ಹೀಗೂ ಉಂಟು; ಅಜ್ಜ-ಅಜ್ಜಿಯರ ಆಸೆ ಈಡೇರಿಸಲು ಪಂಜಾಬ್​ನ ಹುಡುಗ ಮಾಡಿದ್ದೇನು ಗೊತ್ತಾ?

ಅದೊಂದು ಸಣ್ಣ ಹಳ್ಳಿ. ಅಲ್ಲಿಯ ಜನರಿಗೆ ಐಷಾರಾಮಿ ಜೀವನವೆಲ್ಲ ಕನಸೇ ಸರಿ. ಅವರೆಲ್ಲ ಪೇಟೆ ನೋಡುವುದೂ ವರ್ಷಕ್ಕೆ ಒಂದೋ ಎರಡೋ ಬಾರಿ. ಆದರೆ, ಮೊನ್ನೆ ಅವರಿಗೆಲ್ಲ ವಿಮಾನದಲ್ಲಿ ಹಾರಾಡುವ ಭಾಗ್ಯ ಸಿಕ್ಕಿತ್ತು. ಹೇಗೆ ಅಂತೀರಾ? ಈ ಸ್ಟೋರಿ ಓದಿ...

sushma chakre | news18
Updated:October 9, 2018, 4:34 PM IST
ಹೀಗೂ ಉಂಟು; ಅಜ್ಜ-ಅಜ್ಜಿಯರ ಆಸೆ ಈಡೇರಿಸಲು ಪಂಜಾಬ್​ನ ಹುಡುಗ ಮಾಡಿದ್ದೇನು ಗೊತ್ತಾ?
ಅದೊಂದು ಸಣ್ಣ ಹಳ್ಳಿ. ಅಲ್ಲಿಯ ಜನರಿಗೆ ಐಷಾರಾಮಿ ಜೀವನವೆಲ್ಲ ಕನಸೇ ಸರಿ. ಅವರೆಲ್ಲ ಪೇಟೆ ನೋಡುವುದೂ ವರ್ಷಕ್ಕೆ ಒಂದೋ ಎರಡೋ ಬಾರಿ. ಆದರೆ, ಮೊನ್ನೆ ಅವರಿಗೆಲ್ಲ ವಿಮಾನದಲ್ಲಿ ಹಾರಾಡುವ ಭಾಗ್ಯ ಸಿಕ್ಕಿತ್ತು. ಹೇಗೆ ಅಂತೀರಾ? ಈ ಸ್ಟೋರಿ ಓದಿ...
  • Advertorial
  • Last Updated: October 9, 2018, 4:34 PM IST
  • Share this:
ನ್ಯೂಸ್​18 ಕನ್ನಡ

ಹಿಸಾರ್​ (ಅ. 9):  ಪಂಜಾಬ್​ನ ಸಾರಂಗಪುರದ ಅದಾಂಪುರ್​ ಎಂಬುದೊಂದು ಸಣ್ಣ ಊರು. ಆ ಊರಿನಲ್ಲಿ ಬೆಳೆದ ವಿಕಾಸ್​ ಎಂಬ ಹುಡುಗನಿಗೆ ಆಕಾಶದೆತ್ತರಕ್ಕೆ ಹಾರಬೇಕೆಂಬ ಕನಸು.ಕುಗ್ರಾಮದಲ್ಲಿ ಬೆಳೆದವರಿಗೆ ಅದೆಲ್ಲ ಕನಸಷ್ಟೇ ಎಂದು ನೀವು ಭಾವಿಸಬಹುದು. ಆದರೆ, ವಿಕಾಸ್​ಗೆ ತಾನೊಂದು ದಿನ ಪೈಲಟ್​ ಆಗಬೇಕು ಎಂಬ ನಿಖರವಾದ ಗುರಿಯಿತ್ತು. ಆತನ ಕನಸಿನಂತೆ ಪೈಲಟ್​ ಆಗಿ ವಿಮಾನವೇರಿ ಕುಳಿತಿದ್ದೂ ಆಯಿತು. ಆದರೆ, ತಾನು ಮಾತ್ರ ಕನಸು ನನಸು ಮಾಡಿಕೊಂಡರೆ ಸಾಕಾ? ತನ್ನೂರಿನವರ ಕನಸನ್ನೂ ನನಸಾಗಿಸಬೇಕಲ್ಲ ಎಂದು ವಿಕಾಸ್​ ಯೋಚಿಸಿದ.

ಹಾಗೆ ಯೋಚನೆ ಬಂದಿದ್ದೇ ತಡ... ತನ್ನೂರಿನ ಅಜ್ಜಿ-ತಾತಂದಿರನ್ನೆಲ್ಲ ವಿಮಾನ ಹತ್ತಿಸಿದರೆ ಹೇಗಿರುತ್ತದೆ? ಎಂದುಕೊಂಡು ಅದಕ್ಕೆ ಸೂಕ್ತ ವ್ಯವಸ್ಥೆಯನ್ನೂ ಮಾಡಿದ. ತಾನೇ ಒಂದು ಏರ್​ ಟ್ರಾವೆಲ್ ಬುಕ್​ ಮಾಡಿ, ಅದರಲ್ಲಿ ತನ್ನೂರಿನ 70 ವರ್ಷ ಮೇಲ್ಪಟ್ಟ 22 ಅಜ್ಜ-ಅಜ್ಜಿಯಂದಿರನ್ನು ಕೂರಿಸಿಕೊಂಡು ಆಗಸಕ್ಕೆ ಹಾರಿದ. ಹೀಗೆ, ಹಳ್ಳಿ ಬಿಟ್ಟು ಹೊರಗೇ ಬಾರದ ಊರಿನ ವೃದ್ಧರು ನವದೆಹಲಿಯಿಂದ ಅಮೃತಸರ, ಅಲ್ಲಿಂದ ಗೋಲ್ಡನ್​ ಟೆಂಪಲ್​, ಜಲಿಯನ್​ ವಾಲಾಬಾಗ್​, ವಾಘಾ ಬಾರ್ಡರ್​ಗೆ ವಾಯುಮಾರ್ಗದಲ್ಲಿ ಸಂಚರಿಸುವಂತಾಯಿತು.

ಹೀಗೆ ವಿಮಾನ ಹತ್ತಿ ಕುಳಿತ ಅಜ್ಜ-ಅಜ್ಜಿಯಂದಿರು ತಮ್ಮ ವಯಸ್ಸು ಮರೆತು ಚಿಕ್ಕ ಮಕ್ಕಳಂತೆ ಸಂತೋಷವನ್ನು ಅನುಭವಿಸಿದ ದೃಶ್ಯವನ್ನು ರೆಕಾರ್ಡ್​ ಮಾಡಿಸಿಕೊಂಡಿರುವ ವಿಕಾಸ್​ ತನ್ನೂರಿನ ಹಿರಿಜೀವಗಳನ್ನು ಕೂರಿಸಿಕೊಂಡು ಆಗಸೆದೆತ್ತರಕ್ಕೆ ಏರಿದ್ದಾರೆ.

ಅವರೆಲ್ಲರಿಗೂ ಮೊದಲ ಅನುಭವ:

ಹೀಗೆ ಪ್ರಯಾಣ ಬೆಳೆಸಿದವರಲ್ಲಿ ಬಹುತೇಕರಿಗೆ ಇದು ಮೊದಲ ವಿಮಾನ ಪ್ರಯಾಣವಾಗಿತ್ತು. ಈ 22 ವೃದ್ಧರಲ್ಲಿ ಬಿಮ್ಲಾ ಎಂಬ 90 ವರ್ಷದ ಅಜ್ಜಿ, 80 ವರ್ಷದ ಅಮರ್​ ಸಿಂಗ್​, 78 ವರ್ಷದ ಕಂಕರಿ ದೇವಿ ಅತ್ಯಂತ ಹಿರಿಯರು. ಉಳಿದವರೆಲ್ಲರೂ 70ರಿಂದ 80ರ ಆಸುಪಾಸಿನವರು. ತಮ್ಮ ಪ್ರಯಾಣವನ್ನು ಬಹಳ ಎಂಜಾಯ್​ ಮಾಡಿರುವ ಈ ತಾತ-ಅಜ್ಜಿಯಂದಿರು ನಾವೆಂದೂ ಹೀಗೆ ವಿಮಾನ ಹತ್ತುತ್ತೇವೆ ಎಂದು ಅಂದುಕೊಂಡಿರಲೇ ಇಲ್ಲ. ಜೀವನವೇ ಮುಗಿದುಹೋಗುತ್ತಿರುವ ಈ ವಯಸ್ಸಿನಲ್ಲಿ ಇಂತಹ ಅನುಭವ ಸಿಗುತ್ತದೆ ಎಂದು ಭಾವಿಸಿರಲಿಲ್ಲ. ವಿಕಾಸ್​ ಮುಂದೊಂದು ದಿನ ಪೈಲಟ್​ ಆಗಿಯೇ ಆಗುತ್ತೇನೆ, ಆಗ ನಿಮ್ಮನ್ನೂ ವಿಮಾನದಲ್ಲಿ ಕರೆದುಕೊಂಡು ಹೋಗುತ್ತೇನೆ ಎಂದು ಹೇಳುತ್ತಿದ್ದ. ಆ ಮಾತನ್ನು ಇಂದು ನಿಜ ಮಾಡಿದ್ದಾನೆ ಎಂದು ಮನಸಾರೆ ತಮ್ಮೂರಿನ ಹುಡುಗನ ಸಾಧನೆ ಮತ್ತು ಆತನ ಒಳ್ಳೆತನವನ್ನು ಕೊಂಡಾಡಿದ್ದಾರೆ.

ಕೃಪೆ: ಟೈಮ್ಸ್​ ಆಫ್​ ಇಂಡಿಯಾ
ಮರೆಯಲಾಗದ ಕ್ಷಣ:

90 ವರ್ಷದ ಬಿಮ್ಲಾದೇವಿಗೂ ಇದು ಮೊದಲ ವಿಮಾನ ಪ್ರಯಾಣ. ಬಹಳ ಜನ ತಮ್ಮ ಅಪ್ಪ-ಅಮ್ಮನಿಗೆ ಏನೇನೋ ಮಾತು ಕೊಡುತ್ತಾರೆ. ಆದರೆ, ಅದನ್ನು ನೆರವೇರಿಸಲು ಮರೆತುಬಿಡುತ್ತಾರೆ. ಆದರೆ, ನಮ್ಮೂರಿನ ವಿಕಾಸ್​ ಇಡೀ ಊರಿನ ಅಜ್ಜ-ಅಜ್ಜಿಯರಿಗೆ ಮರೆಯಲಾಗದ ಉಡುಗೊರೆ ನೀಡಿದ್ದಾನೆ. ಇದು ನಮ್ಮೆಲ್ಲರ ಜೀವನದ ಮರೆಯಲಾಗದ ಕ್ಷಣ ಎಂದು ಮನಸಾರೆ ಆತನಿಗೆ ಹರಸಿದ್ದಾರೆ.

ವಿಕಾಸ್​ನ ಅಪ್ಪ ಮಹೇಂದ್ರ ಜಯನಿ ಕೂಡ ತಮ್ಮ ಮಗನ ಒಳ್ಳೆ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದು, ಆತ ಮೊದಲಿನಿಂದಲೂ ಹಿರಿಯರಿಗೆ ಬಹಳ ಗೌರವ ನೀಡುತ್ತಿದ್ದ. ತಾನು ಹೊಸ ಅನುಭವಗಳನ್ನು ಪಡೆಯುವುದು ಮಾತ್ರವಲ್ಲದೆ, ಉಳಿದವರಿಗೂ ಹೊಸ ಪ್ರಪಂಚವನ್ನು ತೋರಿಸಬೇಕೆಂಬುದು ಆತನ ಕನಸಾಗಿತ್ತು. ಆತ ಇವರೆಲ್ಲರ ಮೂಲಕ ತನ್ನ ಕನಸನ್ನೂ ನನಸಾಗಿಸಿಕೊಂಡಿದ್ದಾನೆ. ನನಗೆ ಅದೇ ಖುಷಿಯ ವಿಷಯ. ನಾನು ಆತನ ಬಗ್ಗೆ ಬಹಳ ಹೆಮ್ಮೆ ಪಡುತ್ತೇನೆ ಎಂದು ಹೇಳಿದ್ದಾರೆ.
First published:October 9, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ