ನವದೆಹಲಿ(ಮೇ 25): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ರೈತರು ಕಳೆದ ಕೆಲ ತಿಂಗಳ ಹಿಂದೆ ಸುದೀರ್ಘ ಪ್ರತಿಭಟನೆ ನಡೆಸಿದ್ದರು. ಸುಪ್ರೀಂ ಕೋರ್ಟ್ ಆದೇಶದ ಬಳಿಕ ಕೇಂದ್ರವು ತಾತ್ಕಾಲಿಕವಾಗಿ ಕೃಷಿ ಕಾಯ್ದೆಗಳನ್ನು ತಡೆಹಿಡಿದಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ರೈತ ವಿರೋಧಿ ಕಾಯ್ದೆಗಳೆಂದು ಅನ್ನದಾತರು ವಿರೋಧಿಸುತ್ತಿದ್ದಾರೆ. ಇದರ ಜೊತೆಗೆ ಪಂಜಾಬ್ನ ಶಾಸಕ ನವಜೋತ್ ಸಿಂಗ್ ಸಿಧು ಕೃಷಿ ಕಾಯ್ದೆಗಳನ್ನು ವಿರೋಧಿಸುವ ಮೂಲಕ ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.
ಹೌದು, ಶಾಸಕ ನವಜೋತ್ ಸಿಂಗ್ ಸಿಧು ಪಾಟಿಯಾಲದ ತಮ್ಮ ನಿವಾಸದ ಮೇಲೆ ಕಪ್ಪು ಬಾವುಟವನ್ನು ಹಾರಿಸುವ ಮೂಲಕ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ರೈತರ ಹೋರಾಟಕ್ಕೆ ನೇರವಾಗಿ ಬೆಂಬಲ ಸೂಚಿಸಿದ್ದಾರೆ.
ಕಪ್ಪು ಬಾವುಟವನ್ನು ಹಾರಿಸಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿರುವ ಅವರು, ಪ್ರತಿಯೊಬ್ಬ ಪಂಜಾಬಿಯೂ ರೈತರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:Coronavirus India Updates: 41 ದಿನಗಳ ಬಳಿಕ 2 ಲಕ್ಷಕ್ಕಿಂತ ಕಡಿಮೆ ಕೊರೋನಾ ಪ್ರಕರಣಗಳು ಪತ್ತೆ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಹಾಗೂ ರೈತರ ಹೋರಾಟಕ್ಕೆ ಬೆಂಬಲ ನೀಡಿ ಒಗ್ಗಟ್ಟನ್ನು ಪ್ರದರ್ಶಿಸಲು ಪಕ್ಷದ ಕಾರ್ಯಕರ್ತರು ಮೇ 26ರಂದು ತಮ್ಮ-ತಮ್ಮ ಮನೆಗಳ ಮೇಲೆ ಕಪ್ಪು ಬಾವುಟವನ್ನು ಹಾರಿಸಬೇಕು ಎಂದು ಎಸ್ಎಡಿ ಅಧ್ಯಕ್ಷ ಸುಖ್ಬಿರ್ ಸಿಂಗ್ ಬಾದಲ್ ಸೋಮವಾರ ಮನವಿ ಮಾಡಿದ್ದರು. ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಕಿಸಾನ್ ಮೋರ್ಚಾ ಹೋರಾಟವು ಈ ಬುಧವಾರಕ್ಕೆ 6 ತಿಂಗಳು ಪೂರೈಸಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡಲೇ ರೈತರ ಜೊತೆ ಮಾತನಾಡಿ, ಅವರ ಎಲ್ಲಾ ಕುಂದುಕೊರತೆಗಳನ್ನು ಬಗೆಹರಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಹಂಕಾರಕ್ಕೆ ಯಾವುದೇ ಅವಕಾಶವಿಲ್ಲ ಎಂದು ಎಸ್ಎಡಿ ಅಧ್ಯಕ್ಷರು ಕಿಡಿಕಾರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ