ದೇಶದಲ್ಲಿ ‘PUBG Game’ ಸಂಪೂರ್ಣ ನಿಷೇಧ?: ಸುಳಿವು ನೀಡಿದ ಕೇಂದ್ರ ಸರ್ಕಾರ

ಪಬ್​ಜಿ ಮೊಬೈಲ್ ಇಂಡಿಯಾ

ಪಬ್​ಜಿ ಮೊಬೈಲ್ ಇಂಡಿಯಾ

PUBG Game: ಪಬ್‌ಜಿ ಮೊಬೈಲ್ ಇಂಡಿಯಾ ಗೇಮ್ ಬಿಡುಗಡೆಗಾಗಿ ಕುತೂಹಲದಿಂದ ಕಾಯುತ್ತಿರುವವರಿಗೆ ಕೇಂದ್ರ ಸರ್ಕಾರ ಕಹಿಸುದ್ದಿ ನೀಡಿದೆ.

  • Share this:

    ದೇಶದಲ್ಲಿ ಅತಿಹೆಚ್ಚು ಬಳಕೆದಾರರನ್ನು ಹೊಂದಿದ್ದ ಜನಪ್ರಿಯ ‘ಪಬ್‌ಜಿ ಗೇಮ್’ ನಿಷೇಧಿಸಿ ಹಲವು ತಿಂಗಳುಗಳೇ ಕಳೆದಿವೆ. ಚೀನಾದ ನಿರ್ವಹಣೆಯಲ್ಲಿದ್ದ ಸರ್ವರ್‌ಗಳು ಬಳಕೆದಾರರ ಮಾಹಿತಿ ಕದಿಯುತ್ತವೆ ಹಾಗೂ ದೇಶದ ಭದ್ರತೆ, ವೈಯಕ್ತಿಕ ಹಿತಾಸಕ್ತಿಗೆ ಮಾರಕವೆಂದು ಕೇಂದ್ರ ಸರ್ಕಾರ ಪಬ್‌ಜಿ ಗೇಮ್ ನಿಷೇಧಿಸಿ ಆದೇಶ ಹೊರಡಿಸಿತ್ತು. ಪಬ್‌ಜಿ ನಿಷೇಧದ ಬಳಿಕ ಅದರ ಮಾಲೀಕತ್ವದ ಕಂಪನಿಗೆ ಸಾವಿರಾರು ಕೋಟಿ ರೂ. ನಷ್ಟ ಉಂಟಾಗಿತ್ತು. ಪಬ್‌ಜಿ ನಿಷೇಧದ ಬಳಿಕ ಅದರ ಲಕ್ಷಾಂತರ ಭಾರತೀಯ ಅಭಿಮಾನಿಗಳಿಗೆ ಭಾರಿ ನಿರಾಸೆಯುಂಟಾಗಿತ್ತು. ಶೀಘ್ರವೇ ‘ಪಬ್‌ಜಿ ಮೊಬೈಲ್ ಇಂಡಿಯಾ’ ಎಂಬ ಹೆಸರಿನಲ್ಲಿ ಹೊಸ ರೂಪದಲ್ಲಿ ಈ ಗೇಮ್ ಬರಲಿದೆ ಎಂದು ಹೇಳಲಾಗಿತ್ತು. ಆದರೆ ಹಿಂಸೆಯನ್ನು ಪ್ರಚೋದಿಸುವ ಈ ಗೇಮ್ ಅನ್ನು ಭಾರತದಲ್ಲಿ ಸಂಪೂರ್ಣವಾಗಿ ನಿಷೇಧಿಸುವ ಸುಳಿವನ್ನು ಕೇಂದ್ರ ಸರ್ಕಾರ ನೀಡಿದೆ.


    ಹೌದು, ಪಬ್‌ಜಿ ಮೊಬೈಲ್ ಇಂಡಿಯಾ ಗೇಮ್ ಬಿಡುಗಡೆಗಾಗಿ ಕುತೂಹಲದಿಂದ ಕಾಯುತ್ತಿರುವವರಿಗೆ ಕೇಂದ್ರ ಸರ್ಕಾರ ಕಹಿಸುದ್ದಿ ನೀಡಿದೆ. ಈ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್, ಪಬ್‌ಜಿ ಗೇಮ್ ಹಿಂಸಾತ್ಮಕ, ಪ್ರಚೋದನಕಾರಿ ಹಾಗೂ ವ್ಯಸನಕಾರಿ ಆಟಕ್ಕೆ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ. ಭಾರತದಲ್ಲಿ ಮುಂದಿನ ದಿನಗಳಲ್ಲಿ ಈ ಆಟವನ್ನು ಬಿಡುಗಡೆ ಮಾಡದಿರಬಹುದು ಎಂದು ಅವರು ಸೂಚಿಸಿದ್ದಾರೆ. ಅಲ್ಲದೇ ಭಾರತೀಯ ಸಾಂಸ್ಕೃತಿಕ ನೀತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಗೇಮಿಂಗ್ ಮತ್ತು ಇತರ ಸಂಬಂಧಿತ ಕ್ಷೇತ್ರಗಳಲ್ಲಿ ಶ್ರೇಷ್ಠತೆಯ ಕೇಂದ್ರವನ್ನು ಸ್ಥಾಪಿಸುವ ಸರ್ಕಾರದ ಯೋಜನೆಯನ್ನು ಅವರು ಘೋಷಿಸಿದ್ದಾರೆ.


    ಕಳೆದ ವರ್ಷ ಕೇಂದ್ರ ಸರ್ಕಾರ ನಿಷೇಧಿಸಿದ 100ಕ್ಕೂ ಹೆಚ್ಚು ಚೀನಾ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಪಬ್‌ಜಿ ಕೂಡ ಸೇರಿದೆ. ಮೊಬೈಲ್ ಮತ್ತು ಇತರ ಗ್ಯಾಜೆಟ್‌ಗಳಲ್ಲಿ ಆಡುವ ಅನೇಕ ಆಟಗಳು ‘ಹಿಂಸಾತ್ಮಕ, ಪ್ರಚೋದನಕಾರಿ, ವ್ಯಸನಕಾರಿಯಾಗಿವೆ ಮತ್ತು ಇವು ಮಕ್ಕಳ ಮನಸ್ಸಿನ ಮೇಲೆ ಸಂಕೀರ್ಣ ಪ್ರವೃತ್ತಿಯನ್ನು ಸೃಷ್ಟಿಸುತ್ತವೆ. ಪಬ್‌ಜಿ ಗೇಮ್ ಅದಕ್ಕೆ ಉತ್ತಮ ಉದಾಹರಣೆಯಾಗಿದೆ. ಆದರೆ ಆ ಗೇಮ್ ಗಳನ್ನು ಟೀಕಿಸುವುದು ಸದ್ಯದ ಪರಿಹಾರವಲ್ಲ. ಇಡೀ ಜಗತ್ತಿಗೆ #MakeInIndia ಗೆ ಅನುಗುಣವಾಗಿ ನಮ್ಮದೇ ಆದ ಗೇಮ್ ಗಳು ಮತ್ತು ಅಪ್ಲಿಕೇಶನ್‌ಗಳನ್ನು ರಚಿಸುವುದು ಇದಕ್ಕೆ ಪರಿಹಾರ. ಇದರಿಂದ ಭಾರತೀಯ ಸಂಸ್ಕೃತಿ ಪ್ರಪಂಚದಾದ್ಯಂತ ಪಸರಿಸುತ್ತದೆ’ ಎಂದು ಹೇಳಿದ್ದಾರೆ.


    ವಿಎಫ್‌ಎಕ್ಸ್, ಗೇಮಿಂಗ್ ಮತ್ತು ಆನಿಮೇಷನ್‌ಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಕಲಿಸಲು ಗೇಮಿಂಗ್ ಕೇಂದ್ರವನ್ನು ರಚಿಸಲು ತಮ್ಮ ಸಚಿವಾಲಯ ನಿರ್ಧರಿಸಿದೆ. ಈ ಮೂಲಕ ಭಾರತೀಯ ಸಾಂಸ್ಕೃತಿಕ ನೀತಿಯನ್ನು ಉತ್ತೇಜಿಸುವ ಹೊಸ ಗೇಮ್ ಗಳನ್ನು ಅಭಿವೃದ್ಧಿಪಡಿಸಲಾಗುವುದು. ಈ ವರ್ಷವೇ ಕೋರ್ಸ್‌ಗಳು ಪ್ರಾರಂಭವಾಗಲಿವೆ. ಐಐಟಿ ಬಾಂಬೆಯ ಸಹಯೋಗದೊಂದಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಗೇಮಿಂಗ್ ಮತ್ತು ಇತರ ಸಂಬಂಧಿತ ಕ್ಷೇತ್ರಗಳಲ್ಲಿ ಶ್ರೇಷ್ಠತೆಯ ಕೇಂದ್ರವನ್ನು ರಚಿಸಲು ತೀರ್ಮಾನಿಸಿದೆ. ನಾವು ತಯಾರಿಕೆಯ ಸುಧಾರಿತ ಹಂತದಲ್ಲಿದ್ದೇವೆ ಎಂದು ಅವರು ಹೇಳಿದ್ದಾರೆ.



    ‘ಪ್ರಧಾನಿ ಮೋದಿ ಅವರು ಭಾರತೀಯ ಮೌಲ್ಯಗಳು, ಪರಂಪರೆ ಮತ್ತು ಸಾಂಸ್ಕೃತಿಕ ನೀತಿಗಳನ್ನು ಕಾಪಾಡುವ ಬಗ್ಗೆ ಉತ್ಸಾಹ ಹೊಂದಿದ್ದಾರೆ. ದೇಶದ ಮಕ್ಕಳು ಮತ್ತು ಯುವಕರಿಗೆ ನಮ್ಮ ಶ್ರೀಮಂತ ಸಂಸ್ಕೃತಿ ಹಾಗೂ ಸಂಪ್ರದಾಯದ ಬಗ್ಗೆ ಅರಿವು ಮೂಡಿಸಲು ಕೇಂದ್ರ ಸರ್ಕಾರ ಅಪಾರ ಪ್ರಯತ್ನ ಮಾಡುತ್ತಿದೆ ಎಂದು ಜಾವಡೇಕರ್ ಹೇಳಿದ್ದಾರೆ.

    Published by:Harshith AS
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು