ನವದೆಹಲಿ(ಆ. 25): ಕಳೆದ ವರ್ಷ ಕಾಶ್ಮೀರದ ಪುಲ್ವಾಮದಲ್ಲಿ ನಡೆದಿದ್ದ ಉಗ್ರ ದಾಳಿ ಘಟನೆ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ ಇವತ್ತು 5,000 ಪುಟಗಳ ಚಾರ್ಜ್ ಶೀಟ್ ಸಲ್ಲಿಸುವ ನಿರೀಕ್ಷೆ ಇದೆ. 40 ಸಿಆರ್ಪಿಎಫ್ ಯೋಧರನ್ನು ಬಲಿತೆಗೆದುಕೊಂಡ ಈ ಘಟನೆಯಲ್ಲಿ ಜೈಷ್ ಎ ಮೊಹಮ್ಮದ್ (ಜೆಇಎಂ) ಸಂಘಟನೆ ನಡೆಸಿದ ಸಂಚು, ಸ್ಫೋಟಕಗಳನ್ನ ಸಾಗಿಸಿದ್ದು, ದಾಳಿ ನಡೆಸಿದ ಉಗ್ರರ ಗುರುತು, ದಾಳಿಗೆ ನೆರವಾದವರು ಹೀಗೆ ಹಲವು ವಿವರಗಳು ಈ ಚಾರ್ಜ್ಶೀಟ್ನಲ್ಲಿ ಇರಲಿದೆ. ಪಾಕ್ ಮೂಲದ ಜೆಇಎಂ ಸಂಘಟನೆಯ ಮೌಲಾನ ಮಸೂದ್ ಅಜರ್, ರೌಫ್ ಅಜ್ಗರ್ ಸೇರಿದಂತೆ 20 ಉಗ್ರರನ್ನು ಆರೋಪಿಗಳನ್ನಾಗಿ ಹೆಸರಿಸುವ ಸಾಧ್ಯತೆ ಇದೆ. ಪ್ರಮುಖ ಸಂಚುಕೋರ ಫಾರೂಕ್ನ ಫೋನ್ನಿಂದ ಕಾಲ್ ರೆಕಾರ್ಡಿಂಗ್, ವಾಟ್ಸಾಪ್ ಚಾಟ್, ಫೋಟೋ, ವಿಡಿಯೋ ಇತ್ಯಾದಿಗಳನ್ನ ಪಡೆಯಲಾಗಿದೆ. ಇದರಲ್ಲೂ ಕೆಲ ಮಹತ್ವದ ಸಾಕ್ಷ್ಯಾಧಾರಗಳು ಸಿಕ್ಕಿವೆ.
ಬರೋಬ್ಬರಿ 18 ತಿಂಗಳ ಕಾಲ ತೀವ್ರವಾಗಿ ತನಿಖೆ ನಡೆಸಿ ವೈಜ್ಞಾನಿಕ ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನ ಆಧರಿಸಿ ಈ ಪ್ರಕರಣಕ್ಕೆ ಒಂದು ರೂಪ ಕೊಟ್ಟಿರುವ ಎನ್ಐಎ ಇಂದು ಜಮ್ಮುವಿನ ವಿಶೇಷ ಕೋರ್ಟ್ನಲ್ಲಿ ಚಾರ್ಜ್ ಶೀಟ್ ಫೈಲ್ ಮಾಡುತ್ತಿದೆ.
ಇದನ್ನೂ ಓದಿ: ರಾಯಗಢದಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿತ; ಇಬ್ಬರು ಸಾವು, 18 ಮಂದಿಗಾಗಿ ಶೋಧ ಕಾರ್ಯ
2019ರಲ್ಲಿ ಈ ದಾಳಿ ನಡೆದದ್ದು. ದಾಳಿಯ ಪ್ರಮುಖ ಸಂಚುಕೋರ ಉಮರ್ ಫಾರೂಕ್ 2018ರ ಏಪ್ರಿಲ್ನಲ್ಲಿ ಪಾಕಿಸ್ತಾನದಿಂದ ಭಾರತವನ್ನ ಪ್ರವೇಶ ಮಾಡಿದ್ದ. ದಾಳಿಗೆ ಬೇಕಾದ ಐಇಡಿ ಸ್ಫೋಟಕಗಳನ್ನ ಸಂಗ್ರಹಿಸುವ ವ್ಯವಸ್ಥೆ ಮಾಡಿದ್ದು ಈತನೇ. 2020, ಮಾರ್ಚ್ 29ರಂದು ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಈತ ಹಾಗೂ ಮತ್ತೊಬ್ಬ ಐಇಡಿ ತಜ್ಞ ಕಮ್ರಾನ್ ಹತ್ಯೆಯಾಗಿದ್ದರು. ಆಗ ಫಾರೂಖ್ನ ಫೋನ್ ಅನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿದ್ದರು.
ಫಾರೂಕ್ನ ಫೋನ್ನಲ್ಲಿರುವ ವಾಟ್ಸಾಪ್ ಸಂದೇಶಗಳಿಂದ ಒಂದಷ್ಟು ಸುಳಿವು ಸಿಕ್ಕಿವೆ. ಪಾಕಿಸ್ತಾನದಲ್ಲಿ ಜೈಷ್ ಸಂಘಟನೆಯ ನಿರ್ವಾಹಕರಿಗೆ ಈತ ತಾನು ಸ್ಫೋಟಕಗಳೊಂದಿಗೆ ಭಾರತಕ್ಕೆ ಸುರಕ್ಷಿತವಾಗಿ ಬಂದಿದ್ದಾಗಿ ವಾಟ್ಸಾಪ್ನಲ್ಲಿ ಮೆಸೇಜ್ ಹಾಕಿದ್ದ. ಈತನ ಮೊಬೈಲ್ನಲ್ಲಿರುವ ಒಂದು ವಿಡಿಯೋದಲ್ಲಿ ಉಗ್ರರು ಹೇಗೆ ಗಡಿದಾಟಿ ಬರುತ್ತಾರೆಂಬ ದೃಶ್ಯ ಇದೆ. ಉಗ್ರಗಾಮಿಗಳು ಕಗ್ಗತ್ತಲೆಯ ವೇಳೆಯಲ್ಲಿ ಗಡಿಯ ಮುಳ್ಳುತಂತಿಯನ್ನು ಕತ್ತರಿಸಿ ನಂತರ ದಾಟಿ ಹೋಗುತ್ತಿರುವ ದೃಶ್ಯ ಈ ವಿಡಿಯೋದಲ್ಲಿ ಇದೆ. ಇವೆಲ್ಲವೂ ಎನ್ಐಎ ತನಿಖಾ ವರದಿಗೆ ಹೆಚ್ಚು ಬಲ ಕೊಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಐದು ಟ್ರಿಲಿಯನ್ ಆರ್ಥಿಕತೆ ಸಾಧ್ಯವಾಗಲು ಭಾರತಕ್ಕೆ ಜಾಗತಿಕ ಮಟ್ಟದ ಬ್ಯಾಂಕ್ಗಳು ಅಗತ್ಯ: ಸಿಇಎ
ಇನ್ನು, ಪುಲ್ವಾಮ ದಾಳಿಗೆ ಬೇಕಾದ ಅಷ್ಟೊಂದು ಪ್ರಮಾಣದ ಸ್ಫೋಟಕಗಳು ಎಲ್ಲಿಂದ ಬಂದವು ಎಂಬ ಯಕ್ಷಪ್ರಶ್ನೆಗೆ ಎನ್ಐಎ ತನ್ನ ಚಾರ್ಜ್ಶೀಟ್ನಲ್ಲಿ ಉತ್ತರ ನೀಡುವ ನಿರೀಕ್ಷೆ ಇದೆ. ದಾಳಿಗೆ ಬಳಸಿದ ಸ್ಫೋಟಕ ಯಾವುದು, ಎಲ್ಲಿಂದ ತಂದಿದ್ದು ಇತ್ಯಾದಿ ವಿವರಗಳು ಬಯಲಾಗಲಿವೆ. ನ್ಯೂಸ್18 ಈ ಹಿಂದೆ ಪ್ರಕಟಿಸಿದ ವರದಿಯೊಂದರಲ್ಲಿ, ಪುಲ್ವಾಮ ದಾಳಿಗೆ ಬಳಸಿದ್ದ ಸ್ಫೋಟಕ ಆರ್ಡಿಎಕ್ಸ್ ಆಗಿದ್ದು, ಅದು ಪಾಕಿಸ್ತಾನದಲ್ಲಿ ಕೊಳ್ಳಲಾಗಿತ್ತು ಎಂದು ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ಹೇಳಲಾಗಿತ್ತು.
“ದಾಳಿಕೋರರು ತಮ್ಮ ಗನ್ ಮತ್ತಿತರ ವಸ್ತುಗಳ ಜೊತೆಗೆ ಸ್ಫೋಟಕಗಳನ್ನೂ ಹೊತ್ತು ಬಂದಿದ್ದರು. ಒಟ್ಟು 20 ಕಿಲೋಗಿಂತ ಕಡಿಮೆ ತೂಕದ ಆರ್ಡಿಎಕ್ಸ್ ಸ್ಫೋಟಕವನ್ನು ಬಳಕೆ ಮಾಡಲಾಗಿತ್ತು” ಎಂದು ಆ ಅಧಿಕಾರಿ ತಿಳಿಸಿದ್ದರು.
ಇದನ್ನೂ ಓದಿ: ನವೆಂಬರ್ 2ಕ್ಕೆ ಭೂಮಿಗೆ ಬಡಿಯುತ್ತಾ ಈ ಕ್ಷುದ್ರಗ್ರಹ?; ಚಾನ್ಸ್ ಇದೆ ಅಂತಿದೆ ನಾಸಾ
ಆರೋಪಿಯ ಫೋನ್ನಿಂದ ಸಾಕ್ಷ್ಯಗಳು ಸಿಕ್ಕಿರುವುದರ ಜೊತೆಗೆ ಜಮ್ಮು ಸೆಕ್ಟರ್ನಲ್ಲಿ ಪಾಕಿಸ್ತಾನದಿಂದ ಗಡಿದಾಟಿ ಭಾರತಕ್ಕೆ ಬಂದ ನುಸುಳುಕೋರರ ಫೂಟ್ಪ್ರಿಂಟ್ಗಳು ಸಹ ಸಿಕ್ಕಿವೆ. ಕುತೂಹಲವೆಂದರೆ ಪುಲ್ವಾಮದಲ್ಲಿ ಸಿಆರ್ಪಿಎಫ್ ಟ್ರಕ್ ಮೇಲೆ ಸ್ಫೋಟಕಗಳಿದ್ದ ಕಾರನ್ನು ಗುದ್ದಿಸಿದ್ದ ಅದಿಲ್ ಅಹ್ಮದ್ ದರ್ ಸ್ಥಳೀಯ ಕಾಶ್ಮೀರೀ ವ್ಯಕ್ತಿಯೇ. ದಾಳಿಗೆ ಬಳಸಲಾದ ಐಇಡಿಯನ್ನು ಸ್ಥಳೀಯವಾಗಿ ಲಭ್ಯವಾದ ಅಮೋನಿಯಮ್ ನೈಟ್ರೇಟ್ ಹಾಗೂ ನೈಟ್ರೋ ಕ್ಲಿಸೆರಿನ್ ಬಳಸಿ ಅಸೆಂಬಲ್ ಮಾಡಲಾಗಿತ್ತು. ಆದರೆ, 20 ಕಿಲೋ ಆರ್ಡಿಎಕ್ಸ್ ಸ್ಫೋಟಕವನ್ನು ಪಾಕಿಸ್ತಾನದಿಂದ ತಂದಿರುವ ಶಂಕೆ ಇದೆ. ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಇರುವುದಕ್ಕೆ ಇದು ಪ್ರಮುಖ ಸಾಕ್ಷಿಯಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ