PVN Rao - ಪಿವಿ ನರಸಿಂಹ ರಾವ್ ಭಾರತದ ಆರ್ಥಿಕ ಸುಧಾರಣೆಗಳ ಪಿತಾಮಹ: ಮನಮೋಹನ್ ಸಿಂಗ್

1991ರಲ್ಲಿ ಭಾರತದ ಆರ್ಥಿಕತೆಗೆ ಹೊಸ ದಿಕ್ಕು ಸಿಗಲು ಅಂದಿನ ಪ್ರಧಾನಿಯಾಗಿದ್ದ ಪಿವಿ ನರಸಿಂಹ ರಾವ್ ಅವರ ದೂರದೃಷ್ಟಿತ್ವ ಮತ್ತು ದಿಟ್ಟತನವೇ ಕಾರಣ. ಅವರು ನಿಜವಾಗಿಯೂ ಭಾರತದ ಆರ್ಥಿಕ ಸುಧಾರಣೆಗ ಪಿತಾಮಹ ಎಂದು ಮನಮೋಹನ್ ಸಿಂಗ್ ಬಣ್ಣಿಸಿದ್ದಾರೆ..

ಮನಮೋಹನ್ ಸಿಂಗ್

ಮನಮೋಹನ್ ಸಿಂಗ್

 • Share this:
  ನವದೆಹಲಿ(ಜುಲೈ 25): ದಿವಂಗತ ಪಿ.ವಿ. ನರಸಿಂಹರಾವ್ ಅವರು ಈ ಮಣ್ಣಿನ ಶ್ರೇಷ್ಠ ಮಗ. ಭಾರತದ ಆರ್ಥಿಕ ಸುಧಾರಣೆಗಳ ಪಿತಾಮಹ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಣ್ಣಿಸಿದ್ದಾರೆ. ಪಿವಿಎನ್ ರಾವ್ ಪ್ರಧಾನಿಯಾಗಿದ್ದಾಗ ಮನಮೋಹನ್ ಸಿಂಗ್ ಅರ್ಥಸಚಿವರಾಗಿದ್ದರು. ಭಾರತಕ್ಕೆ ಮುಕ್ತ ಆರ್ಥಿಕ ನೀತಿ ಜಾರಿಗೆ ತಂದಿದ್ದೇ ಈ ಜೋಡಿ. ಈ ವರ್ಷ ಪಿವಿ ನರಸಿಂಹ ರಾವ್ ಅವರ ಜನ್ಮಶತಮಾನೋತ್ಸವ ಇರುವ ಸಂದರ್ಭದಲ್ಲಿ ತಮ್ಮ ಅಂದಿನ ಪ್ರಧಾನಿ ಬಗ್ಗೆ ಮನಮೋಹನ್ ಸಿಂಗ್ ತುಂಬು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

  ತೆಲಂಗಾಣದ ಘಟಕದ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಪಿವಿಎನ್ ರಾವ್ ಅವರ ಜನ್ಮಶತಮಾನೋತ್ಸವ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕವೇ ಮಾತನಾಡಿದ ಮನಮೋಹನ್ ಸಿಂಗ್, ಅಂದಿನ ಸುಧಾರಣೆಗಳ ಹೆಜ್ಜೆ ಹಾಗೂ ಪಿವಿಎನ್ ರಾವ್ ಅವರ ದೂರದೃಷ್ಟಿತ್ವದ ಬಗ್ಗೆ ಮಾತನಾಡಿದ್ದಾರೆ.

  ಭಾರತದಲ್ಲಿ ಉದಾರೀಕರಣ ನೀತಿಗೆ ದಾರಿ ಮಾಡಿಕೊಟ್ಟಿದ್ದೇ 1991ರ ಬಜೆಟ್. ದೇಶದಲ್ಲಿ ಆರ್ಥಿಕ ಸುಧಾರಣೆಗಳಿಗೆ ಮತ್ತು ಆಧುನಿಕ ಭಾರತಕ್ಕೆ ಅಡಿಪಾಯ ಹಾಕಿದ್ದೇ 29 ವರ್ಷಗಳ ಹಿಂದಿನ ಆ ಬಜೆಟ್. ಅಂದು ಪ್ರಧಾನಿಯಾಗಿದ್ದ ನರಸಿಂಹ ರಾವ್ ಅವರು ತಮಗೆ ಆರ್ಥಿಕ ನೀತಿ ರೂಪಿಸಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು ಎಂದು ಮನಮೋಹನ್ ಸಿಂಗ್ ಹೇಳುತ್ತಾರೆ.

  “ಅದು ಬಹಳ ಕ್ಲಿಷ್ಟ ಆಯ್ಕೆಯಾಗಿತ್ತು (ಉದಾರೀಕರಣ ನೀತಿ). ಬಹಳ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕಾದ ಅಗತ್ಯ ಇತ್ತು. ಭಾರತದ ಆರ್ಥಿಕತೆಯ ಸಮಸ್ಯೆಗಳೇನು ಎಂದು ಸಂಪೂರ್ಣ ಅರಿವಿದ್ದ ಪ್ರಧಾನಿ ನರಸಿಂಹ ರಾವ್ ಅವರು ನನಗೆ ಸುಧಾರಣೆಗಳನ್ನ ತರಲು ಸಂಪೂರ್ಣ ಸ್ವಾತಂತ್ರ್ಯ ನೀಡಿದರು” ಎಂದು ತಿಳಿಸಿದ್ದಾರೆ.

  ಇದನ್ನೂ ಓದಿ: Cinema Theaters Open - ಚಿತ್ರಮಂದಿರಗಳನ್ನು ಆರಂಭಿಸುವಂತೆ ಕೇಂದ್ರ ಗೃಹ ಇಲಾಖೆಗೆ ಶಿಫಾರಸು

  ಆ ಸಂದರ್ಭದಲ್ಲಿ ಭಾರತದ ಆರ್ಥಿಕತೆಯಲ್ಲಿ ಬಹಳ ಸಮಸ್ಯೆಗಳಿದ್ದವು. ವಿದೇಶ ವಿನಿಮಯ ಬಿಕ್ಕಟ್ಟು ಇತ್ತು. ಎರಡು ವಾರಗಳ ರಫ್ತು ಮೊತ್ತಕ್ಕೆ ವಿದೇಶ ವಿನಿಮಯ ಮೀಸಲು ಕುಸಿದಿತ್ತು. ಆರ್ಥಿಕತೆ ಪ್ರಪಾತಕ್ಕೆ ಕುಸಿದುಬೀಳುವ ಹಂತದಲ್ಲಿತ್ತು.  1991ರಲ್ಲಿ ಇಂಥ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಬಹಳ ತುರ್ತಾಗಿ ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳುವ ಅಗತ್ಯತೆ ಇತ್ತು. ಆದರೆ, ರಾಜಕೀಯವಾಗಿ ಇದು ಸಾಧ್ಯವೇ ಎಂಬುದು ಪ್ರಮುಖ ಪ್ರಶ್ನೆಯಾಗಿತ್ತು. ಯಾಕೆಂದರೆ. ಆಗ ಪಿವಿಎನ್ ಮುನ್ನಡೆಸುತ್ತಿದ್ದುದು ಅಲ್ಪಸಂಖ್ಯಾತ ಸರ್ಕಾರವನ್ನ. ಬಾಹ್ಯ ಬೆಂಬಲದಲ್ಲಿ ಸರ್ಕಾರ ನಡೆಯುತ್ತಿತ್ತು. ಆದರೆ, ನರಸಿಂಹರಾವ್ ಅವರು ಎಲ್ಲಾ ಮಿತ್ರ ಪಕ್ಷಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಆರ್ಥಿಕ ಸುಧಾರಣೆಗಳ ಬಗ್ಗೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಅದು ಅವರ ಆತ್ಮವಿಶ್ವಾಸ ಮತ್ತು ಬದ್ಧತೆಗೆ ದ್ಯೋತಕವಾಗಿತ್ತು. ಅವರ ವಿಶ್ವಾಸದ ಶಕ್ತಿಯಲ್ಲಿ ನನಗೆ ನನ್ನ ಕರ್ತವ್ಯ ನಿಭಾಯಿಸಲು ಸಾಧ್ಯವಾಯಿತು ಎಂದು ಮನಮೋಹನ್ ಸಿಂಗ್ ಸ್ಮರಿಸಿಕೊಂಡಿದ್ಧಾರೆ.

  “ಅದು ಕಠಿಣ ಹಾದಿಯ ಆರಂಭವಾಗಿತ್ತು. ಆದರೆ, ಭಾರತ ಜಾಗೃತವಾಗಿದೆ ಎಂದು ಇಡೀ ವಿಶ್ವಕ್ಕೆ ಸ್ಪಷ್ಟ ಸಂದೇಶ ರವಾನಿಸುವ ಸಮಯ ಅದಾಗಿತ್ತು. ಆ ನಂತರ ನಡೆದಿದ್ದು ಇತಿಹಾಸ. ಇದನ್ನು ಸ್ಮರಿಸಿಕೊಳ್ಳುವಾಗ ನರಸಿಂಹ ರಾವ್ ಅವರನ್ನು ಭಾರತದ ಆರ್ಥಿಕ ಸುಧಾರಣೆಗಳ ಪಿತಾಮಹ ಎಂದು ಕರೆಯುವುದು ಸರಿ” ಎಂದು ಮಾಜಿ ಪ್ರಧಾನಿ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

  ಪಿವಿಎನ್ ಅವರು ಆರ್ಥಿಕ ಸುಧಾರಣೆಗಳನ್ನಷ್ಟೇ ಅಲ್ಲ ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಹೆಜ್ಜೆಗಳನ್ನಿಟ್ಟು ಆಧುನಿಕ ಭಾರತದ ಸರ್ವಾಂಗೀಣ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.

  ಇದನ್ನೂ ಓದಿ: JioMart: ಕೆಲವೇ ದಿನಗಳಲ್ಲಿ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 10 ಲಕ್ಷ ಡೌನ್‌ಲೋಡ್‌ ದಾಟಿದ ಜಿಯೋ ಮಾರ್ಟ್‌

  ಚೀನಾ ಸೇರಿದಂತೆ ನೆರೆಹೊರೆಯ ದೇಶಗಳ ಜೊತೆ ಉತ್ತಮ ಬಾಂಧವ್ಯ ಬೆಳೆಯಲು ರಾವ್ ಪಾತ್ರ ಬಹಳ ಪ್ರಮುಖವಾದುದು. ಪೂರ್ವ ಮತ್ತು ಈಶಾನ್ಯ ಏಷ್ಯನ್ ದೇಶಗಳೊಂದಿಗೆ ಭಾರತದ ಸಂಬಂಧ ವೃದ್ಧಿಗೆ ಪುಷ್ಟಿ ನೀಡಿದರು. ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ವೇಗ ಸಿಕ್ಕಿದ್ದು ಪಿವಿಎನ್ ಕಾಲದಲ್ಲೇ.  ಎಎಸ್​ಎಲ್​ವಿ ಮತ್ತು ಪಿಎಸ್​ಎಲ್​ವಿ ಉಡಾವಣಾ ವಾಹನಗಳ ಯಶಸ್ವಿ ಪರೀಕ್ಷೆ ಆಗಿದ್ದು ಅವರ ಅವಧಿಯಲ್ಲೇ. ಪೃಥ್ವಿ ಕ್ಷಿಪಣಿಯ ಯಶಸ್ವಿ ಪರೀಕ್ಷೆಯಾಗಿತ್ತು. 1996ರಲ್ಲಿ ಪರಮಾಣು ಪರೀಕ್ಷೆ ನಡೆಸಲು ಸಿದ್ಧಗೊಳ್ಳುವಂತೆ ಡಾ. ಎಪಿಜೆ ಅಬ್ದುಲ್ ಕಲಾಂ ಅವರಿಗೆ ತಿಳಿಸಿದ್ದು ರಾವ್ ಅವರೆಯೇ. ಅವರು ವಿರೋಧ ಪಕ್ಷಗಳ ಮುಖಂಡರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದರು ಎಂದು ಮನಮೋಹನ್ ಸಿಂಗ್ ಮೆಲುಕು ಹಾಕಿದ್ದಾರೆ.
  Published by:Vijayasarthy SN
  First published: