ನವದೆಹಲಿ (ಮೇ 28 ಶುಕ್ರವಾರ): ನಿರೀಕ್ಷಣಾ ಜಾಮೀನು ನೀಡಲು ಯಾವುದೇ ಆಧಾರಗಳು ಇಲ್ಲದಂತಹ ಸಂದರ್ಭದಲ್ಲಿ ಆರೋಪಿಗೆ ಬಂಧನದಿಂದ ರಕ್ಷಣೆಯನ್ನು ನಿರ್ದಿಷ್ಟ ಅವಧಿಯವರೆಗೆ ನೀಡಲು ನ್ಯಾಯಾಲಯಗಳು ಮುಂದಾಗಬಾರದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ. ನಿರೀಕ್ಷಣಾ ಜಾಮೀನು ನೀಡುವಿಕೆಯ ವಿಚಾರದಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 438 ಅನ್ನು ನ್ಯಾಯಾಲಯಗಳು ಉದಾರವಾಗಿ ಪರಿಗಣಿಸಬೇಕು ಎನ್ನುವುದು ನಿಜವಾದರೂ ಹೈಕೋರ್ಟ್ ಅಥವಾ ಸೆಷನ್ಸ್ ನ್ಯಾಯಾಲಯಗಳು ಮೇಲಿನ ಎಚ್ಚರಿಕೆಯನ್ನು ಹೊಂದಿರಬೇಕು ಎಂದು ಸುಪ್ರೀಂಕೋರ್ಟ್ ತಿಳಿ ಹೇಳಿದೆ.
ಕೆಲ ನ್ಯಾಯಾಲಯಗಳು ಆರೋಪಿಗಳಿಗೆ ಬಂಧನದಿಂದ ರಕ್ಷಣೆಯನ್ನು 90 ದಿನಗಳ ಸುದೀರ್ಘ ಅವಧಿಯವರೆಗೂ ನೀಡಿರುವುದನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಗಮನಿಸಿತು. ಅಂತಹ ಅಧಿಕಾರವನ್ನು ನ್ಯಾಯಾಲಯಗಳು ವಿಶೇಷ ಸಂದರ್ಭದಲ್ಲಿ ಮಾತ್ರವೇ ಬಳಸಬೇಕು ಎಂದು ಪೀಠ ಹೇಳಿತು.
“ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಲು ನ್ಯಾಯಾಲಯವು ಒಲವು ತೋರಿಸದ ಪಕ್ಷದಲ್ಲಿಯೂ ಸಹ ಕೆಲವೊಂದು ವಿಶೇಷ ಪರಿಸ್ಥಿತಿಗಳಿಂದಾಗಿ ಅವರು ವಿಚಾರಣಾ ನ್ಯಾಯಾಲಯದಲ್ಲಿ ಶರಣಾಗುವವರೆಗೆ ಆರೋಪಿಗೆ ಕೆಲ ಕಾಲದವರೆಗೆ ಹೈಕೋರ್ಟ್ ರಕ್ಷಣೆ ನೀಡಲು ಮುಂದಾಗಬಹುದು. ಒಂದು ವೇಳೆ ಆರೋಪಿಯೇ ಕುಟುಂಬದ ಏಕಮಾತ್ರ ಆಧಾರವಾಗಿದ್ದರೆ ಅಂತಹ ಸಂದರ್ಭದಲ್ಲಿ ಬೇರೆ ವ್ಯವಸ್ಥೆಯನ್ನು ಮಾಡುವವರೆಗೆ ರಕ್ಷಣೆ ನಿಡುವಂತೆ ಅರ್ಜಿದಾರರು ಕೋರಬಹುದು,” ಎಂದು ನ್ಯಾಯಾಲಯವು ಅಂತಹ ಆದೇಶಗಳಿಗೆ ಕಾರಣವಾಗುವ ಪ್ರಕರಣಗಳನ್ನು ವಿಶ್ಲೇಷಿಸಿತು. ಮುಂದುವರೆದು, ಈ ಬಗೆಯ ವಿವೇಚನಾಯುತ ಅಧಿಕಾರವನ್ನು ನ್ಯಾಯಾಲಯಗಳು ಅಸಮಂಜಸವಾಗಿ ಬಳಸಬಾರದು ಎಂದು ನ್ಯಾಯಾಲಯವು ಒತ್ತಿ ಹೇಳಿತು.
ಇದನ್ನು ಓದಿ: Yaas Cyclone: ಪರಿಶೀಲನಾ ಸಭೆಗೆ 30 ನಿಮಿಷ ತಡವಾಗಿ ಬಂದು ಪ್ರಧಾನಿಗೆ ವರದಿ ನೀಡಿ ಮತ್ತೆ ತೆರಳಿದ ಮಮತಾ ಬ್ಯಾನರ್ಜಿ!
ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ, ನ್ಯಾಯಾಲಯಗಳು ಆರೋಪಿಗೆ ರಕ್ಷಣೆಯನ್ನು ನೀಡುವ ಸಂದರ್ಭದಲ್ಲಿ ತನಿಖಾ ಸಂಸ್ಥೆಯ ಹಿತಾಸಕ್ತಿಗಳನ್ನೂ ಸಹ ಗಮನದಲ್ಲಿರಿಸಿಕೊಳ್ಳಬೇಕು. ಇದರ ಜೊತೆಗೆ ಅರ್ಜಿದಾರರ ಹಿತಾಸಕ್ತಿ ಹಾಗೂ ಸಮಾಜದ ಒಳಿತನ್ನು ಪರಿಗಣಿಸಿ ಸಮತೋಲಿತವಾಗಿ ಆದೇಶ ಹೊರಡಿಸಬೇಕು ಎಂದು ತಿಳಿ ಹೇಳಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ