೋತ್ಸವವನ್ನು ಆಚರಿಸಿದಾಗ 5 ಡಾಲರ್ ಮೌಲ್ಯದ ಪಾಲಿಮರ್ ನೋಟಿನಲ್ಲಿ ಎರಡನೇ ರಾಣಿ ಎಲಿಜಬೆತ್ ಅವರ ಭಾವಚಿತ್ರವನ್ನು ಪ್ರಕಟಿಸಲಾಗಿತ್ತು.
ಈಗ ರಾಣಿಯ ಮರಣದ ನಂತರ ಆ ನೋಟಿನ ವಿನ್ಯಾಸವನ್ನು ಮತ್ತೊಮ್ಮೆ ಪರಿಶೀಲಿಸಲಾಯಿತು. ಆದರೂ ಪರಿಷ್ಕೃತ ಕರೆನ್ಸಿ ನೋಟಿನಲ್ಲಿ ಹೊಸ ದೊರೆ ಕಿಂಗ್ ಚಾರ್ಲ್ಸ್ ಅವರ ಚಿತ್ರ ಸಹ ಇರುವುದಿಲ್ಲ ಎಂದು ಹೇಳಲಾಗುತ್ತಿದೆ. ಫೆಡರಲ್ ಸರ್ಕಾರದೊಂದಿಗೆ ಸಮಾಲೋಚಿಸಿದ ನಂತರ ದೇಶದ ಕೇಂದ್ರ ಬ್ಯಾಂಕ್ ಈ ನಿರ್ಧಾರ ಕೈಗೊಂಡಿದೆ.
"ಮೊದಲ ಆಸ್ಟ್ರೇಲಿಯನ್ನರ ಸಂಸ್ಕೃತಿ ಮತ್ತು ಇತಿಹಾಸವನ್ನು ಗೌರವಿಸುವ ಹೊಸ ವಿನ್ಯಾಸವನ್ನು ಹೊಂದಲು 5 ಡಾಲರ್ ನೋಟನ್ನು ನವೀಕರಿಸಲು ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ" ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: Yogi Adityanath Interview: ಭಾರತದಲ್ಲಿ ಮುಸ್ಲಿಮರು ಭಯಪಡುವ ಅಗತ್ಯವಿಲ್ಲ; ಯೋಗಿ ಆದಿತ್ಯನಾಥ್ ಅಭಯ
"ಈ ಹೊಸ ವಿನ್ಯಾಸವು ಘನತೆವೆತ್ತ ಎರಡನೇ ರಾಣಿ ಎಲಿಜಬೆತ್ ಅವರ ಭಾವಚಿತ್ರವನ್ನು ಬದಲಾಯಿಸುತ್ತದೆ. 5 ಡಾಲರ್ ನೋಟಿನ ಇನ್ನೊಂದು ಬದಿಯಲ್ಲಿ ಆಸ್ಟ್ರೇಲಿಯಾದ ಸಂಸತ್ತಿನ ಚಿತ್ರ ಹಾಗೆಯೇ ಮುಂದುವರಿಯುತ್ತದೆ" ಎಂದು ಅದು ಹೇಳಿದೆ.
ಹೊಸ ಆಸ್ಟ್ರೇಲಿಯನ್ ನೋಟನ್ನು ಯಾವಾಗ ಬಳಸಲಾಗುತ್ತದೆ?
ಹೊಸ ನೋಟು ಚಲಾವಣೆಗೆ ಬರಲು ಹಲವು ವರ್ಷಗಳು ಬೇಕಾಗಬಹುದು ಎಂದು ನಿರೀಕ್ಷಿಸಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾದ ಪ್ರಕಾರ, ಹೊಸ ನೋಟುಗಳನ್ನು ವಿನ್ಯಾಸಗೊಳಿಸಲು ಮತ್ತು ಮುದ್ರಿಸಲು ಕೆಲವು ವರ್ಷಗಳು ತೆಗೆದುಕೊಳ್ಳುತ್ತದೆ. ಹೊಸ ವಿನ್ಯಾಸದ ಬಗ್ಗೆ ಮೊದಲು ಆಸ್ಟ್ರೇಲಿಯನ್ನರೊಂದಿಗೆ ಸಮಾಲೋಚಿಸುವುದಾಗಿ ಬ್ಯಾಂಕ್ ಹೇಳಿದೆ.
"ಈ ಮಧ್ಯೆ, ಪ್ರಸ್ತುತ 5 ಡಾಲರ್ ನೋಟನ್ನು ಬಿಡುಗಡೆ ಮಾಡುವುದನ್ನು ಮುಂದುವರಿಸಲಾಗುವುದು. ಹೊಸ ನೋಟು ಬಿಡುಗಡೆಯಾದ ನಂತರವೂ ಇದನ್ನು ಬಳಸಲು ಸಾಧ್ಯವಾಗುತ್ತದೆ" ಎಂದು ಬ್ಯಾಂಕ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದೆ.
ಬ್ಯಾಂಕಿನ ನಿರ್ಧಾರ ವಿರೋಧ ಪಕ್ಷದವರಿಂದ ತೀವ್ರ ಟೀಕೆಗೆ ಗುರಿಯಾಗಿದೆ
ಏತನ್ಮಧ್ಯೆ ಆಸ್ಟ್ರೇಲಿಯಾದ ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್ ಅವರು ಈ ನಿರ್ಧಾರವನ್ನು ಒಪ್ಪುವುದಿಲ್ಲ ಎಂದು ಹೇಳಿದರು. "ಈ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ, ಇದು ಸರ್ಕಾರದಿಂದ ನಿರ್ದೇಶಿಸಲ್ಪಟ್ಟಿದೆ" ಎಂದು ಅವರು ಸಿಡ್ನಿಯಲ್ಲಿ ರೇಡಿಯೋ ಕೇಂದ್ರಕ್ಕೆ ತಿಳಿಸಿದರು.
ಇದನ್ನೂ ಓದಿ: Pakistan: ಕೆಟ್ಟರೂ ಬುದ್ದಿ ಕಲಿಯದ ಪಾಕಿಸ್ತಾನ, ಭಾರತದ ವಿರುದ್ಧ ಮತ್ತೊಂದು ಪಿತೂರಿಗೆ ಪಾಕ್ ಸಜ್ಜು!
ಕಟ್ಟಾ ರಾಜಪ್ರಭುತ್ವವಾದಿ ಮತ್ತು ಸಾಂವಿಧಾನಿಕ ಸಂಪ್ರದಾಯವಾದಿಯಾಗಿರುವ ಲಿಬರಲ್ ಸೆನೆಟರ್ ಡೀನ್ ಸ್ಮಿತ್, ನೋಟಿನಲ್ಲಿ ಆಸ್ಟ್ರೇಲಿಯಾದ ಇತಿಹಾಸದ ಎಲ್ಲಾ ಅಂಶಗಳನ್ನು ಏಕೆ ಸೇರಿಸಲು ಸಾಧ್ಯವಿಲ್ಲ ಎಂದು ಅರ್ಥವಾಗುತ್ತಿಲ್ಲ ಎಂದು ಹೇಳಿದರು. "ನಮ್ಮ ಹೊಸ ರಾಜ ಮತ್ತು ಆಸ್ಟ್ರೇಲಿಯಾದ ಸ್ಥಳೀಯ ಪರಂಪರೆ ಮತ್ತು ಸಂಸ್ಕೃತಿಯ ಬಗ್ಗೆ ಮೆಚ್ಚುಗೆ ಎರಡನ್ನೂ ಒಳಗೊಂಡ ವಿನ್ಯಾಸವು ತುಂಬಾನೇ ಸೂಕ್ತವಾಗಿರುತ್ತದೆ" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ