Punjab Assembly Elections: ಪಂಜಾಬ್​​ನಲ್ಲಿ ಕಡಿಮೆ ಪ್ರಮಾಣದ ಮತದಾನ- ಎಎಪಿ, ಸಿಧುಗೆ ಗೆಲುವಿನ‌ ಚಿಂತೆ

ಈ ಬಾರಿ ಕೇವಲ 65.32% ಮತದಾನವಾಗಿರುವುದರಿಂದ ಇದು ಯಾವ ಪಕ್ಷಕ್ಕೆ ಅನುಕೂಲ ಆಗಬಹುದು? ಯಾವ ಪಕ್ಷಕ್ಕೆ ನಷ್ಟ ಉಂಟುಮಾಡಬಹುದು ಎಂಬ ಸಹಜವಾದ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನವದೆಹಲಿ, ಫೆ.‌ 21: ಈಗ ನಡೆಯುತ್ತಿರುವ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ ಮತ್ತು ಪಂಜಾಬ್ ರಾಜ್ಯಗಳ ಪೈಕಿ ಕಾಂಗ್ರೆಸ್ ಪಂಜಾಬಿನಲ್ಲಿ ಮತ್ತೆ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಪಕ್ಷವಂತೂ ಪಂಜಾಬ್ ವಿಧಾನಸಭಾ ಚುನಾವಣೆಯನ್ನು (Punjab Assembly Elections) ಕಾಂಗ್ರೆಸ್ ಪಕ್ಷ (Congress Party) ಗೆದ್ದೇ ಗೆಲ್ಲುವ ವಿಶ್ವಾಸ ಇಟ್ಟುಕೊಂಡಿದೆ.  ಹಾಗಾಗಿ ಇದು ಕೂಡ ರಾಜಕೀಯ ಆಸಕ್ತರಲ್ಲಿ ಕುತೂಹಲ ಮೂಡಿಸಿದೆ. ಇದರ ಬೆನ್ನಲ್ಲೇ ನಿನ್ನೆ (ಫೆಬ್ರವರಿ 20) ನಡೆದ ಮತದಾನ (Polling) ಇನ್ನಷ್ಟು ಕುತೂಹಲ ಹುಟ್ಟುಹಾಕಿದೆ. ಏಕೆಂದರೆ ಇತ್ತೀಚಿನ ವರ್ಷಗಳಲ್ಲೇ ಈ ಬಾರಿ ಪಂಜಾಬಿನಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮತದಾನ (65.32%) ಆಗಿದೆ.

ಇತ್ತೀಚಿನ ವರ್ಷಗಳಲ್ಲೇ ಈ ಬಾರಿ ಕಡಿಮೆ ಪ್ರಮಾಣದ ಮತದಾನ

ಪಂಜಾಬ್‌ನಲ್ಲಿ 2002ರಲ್ಲಿ 65.14% ಮತದಾನ ಆಗಿತ್ತು. 2007 ರಲ್ಲಿ 75.42% ಮತದಾನ ನಡೆದಿತ್ತು. 2012 ರಲ್ಲಿ 78.3% ಮತದಾನವಾಗಿತ್ತು. 2017 ರಲ್ಲಿ 77.36% ಮತದಾನ ಆಗಿತ್ತು. ಆದರೆ ಈ ಬಾರಿ ಕೇವಲ 65.32% ಮತದಾನವಾಗಿರುವುದರಿಂದ ಇದು ಯಾವ ಪಕ್ಷಕ್ಕೆ ಅನುಕೂಲ ಆಗಬಹುದು? ಯಾವ ಪಕ್ಷಕ್ಕೆ ನಷ್ಟ ಉಂಟುಮಾಡಬಹುದು ಎಂಬ ಸಹಜವಾದ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಎಎಪಿ ಪ್ರಾಬಲ್ಯದ ಪ್ರದೇಶದಲ್ಲಿ ಕಡಿಮೆ ಪ್ರಮಾಣದ ಮತದಾನ

ಮಾಲ್ವ ಪ್ರದೇಶ ಆಮ್ ಆದ್ಮಿ ಪಕ್ಷದ ಭದ್ರಕೋಟೆ.‌ 2017ರ ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದಿಂದ ಆಮ್ ಆದ್ಮಿ ಪಕ್ಷದ 20 ಶಾಸಕರು ಗೆದ್ದಿದ್ದರು. ಆದರೆ ಈ ಬಾರಿ ಮಾಲ್ವಾ ಪ್ರದೇಶದಲ್ಲಿ ಮತದಾನದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.‌ ಮಾನ್ಸಾ, ಬರ್ನಾಲಾ, ಬಟಿಂಡಾ, ಫರೀದ್‌ಕೋಟ್, ಮುಕ್ತಸರ್ ಮತ್ತು ಸಂಗ್ರೂರ್ ಜಿಲ್ಲೆಗಳಲ್ಲಿ ಮತದಾನವು 2017 ಕ್ಕಿಂತ ಕಡಿಮೆಯಾಗಿದೆ. ಮಾಲ್ವಾ ಪ್ರದೇಶದ ಪೈಕಿ ಗಿಡ್ಡರ್‌ಬಾಹಾನಲ್ಲಿ ಮಾತ್ರ ಅತಿ ಹೆಚ್ಚು (77.80%) ಮತದಾನವಾಗಿದೆ.

ಇದನ್ನೂ ಓದಿ:Amit Shah Interview: "CAA ಇಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ" ಅಮಿತ್‌ ಶಾ Exclusive ಮಾತು

ನವಜೋತ್ ಸಿಧು ಗೆಲುವು ಅನುಮಾನ

ಕಾಂಗ್ರೆಸ್‌ನ ನವಜೋತ್ ಸಿಂಗ್ ಸಿಧು ಮತ್ತು ಅಕಾಲಿದಳದ ಬಿಕ್ರಮ್ ಸಿಂಗ್ ಮಜಿಥಿಯಾ ನಡುವೆ ತೀವ್ರ ಜಿದ್ದಾಜಿದ್ದಿ ನಡೆದಿರುವ ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದಲ್ಲೂ ಈ ಬಾರಿ ಕಡಿಮೆಯಾಗಿದೆ. ಅಮೃತಸರ ಪೂರ್ವ ಮಾತ್ರವಲ್ಲ ಅಮೃತಸರದ ಇತರೆ ಕ್ಷೇತ್ರಗಳಲ್ಲೂ ಕಡಿಮೆ ಪ್ರಮಾಣದ (ಶೇಕಡಾ 53ರಷ್ಟು) ಮತದಾನವಾಗಿದೆ. ಮೊಹಾಲಿಯಲ್ಲಿ 57.74% ಮತದಾನವಾಗಿದೆ. ಇದರಿಂದ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಗೆಲುವು ಕೂಡ ಅನುಮಾನಸ್ಪದವಾಗಿದೆ.

ಸಿಎಂ ಅಭ್ಯರ್ಥಿಗಳಿಗೆ ಹೆಚ್ಚಿನ ಮತದಾನ

ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಹಾಗೂ ಹಾಲಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರು ಆಯ್ಕೆಯಾಗಲು ಬಯಸುತ್ತಿರುವ ಚಮ್ಕೌರ್ ಸಾಹಿಬ್ ಮತ್ತು ಭದೌರ್ ಕ್ಷೇತ್ರಗಳಲ್ಲಿ ಸಂಜೆ 5ಗಂಟೆಗೇ ಕ್ರಮವಾಗಿ 70% ಮತ್ತು 71.30% ರಷ್ಟು ಮತದಾನ ನಡೆದಿತ್ತು. ಇದೇ ರೀತಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯ ಭಗವಂತ್ ಮಾನ್ ಅಭ್ಯರ್ಥಿಯಾಗಿರುವ ಧುರಿಯಲ್ಲಿ ಕೂಡ ಸಂಜೆ 5 ಗಂಟೆಯವರೆಗೆ 68% ರಷ್ಟು ಮತದಾನವಾಗಿತ್ತು.

ಚುನಾವಣಾ ಆಯೋಗಕ್ಕೆ ಎಎಪಿ ದೂರು

ಆಡಳಿತಾರೂಢ ಪಕ್ಷದಿಂದ ಹಲವು ಕ್ಷೇತ್ರಗಳಲ್ಲಿ ಬೂತ್ ವಶಪಡಿಸಿಕೊಳ್ಳಲಾಗಿದೆ ಎಂದು ಆಮ್ ಆದ್ಮಿ ಪಕ್ಷವು ಹಲವು ಕಡೆ ಚುನಾವಣಾ ಆಯೋಗಕ್ಕೆ ದೂರುಗಳನ್ನು ನೀಡಿದೆ.‌ ಜೊತೆಗೆ ನಕಲಿ ಮತದಾನ ನಡೆದಿದೆ ಎಂದು ಕೂಡ ಆರೋಪಿಸಿದೆ. ಆಮ್ ಆದ್ಮಿಪಕ್ಷದ ಪಂಜಾಬ್ ರಾಜ್ಯ ಸಹ-ಪ್ರಭಾರಿ ರಾಘವ್ ಚಡ್ಡಾ, ಬೂತ್‌ಗಳಲ್ಲಿ ಚುನಾವಣಾ ಸಿಬ್ಬಂದಿಯಿಂದ ದುರುಪಯೋಗವಾಗಿದೆ ಎಂದು ಆರೋಪಿಸಿದ್ದಾರೆ.‌ ಇತರ ಕೆಲವು ಸ್ಥಳಗಳಲ್ಲಿ ರಾಜಕೀಯ ಪಕ್ಷಗಳ ಬೆಂಬಲಿಗರ ನಡುವೆ ಸಣ್ಣ ಪುಟ್ಟ ಘರ್ಷಣೆಗಳು ನಡೆದಿವೆ.

ಇದನ್ನೂ ಓದಿ: Amit Shah Interview: ಪಂಚರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾ? ಸಂದರ್ಶನದಲ್ಲಿ ಅಮಿತ್​ ಶಾ ಮಾತು

ಗೆಲುವಿನ ವಿಶ್ವಾಸದಲ್ಲಿ 3 ಪಕ್ಷಗಳು

ಕಣದಲ್ಲಿರುವ ಮೂರು ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ಅಕಾಲಿದಳಗಳು ಮೂರನೆ ಎರಡರಷ್ಟು ಬಹುಮತ ಅಥವಾ ಪ್ರಚಂಡ ಬಹುಮತದೊಂದಿಗೆ ಗೆಲುವು ಸಾಧಿಸುವುದಾಗಿ ಹೇಳಿಕೊಂಡಿವೆ. 1.02 ಕೋಟಿ ಮಹಿಳೆಯರು ಸೇರಿದಂತೆ ಸುಮಾರು 2.14 ಕೋಟಿ ಮತದಾರರನ್ನು ಹೊಂದಿದ್ದ ಪಂಜಾಬಿನಲ್ಲಿ 117 ಸ್ಥಾನಗಳಿಗೆ ಒಟ್ಟು 1,304 ಅಭ್ಯರ್ಥಿಗಳು ಕಣದಲ್ಲಿದ್ದರು. ಎಲ್ಲರ ಭವಿಷ್ಯ ಮತ್ತು ರಾಜಕೀಯ ಪಕ್ಷಗಳ ಭವಿಷ್ಯ ಮಾರ್ಚ್ 10ರಂದು ಗೊತ್ತಾಗಲಿದೆ.
Published by:Latha CG
First published: