Punjab Cabinet List: ಪಂಜಾಬ್ ಕ್ಯಾಬಿನೆಟ್ ಫೈನಲ್; ಅಮರೀಂದರ್ ಆಪ್ತರಿಗೆ ಕೊಕ್, 7 ಹೊಸ ಮುಖಗಳಿಗೆ ಮಣೆ

CM Charanjit Singh Channis Cabinet: ಕ್ಯಾಪ್ಟನ್ ಸಂಪುಟದಲ್ಲಿದ್ದ ಸಾಧು ಸಿಂಗ್ ಧರ್ಮಸೋತ್, ಬಲ್ವೀರ್ ಸಿದ್ಧು, ರಾಣಾ ಗುರ್‍ಮಿತ್ ಸೋಡಿ, ಗುರ್‍ಪ್ರೀತ್ ಕಾಂಗಡ್ ಮತ್ತು ಸುಂದರ್ ಶ್ಯಾಮ್ ಅವರಿಗೆ ಕೊಕ್ ನೀಡಲಾಗಿದೆ.

ದೆಹಲಿಯಲ್ಲಿ ರಾಹುಲ್​​ ಗಾಂಧಿ - ಪಂಜಾಬ್​ ಸಿಎಂ

ದೆಹಲಿಯಲ್ಲಿ ರಾಹುಲ್​​ ಗಾಂಧಿ - ಪಂಜಾಬ್​ ಸಿಎಂ

  • Share this:
 ನವದೆಹಲಿ: ಪಂಜಾಬ್ ಸಂಪುಟ ಸಚಿವ ಪಟ್ಟಿ (punjab cabinet ministers list )ಅಂತಿಮಗೊಂಡಿದ್ದು, ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ (amarinder singh )ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಐವರಿಗೆ ಕೊಕ್ ನೀಡಲಾಗಿದೆ. ಈ ಹಿಂದೆ ಸಂಪುಟದಲ್ಲಿದ್ದ ಎಂಟು ಜನ ಸಂಪುಟ ಸೇರ್ಪಡೆಯಾಗಿದ್ದು, ಏಳು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಮಂತ್ರಿಗಳ ಪಟ್ಟಿ ಅಂತಿಮಗೊಳಿಸಿದ ಬಳಿಕ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಶಿಮ್ಲಾದತ್ತ ಪ್ರಯಾಣ ಬೆಳೆಸಿದ್ದಾರೆ. ಸಂಪುಟ ರಚನೆಯ ಕುರಿತು ಸಭೆಯಲ್ಲಿ ಭಾಗಿಯಾಗಲು ರಾಹುಲ್ ಗಾಂಧಿ ದೆಹಲಿಗೆ ಆಗಮಿಸಿದ್ದರು. ಇತ್ತ ಪಟ್ಟಿ ಅಂತಿಮಗೊಳ್ಳುತ್ತಿದ್ದಂತೆ ಸಿಎಂ ಚರಣ್‍ಜಿತ್ ಸಿಂಗ್ ಚನ್ನಿ (Punjab Chief Minister Charanjit Singh) ಸಹ ಪಂಜಾಬ್‍ಗೆ ಹೊರಟಿದ್ದಾರೆ.

ಭಾನುವಾರ ನೂತನ ಸಚಿವರ ಪ್ರಮಾಣ ವಚನ

ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಚರಣ್‍ಜಿತ್ ಸಿಂಗ್, ಭಾನುವಾರ ಸಂಜೆ 4.30ಕ್ಕೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು. ಇದಕ್ಕೂ ಮೊದಲು ಮುಖ್ಯಮಂತ್ರಿಯಾಗಿ ಚರಣ್‍ಜಿತ್ ಸಿಂಗ್ ಚನ್ನಿ ಮತ್ತು ಡಿಸಿಎಂ ಆಗಿ ಸುಖ್‍ಜಿಂದರ್ ರಂಧಾವಾ ಮತ್ತು ಓ.ಪಿ. ಸೋನಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಕ್ಯಾಪ್ಟನ್ ಆಪ್ತ ಐವರಿಗೆ ಕೊಕ್

ಕ್ಯಾಪ್ಟನ್ ಸಂಪುಟದಲ್ಲಿದ್ದ ಸಾಧು ಸಿಂಗ್ ಧರ್ಮಸೋತ್, ಬಲ್ವೀರ್ ಸಿದ್ಧು, ರಾಣಾ ಗುರ್‍ಮಿತ್ ಸೋಡಿ, ಗುರ್‍ಪ್ರೀತ್ ಕಾಂಗಡ್ ಮತ್ತು ಸುಂದರ್ ಶ್ಯಾಮ್ ಅವರಿಗೆ ಕೊಕ್ ನೀಡಲಾಗಿದೆ. ಸಾಧು ಸಿಂಗ್ ಧರ್ಮಸೋತ್ ಹೆಸರು ಪೋಸ್ಟ್‍ಮೆಟ್ರಿಕ್ ಹಗರಣದಲ್ಲಿ ಕೇಳಿ ಬಂದಿತ್ತು. ಇನ್ನೂ ನವ್‍ಜೋತ್ ಸಿಂಗ್ ಸಿಧು ಬಂಡಾಯದ ಬಾವುಟ ಹಿಡಿದಾಗ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಶಕ್ತಿ ಪ್ರದರ್ಶನಕ್ಕಾಗಿ ರಾಣಾ ಗುರ್‍ಮಿತ್ ಸೋಡಿ ಭೋಜನ ಕೂಟ ಆರಂಭಿಸಿದ್ದರು. ಅಳಿಯನಿಗೆ ಸರ್ಕಾರಿ ನೌಕರಿ ಕೊಡಿಸಿದ ಆರೋಪ ಕಾಂಗಡ್ ವಿರುದ್ಧ ಕೇಳಿ ಬಂದಿತ್ತು. ಸುಂದರ್ ಶ್ಯಾಮ್ ಸಹ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಸುಂದರ್ ವಿರುದ್ಧ ಭೂ ಹಗರಣದ ಆರೋಪಗಳು ಸಹ ಕೇಳಿ ಬಂದಿದ್ದವು.

ಸಂಪುಟ ಸೇರಿಕೊಂಡ ಹಳಬರು

ಮನ್‍ಪ್ರೀತ್ ಬಾದಲ್, ವಿಜಯೇಂದ್ರ ಸಿಂಗಲಾ, ರಜಿಯಾ ಸುಲ್ತಾನಾ, ಬ್ರಾಹ್ನ ಮೊಹಿಂದರಾ, ಅರೂಣಾ ಚೌಧರಿ, ಭರತ್ ಭೂಷಣ್ ಆಶು, ತೃಪ್ತ್ ರಾಜಿಂದರ್ ಬಾಜ್ವಾ ಮತ್ತು ಸುಖ್ ಸರಕಾರಿಯಾ ಮತ್ತೊಮ್ಮೆ ಸಂಪುಟ ಸಚಿವರಾಗಲಿದ್ದಾರೆ. ಚಿನ್ನಿ ಅವರ ಹೆಸರನ್ನು ಹೈಕಮಾಂಡ್ ಗೆ ಶಿಫಾರಸ್ಸು ಮಾಡುವಲ್ಲಿ ಮನ್‍ಪ್ರೀತ್ ಬಾದಲ್ ಪ್ರಮುಖ ಪಾತ್ರ ವಹಿಸಿದ್ದರು. ಇನ್ನೂ ಕ್ಯಾಪ್ಟನ್ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದ ವಿಜಯೇಂದ್ರ ಸಿಂಗಲಾ ಪಂಜಾಬ್ ಶಾಲೆಗಳನ್ನು ಮೊದಲ ಸ್ಥಾನದಲ್ಲಿ ತಂದಿದ್ದರು.

ಇದನ್ನೂ ಓದಿ: Sneha Dubey: ವಿಶ್ವಸಂಸ್ಥೆಯ ಸಭೆಯಲ್ಲಿ ಪಾಕ್​ ಬೆವರಿಳಿಸಿದ ಸ್ನೇಹಾ ದುಬೆ: ಯುವ ಐಎಫ್​ಎಸ್​ ಅಧಿಕಾರಿ ಮಾತಿಗೆ ಮೆಚ್ಚುಗೆ ಮಹಾಪೂರ

ಸಿಧು ಅವರ ರಾಜಕೀಯ ಸಲಹೆಗಾರರಾಗಿರುವ ಮೊಹಮ್ಮದ್ ಮುಸ್ತಾಫಾ ಅವರ ಪತ್ನಿ ರಜಿಯಾ ಸುಲ್ತಾನಾ ಸಹ ಸಂಪುಟ ಸೇರ್ಪಡೆಗೊಂಡಿದ್ದಾರೆ. ಆರಂಭದಲ್ಲಿ ಅರುಣಾ ಚೌಧರಿ ಅವರ ಹೆಸರನ್ನ ಸಂಪುಟದಿಂದ ಕೊಕ್ ನೀಡುವ ಮಾತುಗಳ ಕೇಳಿ ಬಂದಿದ್ದವು. ಕೊನೆ ಹಂತದಲ್ಲಿ ಅರುಣಾ ಚೌಧರಿ ಅವರ ಹೆಸರು ಪಟ್ಟಿಯಲ್ಲಿ ಸೇರಿಕೊಂಡಿದೆ. ಭರತ್ ಭೂಷಣ್ ಆಶು ಹೈಕಮಾಂಡ್ ಗೆ ಆಪ್ತರು ಮತ್ತು ಹಿಂದಿನ ಸಿಎಂ ಜೊತೆ ಹೆಚ್ಚು ಗುರುತಿಸಿಕೊಂಡಿರಲಿಲ್ಲ. ಇನ್ನೂ ತೃಪ್ತ್ ರಾಜಿಂದರ್ ಬಾಜ್ವಾ ಮತ್ತು ಸುಖ್ ಸರಕಾರಿಯಾ ಹಿಂದಿನ ಸಂಪುಟದಲ್ಲಿ ಸಿಎಂ ವಿರುದ್ಧವೇ ಆರೋಪಗಳನ್ನು ಮಾಡಿದ್ದರು.

ಏಳು ಹೊಸ ಮುಖಗಳಿಗೆ ಅವಕಾಶ

ರಾಜ್‍ಕುಮಾರ್ ವೆರ್ಕಾ, ಪರ್ಗಟ್ ಸಿಂಗ್, ಸಂಗತ್ ಗಿಲ್ಜಿಯಾ, ಗುರ್‍ಕೀರತ್ ನಾಗ್ರಾ, ರಾಣಾ ಗುರ್‍ಜಿತ್ ಮತ್ತು ಅಮರೀಂದರ್ ಸಿಂಗ್ ರಾಜಾ ವಡಿಂಗ್ ಏಳು ಜನರು ಹೊಸದಾಗಿ ಸಂಪುಟ ಸೇರ್ಪಡೆಯಾಗಿದ್ದಾರೆ. ಸಂಪುಟ ವಿಸ್ತರಣೆಗಾಗಿ ಮೂರು ಬಾರಿ ಬೈಠಕ್ಪಂಜಾಬ್ ಸಂಪುಟ ವಿಸ್ತರಣೆಗಾಗಿ ಕಾಂಗ್ರೆಸ್ ಹೈಕಮಾಂಡ್ ಮೂರು ಬಾರಿ ಬೈಠಕ್ ನಡೆಸಿತ್ತು. ಸಂಪುಟ ವಿಸ್ತರಣೆ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಾಕಷ್ಟು ಗೊಂದಲದಲ್ಲಿತ್ತು ಎನ್ನಲಾಗಿದೆ. ಮೂರು ಬಾರಿ ಸಭೆ ನಡೆದರೂ ಪಟ್ಟಿ ಅಂತಿಮಗೊಂಡಿರಲಿಲ್ಲ. ರಾಹುಲ್ ಗಾಂಧಿ ಶುಕ್ರವಾರ ರಾತ್ರಿ 2 ರಿಂದ 4 ಗಂಟೆವರೆಗೂ ಚರ್ಚೆ ನಡೆಸಿದ್ದರು ಎನ್ನಲಾಗಿದೆ. ಆದ್ರೆ ಈಗ ಕಾಂಗ್ರೆಸ್‍ಗೆ ಮಾಜಿ ಸಿಎಂ ಅಮರಿಂದರ್ ಸಿಂಗ್ ದೊಡ್ಡ ಸಮಸ್ಯೆಯಾಗಲಿದ್ದಾರೆ. ಈಗ ಸಂಪುಟದಿಂದ ಕೊಕ್ ನೀಡಿರುವ ಮಾಜಿ ಮಂತ್ರಿಗಳು ಮಾಜಿ ಸಿಎಂ ಬಣ ಸೇರಿಕೊಳ್ಳುವ ಆತಂಕ ಕಾಂಗ್ರೆಸ್‍ಗೆ ಎದುರಾಗಿದೆ. ವಿಧಾನಸಭೆ ಚುನಾವಣೆಗೆ ಮೂರು ತಿಂಗಳಿದ್ದು, ಅಮರಿಂದರ್ ಸಿಂಗ್ ಮುಂದಿನ ನಡೆ ಏನು ಎಂಬುದರ ಬಗ್ಗೆ ಕುತೂಹಲ ಮನೆ ಮಾಡಿದೆ.
Published by:Kavya V
First published: