news18 Updated:February 22, 2021, 12:41 PM IST
ವಿ ನಾರಾಯಣಸ್ವಾಮಿ
- News18
- Last Updated:
February 22, 2021, 12:41 PM IST
ಪುದುಚೇರಿ(ಫೆ. 22): ಹಲವು ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಟ್ಟ ಹಿನ್ನೆಲೆಯಲ್ಲಿ ಇಂದು ನಡೆದ ವಿಶ್ವಾಸಮತ ಪರೀಕ್ಷೆಯಲ್ಲಿ ಪುದುಚೇರಿ ಸಿಎಂ ವಿ ನಾರಾಯಣಸ್ವಾಮಿ ಬಹುಮತ ಸಾಬೀತು ಮಾಡುವಲ್ಲಿ ವಿಫಲರಾಗಿದ್ದಾರೆ. 33 ಸದಸ್ಯಬಲದ ಪುದುಚೇರಿ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಪರೀಕ್ಷೆಯಲ್ಲಿ ಸಿಎಂ ಪರವಾಗಿ 13 ಮತ ಬಿದ್ದರೆ ವಿರುದ್ಧವಾಗಿ 14 ಮತಗಳು ಬಿದ್ದವು. ಪರೀಕ್ಷೆಯಲ್ಲಿ ಸೋಲಪ್ಪಿದ ಬೆನ್ನಲ್ಲೇ ಸಿಎಂ ವಿ ನಾರಾಯಣಸ್ವಾಮಿ ಅವರು ಲೆಫ್ಟಿನೆಂಟ್ ಗವರ್ನರ್ ತಮಿಳ್ಸಾಯಿ ಸೌಂದರರಾಜನ್ ಅವರಿಗೆ ರಾಜೀನಾಮೆ ಪತ್ರ ನೀಡಿದ್ದಾರೆ.
ಪುದುಚೇರಿ ವಿಧಾನಸಭೆಯಲ್ಲಿ ಒಟ್ಟು 33 ಸ್ಥಾನಗಳಿದ್ದು, ಕಾಂಗ್ರೆಸ್ ಹಾಗೂ ಡಿಎಂಕೆ ಪಕ್ಷಗಳು ಮೈತ್ರಿ ಮಾಡಿಕೊಂಡು ಒಬ್ಬ ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದವು. ಸ್ಪೀಕರ್ ಸೇರಿ ಕಾಂಗ್ರೆಸ್ ಪಕ್ಷ 15 ಸದಸ್ಯರನ್ನ ಹೊಂದಿದ್ದರೆ, ಮೂವರು ಡಿಎಂಕೆ ಮತ್ತು ಒಬ್ಬ ಪಕ್ಷೇತರ ಸೇರಿ ಆಡಳಿತ ನಡೆದಿತ್ತು. ಆದರೆ, ದಿಢೀರ್ ಬೆಳವಣಿಗೆಯಲ್ಲಿ ನಾಲ್ವರು ಶಾಸಕರು ರಾಜೀನಾಮೆ ನೀಡುವ ಮೂಲಕ ಸರ್ಕಾರ ಬಹುಮತ ಕಳೆದುಕೊಂಡಿತು. ಇದೀಗ ಕಾಂಗ್ರೆಸ್ನ 9 ಸದಸ್ಯರು, ಡಿಎಂಕೆಯ ಇಬ್ಬರು ಹಾಗೂ ಒಬ್ಬ ಪಕ್ಷೇತರ ಸದಸ್ಯ ಒಂದು ಕಡೆ ಇದ್ಧಾರೆ. ಅಖಿಲ ಭಾರತ ಎನ್ಆರ್ ಕಾಂಗ್ರೆಸ್ ಪಕ್ಷದ ಏಳು ಶಾಸಕರು, ಎಐಎಡಿಎಂಕೆಯ 4 ಶಾಸಕರು ಹಾಗೂ ಬಿಜೆಪಿಯ ನಾಮನಿರ್ದೇಶಿತ 3 ಶಾಸಕರು ಇನ್ನೊಂದೆಡೆ ಇದ್ದಾರೆ. ನಿನ್ನೆ ಕೆ ಲಕ್ಷ್ಮೀನಾರಾಯಣನ್ ಅವರು ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಹಂಗಾಮಿ ಲೆಫ್ಟಿನೆಂಟ್ ಗವರ್ನರ್ ತಮಿಳ್ಸಾಯಿ ಸೌಂದರರಾಜನ್ ಅವರು ಸಿಎಂ ನಾರಾಯಣಸ್ವಾಮಿ ಅವರಿಗೆ ಬಹುಮತ ಸಾಬೀತುಪಡಿಸುವಂತೆ ನಿರ್ದೇಶನ ನೀಡಿದ್ದರು. ಅದರಂತೆ ಇಂದು ವಿಶ್ವಾಸಮತ ಪರೀಕ್ಷೆಯಾಗಿ ಸಿಎಂ ವಿಫಲರಾಗಿದ್ದಾರೆ.
ಇದನ್ನೂ ಓದಿ: Petrol Diesel Price:ತೀವ್ರ ವಿರೋಧಕ್ಕೆ ಬೆದರಿದ ಕೇಂದ್ರ ಸರ್ಕಾರ; ಇಂದು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಇಲ್ಲ
ಹಿಂದೆ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಕಿರಣ್ ಬೇಡಿ ಅವರು ವಿಪಕ್ಷಗಳನ್ನಿಟ್ಟುಕೊಂಡು ತಮ್ಮ ಸರ್ಕಾರವನ್ನು ಬೀಳಿಸಲು ಪಾತ್ರವಹಿಸಿದ್ದಾರೆ ಎಂದು ಈ ಸಂದರ್ಭದಲ್ಲಿ ವಿ. ನಾರಾಯಣಸ್ವಾಮಿ ಆರೋಪ ಮಾಡಿದ್ದಾರೆ. ವಿಶ್ವಾಸ ಮತ ಯಾಚನೆಗೆ ಕರೆದಿದ್ದ ಅಧಿವೇಶವನ್ನುದ್ದೇಶಿಸಿ ಮಾತನಾಡಿದ ಅವರು ತಾನು ಸರ್ಕಾರ ನಡೆಸಲು ಕಿರಣ್ ಬೇಡಿ ಬಿಡುತ್ತಿರಲಿಲ್ಲ. ರಾಜ್ಯದ ಅಭಿವೃದ್ಧಿಗೆ ಅನುದಾನ ಕೊಡಬೇಕೆಂದು ಕೇಳಿಕೊಂಡರೂ ಕೇಂದ್ರ ಸರ್ಕಾರ ಕೊಡಲಿಲ್ಲ ಎಂದು ದೂರಿದ್ಧಾರೆ. ಅದೇ ವೇಳೆ, ಕಳೆದ 5 ವರ್ಷಗಳಲ್ಲಿ ತಮ್ಮ ಸರ್ಕಾರ ಮಾಡಿದ ಸಾಧನೆಗಳ ಪಟ್ಟಿಯನ್ನೂ ನಾರಾಯಣಸ್ವಾಮಿ ನೀಡಿದ್ದಾರೆ.
ಜನರಿಂದ ಆಯ್ಕೆಯಾದ ಸರ್ಕಾರವನ್ನ ಅನ್ಯಾಯವಾಗಿ ಕೆಡವಲಾಗಿದೆ. ಚುನಾವಣೆಯಲ್ಲಿ ವಿಪಕ್ಷಗಳಿಗೆ ಜನರೇ ಪಾಠ ಕಲಿಸುತ್ತಾರೆ ಎಂದೂ ಮಾಜಿ ಸಿಎಂ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೇರಿ ವಿಧಾನಸಭೆಗೆ ಇದೇ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಅದಕ್ಕೆ ಮುಂಚಿತವಾಗಿ ನಡೆದಿರುವ ಈ ರಾಜಕೀಯ ಹೈಡ್ರಾಮ ಯಾರಿಗೆ ಲಾಭವಾಗುತ್ತದೆ ಎಂಬುದು ಕುತೂಹಲದ ವಿಚಾರ.
Published by:
Vijayasarthy SN
First published:
February 22, 2021, 12:41 PM IST