Prophet Comments Row: ಹಿಂಸಾರೂಪ ಪಡೆದ ನೂಪುರ್ ಶರ್ಮಾ ವಿರುದ್ಧದ ಪ್ರತಿಭಟನೆಗಳು; ಇಬ್ಬರ ಸಾವು

ರಾಂಚಿಯಲ್ಲಿ ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಪ್ರಾಣ ಬಿಟ್ಟಿದ್ದಾರೆ.

ಪ್ರತಿಭಟನೆಗಳು

ಪ್ರತಿಭಟನೆಗಳು

  • Share this:
ರಾಂಚಿ: ಅಮಾನತುಗೊಂಡಿರುವ ಬಿಜೆಪಿ(BJP) ನಾಯಕಿ ನೂಪುರ್ ಶರ್ಮಾ (Nupur Sharma) ಅವರು ಪ್ರವಾದಿ ಮೊಹಮ್ಮದ್ (Prophet Muhammad) ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ವಿರೋಧಿಸಿ ದೇಶದ ಹಲವೆಡೆ ನಡೆಯುತ್ತಿರುವ ಪ್ರತಿಭಟನೆಗಳು (Protests in India) ಹಿಂಸಾರೂಪ ಪಡೆದುಕೊಂಡಿದೆ. ರಾಂಚಿಯಲ್ಲಿ ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಪ್ರಾಣ ಬಿಟ್ಟಿದ್ದಾರೆ ಎಂದು ರಾಜೇಂದ್ರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಅಧಿಕಾರಿಗಳು ದೃಢಪಡಿಸಿದರು. ಗಾಯಗೊಂಡ 22 ಮಂದಿಯಲ್ಲಿ 10 ಮಂದಿ ಪೊಲೀಸರು ಮತ್ತು ಇತರರು ಪ್ರತಿಭಟನಾಕಾರರು ಇದ್ದಾರೆ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.

ನೂಪುರ್ ಶರ್ಮಾ ಬಂಧನಕ್ಕೆ ಒತ್ತಾಯ

ನಿನ್ನೆ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ ನಂತರ ಜಾರ್ಖಂಡ್ ರಾಜಧಾನಿಯ ಹಲವಾರು ಭಾಗಗಳಲ್ಲಿ ಕರ್ಫ್ಯೂ ವಿಧಿಸಲಾಯಿತು. ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಅಕ್ಷೇಪಾರ್ಹವಾಗಿ ಹೇಳಿಕೆ ನೀಡಿದ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಕಲ್ಲು ತೂರಾಟ ಆರಂಭಿಸಿದ ಗುಂಪನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಲಾಠಿ ಚಾರ್ಜ್ ನಡೆಸಿದರು. ರಾಂಚಿಯ ಮುಖ್ಯ ರಸ್ತೆಯಲ್ಲಿ ಜಮಾಯಿಸಿದ ದೊಡ್ಡ ಜನಸಮೂಹವು ನೂಪುರ್ ಶರ್ಮಾ ಮತ್ತು ದೆಹಲಿ ಬಿಜೆಪಿಯ ಮಾಧ್ಯಮ ಘಟಕದ ಮಾಜಿ ಮುಖ್ಯಸ್ಥ ನವೀನ್ ಜಿಂದಾಲ್ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ನಗರದಲ್ಲಿ ಹಲವು ಅಂಗಡಿಗಳು ಮುಚ್ಚಿದ್ದವು.

ಇದನ್ನೂ ಓದಿ: Accident: ವಾಹನ ಕೆರೆಗೆ ಉರುಳಿಬಿದ್ದು 8 ಜನ ಸಾವು, ಇಬ್ಬರು ಪಾರು

ಇಂಟರ್ನೆಟ್ ಸಂಪರ್ಕ ಕಟ್​​

ಜಾರ್ಖಂಡ್ ರಾಜಧಾನಿಯಲ್ಲಿ ನಡೆದ ಹಿಂಸಾಚಾರ ಒಂದೇ ದಿನದಲ್ಲಿ ಭುಗಿಲೆದ್ದಿದ್ದು, ಕನಿಷ್ಠ ಒಂಬತ್ತು ರಾಜ್ಯಗಳ ಹಲವಾರು ನಗರಗಳು ಬಿಜೆಪಿ ನಾಯಕರ ಹೇಳಿಕೆಗೆ ಭಾರಿ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದ್ದವು. ಗುಂಡೇಟಿನಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ನಗರ ಪೊಲೀಸ್ ಮುಖ್ಯಸ್ಥ ಅಂಶುಮನ್ ಕುಮಾರ್ ಖಚಿತಪಡಿಸಿದ್ದಾರೆ. ಎಂಟು ಗಲಭೆಕೋರರು ಮತ್ತು ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಅವರನ್ನು ರಿಮ್ಸ್ ಮತ್ತು ಇತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾವು ಮೊದಲು ಹಿಂಸಾಚಾರದಲ್ಲಿ ತೊಡಗಿರುವವರನ್ನು ಗುರುತಿಸಿ, ಅವರನ್ನು ಪ್ರಶ್ನಿಸಿ ನಂತರ ಅವರನ್ನು ಬಂಧಿಸುತ್ತೇವೆ ಎಂದು ಅವರು ಹೇಳಿದರು. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಗಲಭೆ ಪೀಡಿತ ಪ್ರದೇಶಗಳಲ್ಲಿ ನಿರ್ಬಂಧಗಳು ಜಾರಿಯಲ್ಲಿವೆ ಎಂದು ಅವರು ಹೇಳಿದರು. ಈ ಪ್ರದೇಶದಲ್ಲಿ ನಾಳೆಯವರೆಗೆ ಇಂಟರ್ನೆಟ್ ಸಂಪರ್ಕವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಶಾಂತಿ ಕಾಪಾಡುವಂತೆ ಸಿಎಂ ಮನವಿ

ಶಾಂತಿ ಕಾಪಾಡುವಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮನವಿ ಮಾಡಿದ್ದಾರೆ. "ಈ ಆತಂಕಕಾರಿ (ಪ್ರತಿಭಟನೆ) ಘಟನೆಯ ಬಗ್ಗೆ ನನಗೆ ಇದ್ದಕ್ಕಿದ್ದಂತೆ ಮಾಹಿತಿ ಸಿಕ್ಕಿತು... ಜಾರ್ಖಂಡ್‌ನ ಜನರು ಯಾವಾಗಲೂ ಅತ್ಯಂತ ಸೂಕ್ಷ್ಮ ಮತ್ತು ಸಹಿಷ್ಣುರು... ಗಾಬರಿಪಡುವ ಅಗತ್ಯವಿಲ್ಲ. ಸಾಮರಸ್ಯವನ್ನು ಕಾಪಾಡಿಕೊಳ್ಳಲು ಮತ್ತು ಗಲಭೆಗೆ ಕಾರಣವಾಗುವ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಇಲ್ಲದಿದ್ದರೆ ಅಪರಾಧಗಳು ಇನ್ನಷ್ಟು ಹೆಚ್ಚಾಗುತ್ತವೆ, ”ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

ಅಂತರ ಕಾಯ್ದುಕೊಂಡ ಬಿಜೆಪಿ

ನೂಪುರ್ ಶರ್ಮಾ ನೀಡಿರುವ ವಿವಾದಾತ್ಮಕ ಹೇಳಿಕೆಗಳಿಂದ ಭಾರತೀಯ ಜನತಾ ಪಕ್ಷ (BJP) ಅಂತರ ಕಾಯ್ದುಕೊಂಡಿದೆ. ಯಾವುದೇ ಪಂಗಡ ಅಥವಾ ಧರ್ಮವನ್ನು ಅವಮಾನಿಸುವ ಯಾವುದೇ ಸಿದ್ಧಾಂತವನ್ನು ಪಕ್ಷವು ಬಲವಾಗಿ ವಿರೋಧಿಸುತ್ತದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಪ್ರಭಾರ ಮುಖ್ಯ ಕಾರ್ಯದರ್ಶಿ ಅರುಣ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
Published by:Kavya V
First published: