Punjab Crisis- ಕ್ಯಾಪ್ಟನ್ ರಾಜೀನಾಮೆ ಸಾಧ್ಯತೆ; ಹೊಸ ಪಂಜಾಬ್ ಸಿಎಂ ಯಾರೆಂಬುದು ಗಾಂಧಿ ಕುಟುಂಬಕ್ಕೆ ಮಾತ್ರ ಗೊತ್ತು

Capt. Amarinder Singh- ಬಹಳ ಕಾಲದ ಬಳಿಕ ಪಂಜಾಬ್ ಸಿಎಲ್​ಪಿ ಸಭೆ ನಡೆಯುತ್ತಿದೆ. ಹೈಕಮಾಂಡ್ನಿಂದ ಇಬ್ಬರು ವೀಕ್ಷಕರು ಬರುತ್ತಾರೆ. ಇದು ನಾಯಕತ್ವ ಬದಲಾವಣೆಗಾಗಿಯೇ ಕರೆದಿರುವ ಸಭೆ ಎಂದು ಇಬ್ಬರು ಹಿರಿಯ ಕಾಂಗ್ರೆಸ್ಸಿಗರು ಹೇಳಿದ್ಧಾರೆ.

ಅಮರೀಂದರ್ ಸಿಂಗ್

ಅಮರೀಂದರ್ ಸಿಂಗ್

  • Share this:
    ಅಮೃತಸರ್, ಸೆ. 18: ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ (Punjab CM Captain Amarinder Singh) ಮತ್ತು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) ನಡುವಿನ ಜಟಾಪಟಿ ತಾರ್ಕಿಕ ಅಂತ್ಯಕ್ಕೆ ಹೋಗುವ ಸಾಧ್ಯತೆ ತೋರುತ್ತಿದೆ. ಅಮರೀಂದರ್ ಸಿಂಗ್ ರಾಜೀನಾಮೆ ಕೊಡುತ್ತಾರೆಂದು ಕೆಲವಾರು ತಿಂಗಳಿಂದ ಇದ್ದ ವದಂತಿ ನಿಜವಾಗುವ ಕಾಲ ಬಂದಿದೆ. ನ್ಯೂಸ್18 ವಾಹಿನಿಗೆ ಇಬ್ಬರು ಪಂಜಾಬ್ ಕಾಂಗ್ರೆಸ್ ಮುಖಂಡರು ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಹೆಸರು ಬಹಿರಂಪಡಿಸಬಾರದೆಂದು ಕೋರಿ ವಾಹಿನಿ ಜೊತೆ ಮಾತನಾಡಿದ ಈ ಇಬ್ಬರು ನಾಯಕರು, ಪಂಜಾಬ್ ಸಿಎಂ ತಲೆದಂಡವಾಗುವ ಸಾಧ್ಯತೆ ಇರುವುದನ್ನು ವಿಶದಪಡಿಸಿದ್ದಾರೆ.

    “ಒಂದು ವಿಚಾರವಂತೂ ಸ್ಪಷ್ಟವಾಗಿದೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಕೆಳಗಿಳಿಯಲಿದ್ದಾರೆ” ಎಂದು ಈ ಇಬ್ಬರು ನಾಯಕರು ಹೇಳಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನ ಕರೆದಿರುವುದು ಹಾಗೂ ಹೈಕಮಾಂಡ್​ನಿಂದ ಈ ಸಭೆಗೆ ಇಬ್ಬರು ವೀಕ್ಷಕರನ್ನ ಕಳುಹಿಸಿರುವುದು ಇದೇ ಕಾರಣಕ್ಕೆ. ಸಿಎಲ್​ಪಿ ಸಭೆ ನಡೆದು ಬಹಳ ಕಾಲವಾಗಿ ಹೋಗಿತ್ತು. ಈಗ ದಿಢೀರ್ ಸಭೆ ಕರೆಯಲಾಗಿದೆ. ಇದು ನಾಯಕತ್ವ ಬದಲಾವಣೆಯ ಉದ್ದೇಶದಿಂದಲೇ ನಡೆಯಲಿರುವ ಸಭೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಕುತೂಹಲವೆಂದರೆ ನ್ಯೂಸ್18 ಜೊತೆ ಮಾತನಾಡಿದ ಈ ಇಬ್ಬರು ಪಂಜಾಬ್ ಕಾಂಗ್ರೆಸ್ ನಾಯಕರ ಹೆಸರು ಸಿಎಂ ರೇಸ್​ನಲ್ಲಿದೆಯಂತೆ. ಆದರೆ, ಅದನ್ನ ಅವರು ಸ್ಪಷ್ಟವಾಗಿ ಒಪ್ಪಿಕೊಳ್ಳಲಿಲ್ಲ. ಅವರು ಹೇಳಿದ್ದು ಇದು:

    “ಕ್ಯಾಪ್ಟನ್ ಕೈಯಿಂದ ರಾಜೀನಾಮೆ ಕೊಡಿಸುವುದು ಸದ್ಯದ ದೊಡ್ಡ ಕೆಲಸ. ಅವರು ಪ್ರತಿರೋಧ ತೋರದೇ ಕೆಳಗಿಳಿಯುವುದಿಲ್ಲ. ಯಾರು ಮುಂದಿನ ಸಿಎಂ ಎಂಬುದು ಗಾಂಧಿ ಕುಟುಂಬದ ಮೂವರು ಸದಸ್ಯರಿಗೆ ಮಾತ್ರವೇ ಗೊತ್ತಿರೋದು… ಆದರೆ ಸಿಖ್ ಪೇಟ ಇರುವ ನಾಯಕನೇ ಸಿಎಂ ಆಗುವುದು ನಿಶ್ಚಿತ. ಯಾಕೆಂದರೆ ಪಂಜಾಬ್​ನಲ್ಲಿ ಇದು ಬಿಟ್ಟರೆ ಬೇರೆ ಆಯ್ಕೆ ಕಷ್ಟ” ಎಂದು ಎರಡನೇ ಕಾಂಗ್ರೆಸ್ ನಾಯಕ ಕೆಲ ಸುಳಿವುಗಳನ್ನ ನೀಡಿದ್ದಾರೆ.

    ಸಿಖ್ ವ್ಯಕ್ತಿ ಇಲ್ಲದೇ ಪಂಜಾಬ್ ರಾಜಕೀಯದಲ್ಲಿ ಏಳಿಗೆ ಇಲ್ಲ ಎಂಬುದಕ್ಕೆ ಈ ನಾಯಕರು ಎಎಪಿ ಉದಾಹರಣೆ ಕೊಡುತ್ತಾರೆ. “ಕಳೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸಿಖ್ ನಾಯಕರೊಬ್ಬರನ್ನ ಸಿಎಂ ಸ್ಥಾನಕ್ಕೆ ಬಿಂಬಿಸಲಿಲ್ಲ. ಇದರಿಂದ ಆ ಪಕ್ಷ ಸೋತಿತು. ಈಗ ಕೇಜ್ರಿವಾಲ್ ಅವರು ಸಿಎಂ ಅಭ್ಯರ್ಥಿಯನ್ನ ಪ್ರಕಟಿಸಲು ಮನಸು ಮಾಡಿದ್ದಾರೆ” ಎಂದು ಅವರು ಹೇಳುತ್ತಾರೆ.

    ಇದನ್ನೂ ಓದಿ: Babul Supriyo: ಬಿಜೆಪಿಗೆ ಮತ್ತೊಂದು ಆಘಾತ; ಟಿಎಂಸಿ ಸೇರಿದ ಕೇಂದ್ರದ ಮಾಜಿ ಸಚಿವ ಸುಪ್ರೀಯೊ ಬಾಬುಲ್!

    ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಸ್ಥಾನಕ್ಕೆ ಯಾರು ಎಂದು ಈಗಲೇ ಅಂದಾಜಿಸಲು ಸಾಧ್ಯವಿಲ್ಲ. ಮುಂದಿನ ಸಿಎಂ ಯಾರೇ ಆದರೂ ಮುಂಬರುವ ಚುನಾವಣೆಯಲ್ಲಿ ಶಿರೋಮಣಿ ಅಕಾಲಿ ದಳ ಪಕ್ಷಕ್ಕೆ ಕೆಟ್ಟ ಸುದ್ದಿಯಂತೂ ಇರುತ್ತದೆ ಎಂದು ನ್ಯೂಸ್18ಗೆ ಹೇಳಿದ ಮೊದಲ ನಾಯಕ, ಹಲವು ವಾರಗಳ ಕಾಲ ತಾನು ಎಐಸಿಸಿ ಅಥವಾ ಹೈಕಮಾಂಡ್ ಜೊತೆ ಸಂಪರ್ಕದಲ್ಲಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

    ಇನ್ನೂ ಕೆಲ ಮೂಲಗಳು ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ಕೊಡುವ ಸಾಧ್ಯತೆ ಇರುವುದನ್ನು ಒಪ್ಪಿಕೊಂಡಿದ್ಧಾರೆ. ಕ್ಯಾಪ್ಟನ್ ಕೂಡ ತಮ್ಮ ರಾಜೀನಾಮೆ ನಿರ್ಧಾರವನ್ನ ಹೈಕಮಾಂಡ್​ಗೆ ತಿಳಿಸಿದ್ದಾರೆನ್ನಲಾಗಿದೆ. ಇಂದು ಸಂಜೆ ಪಂಜಾಬ್ ಸಿಎಲ್​ಪಿ ಸಭೆ ಇದೆ. ಅದಕ್ಕೆ ಮುನ್ನ ಸಿಎಂ ಅಮರೀಂದರ್ ಸಿಂಗ್ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ಧಾರೆ. ಅಲ್ಲಿಯೇ ಅವರು ರಾಜೀನಾಮೆ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ. ಇದೇ ವೇಳೆ ಅಮರೀಂದರ್ ಸಿಂಗ್ ಅವರ ನಿವಾಸದಲ್ಲಿ ಹತ್ತಕ್ಕೂ ಹೆಚ್ಚು ಸಚಿವರು ಮತ್ತು ಶಾಸಕರು ಸಭೆ ನಡೆಸಿದ್ದಾರೆ.
    Published by:Vijayasarthy SN
    First published: