news18 Updated:October 14, 2020, 10:55 PM IST
ಪಂಜಾಬ್ ರೈತರ ಪ್ರತಿಭಟನೆ
- News18
- Last Updated:
October 14, 2020, 10:55 PM IST
ಅಮೃತಸರ(ಅ. 14): ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಕೃಷಿ ಕಾಯ್ದೆಗಳನ್ನ ರಾಜ್ಯದಲ್ಲಿ ಅಡವಳಿಕೆ ಆಗದಂತೆ ಶಾಸನ ರೂಪಿಸಲು ಪಂಜಾಬ್ ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ, ಅಕ್ಟೋಬರ್ 19ರಿಂದ ವಿಶೇಷ ಅಧಿವೇಶನ ಕರೆಯಲು ಯೋಜಿಸಿದೆ. ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ನೇತೃತ್ವದಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ರಾಜ್ಯಗಳು ಕೇಂದ್ರದ ಕೃಷಿ ಕಾಯ್ದೆಗಳನ್ನ ಧಿಕ್ಕರಿಸುವ ಶಾಸನಗಳನ್ನ ರೂಪಿಸಬೇಕೆಂದು ಕೆಲ ದಿನಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕರೆ ನೀಡಿದ್ದರು. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿರುವ ರಾಜ್ಯ ಪಂಜಾಬ್ ಆಗಿದೆ. ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಅತಿ ಹೆಚ್ಚು ಪ್ರತಿಭಟನೆ ಕಂಡ ರಾಜ್ಯವೂ ಪಂಜಾಬ್ ಆಗಿದೆ. ಇಲ್ಲಿ ಬಹಳ ತೀವ್ರ ಮಟ್ಟದಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ.
ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಅವರು ತಮ್ಮ ಸರ್ಕಾರ ಮಾರಕ ಕೃಷಿ ಕಾನೂನುಗಳ ಶತಾಯಗತಾಯ ಹೋರಾಟ ಮಾಡುವುದಾಗಿ ಹೇಳಿದ್ಧಾರೆ. ಕೇಂದ್ರದ ಶಾಸನಗಳ ವಿರುದ್ಧವಾಗಿ ರಾಜ್ಯದ ಕಾನೂನುಗಳಿಗೆ ಅಗತ್ಯ ತಿದ್ದುಪಡಿ ತರಲು ವಿಶೇಷ ಅಧಿವೇಶನ ಕರೆಯುವುದಾಗಿ ಸಿಂಗ್ ಅವರು ಕೆಲ ದಿನಗಳ ಹಿಂದೆ ಸುಳಿವು ನೀಡಿದ್ದರು. ಅದರಂತೆ ಈಗ ಸಂಪುಟ ಸಭೆಯಲ್ಲಿ ಸಿಂಗ್ ತೀರ್ಮಾನ ಕೈಗೊಂಡಿದ್ದಾರೆ.
ಇದನ್ನೂ ಓದಿ: ಭಾರತದ ಗುಪ್ತಚರ ಸಂಸ್ಥೆಗಳಲ್ಲಿ ಕೆಲಸ ಮಾಡಬೇಕೆ? ಇಲ್ಲಿದೆ ನೇಮಕಾತಿ ಪ್ರಕ್ರಿಯೆ
ಸಂಪುಟದ ಶಿಫಾರಸಿನ ಹಿನ್ನೆಲೆಯಲ್ಲಿ ಪಂಜಾಬ್ ರಾಜ್ಯಪಾಲರು ಸಂವಿಧಾನದ 174ನೇ ವಿಧಿಯ ಪ್ರಕಾರ ವಿಶೇಷ ಅಧಿವೇಶನ ಕರೆಯುವ ಸಾಧ್ಯತೆ ಇದೆ. ಆಗಸ್ಟ್ 28ರಂದು ನಡೆದ ಅಧಿವೇಶನದಲ್ಲಿ ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನ ತಿರಸ್ಕರಿಸಲು ಯಶಸ್ವಿಯಾಗಿ ನಿರ್ಣಯ ಹೊರಡಿಸಲಾಗಿತ್ತು.
ವಿಶೇಷ ಅಧಿವೇಶನ ಕರೆಯಲು ಪಂಜಾಬ್ ಸರ್ಕಾರದ ಮೇಲೆ ಇತರ ಕಡೆಯಿಂದಲೂ ಒತ್ತಡ ಇದೆ. ವಿಪಕ್ಷಗಳು ಹಾಗೂ ರೈತರು ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದಾರೆ. ವಿಶೇಷ ಅಧಿವೇಶನ ಕರೆದು ಕೇಂದ್ರದ ಕಾನೂನುಗಳನ್ನ ನಿಷ್ಕ್ರಿಯಗೊಳಿಸದೇ ಇದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ರೈತರು ಪಂಜಾಬ್ ಸರ್ಕಾರಕ್ಕೂ ಎಚ್ಚರಿಕೆ ಕೊಟ್ಟಿದ್ದಾರೆ.
ಕೇಂದ್ರದ ಕೃಷಿ ಕಾನೂನುಗಳಿಗೆ ದೇಶದ ಇತರೆಲ್ಲಾ ರಾಜ್ಯಗಳಿಗಿಂತ ಪಂಜಾಬ್ನಲ್ಲೇ ಅತಿ ಹೆಚ್ಚು ವಿರೋಧ ಇರುವುದಕ್ಕೆ ಕಾರಣ ಇದೆ. ಪಂಜಾಬ್ನಲ್ಲಿ ರೈತರ ಬಹಳಷ್ಟು ಬೆಳೆಗೆ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಇದೆ. ಹೀಗಾಗಿ, ಈ ಎಂಎಸ್ಪಿಯ ಮೇಲೆ ರೈತರು ಬಹಳ ಅವಲಂಬಿತವಾಗಿದ್ದಾರೆ. ಕೇಂದ್ರದ ಕಾಯ್ದೆ ಜಾರಿಗೆ ಬಂದರೆ ಎಂಎಸ್ಪಿಯನ್ನು ತೆಗೆದುಹಾಕಲಾಗುತ್ತದೆ ಎಂಬ ಆತಂಕ ಪಂಜಾಬ್ ರೈತರದ್ದು. ಹೀಗಾಗಿ, ಉಗ್ರ ಹೋರಾಟ ಮಾಡುತ್ತಿದ್ಧಾರೆ.
ಇದನ್ನೂ ಓದಿ: ಮೊರಾಟೋರಿಯಂ ಅವಧಿಯ ಗೊಂದಲ; ಇಎಂಐ ಮೇಲಿನ ಬಡ್ಡಿ ಮನ್ನಾಗೆ ಸುಪ್ರೀಂ ಸೂಚನೆ; ನ. 2ಕ್ಕೆ ಮತ್ತೆ ವಿಚಾರಣೆ
ಇದೇ ವೇಳೆ, ಕೇಂದ್ರದ ಕಾನೂನುಗಳಿಗೆ ವಿರುದ್ಧವಾಗಿ ಹೆಜ್ಜೆ ಇಡುತ್ತಿರುವ ಪಂಜಾಬ್ ಸರ್ಕಾರದ ಹಾದಿಯನ್ನೇ ತುಳಿಯಲು ಇತರ ರಾಜ್ಯಗಳು ಮುಂದಾಗುತ್ತವಾ ಎಂಬುದನ್ನು ಕಾದುನೋಡಬೇಕು. ಹಾಗೆಯೇ, ಪಂಜಾಬ್ ಸರ್ಕಾರದ ಈ ನಡೆಯನ್ನು ತಡೆಯಲು ಕೇಂದ್ರ ಸರ್ಕಾರ ಬೇರೆ ಯಾವುದಾದರೂ ಮಾರ್ಗ ಹುಡುಕುತ್ತದಾ ಎಂಬುದೂ ಕುತೂಹಲದ ವಿಚಾರ.
Published by:
Vijayasarthy SN
First published:
October 14, 2020, 10:55 PM IST