Deep Sidhu Arrest - ರೈತ ಪ್ರತಿಭಟನೆ ವೇಳೆ ಹಿಂಸಾಚಾರಕ್ಕೆ ಪ್ರಚೋದನೆ ಆರೋಪ; ನಟ ದೀಪ್ ಸಿಧು ಬಂಧನ

ದೀಪ್ ಸಿಧು

ದೀಪ್ ಸಿಧು

ಜನವರಿ 26ರಂದು ದೆಹಲಿಯಲ್ಲಿ ರೈತರು ಟ್ರಾಕ್ಟರ್ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸುವಾಗ ಸಂಭವಿಸಿದ ಹಿಂಸಾಚಾರಗಳಿಗೆ ಪ್ರಚೋದನೆ ನೀಡಿದ ಆರೋಪ ದೀಪ್ ಸಿಧು ಮೇಲಿದೆ. ಆ ಘಟನೆ ನಡೆದು 2 ವಾರ ಬಳಿಕ ಅವರ ಬಂಧನವಾಗಿದೆ.

  • News18
  • 3-MIN READ
  • Last Updated :
  • Share this:

ನವದೆಹಲಿ(ಫೆ. 09): ಗಣರಾಜ್ಯೋತ್ಸವ ದಿನದಂದು ರೈತರ ಪ್ರತಿಭಟನೆಯ ಭಾಗವಾಗಿ ನಡೆದ ಟ್ರಾಕ್ಟರ್ ಮೆರವಣಿಗೆ ವೇಳೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ದೆಹಲಿ ಪೊಲೀಸರು ಪಂಜಾಬೀ ನಟ ಹಾಗೂ ಗಾಯಕ ದೀಪ್ ಸಿಧು ಅವರನ್ನ ಇಂದು ಮಂಗಳವಾರ ಬಂಧಿಸಿದರು. ಜನವರಿ 26ರಂದೇ ದೀಪ್ ಸಿಧು ಮತ್ತಿತರರ ವಿರುದ್ಧ ಎಫ್​ಐಆರ್ ದಾಖಲಾಗಿದ್ದರೂ ಅವರು ತಪ್ಪಿಸಿಕೊಂಡಿದ್ದರು. ಅವರನ್ನ ಹಿಡಿಯಲು ದೆಹಲಿ ಕ್ರೈಮ್ ಬ್ರ್ಯಾಂಚ್​ನ ಪೊಲೀಸರ ಹಲವು ತಂಡಗಳನ್ನ ರಚಿಸಲಾಗಿತ್ತು. ಎರಡು ವಾರಗಳ ಬಳಿಕ ಅವರ ಬಂಧನವಾಗಿರುವ ವಿಚಾರವನ್ನ ದೆಹಲಿ ಸ್ಪೆಷಲ್ ಪೊಲೀಸ್ ವಿಭಾಗದ ಡಿಸಿಪಿ ಸಂಜೀವ್ ಕುಮಾರ್ ಯಾದವ್ ಅವರು ತಿಳಿಸಿದ್ಧಾರೆ. ಆದರೆ, ಯಾವ ಸ್ಥಳದಿಂದ ಅವರನ್ನ ಅರೆಸ್ಟ್ ಮಾಡಲಾಯಿತು ಎಂಬ ಮಾಹಿತಿ ಮಾಧ್ಯಮಗಳಿಗೆ ಲಭ್ಯವಾಗಿಲ್ಲ.


ಜನವರಿ 26ರ ಘಟನೆ ನಂತರ ದೀಪ್ ಸಿಧು ಅವರ ಫೇಸ್​ಬುಕ್ ಖಾತೆಯಿಂದ ವಿಡಿಯೋಗಳನ್ನ ಹಾಕಲಾಗಿತ್ತು. ಆದರೆ, ಕ್ಯಾಲಿಫೋರ್ನಿಯಾದಲ್ಲಿರುವ ತಮ್ಮ ಸ್ನೇಹಿತರ ಮೂಲಕ ದೀಪ್ ಸಿಧು ಅವರ ತಮ್ಮ ವಿಡಿಯೋ ಅಪ್​ಲೋಡ್ ಮಾಡಿಸಿದ್ದರು. ಆದ್ದರಿಂದ ಫೇಸ್​ಬುಕ್​ನ ಐಪಿ ಅಡ್ರೆಸ್ ಮೂಲಕ ಅವರ ಜಾಡು ಹಿಡಿಯಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಜನವರಿ 26ರ ಹಿಂಸಾಚಾರ ಘಟನೆಗೆ ಕೋಮುಬಣ್ಣ ಬಳಿಯುವ ಕೆಲಸ ಆಗಬಾರದು. ಅಥವಾ ಅದು ಮೂಲಭೂತವಾದಿಗಳ ಮತ್ತು ಉಗ್ರವಾದಿಗಳ ಕೆಲಸ ಎನ್ನುವಂತೆ ಬಿಂಬಿಸಬಾರದು ಎಂದು ಅವರು ಆ ವಿಡಿಯೋದಲ್ಲಿ ಹೇಳಿದ್ದರು. ದೆಹಲಿ ಪೊಲೀಸರು ದೀಪ್ ಸಿಧು ಅವರನ್ನ ಹುಡುಕಿಕೊಟ್ಟವರಿಗೆ 1 ಲಕ್ಷ ರೂ ಬಹುಮಾನ ಘೋಷಿಸಿದ್ದರು. ಜುಗರಾಜ್ ಸಿಂಗ್, ಗುರುಜೋತ್ ಸಿಂಗ್ ಮತ್ತು ಗುರಜಂತ್ ಸಿಂಗ್ ಅವರ ಸುಳಿವು ಕೊಟ್ಟವರಿಗೂ 1 ಲಕ್ಷ ರೂ ಬಹುಮಾನ ಘೋಷಿಸಲಾಗಿತ್ತು. ಇದೇ ಹಿಂಸಾಚಾರ ಪ್ರಕರಣ ಸಂಬಂಧ ಜಾಜಬೀರ್ ಸಿಂಗ್, ಬೂಟಾ ಸಿಂಗ್, ಸುಖದೇವ್ ಸಿಂಗ್ ಮತ್ತು ಇಕ್ಬಾಲ್ ಸಿಂಗ್ ಅವರ ಮೇಲೆ 50 ಸಾವಿರ ರೂ ಬಹುಮಾನ ಕೊಡುವುದಾಗಿಯೂ ದೆಹಲಿ ಪೊಲೀಸರು ಪ್ರಕಟಣೆ ಹೊರಡಿಸಿದ್ದರು.


ಇದನ್ನೂ ಓದಿ: ಪಾಕಿಸ್ತಾನ-ಖಲಿಸ್ತಾನ ಹೋರಾಟಕ್ಕೆ ಬೆಂಬಲ; 1200 ಖಾತೆಗಳನ್ನು ನಿರ್ಬಂಧಿಸುವಂತೆ ಟ್ವಿಟರ್​ಗೆ ಕೇಂದ್ರ ಸೂಚನೆ


ಎರಡು ತಿಂಗಳುಗಳಿಂದ ಶಾಂತವಾಗಿ ನಡೆಯುತ್ತಿದ್ದ ರೈತರ ಪ್ರತಿಭಟನೆ ಜನವರಿ 26ರಂದು ಹಿಂಸಾರೂಪ ಪಡೆದಿತ್ತು. ಆಡಳಿತ ನಿಗದಿಪಡಿಸಿದ ಮಾರ್ಗಗಳಲ್ಲಿ ಟ್ರಾಕ್ಟರ್ ಮೆರವಣಿಗೆ ನಡೆಸಲು ಅನುಮತಿ ಪಡೆಯಲಾಗಿತ್ತು. ಯಾವುದೇ ಹಿಂಸಾಚಾರವಾಗಲೀ ಸಾರ್ವಜನಿಕರಿಗೆ ತೊಂದರೆಯನ್ನಾಗಲೀ ಮಾಡುವುದಿಲ್ಲ ಎಂಬ ಭರವಸೆಯನ್ನೂ ನೀಡಲಾಗಿತ್ತು. ಆದರೆ, ಗಣರಾಜ್ಯೋತ್ಸವ ದಿನವಾದ ಅಂದು ಪ್ರತಿಭಟನಾಕಾರರ ಒಂದು ಗುಂಪು ನಿಗದಿಯಾದ ಮಾರ್ಗ ಬಿಟ್ಟು ಬೇರೆ ರಸ್ತೆಗಳಲ್ಲಿ ದೆಹಲಿಗೆ ನುಗ್ಗಲು ಯತ್ನಿಸಿತು. ಪೊಲೀಸರು ಹಾಕಿದ್ದ ಬ್ಯಾರಿಕೇಡ್​ಗಳು ಸೇರಿದಂತೆ ಹಲವು ತಡೆಗಳನ್ನ ಮುರಿದು ಮುನ್ನುತ್ತಿತ್ತು. ದಾರಿಯಲ್ಲಿ ಸಿಕ್ಕ ಪೊಲೀಸರ ಮೇಲೆ ಹಲ್ಲೆ ನಡೆಸಿತು. ಕೆಂಪುಕೋಟೆಗೆ ನೂರಾರು ಮಂದಿ ಲಗ್ಗೆ ಹಾಕಿ ರಾಷ್ಟ್ರಧ್ವಜ ಬಿಸಾಡಿ ಸಿಖ್ ಧಾರ್ಮಿಕ ಧ್ವಜವನ್ನ ಹಾರಾಡಿಸಿದ್ದರು. ಆ ದಿನ ನಡೆದ ಹಿಂಸಾಚಾರದಲ್ಲಿ ಸುಮಾರು 300 ಮಂದಿ ಪೊಲೀಸರು ಗಾಯಗೊಂಡಿದ್ದರು. ಟ್ರಾಕ್ಟರ್  ಪಲ್ಟಿಯಾಗಿ ಒಬ್ಬ ಪ್ರತಿಭಟನಾಕಾರ ಸಾವನ್ನಪ್ಪಿದ. ಪೊಲೀಸರು ಅಲ್ಲಲ್ಲಿ ನಡೆಸಿದ ಲಾಠಿ ಚಾರ್ಜ್​ನಲ್ಲಿ ಹಲವರು ಪ್ರತಿಭಟನಾಕಾರರೂ ಗಾಯಗೊಂಡಿದ್ದರು.


ಇದನ್ನೂ ಓದಿ: ಭಾರತ-ಶ್ರೀಲಂಕಾ ಸಂಬಂಧ ಸುಧಾರಣೆಗೆ ಮತ್ತೆ ಅಡ್ಡಿ..! ಹಿಂದೂ ಮಹಾಸಾಗರದಲ್ಲಿ ಚೀನಾದಿಂದ ಕೊಳಕು ರಾಜಕೀಯ?


ಟ್ರಾಕ್ಟರ್ ಮೆರವಣಿಗೆ ವೇಳೆ ಪೊಲೀಸರ ಮೇಲೆ ಹಿಂಸಾಚಾರ ನಡೆಸಿದ ಹಾಗೂ ಕೆಂಪು ಕೋಟೆ ಮೇಲೆ ದಾಳಿ ನಡೆಸಿದ ಉದ್ರಿಕ್ತರನ್ನ ಗುರುತಿಸುವ ಕೆಲಸವನ್ನ ಪೊಲೀಸರು ನಡೆಸಿದ್ದಾರೆ. ಅದಕ್ಕಾಗಿ ಫೋರೆನ್ಸಿಕ್ ತಂಡದ ನೆರವನ್ನೂ ಪಡೆದು 12 ಮಂದಿಯನ್ನ ಸದ್ಯಕ್ಕೆ ಗುರುತಿಸಿದ್ದಾರೆ.


ಜನವರಿ 26ರ ಹಿಂದಿನ ದಿನ ದೀಪ್ ಸಿಧು ಮೊದಲಾದವರು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡುತ್ತಾ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದರೆಂಬ ಆರೋಪ ಇದೆ. ದೀಪ್ ಸಿಧು ಈ ಆರೋಪವನ್ನು ಬಲವಾಗಿ ತಳ್ಳಿಹಾಕಿದ್ದಾರೆ. ತಮ್ಮ ಮೇಲಿನ ಆರೋಪವು ರೈತರ ಪ್ರತಿಭಟನೆಯನ್ನ ಹತ್ತಿಕ್ಕುವ ಷಡ್ಯಂತ್ರ ಎಂದು ಪ್ರತ್ಯಾರೋಪ ಮಾಡಿ ವಿಡಿಯೋಗಳನ್ನ ಬಿಡುಗಡೆ ಮಾಡಿದ್ದರು.

top videos
    First published: