ನಿವೃತ್ತಿ ವಯಸ್ಸನ್ನು 62 ರಿಂದ 64 ಕ್ಕೆ ಹೆಚ್ಚಿಸುವ ಫ್ರೆಂಚ್ ಸರ್ಕಾರದ ಪ್ರಸ್ತಾಪದ ವಿರುದ್ಧ ಅಲ್ಲಿನ ಜನರು ತಿರುಗಿ ಬಿದ್ದಿದ್ದಾರೆ. ಅನೇಕ ತಿಂಗಳಿಂದ ನಡೆಯುತ್ತಿರುವ ಪ್ರತಿಭಟನೆ, ಗಲಾಟೆ, ಮುತ್ತಿಗೆ ಇನ್ನೂ ಸಹ ನಿಂತಿಲ್ಲ. ಮೊನ್ನೆ ವೈರಲ್ ಆದ ಕೆಲ ಫೋಟೋದಲ್ಲಿ ಮುತ್ತಿಗೆಕಾರರು LVMH ನ ಪ್ರಧಾನ ಕಛೇರಿಗೆ ಮುತ್ತಿಗೆ ಹಾಕಿರುವುದು ಕಂಡು ಬಂದಿದೆ.
ನಿವೃತ್ತಿ ಮತ್ತು ಪಿಂಚಣಿ ಯೋಜನೆಗೆ ವ್ಯಾಪಕ ವಿರೋಧ
ಫ್ರಾನ್ಸ್‌ನಾದ್ಯಂತ ನೂತನ ನಿವೃತ್ತಿ ಮತ್ತು ಪಿಂಚಣಿ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರನ್ ಅವರು ನಿವೃತ್ತಿ ವಯಸ್ಸನ್ನು 62 ರಿಂದ 64 ಕ್ಕೆ ಹೆಚ್ಚಿಸುವ ಯೋಜನೆಯನ್ನು ವಿರೋಧಿಸಿ ಕಾರ್ಮಿಕರು ರೋಡಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ದೇಶದಲ್ಲಿ ಪ್ರತಿಭಟನೆ ದಿನದಿಂದ ದಿನಕ್ಕೆ ಹಿಂಸಾರೂಪ ಪಡೆದುಕೊಳ್ಳುತ್ತಿದೆ. ಸರ್ಕಾರವು ಈಗ ಜಾರಿಗೆ ತಂದಿರುವ ನೂತನ ಪಿಂಚಣಿ ಯೋಜನೆಯು ಕಾರ್ಮಿಕ ವಿರೋಧಿಯಾಗಿದೆ ಮತ್ತು ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಹಾಳುಗಡೆಸುತ್ತಿದೆ ಎಂದು ಪ್ರತಿಭಟನಕಾರರು ಹೊಸ ನಿಯಮದ ವಿರುದ್ಧ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Fumio Kishida: ಜಪಾನ್ ಪ್ರಧಾನಿ ಭಾಷಣದ ವೇಳೆ ಬಾಂಬ್ ಸ್ಫೋಟ! ತಪ್ಪಿದ ಭಾರೀ ದುರಂತ
ಬರ್ನಾರ್ಡ್ ಅರ್ನಾಲ್ಟ್ ಕಚೇರಿಗೆ ಮುತ್ತಿಗೆ
ಇತ್ತೀಚೆಗೆ LVMH ನ ಪ್ರಧಾನ ಕಛೇರಿಯನ್ನು ಮುತ್ತಿಗೆ ಹಾಕಲಾಗಿತ್ತು. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, LVMH ಸಿಇಒ ಬರ್ನಾರ್ಡ್ ಅರ್ನಾಲ್ಟ್ ಅವರ ಕಚೇರಿಗಳು ಇಲ್ಲಿದ್ದು, ಪ್ರತಿಭಟನಾಕಾರರು ವ್ಯಕ್ತಿ, ಕಚೇರಿ ಇವುಗಳನ್ನು ಲೆಕ್ಕಿಸದೇ ದೇಶದಲ್ಲಿ ದಾಂಧಲೆ ಎಬ್ಬಿಸಿದ್ದಾರೆ.
LVMH, ವಿಶ್ವದ ಅತಿದೊಡ್ಡ ಐಷಾರಾಮಿ ಗುಂಪು ಮತ್ತು ಲೂಯಿಸ್ ವಿಟಾನ್ ಮತ್ತು ಮೊಯೆಟ್‌ಗೆ ನೆಲೆಯಾಗಿದೆ, ಅರ್ನಾಲ್ಟ್ ಪ್ರಸ್ತುತ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, ಇತ್ತೀಚೆಗೆ ಅವರ ನಿವ್ವಳ ಮೌಲ್ಯವು $200 ಬಿಲಿಯನ್ ದಾಟಿದೆ.
ಧ್ವಜ ಮತ್ತು ಬೆಂಕಿ ಪಂಜು ಹಿಡಿದು ಪ್ರತಿಭಟನೆ
LVMH ಸಿಇಒ ಬರ್ನಾರ್ಡ್ ಅರ್ನಾಲ್ಟ್ ಅವರ ಕಚೇರಿಗೆ ಮುತ್ತಿಗೆ ಹಾಕಿರುವ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರತಿಭಟನಾಕಾರರು ಧ್ವಜಗಳು ಮತ್ತು ಬೆಂಕಿ ಪಂಜು ಹಿಡಿದು ಹೋಗುತ್ತಿರುವುದನ್ನು ಕಾಣಬಹುದಾಗಿದೆ.
ಈ ಬಗ್ಗೆ ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದ್ದು, "ನಾವು ಅಲ್ಲಿ ಹೆಚ್ಚು ಹೊತ್ತು ಇರಲಿಲ್ಲ ಮರಳಿ ಬಂದೆವು" ಎಂದು ಪ್ರತಿಭಟನಾಕಾರರು ಪ್ರತಿಕ್ರಿಯಿಸಿರುವುದಾಗಿ ವರದಿಯಾಗಿದೆ. ಮುಷ್ಕರ ನಿರತ ರೈಲ್ವೆ ಕಾರ್ಮಿಕರು ಫ್ರಾನ್ಸ್‌ನ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಫ್ರೆಂಚ್ ಸರ್ಕಾರದ ಪ್ರಸ್ತಾವನೆಯನ್ನು ಪ್ರತಿಭಟಿಸಲು LVMH ನ ಪ್ರಧಾನ ಕಚೇರಿಯನ್ನು ಪ್ರವೇಶಿಸಿದರು.
ಫ್ರಾನ್ಸ್‌ನ ಉದ್ದೇಶಿತ ನಿವೃತ್ತಿ ವಯಸ್ಸಿನ ಹೆಚ್ಚಳವನ್ನು ಪ್ರತಿಭಟಿಸುತ್ತಿರುವ ಜನರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಬರ್ನಾರ್ಡ್ ಅರ್ನಾಲ್ಟ್ ಅವರ ಪ್ರಧಾನ ಕಚೇರಿಗೂ ನುಗ್ಗಿದ್ದಾರೆ ಎಂದು ಫೋಟೋಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿತ್ತು.
ಇದನ್ನೂ ಓದಿ: PM Modi-Rishi Sunak: ರಿಷಿ ಸುನಕ್ ಜೊತೆ ಮಾತನಾಡಿದ ನರೇಂದ್ರ ಮೋದಿ; ಭಾರತ ವಿರೋಧಿ ಕೃತ್ಯಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಏನಿದು ವಿವಾದಾತ್ಮಕ ನಿವೃತ್ತಿ ಮತ್ತು ಪಿಂಚಣಿ ಯೋಜನೆ?
2030ರ ವೇಳೆಗೆ ಫ್ರಾನ್ಸ್‌ನ ನಿವೃತ್ತಿ ವಯಸ್ಸನ್ನು 62 ರಿಂದ 64 ಕ್ಕೆ ಏರಿಸಲು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಪ್ರಸ್ತಾಪಿಸಿದರು. ಭವಿಷ್ಯದ ಪೀಳಿಗೆಯ ನಿವೃತ್ತರನ್ನು ಬೆಂಬಲಿಸಲು ಫ್ರಾನ್ಸ್‌ನ ಪಿಂಚಣಿ ವ್ಯವಸ್ಥೆಗೆ ಸುಧಾರಣೆಯ ಅಗತ್ಯವಿದೆ ಎಂದು ಹೇಳಿದ ಅವರು ಮಾರ್ಚ್‌ನಲ್ಲಿ, ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಿದರು.
ಈ ಯೋಜನೆ ಮೂಲಕ ಎಲ್ಲಾ ಸ್ವರೂಪದ ಹುದ್ದೆ ಮತ್ತು ಕ್ಷೇತ್ರಗಳಲ್ಲಿ ಕೆಲಸ ಮಾಡುವ ನೌಕರರು 64 ವಯಸ್ಸಿನ ನಂತರ ಪಿಂಚಣಿಗೆ ಅರ್ಹತೆ ಪಡೆಯುತ್ತಾರೆ. ಫ್ರಾನ್ಸ್ ಸುರಂಗ ರೈಲು ಸಿಬ್ಬಂದಿಯ ನಿವೃತ್ತಿಯ ವಯಸ್ಸು ಕಡಿಮೆ ಇತ್ತು. ಯಾವಾಗಲೂ ಸುರಂಗದಲ್ಲಿ ಕೆಲಸ ಮಾಡುವ ಕಾರಣ, ಈ ಸಿಬ್ಬಂದಿಗೆ ಅತ್ಯಂತ ಕಡಿಮೆ ಅವಧಿಯ ಸೇವಾವಧಿ ನಿಗದಿ ಮಾಡಲಾಗಿತ್ತು.
ಇದು ಉದ್ಯೋಗಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸರ್ಕಾರ ಸೇವಾವಧಿಯನ್ನು ಕಡಿಮೆ ನಿಗದಿ ಮಾಡಲಾಗಿತ್ತು. ಆದರೆ ನೂತನ ಯೋಜನೆಯಲ್ಲಿ ಇವರ ನಿವೃತ್ತಿ ವಯಸ್ಸು ಕೂಡ ಹೆಚ್ಚಾಗಿದ್ದು, ಉತ್ತಮ ಮಟ್ಟದ ಪಿಂಚಣಿ ಪಡೆಯಬೇಕೆಂದರೆ ಈ ಸಿಬ್ಬಂದಿ ಕೂಡ ನೂತನ ಯೋಜನೆ ಅಡಿಯಲ್ಲಿ 64 ವರ್ಷದವರೆಗೂ ಕೆಲಸ ಮಾಡಬೇಕು. ಸರ್ಕಾರದ ಈ ಕ್ರಮವನ್ನೇ ವಿರೋಧಿಸಿ ಈಗ ದೇಶದಲ್ಲಿ ಪ್ರತಿಭಟನೆಗಳು ಹೆಚ್ಚಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ