news18-kannada Updated:September 28, 2020, 2:53 PM IST
ಪ್ರತಿಭಟನೆಯಲ್ಲಿ ನಿರತರಾದ ಪಂಜಾಬ್ ಸಿಎಂ
ಪಂಜಾಬ್ (ಸೆ.28): ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಮಸೂದೆ ವಿರೋಧಿಸಿ ದೇಶಾದ್ಯಾಂತ ಪ್ರತಿಭಟನೆ ಕೂಗು ಕೇಳಿ ಬರುತ್ತಿದೆ. ಕರ್ನಾಟಕ, ಪಂಜಾಬ್, ಹರಿಯಾಣ ಸೇರಿದಂತೆ ಅನೇಕ ರಾಜ್ಯದ ರೈತರು ರಾಜ್ಯ ಬಂದ್ ನಡೆಸಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಸೂದೆಗೆ ಮೊದಲಿನಿಂದಲೂ ಆಕ್ರೋಶವ್ಯಕ್ತಪಡಿಸಿರುವ ಶಿರೋಮಣಿ ಅಕಾಲಿದಳದ ಸಚಿವೆ ಹರ್ಸಿಮ್ರತ್ ಕೌರ್ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಪಕ್ಷ ಬಿಜೆಪಿ ಸಖ್ಯ ತೊರೆಯುವುದರ ಜೊತೆ ಎನ್ಡಿಎ ಮೈತ್ರಿಯಿಂದ ಹೊರಬಂದಿದೆ. ಈಗ ಈ ಮಸೂದೆ ವಿರುದ್ಧ ಸುಪ್ರೀಂಕೋರ್ಟ್ಗೆ ಹೋಗಲು ನಿರ್ಧರಿಸಿದೆ. ಈ ಕುರಿತು ಮಾತನಾಡಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಈ ಮಸೂದೆ ರೈತ ವಿರೋಧಿಯಾಗಿದ್ದು, ಇದನ್ನು ಕಾನೂನಾಗಿ ಜಾರಿಗೆ ತರುವ ಯಾವ ಅಧಿಕಾರ ಕೂಡ ಕೇಂದ್ರ ಸರ್ಕಾರಕ್ಕಿಲ್ಲ. ಇದು ರಾಜ್ಯದ ರೈತರಿಗೆ ಸಂಬಂಧಪಟ್ಟ ವಿಷಯವಾಗಿದೆ. ಈ ಹಿನ್ನಲೆ ಈ ಮಸೂದೆ ವಿರೋಧಿಸಿ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ ಎಂದರು.
ಪಂಜಾಬ್ನಲ್ಲಿ ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ರೈತರು ಸೇರಿದಂತೆ ರಾಜ್ಯ ಸರ್ಕಾರ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವೇಳೆ ಮಹತ್ತರ ಆರೋಪ ಮಾಡಿರುವ ಪಂಜಾಬ್ ಸಿಎಂ, ಈ ಪ್ರತಿಭಟನೆಯ ಸಂಪೂರ್ಣ ಲಾಭಾವನ್ನು ಪಾಕಿಸ್ತಾನದ ಐಎಸ್ಐ ಸಂಘಟನೆ ಪಡೆಯಬಹುದು. ಪ್ರತಿಭಟನಾನಿರತ ರೈತರಿಗೆ ಬೆದರಿಕೆ ಒಡ್ಡುವ ಮೂಲಕ ಅವರನ್ನು ಸುಲಭವಾಗಿ ಗುರಿಯಾಗಿಸಿಕೊಳ್ಳಬಹುದು ಎಂಬ ಆತಂಕ ಹೊರಹಾಕಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಕೃಷಿ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ, ಇದರಿಂದಲೇ ಅವರಿಗೆ ರೈತರು ಯಾಕೆ ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಪಂಜಾಬ್ನ ಬಡ ರೈತರು ದೇಶವನ್ನು ಸಲಹು ಕಾರ್ಯ ಮಾಡುತ್ತಿದ್ದಾರೆ. ರೈತರ ಬದಲು ಕೇಂದ್ರ ಎಲ್ಲರಿಗೂ ಅನ್ನ ನೀಡಲು ಸಾಧ್ಯವೇ ಎಂದು ಇದೇ ವೇಳೆ ಪ್ರಶ್ನಿಸಿದರು.
ಈ ಹೊಸ ಮಸೂದೆಯಿಂದಾಗಿ ರೈತರು, ತಮ್ಮ ಬೆಳೆಗಳಿಗೆ ಖಾತರಿ ಖರೀದಿ ಕಬೆಲೆಗಳನ್ನು ಕಳೆದುಕೊಳ್ಳುತ್ತಾರೆ. ಇದರ ಲಾಭಾ ಕಾರ್ಪೋರೇಟ್ ಸಂಸ್ಥೆಗಳು ಪಡೆಯಲಿವೆ ಎಂದು ವಿಮರ್ಶಕರು ತಿಳಿಸುತ್ತಾರೆ. ಈ ಮಸೂದೆಗೆ ಬಹುತೇಕ ಎಲ್ಲಾ ವಿಪಕ್ಷಗಳು ಕೂಡ ದೇಶಾದ್ಯಂತ ವಿರೋಧ ವ್ಯಕ್ತಪಡಿಸಿದೆ ಎಂದರು.
ಇದನ್ನು ಓದಿ: ರೈತರಿಗೆ ಅನ್ಯಾಯ ಆಗುವುದಿಲ್ಲ; ರೈತರ ದಾರಿ ತಪ್ಪಿಸದಿರಿ: ರೈತ ಸಂಘಟನೆಗಳಿಗೆ ಯಡಿಯೂರಪ್ಪ ಮನವಿ
ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದೆ. ಎನ್ಡಿಎ ತನ್ನ ಸಂಸದರಿಗೆ ವಿಪ್ ಜಾರಿ ಮಾಡುವ ಮೂಲಕ ಮಸೂದೆಗೆ ಸಹಿ ಹಾಕುವಂತೆ ತಿಳಿಸಿದೆ. ಇದನ್ನು ವಿರೋಧಿಸಿ ದೇಶಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಮಧ್ಯೆ ವಿಪಕ್ಷಗಳು ಮಸೂದೆಯನ್ನು ಚರ್ಚೆಗೆ ಹಿಂದಿರುಗಿಸುವಂತೆ ಕೋರಿಕೊಂಡರೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಸೂದೆಗೆ ಅನುಮತಿ ನೀಡಿದ್ದಾರೆ.
ರಾಜ್ಯದಲ್ಲಿಯೂ ಇಂದು ಕೃಷಿ ಮಸೂದೆ ವಿರೋಧಿಸಿ ಬಂದ್ಗೆ ಕರೆ ನೀಡಲಾಗಿದೆ. ರೈತರು ಕರೆ ನೀಡಿರುವ ಈ ಬಂದ್ಗೆ ಕಾಂಗ್ರೆಸ್ ಕೂಡ ಬೆಂಬಲ ನೀಡಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ನಡುವೆ ಮಾತನಾಡಿರುವ ರಾಜ್ಯ ಸಿಎಂ ಯಡಿಯೂರಪ್ಪ, ಯಾವುದೇ ಕಾರಣಕ್ಕೂ ನಾವು ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಈ ತಿದ್ದುಪಡಿ ಕಾಯ್ದೆಗಳು ಐತಿಹಾಸಿಕ ಎನಿಸಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಬಹಳಷ್ಟು ಚರ್ಚೆ ಮಾಡಿದ ನಂತರ ತಿದ್ದುಪಡಿ ತರಲಾಗಿದೆ. ರೈತ ಸಂಘಟನೆಗಳು ಈ ಕಾಯ್ದೆಗಳನ್ನ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
Published by:
Seema R
First published:
September 28, 2020, 2:53 PM IST