ಪಂಜಾಬ್ (ನವೆಂಬರ್ 21); ಕೇಂದ್ರ ಸರ್ಕಾರ ಇತ್ತೀಚೆಗೆ ಕೃಷಿಗೆ ಸಂಬಂಧಿಸಿದಂತೆ ಮೂರು ನೂತನ ಮಸೂದೆಗಳನ್ನು ಸಂಸತ್ನಲ್ಲಿ ಮಂಡಿಸಿ ಅಂಗೀಕಾರ ಪಡೆದಿತ್ತು. ಆದರೆ, ಈ ಮಸೂದೆಗಳು ರೈತ ವಿರೋಧಿಯಾಗಿವೆ ಎಂಬುದು ರೈತರ ಆಕ್ರೋಶಕ್ಕೆ ಕಾರಣ. ಇದೇ ಕಾರಣಕ್ಕೆ ಈ ಮಸೂದೆಯ ವಿರುದ್ಧ ದೇಶದಾದ್ಯಂತ ಕಳೆದ ಮೂರು ತಿಂಗಳಿನಿಂದ ಸತತ ಹೋರಾಟಗಳು ನಡೆಯುತ್ತಿವೆ. ಆದರೆ, ಇಡೀ ದೇಶದ ಹೋರಾಟ ಒಂದು ತೂಕವಾದರೆ ಪಂಜಾಬ್ ರಾಜ್ಯದ್ದೇ ಮತ್ತೊಂದು ತೂಕ. ಹೌದು..ಪಂಜಾಬ್ ಸರ್ಕಾರ ಈಗಾಗಲೇ ತನ್ನ ರಾಜ್ಯದಲ್ಲಿ ಈ ಮಸೂದೆಗಳನ್ನು ಜಾರಿಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಇದಕ್ಕೆ ಪರ್ಯಾಯವಾಗಿ ನೂತನ ರಾಜ್ಯ ಕೃಷಿ ಮಸೂದೆಯನ್ನು ಜಾರಿಗೊಳಿಸಿದೆ. ಈ ನಡುವೆ ಕೇಂದ್ರ ಸರ್ಕಾರದ ವಿರುದ್ಧ ರೈತರ ತೀವ್ರತರ ಹೋರಾಟವೂ ಮುಂದುವರೆಯುತ್ತಲೇ ಇದೆ. ಇನ್ನೂ ರೈತ ಸಂಘಗಳ ನಿರಂತರ ’ರೈಲ್ ರೋಕೋ’ ಚಳುವಳಿ ಪಂಜಾಬ್ ಆರ್ಥಿಕತೆಗೆ ಪೆಟ್ಟು ನೀಡಿದೆ. ಹೀಗಾಗಿ ಇಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರೈತ ಸಂಘಟನೆಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ರೈತರು ರೈಲ್ ರೋಕೋ ಚಳುವಳಿಯನ್ನು ಕೈಬಿಡಲು ಮುಂದಾಗಿದ್ದಾರೆ. ಹೀಗಾಗಿ ನವೆಂಬರ್ 23 ರಿಂದ ಪಂಜಾಬ್ನಲ್ಲಿ ರೈಲು ಸಂಚಾರ ಆರಂಭವಾಗಲಿದೆ.
ಕಿಸಾನ್ ಯೂನಿಯನ್ಸ್ ಜೊತೆ ನಡೆದ ಸಭೆಯಲ್ಲಿ ಸರ್ಕಾರದ ಮನವಿಗೆ ಒಪ್ಪಿಗೆ ನೀಡಿದ ಸಂಘಟನೆ, ನವೆಂಬರ್ 23 ಸೋಮವಾರದಿಂದ ರೈಲ್ವೆ ದಿಗ್ಬಂಧನವನ್ನು ಸಂಪೂರ್ಣವಾಗಿ ತೆಗೆದುಹಾಕುವ ಘೋಷಣೆ ಮಾಡಿದೆ. ರಾಜ್ಯದಲ್ಲಿ ಎರಡು ತಿಂಗಳ ನಂತರ ಸರಕು ಮತ್ತು ಪ್ರಯಾಣಿಕ ರೈಲು ಸೇವೆಗಳೆರಡೂ ಆರಂಭವಾಗಲಿವೆ.
ಆದರೆ, ಕೃಷಿ ಸಂಘಟನೆ ರಾಜ್ಯ ಸರ್ಕಾರಕ್ಕೆ ನೀಡಿರುವುದು ಕೇವಲ 15 ದಿನಗಳು ಮಾತ್ರ. ಮುಂದಿನ 15 ದಿನಗಳಲ್ಲಿ ರೈತರ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ವಿಫಲವಾದರೆ ಮತ್ತೆ ಪ್ರತಿಭಟನೆ ಪುನರಾರಂಭಿಸುವ ಬಗ್ಗೆ ಕಿಸಾನ್ ಯೂನಿಯನ್ಸ್ ಅಧ್ಯಕ್ಷ ರಾಜೇವಾಲ್ ಎಚ್ಚರಿಸಿದ್ದಾರೆ.
ಈ ವಿಷಯವನ್ನು ರಾಜಕೀಯಗೊಳಿಸುವ ಬದಲು ಕೇಂದ್ರ ಕೃಷಿ ಮಸೂದೆಗಳ ವಿರುದ್ಧದ ಹೋರಾಟದಲ್ಲಿ ರೈತ ಸಂಘಟನೆಗಳನ್ನು ಬೆಂಬಲಿಸಲು ಪಂಜಾಬ್‌ನ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿರಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.
ರೈಲು ಸಂಚಾರಕ್ಕೆ ಅನುಮತಿ ನೀಡಿ, ರೈಲ್ ರೋಕೋ ಪ್ರತಿಭಟನೆ ವಾಪಸ್ ಪಡೆದ ರೈತರ ನಿರ್ಧಾರವನ್ನು ಸಿಎಂ ಅಮರಿಂದರ್ ಸಿಂಗ್ ಅವರು ಟ್ವೀಟ್‌ನಲ್ಲಿ ಸ್ವಾಗತಿಸಿದ್ದಾರೆ.
Had a fruitful meeting with Kisan Unions. Happy to share that starting 23rd Nov night, Kisan Unions have decided to end rail blockades for 15 days. I welcome this step since it will restore normalcy to our economy. I urge Central Govt to resume rail services to Punjab forthwith. pic.twitter.com/shmIZPHFR0
— Capt.Amarinder Singh (@capt_amarinder) November 21, 2020
ಇದನ್ನೂ ಓದಿ : 2021ರ ಚುನಾವಣೆಗೂ ಬಿಜೆಪಿಯೊಂದಿಗೆ ಎಐಎಡಿಎಂಕೆ ಮೈತ್ರಿ; ಪನ್ನೀರ್ಸೆಲ್ವಂ
"ನಮ್ಮ ದೃಷ್ಟಿಕೋನ ಮತ್ತು ಕೇಂದ್ರದ ಕೃಷಿ ಕಾನೂನುಗಳು ಪಂಜಾಬ್ ಅನ್ನು ಹೇಗೆ ಹಾಳುಮಾಡುತ್ತವೆ ಎಂಬುದನ್ನು ಅರ್ಥಮಾಡಿಸಲು ನಾವು ಒಟ್ಟಾಗಿ ಕೇಂದ್ರದ ಮೇಲೆ ಒತ್ತಡ ಹೇರೋಣ. ರೈತ ಹೋರಾಟದಲ್ಲಿ ರೈತರೊಂದಿಗೆ ನಾವಿದ್ದೇವೆ, ನಮ್ಮ ದೇಹದ ರಕ್ತನಾಳಗಳಲ್ಲಿ ಹರಿಯುತ್ತಿರುವುದು ರೈತರ ರಕ್ತ" ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ