news18-kannada Updated:December 13, 2020, 10:50 AM IST
ಪಂಜಾಬ್ ರೈತರ ಪ್ರತಿಭಟನೆ
ನವದೆಹಲಿ(ಡಿ. 13): ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಇದುವರೆಗೆ ನಡೆದ 5 ಸುತ್ತಿನ ಸಭೆಗಳು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸಿದ ಅನೌಪಚಾರಿಕ ಮಾತುಕತೆಗಳೆಲ್ಲವೂ ವಿಫಲವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದಾರೆ. ಇದರಿಂದ ರೈತರ ಪ್ರತಿಭಟನೆ 18ನೇ ದಿನಕ್ಕೆ ಕಾಲಿಟ್ಟಿದೆ.
ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್, ಪಿಯೂಷ್ ಗೋಯಲ್, ಕಿರಿಯ ಕೈಗಾರಿಕಾ ಸಚಿವ ಸೋಮ್ ಪ್ರಕಾಶ್ ಹಾಗೂ ರೈತ ಸಂಘಟನೆಗಳ 35 ಪ್ರತಿನಿಧಿಗಳ ನಡುವೆ ಈವರೆಗೆ 5 ಸಭೆಗಳು ನಡೆದಿವೆ. ಅಮಿತ್ ಶಾ ರೈತ ಸಂಘಟನೆಗಳ 13 ಪ್ರತಿನಿಧಿಗಳೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದ್ದಾರೆ. ಆದರೆ ಪ್ರಭಾವಿ ಅಮಿತ್ ಶಾ ಆಗಲಿ, ಇತರೆ ಕೇಂದ್ರ ಸಚಿವರಾಗಲಿ ರೈತರನ್ನು ಮನವೊಲಿಸಲು ಸಫಲರಾಗಿಲ್ಲ. ಇದರಿಂದ ಮಾತುಕತೆಯಿಂದ ಸಮಸ್ಯೆ ಬಗೆಹರಿಯುವ ಸಾಧ್ಯತೆ ಕ್ಷೀಣಿಸಿದ್ದು ರೈತರು ಪ್ರತಿಭಟನೆ ಮುಂದುವರೆಸುತ್ತಿದ್ದಾರೆ.
ಕೇಂದ್ರ ಸಚಿವರು ಕೃಷಿ ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ವಿಂಗಡಿಸಿ ಚರ್ಚಿಸಲು ಸಮಿತಿಯೊಂದನ್ನು ರಚಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಜೊತೆಗೆ ಕನಿಷ್ಠ ಬೆಂಬಲ ಬೆಲೆ ಪದ್ದತಿ ಮುಂದುವರೆಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಈ ಪ್ರಸ್ತಾಪಗಳಿಗೆ ಒಪ್ಪದ ರೈತ ಮುಖಂಡರು ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯಲೇಬೇಕು. ರೈತರ ಎಲ್ಲಾ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ಕೊಡಬೇಕು. ಜೊತೆಗೆ ರೈತರಿಗೆ ಮಾರಕವಾಗಿರುವ ವಿದ್ಯುತ್ ಕಾನೂನನ್ನು ವಾಪಸ್ ಪಡೆಯಲೇಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ರಾಜಕೀಯ ಲಾಭಕ್ಕೆ ಯತ್ನಿಸುತ್ತಿರುವವರಿಂದ ರೈತ ಹೋರಾಟಗಾರರು ದೂರ ಇರಿ; ನಿರ್ಮಲಾ ಸೀತಾರಾಮನ್
ದೇಶದ ವಿವಿಧ ಮೂಲೆಗಳಿಂದ ದೆಹಲಿಯತ್ತ ಧಾವಿಸಿದ್ದ ರೈತರು ನವೆಂಬರ್ 26ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಪ್ರತಿಭಟನೆಗೆ ಮೊದಲು ಒಪ್ಪಿಗೆ ನೀಡಿದ್ದ ಪೊಲೀಸರು ನಂತರ ಪ್ರತಿಭಟನೆ ಹತ್ತಿಕ್ಕಲೆಂದೇ ಕೊರೋನಾ ಕಾರಣವೊಡ್ಡಿ ಒಪ್ಪಿಗೆಯನ್ನು ಹಿಂಪಡೆದರು. ಇದಲ್ಲದೆ ರೈತರು ದೆಹಲಿಯನ್ನು ಪ್ರವೇಶಿಸದಂತೆ ಗಡಿಯಲ್ಲೇ ತಡೆದರು. ಸದ್ಯ ದೆಹಲಿಯ ಗಡಿಯಲ್ಲಿರುವ ರೈತರು ತಾವಿದ್ದ ಸ್ಥಳಗಳಲ್ಲೇ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ದೇಶದ ಬೇರೆಡೆಯಲ್ಲೂ ಪ್ರತಿಭಟನೆ ನಡೆಸುವಂತೆ ಕರೆಕೊಟ್ಟಿದ್ದಾರೆ.
ಟೋಲ್ ಫ್ಲಾಜಾ ಬಂದ್:
ನಿನ್ನೆ ರೈತರು ಕೆಲವು ಟೋಲ್ ಪ್ಲಾಜಾಗಳನ್ನು ಬಂದ್ ಮಾಡಿ ಮುಷ್ಕರ ನಡೆಸಿದ್ದಾರೆ. 'ಭಾರತೀಯ ಕಿಸಾನ್ ಯೂನಿಯನ್' ಮುಖಂಡ ಮಲ್ಕಿತ್ ಸಿಂಗ್ ಮತ್ತು ಮನೀಶ್ ಚೌಧರಿ ನೇತೃತ್ವದಲ್ಲಿ ನೂರಾರು ರೈತರು ಅಂಬಾಲಾ-ಹಿಸಾರ್ ಹೆದ್ದಾರಿಯ ಟೋಲ್ ಪ್ಲಾಜಾದ ಮೇಲೆ ಶನಿವಾರ ಮುತ್ತಿಗೆ ಹಾಕಿದರು. ನಂತರ ವಾಹನಗಳ ಶುಲ್ಕ ಮುಕ್ತ ಸಂಚಾರಕ್ಕೆ ನೌಕರರು ಅವಕಾಶ ಮಾಡಿಕೊಟ್ಟಿದ್ದಾರೆಂದು ತಿಳಿದುಬಂದಿದೆ.ರೈತರು ಹರಿಯಾಣದ ಕರ್ನಾಲ್ನ ಬಸ್ತಾರಾ ಮತ್ತು ಪಿಯೊಂಟ್ ಟೋಲ್ ಪ್ಲಾಜಾಗಳಲ್ಲಿ ಪ್ರಯಾಣಿಕರಿಂದ ಶುಲ್ಕ ಸಂಗ್ರಹಿಸಲು ಅವಕಾಶ ಕೊಟ್ಟಿಲ್ಲ. ಹಿಸಾರ್ ಜಿಲ್ಲೆಯ ನಾಲ್ಕು ಟೋಲ್ ಪ್ಲಾಜಾಗಳು, ಜಿಂದ್-ನಿರ್ವಾಣ ಹೆದ್ದಾರಿಯ ಟೋಲ್ ಪ್ಲಾಜಾ, ಚಾರ್ಖಿ ದಾದ್ರಿ ರಸ್ತೆಯಲ್ಲಿರುವ ಕಿಟ್ಲಾನಾ ಟೋಲ್ ಪ್ಲಾಜಾ, ದಬ್ವಾಲಿ ರಸ್ತೆಯಲ್ಲಿರುವ ಟೋಲ್ ಪ್ಲಾಜಾ ಸೇರಿದಂತೆ ರಾಜ್ಯದ ಹಲವು ಟೋಲ್ ಪ್ಲಾಜಾಗಳಲ್ಲೂ ಕೂಡ ರೈತರು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಕೃಷಿ ಕಾಯ್ದೆಗಳಿಂದ ಹೊಸ ಮಾರುಕಟ್ಟೆ ಸೃಷ್ಟಿ; ರೈತರಿಗೆ ಅನುಕೂಲ: ಪ್ರಧಾನಿ ಮೋದಿ
ಈವರೆಗೆ ಪಂಜಾಬ್, ಹರಿಯಾಣಗಳಿಂದ ದೆಹಲಿಗೆ ಬರುವ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ಇಂದಿನಿಂದ ಉತ್ತರ ಪ್ರದೇಶ ಹಾಗೂ ರಾಜಸ್ಥಾನಗಳಿಂದ ದೆಹಲಿಗೆ ಬರುವ ದೆಹಲಿ-ಜೈಪುರ್ ರಸ್ತೆ ಬಂದ್ ಮಾಡಲಾಗುತ್ತದೆ. ಇದಲ್ಲದೆ ದೇಶದೆಲ್ಲೆಡೆ ಬಿಜೆಪಿ ನಾಯಕರ ಮನೆ ಮತ್ತು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ. ಒಗ್ಗಟ್ಟು ಕಾಯ್ದುಕೊಂಡು ಒತ್ತಡ ಹೇರುವ ದೃಷ್ಟಿಯಿಂದ ಈ ಎಲ್ಲಾ ಪ್ರತಿಭಟನೆಗಳನ್ನೂ ದೆಹಲಿ ಚಲೋ ಹೆಸರಿನಲ್ಲೇ ನಡೆಸಲು ರೈತ ಸಂಘಟನೆಗಳು ಒಮ್ಮತದ ನಿರ್ಧಾರ ಮಾಡಿವೆ.
ರೈಲು ತಡೆಗೂ ನಿರ್ಧಾರ:
ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಕೇಂದ್ರ ಸರ್ಕಾರವು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ದೇಶದಾದ್ಯಂತ ರೈಲು ಸಂಚಾರಕ್ಕೆ ಅಡ್ಡಿ ಮಾಡುವುದಾಗಿ ಹೇಳಿವೆ. ಆದರೆ ರೈಲು ಹಳಿಗಳನ್ನು ಬಂದ್ ಮಾಡುವ ಬಗ್ಗೆ ಈವರೆಗೂ ದಿನಾಂಕವನ್ನು ಪ್ರಕಟಿಸಿಲ್ಲ. ನಾಳೆ ದೇಶದ ಜಿಲ್ಲಾ ಕೇಂದ್ರಗಳಲ್ಲಿ ಶಾಂತಿಯುತವಾದ ಪ್ರತಿಭಟನೆ ನಡೆಸಲು ಮಾತ್ರ ನಿರ್ಧರಿಸಲಾಗಿದೆ.
ವರದಿ: ಧರಣೀಶ್ ಬೂಕನಕೆರೆ
Published by:
Vijayasarthy SN
First published:
December 13, 2020, 10:50 AM IST