HOME » NEWS » National-international » PUNJAB FARMER PROTESTING NEAR DELHI BORDER DIES AMID COLD WAVE MAK

Framers Protest: ರೈತ ಹೋರಾಟ; ತೀವ್ರ ಚಳಿ ಗಾಳಿಗೆ ದೆಹಲಿ ಗಡಿ ಸಮೀಪ ಮತ್ತೋರ್ವ ಹೋರಾಟ ನಿರತ ರೈತ ಸಾವು!

ದೆಹಲಿ-ಹರಿಯಾಣ ಗಡಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ಸಿಖ್ ಪಾದ್ರಿಯೊಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಕೆಲವೇ ಗಂಟೆಗಳ ಅಂತರದಲ್ಲಿ ಮತ್ತೊಂದು ಸಾವಿನ ಸುದ್ದಿ ದಾಖಲಾಗಿರುವುದು ರೈತರ ಪ್ರತಿಭಟನೆಯ ಬಿಸಿಯನ್ನು ಮತ್ತಷ್ಟು ಹೆಚ್ಚಿಸಿದೆ.

news18-kannada
Updated:December 17, 2020, 1:18 PM IST
Framers Protest: ರೈತ ಹೋರಾಟ; ತೀವ್ರ ಚಳಿ ಗಾಳಿಗೆ ದೆಹಲಿ ಗಡಿ ಸಮೀಪ ಮತ್ತೋರ್ವ ಹೋರಾಟ ನಿರತ ರೈತ ಸಾವು!
ದೆಹಲಿ ರೈತ ಹೋರಾಟಗಾರರು.
  • Share this:
ನವ ದೆಹಲಿ (ಡಿಸೆಂಬರ್​ 17); ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ದೇಶದ ರೈತರು ಕಳೆದ 22 ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿ ಹೊರ ವಲಯದಲ್ಲಿ ಹೋರಾಟನಿರತರಾಗಿದ್ದಾರೆ. ಈ ಹೋರಾಟದಲ್ಲಿ ತೀವ್ರ ಚಳಿ ಮತ್ತು ಗಾಳಿಗೆ 36 ವರ್ಷದ ವ್ಯಕ್ತಿ ಹೋರಾಟದ ಕಣದಲ್ಲೇ ಮೃತಪಟ್ಟಿದ್ದಾರೆ. ಇವರಿಗೆ 10, 12 ಮತ್ತು 14 ವರ್ಷದ ಮೂವರು ಮಕ್ಕಳಿದ್ದಾರೆ ಎಂದು ವರದಿಯಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ರೈತ ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆಯುತ್ತಲೇ ಇದೆ. ಈ ಹೋರಾಟದಲ್ಲಿ ಈವರೆಗೆ 24 ಜನ ರೈತರು ಮೃತಪಟ್ಟಿದ್ದು, ಹೋರಾಟಗಾರರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ ಎನ್ನಲಾಗುತ್ತಿದೆ. ಅಲ್ಲದೆ, ಮೃತ ರೈತರಿಗೆ ಗೌರವ ಸಲ್ಲಿಸುವ ಸಲುವಾಗಿ ಡಿಸೆಂಬರ್​ 20 ರಂದು ಶೋಕ ದಿನ ಆಚರಿಸಲೂ ನಿರ್ಧರಿಸಲಾಗಿದೆ.

ದೆಹಲಿ-ಹರಿಯಾಣ ಗಡಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ಸಿಖ್ ಪಾದ್ರಿಯೊಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಕೆಲವೇ ಗಂಟೆಗಳ ಅಂತರದಲ್ಲಿ ಮತ್ತೊಂದು ಸಾವಿನ ಸುದ್ದಿ ದಾಖಲಾಗಿರುವುದು ರೈತರ ಪ್ರತಿಭಟನೆಯ ಬಿಸಿಯನ್ನು ಮತ್ತಷ್ಟು ಹೆಚ್ಚಿಸಿದೆ.

ನಿನ್ನೆ ಸಂಜೆ ದೆಹಲಿಯಲ್ಲಿ ಪ್ರತಿಭಟನಾನಿರತ ರೈತರ ಕಷ್ಟಗಳನ್ನು ನೋಡಲಾಗದೇ ಗುರುದ್ವಾರದ 65 ವರ್ಷದ ಸಂತ ಬಾಬಾ ರಾಮ್​ ಸಿಂಗ್​ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೇ ವೇಳೆ ಡೆತ್​ ನೋಟ್​ ಬರೆದಿರುವ ಅವರು ಸರ್ಕಾರದ ಅನ್ಯಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ದೆಹಲಿ ಸೋನಿಪತ್​ ಗಡಿಯಲ್ಲಿ ಪ್ರತಿಭಟನಾ ರೈತರಿಗೆ ಬೆಂಬಲವಾಗಿ ಹೋರಾಟದಲ್ಲಿ ಇವರು ಸಹ ಭಾಗಿಯಾಗಿದ್ದರು.

ಆತ್ಮಹತ್ಯೆಗೂ ಮುನ್ನ ಡೆತ್​ನೋಟ್​ ಬರೆದಿಟ್ಟಿರುವ ಅವರು, "ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವುದು ನೋವು ತಂದಿದೆ. ನಾನು ಅವರ ನೋವನ್ನು ಹಂಚಿಕೊಂಡಿದ್ದೇನೆ. ಸರ್ಕಾರ ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿಲ್ಲ. ಅನ್ಯಾಯ ಮಾಡುವುದು ಕೂಡ ಪಾಪ, ಆದರೆ, ಅನ್ಯಾಯವನ್ನು ಸಹಿಸುವುದು ಕೂಡ ದೊಡ್ಡ ಪಾಪವಾಗಿದೆ. ರೈತರನ್ನು ಬೆಂಬಲಿಸಲು ಕೆಲವರು ಸರ್ಕಾರಕ್ಕೆ ಹಲವಾರು ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದಾರೆ. ನಾನು ನನ್ನ ಪ್ರಾಣತ್ಯಾಗದ ಮೂಲಕ ಅವರಿಗೆ ಬೆಂಬಲಿಸುತ್ತಿದ್ದೇನೆ. ನನ್ನ ಆತ್ಮಹತ್ಯೆ ದಬ್ಬಾಳಿಕೆ ವಿರುದ್ಧದ ಧ್ವನಿಯಾಗಿದೆ" ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ರೈತರ ಸಂಕಷ್ಟ ನೋಡಲಾಗುತ್ತಿಲ್ಲ; ಹೋರಾಟದಲ್ಲಿ ಆತ್ಮಹತ್ಯೆಗೆ ಶರಣಾದ ಸಿಖ್ ಗುರು

ದೆಹಲಿಯಲ್ಲಿ ನವೆಂಬರ್​ ಅಂತ್ಯದ ವೇಳೆಗೆ ಈ ಹೋರಾಟ ಆರಂಭವಾಗಿದ್ದು, ಶೀತಲ ಚಳಿ ಗಾಳಿಗೆ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಇದರ ಪರಿಣಾಮದಿಂದಾಗಿಯೇ ಈವರೆಗೆ 24ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ದೆಹಲಿ ಬಳಿಯ ಹೆದ್ದಾರಿಗಳಲ್ಲಿ ವಿವಿಧ ಸ್ಥಳಗಳನ್ನು ಆಕ್ರಮಿಸಿಕೊಂಡಿರುವ ರೈತರು ಅಲ್ಲಲ್ಲಿ ಚಳಿಗಾಗಿ ಬೆಂಕಿ ಹಚ್ಚಿಕೊಂಡು ಹೋರಾಟ ನಡೆಸುತ್ತಿದ್ದಾರೆ. ಈ ವೇಳೆ ಹಲವಾರು ಜನ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿ ಕಂಬಳಿ ಹೊದಿಕೆಗಳನ್ನು ದಾನ ಮಾಡಿರುವ ಘಟನೆಗಳೂ ವರದಿಯಾಗುತ್ತಿದೆ.
ಈ ಕುರಿತು ಮಾತನಾಡಿರುವ ರೈತರು, "ನಾವು ಶೀತ ಹವಾಮಾನದ ನಡುವೆಯೂ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರೆಯುತ್ತದೆ. ಮಳೆ ಚಳಿ ಬಿಸಿಲು ಯಾವುದಕ್ಕೂ ನಾವು ಬಗ್ಗುವುದಿಲ್ಲ" ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
Published by: MAshok Kumar
First published: December 17, 2020, 1:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories