ಚಂಡೀಗಡ: ಪಂಜಾಬ್‌ನಲ್ಲಿ ಖಲಿಸ್ತಾನಿ (Khalistan) ಉಗ್ರ ಚಟುವಟಿಕೆಗಳಿಗೆ ಪ್ರಚೋಧನೆ ನೀಡುತ್ತಿರುವ ಹಾಗೂ ಹಿಂಸಾತ್ಮಕ ಕೃತ್ಯಗಳಿಗೆ ಕಾರಣವಾಗಿರುವ ವಾರಿಸ್ ಪಂಜಾಬ್ ದೆ (Waris Punjab De) ಸಂಘಟನೆಯ ಮುಖ್ಯಸ್ಥ ಅಮೃತ್ಪಾಲ್ ಸಿಂಗ್ (Amritpal Singh) ಬಂಧನಕ್ಕೆ ಕಳೆದ 2-3 ದಿನಗಳಿಂದ ಪಂಜಾಬ್ ಪೊಲೀಸರು (Punjab) ಕಾರ್ಯಾಚರಣೆ ಆರಂಭಿಸಿದ್ದಾರೆ. ಈಗಾಗಲೇ ಆತನ ಸಂಬಂಧಿಕರು ಹಾಗೂ ನೂರಾರು ಸಹಚರರನ್ನು ಬಂಧಿಸಲಾಗಿದೆ. ಆದರೆ ಅಮೃತ್ಪಾಲ್ ಸಿಂಗ್ ಪೊಲೀಸರ ಕಣ್ಣುತಪ್ಪಿಸಿ ಕಾರು, ಬೈಕ್, ಬಟ್ಟೆ ಬದಲಿಸಿಕೊಂಡು ಓಡಾಡುತ್ತಿದ್ದಾನೆ. ಈತ ತಪ್ಪಿಸಿಕೊಂಡು ಓಡಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ವಿಡಿಯೋಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದು, ಅಮೃತ್ಪಾಲ್ ಬಂಧನಕ್ಕೆ ಸಹಕರಿಸುವಂತೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ.
ಅಮೃತ್ಪಾಲ್ ಸಿಂಗ್ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದಾನೆ. ಸಹಚರರ ನೆರವಿನಿಂದ ಆತ ಹಳ್ಳಿಗಳೊಳಗೆ ಹೋಗಿ ತಲೆಮರಿಸಿಕೊಂಡಿದ್ದಾನೆ. ಇತ್ತೀಚೆಗೆ ಬೈಕ್ವೊಂದರಲ್ಲಿ ಹೋಗುವುದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಆ ಬೈಕ್ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಆತನನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜಲಂಧರ್ನಲ್ಲಿ ಬೈಕ್ ಪತ್ತೆ
ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತ್ಪಾಲ್ ಸಿಂಗ್ ಪರಾರಿಯಾಗಿದ್ದ ಮೋಟಾರ್‌ಸೈಕಲ್ ಅನ್ನು ಜಲಂಧರ್‌ನ ಕಾಲುವೆ ಬಳಿ ಬೈಕ್ ಪತ್ತೆಯಾಗಿದೆ ಎಂದು ಜಲಂಧರ್ ಎಸ್‌ಎಸ್‌ಪಿ ಸ್ವರ್ಣದೀಪ್ ಸಿಂಗ್ ಬುಧವಾರ ಹೇಳಿದ್ದಾರೆ. ದಾರಾಪುರ ಗ್ರಾಮದಲ್ಲಿ ಬೈಕ್ ಬಿಟ್ಟು ಫಿಲೌರ್ ಕಡೆಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಪದೇ ಪದೇ ವಾಹನಗಳನ್ನು ಬದಲಾಯಿಸುವ ಮೂಲಕ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾನೆ.
ಇದನ್ನೂ ಓದಿ: Punjab: ಇಲ್ಲಿ ಯುವಕರೇ 'ಮಾನವ ಬಾಂಬ್', ಪಂಜಾಬ್ ಹತ್ತಿಕ್ಕಲು ಖತರ್ನಾಕ್ ಪ್ಲಾನ್ ಮಾಡಿದ್ದ ಅಮೃತಪಾಲ್!
ಅಮೃತ್ಪಾಲ್ ಸಿಂಗ್ ಪರಾರಿಯಾಗಿದ್ದೇಗೆ?
ಮಾರ್ಚ್ 18ರಂದು ಪೊಲೀಸರು ಅಮೃತ್ಪಾಲ್ಸಿಂಗ್ನನ್ನು ಬಂಧಿಸಲು ಪೊಲೀಸರು ಯೋಜನೆ ರೂಪಿಸಿದ್ದರು. ಅದಕ್ಕಾಗಿ ಅಮೃತಸರದ ಖಲ್ಜಿಯಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ನಾಕಾಬಂದಿ ಹಾಕಿದ್ದರು. ಅಮೃತ್ಪಾಲ್ ಮತ್ತು ಆತನ ಸಹಚರರು ಮರ್ಸಿಡಿಸ್ ಕಾರಿನಲ್ಲಿ ಆಗಮಿಸಿದ್ದರು. ಕಾರನ್ನು ನಿಲ್ಲಿಸುವಂತೆ ನಿರ್ದೇಶಿಸಿದರೂ ನಾಕಾಬಂದಿಯಲ್ಲಿದ್ದ ಕಾರುಗಳನ್ನು ಗುದ್ದಿಕೊಂಡು ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಹೊಸ ಪ್ರಕರಣ ದಾಖಲು
ಶನಿವಾರ ಪರಾರಿಯಾಗುವಾಗ ಬ್ಯಾರಿಕೇಡ್‌ಗಳನ್ನು ಮುರಿದ ವಿಚಾರದಲ್ಲಿ ಮತ್ತು ಪರಾರಿಯಾಗುವಾಗ ಬಿಟ್ಟುಹೋದ ಕಾರಿನಲ್ಲಿ ರೈಫಲ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಮೃತ್ಪಾಲ್ ಸಿಂಗ್ ಹಾಗೂ ಆತನ ಸಹಚರರ ವಿರುದ್ಧ ಎರಡು ಹೊಸ ಪ್ರಕರಣಗಳನ್ನು ದಾಖಲಿಸಲಾಗಿದೆ. ಜೊತೆಗೆ ಪಂಜಾಬ್‌ನಾದ್ಯಂತ ಆತನೊಂದಿಗೆ ಸಂಬಂಧ ಹೊಂದಿದ್ದ 34 ಜನರನ್ನು ಬಂಧಿಸಲಾಗಿದೆ, ಇದುವರೆಗಿನ ಒಟ್ಟು ಬಂಧಿತರ ಸಂಖ್ಯೆ 100ರ ಗಡಿ ದಾಟಿದೆ ಎಂದು ತಿಳಿದುಬಂದಿದೆ.
ಸರ್ಕಾರಕ್ಕೆ ಹೈಕೋರ್ಟ್ ತಪರಾಕಿ
ಪಂಜಾಬ್‌ನಲ್ಲಿ ಗುಪ್ತಚರ ಇಲಾಖೆ ವಿಫಲವಾಗಿದ್ದು, 80 ಸಾವಿರ ಪೊಲೀಸರಿಂದ ಓರ್ವ ವ್ಯಕ್ತಿಯನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂದು ಪಂಜಾಬ್ ಹರಿಯಾಣ ಹೈಕೋರ್ಟ್ ಪಂಜಾಬ್ ಪೊಲೀಸ್ ಇಲಾಖೆಯನ್ನು ತರಾಟೆ ತೆಗೆದುಕೊಂಡಿದೆ. ಪಂಜಾಬ್ ಸರ್ಕಾರ ತನ್ನ ಜವಬ್ದಾರಿ ನಿಭಾಯಿಸುವಲ್ಲಿ ವಿಫಲವಾಗಿದೆ. ಅಮೃತ್ ಪಾಲ್ ಹೊರತುಪಡಿಸಿ ಉಳಿದವರನ್ನು ಬಂಧಿಸಿದ್ದು ಹೇಗೆ? ನಾವು ಕಥೆಯನ್ನು ನಂಬಲು ಸಾಧ್ಯವಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದೆ.
ಅಮೃತ್ಪಾಲ್ನ ಹಲವು ರೂಪಗಳ ಫೋಟೋ ಬಿಡುಗಡೆ
ಕಳೆದ ನಾಲ್ಕು ದಿನಗಳಿಂದ ಪರಾರಿಯಾಗಿರುವ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಅವರ ಸಂಭವನೀಯ ಅವತಾರಗಳನ್ನು ಪಂಜಾಬ್ ಪೊಲೀಸರು ಇಂದು ಬಿಡುಗಡೆ ಮಾಡಿದ್ದಾರೆ. ಈ ಫೋಟೋಗಳಿಂದ ಜನರು ಅವನನ್ನು ಗುರುತಿಸಲು ಸಹಾಯ ಮಾಡಬಹುದು ಎಂದು ಆಶಿಸುತ್ತಿದ್ದಾರೆ. ಪೊಲೀಸರು ಅಮೃತ್ಪಾಲ್ನ ಏಳು ಚಿತ್ರಗಳ ಸೆಟ್ ಅನ್ನು ಬಿಡುಗಡೆ ಮಾಡಿದ್ದಾರೆ, ಅದರಲ್ಲಿ ತೀವ್ರಗಾಮಿ ಬೋಧಕ ವಿವಿಧ ವೇಷಗಳಲ್ಲಿ ಮತ್ತು ಪೇಟಗಳಲ್ಲಿ ಕಾಣಿಸಿಕೊಂಡಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ