Punjab Elections: ಹಿಡಿತ ಸಾಧಿಸುತ್ತಿರುವ ಚನ್ನಿ: ಪ್ರತಿ ಯೂನಿಟ್ ವಿದ್ಯುತ್ ಮೇಲೆ 3 ರೂ ಬೆಲೆ ಕಡಿತ

Power Rates Reduced in Punjab- ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಂಜಾಬ್ನಲ್ಲಿ ಭರವಸೆಯ ಮಹಾಪೂರವೇ ಹರಿದಿದೆ. ಉಚಿತ ವಿದ್ಯುತ್ ಕೊಡಲು ಮುಂದಾಗಿರುವ ಎಎಪಿ ರಣತಂತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸರ್ಕಾರ ಪ್ರತೀ ಯೂನಿಟ್​ಗೆ 3 ರೂ ಬೆಲೆ ಇಳಿಕೆ ನಿರ್ಧಾರ ಮಾಡಿದೆ.

ಚರಣ್​ಜೀತ್ ಸಿಂಗ್ ಚನ್ನಿ

ಚರಣ್​ಜೀತ್ ಸಿಂಗ್ ಚನ್ನಿ

  • Share this:
ನವದೆಹಲಿ, ನ. 1: ಮಾಜಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ (Former Punjab Chief Minister Amarinder Singh) ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Pradesh Congress President Navajot Singh Sidhu) ನಡುವಿನ ಕಿತ್ತಾಟದಿಂದ ಮುಖ್ಯಮಂತ್ರಿ ಆದ ಚರಣಜಿತ್ ಸಿಂಗ್ ಚನ್ನಿ (Chief Minister Charanjith Singh Channi) ಹಂತಹಂತವಾಗಿ ಸರ್ಕಾರದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ. ನವಜೋತ್ ಸಿಂಗ್ ಸಿಧು ಅವರ ಕೈಗೊಂಬೆ ಆಗಿಬಿಡುತ್ತಾರೆ ಎಂಬ ಮಾಧ್ಯಮ ಮತ್ತು ರಾಜಕೀಯ ವಿಶ್ಲೇಷಕರ ಅನಿಸಿಕೆಗಳನ್ನು ಹುಸಿಗೊಳಿಸಿ ಸರ್ಕಾರವನ್ನು ಸಂಪೂರ್ಣವಾಗಿ ಸ್ವತಂತ್ರವಾಗಿ ನಿರ್ವಹಿಸುತ್ತಿದ್ದಾರೆ. ಅಷ್ಟೇಯಲ್ಲ, ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಗೂ (Punjab Assembly Elections)ಗೂ ಸಿದ್ಧತೆ ನಡೆಸುತ್ತಿದ್ದಾರೆ.

ಚರಣಜಿತ್ ಸಿಂಗ್ ಚನ್ನಿ ಸರ್ಕಾರದ ಮೇಲೆ ನಿಯಂತ್ರಣ ಹೊಂದಿದ್ದಾರೆ ಮತ್ತು ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಗೆ ಅಣಿ ಆಗುತ್ತಿದ್ದಾರೆ ಎಂಬುದಕ್ಕೆ ಸೋಮವಾರ ಅವರು ನಡೆಸಿದ ಪತ್ರಿಕಾಗೋಷ್ಠಿಯೇ (Press Meet) ಉದಾಹರಣೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (National Capital Delhi) ಉಚಿತ ವಿದ್ಯುತ್ ಕೊಟ್ಟು ಜನಪ್ರಿಯತೆ ಗಳಿಸಿದ ಹಾಗೂ ಮತ್ತೆ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷ (Aam Admi Party) ಪಂಜಾಬಿನಲ್ಲೂ ಅದೇ 'ಉಚಿತ ವಿದ್ಯುತ್' ದಾಳವನ್ನು ಉರುಳಿಸಲು ಮುಂದಾಗಿತ್ತು. ಗೋವಾ (Goa) ರಾಜ್ಯದಲ್ಲೂ ಆಮ್ ಆದ್ಮಿ ಪಕ್ಷ ಅಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೂ ಉಚಿತವಾಗಿ ವಿದ್ಯುತ್ ನೀಡುವುದಾಗಿ ಹೇಳಿದೆ. ಆದರೆ ಸೋಮವಾರ  ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ‌ 'ಇಂದಿನಿಂದ ಪಂಜಾಬ್‌ನಲ್ಲಿ ಪ್ರತಿ ಯೂನಿಟ್‌ ವಿದ್ಯುತ್ ಮೇಲೆ 3 ರೂ ಬೆಲೆ ಕಡಿತಗೊಳಿಸಲಾಗುವುದು' ಎಂದು ಘೋಷಿಸಿದ್ದಾರೆ. ಈ ಮೂಲಕ ಪಂಜಾಬಿನಲ್ಲಿ ತಮಗೆ ಸ್ಪರ್ಧೆ ಒಡ್ಡಲಿರುವ ಆಮ್ ಆದ್ಮಿ ಪಕ್ಷದ ಬತ್ತಳಿಕೆಯಲ್ಲಿದ್ದ ಒಂದು ಅಸ್ತ್ರವನ್ನು ಕಸಿದುಕೊಂಡಿದ್ದಾರೆ.

ಪಂಜಾಬ್ ಜನಕ್ಕೆ ಉಚಿತ ವಿದ್ಯುತ್ ಅಗತ್ಯ ಅಲ್ಲ:

ಈಗಾಗಲೇ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲಾ ಕುಟುಂಬಗಳಿಗೂ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಭರವಸೆ ನೀಡಿದ್ದ ಆಮ್ ಆದ್ಮಿ ಪಕ್ಷದ ಘೋಷಣೆ ಬಗ್ಗೆಯೂ ಪ್ರತಿಕ್ರಿಯಿಸಿದ ಚರಣಜಿತ್ ಸಿಂಗ್ ಚನ್ನಿ ಅವರು 'ಪಂಜಾಬಿನ ಜನ ವಿದ್ಯುತ್ ದರದಲ್ಲಿ ಕಡಿಮೆ ಆಗುವುದನ್ನು ನಿರೀಕ್ಷೆ ಮಾಡುತ್ತಾರೆಯೇ ವಿನಃ ಸರ್ಕಾರವೇ ಸಂಪೂರ್ಣವಾಗಿ ಉಚಿತ ವಿದ್ಯುತ್ ನೀಡಲಿ ಎಂದಲ್ಲ. ಈ ಬಗ್ಗೆ ಸಮೀಕ್ಷೆಗಳು ಕೂಡ ಸುಳಿವು ನೀಡಿವೆ' ಎಂದು ತಿಳಿಸಿದ್ದಾರೆ. ಜೊತೆಗೆ ತಾವು ವಿದ್ಯುತ್ ಬೆಲೆ ಇಳಿಕೆ ಮಾಡಿರುವುದರ ಉಪಯೋಗ ರಾಜ್ಯದ ಶೇಕಡಾ 95ರಷ್ಟು ಜನರಿಗೆ ಪ್ರಯೋಜನ ಆಗಲಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: World’s first Drive-in Theater- ಮುಂಬೈನಲ್ಲಿ ವಿಶ್ವದ ಮೊದಲ ಡ್ರೈವ್-ಇನ್ ಥಿಯೇಟರ್; ಜಿಯೋ ವರ್ಲ್ಡ್ ಡ್ರೈವ್ ವಿಶೇಷತೆಗಳಿವು

ಅತಿಯಾಗಿ ವಿಧಿಸಲಾಗುತ್ತಿರುವ ವಿದ್ಯುತ್ ಬಿಲ್‌ ಗಳಿಂದಾಗಿ ಪಂಜಾಬ್ ಜನ ಪರಿತಪಿಸುವಂತಾಗಿದೆ. ಇದು ಪಂಜಾಬಿನಲ್ಲಿ ಅವ್ಯವಸ್ಥೆ ನಿರ್ಮಾಣ ಆಗಲು ಹಾಗೂ ಬಡತನದಿಂದ ಜನ ಹೊರಬರಲು ಸಾಧ್ಯವಾಗದ ಸ್ಥಿತಿ ನಿರ್ಮಿಸಿದೆ. ಪರೋಕ್ಷವಾಗಿ ಆತ್ಮಹತ್ಯೆಗೂ ಎಡೆಮಾಡಿಕೊಡುತ್ತಿದೆ. ಆದುದರಿಂದ ತಮ್ಮ ಸರ್ಕಾರ ವಿದ್ಯುತ್ ಬೆಲೆ ಕಡಿತ ಮಾಡುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕಡಿಮೆ ದರದಲ್ಲಿ ವಿದ್ಯುತ್ ಕೊಡುತ್ತೇವೆ ಎಂದು ಹೇಳಿ ರಾಜ್ಯದಲ್ಲಿ ವಿದ್ಯುತ್ ಕಡಿತ ಮಾಡುವುದಿಲ್ಲ. ಕಡಿಮೆ ದರದಲ್ಲಿ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡುತ್ತೇವೆ ಎಂದು ಭರವಸೆ ನೀಡಿದರು.

ವಿದ್ಯುತ್ ಬೆಲೆ ವಿವರ: 

ಪಂಜಾಬ್‌ನಲ್ಲಿ ಸದ್ಯ 100 ಯೂನಿಟ್‌ವರೆಗೆ ಒಂದು ಯೂನಿಟ್‌ಗೆ 4.19 ರೂಪಾಯಿ ವಿದ್ಯುತ್ ದರ ವಿಧಿಸಲಾಗುತ್ತಿತ್ತು. ಈಗ ಸರ್ಕಾರದ ಹೊಸ ನಿರ್ಧಾರದಿಂದ ಪಂಜಾಬ್ ಜನ ಇನ್ನು ಮುಂದೆ ಪ್ರತಿ ಯೂನಿಟ್‌ಗೆ ಕೇವಲ 1.19 ರೂಪಾಯಿಗಳನ್ನು ಮಾತ್ರ ಕೊಡಬೇಕಿದೆ. ಇದಲ್ಲದೆ 100 ರಿಂದ 300 ಯೂನಿಟ್‌ವರೆಗೆ ಪ್ರತಿ ಯೂನಿಟ್‌ಗೆ 7 ರೂಪಾಯಿ ವಿಧಿಸಲಾಗುತ್ತಿತ್ತು. 300 ಯೂನಿಟ್‌ ಗಿಂತ ಹೆಚ್ಚು ಬಳಸುವವರಿಗೆ 8.76 ರೂಪಾಯಿ ವಿಧಿಸಲಾಗುತ್ತಿತ್ತು. ಈಗ ಇವರಿಗೂ ಪ್ರತಿ ಯೂನಿಟ್‌ ಮೇಲೆ 3 ರೂಪಾಯಿ ಕಡಿತ ಮಾಡಲಿದ್ದೇವೆ ಎಂದು ಚನ್ನಿ ವಿವರಿಸಿದರು.

ಇದನ್ನೂ ಓದಿ: Akhilesh Yadav: ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದ ಅಖಿಲೇಶ್​; ಎಸ್​ಪಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು?

ವಿದ್ಯುತ್ ದರ ಕಡಿತಗೊಳಿಸುವುದರ ಜೊತೆಗೆ ರಾಜ್ಯ ಸರ್ಕಾರಿ ನೌಕರರಿಗೆ ಶೇಕಡಾ 11ರಷ್ಟು ತುಟ್ಟಿಭತ್ಯೆ (DA) ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಘೋಷಣೆ ಮಾಡಿದ್ದಾರೆ. ಪಂಜಾಬ್ ಸಚಿವ ಸಂಪುಟ ಸಭೆಯ (Punjab Cabinet Meeting) ಈ ಪ್ರಮುಖ ನಿರ್ಣಯಗಳು ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿವೆ ಎನ್ನಲಾಗುತ್ತಿದೆ.

ವರದಿ: ಧರಣೀಶ ಬೂಕನಕೆರೆ
Published by:Vijayasarthy SN
First published: