ದೆಹಲಿ: ಲೈಂಗಿಕ ಕಾರ್ಯಕರ್ತೆಯರನ್ನು (Prostitution Workers) ಘನತೆಯಿಂದ ನಡೆಸಿಕೊಳ್ಳಬೇಕು. ಮೌಖಿಕವಾಗಿ ಅಥವಾ ದೈಹಿಕವಾಗಿ (Orally or Physically) ಅವರನ್ನು ನಿಂದಿಸಬಾರದು (Not to be Blamed) ಎಂದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸರಿಗೆ ಸುಪ್ರೀಂ ಕೋರ್ಟ್ (Supreme Court) ಮಹತ್ವದ ಸೂಚನೆಯನ್ನು ನೀಡಿದೆ. ಈ ಮೂಲಕ ಲೈಂಗಿಕ ಕಾರ್ಯಕರ್ತರು ಮತ್ತು ಅವರ ಮಕ್ಕಳು (Children) ಕೂಡ ಇತರ ನಾಗರಿಕರಂತೆ ದೇಶದ ಸಾಂವಿಧಾನಿಕ ಹಕ್ಕುಗಳನ್ನು (Constitutional Right) ಅನುಭವಿಸಲು ಅರ್ಹರು (Qualified) ಎಂದು ಸುಪ್ರೀಂ ಹೇಳಿದೆ. ಈ ಬಗ್ಗೆ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ್ ರಾವ್, ಬಿಆರ್ ಗವಾಯಿ ಮತ್ತು ಎಎಸ್ ಬೋಪಣ್ಣ ಅವರ ಪೀಠ ಹಲವಾರು ನಿರ್ದೇಶನಗಳನ್ನು ಹೊರಡಿಸಿದೆ.
ಈ ದೇಶದ ಎಲ್ಲ ವ್ಯಕ್ತಿಗಳಿಗೆ ನೀಡಲಾದ ಸಾಂವಿಧಾನಿಕ ರಕ್ಷಣೆಯನ್ನು ಅನೈತಿಕ ಸಂಚಾರ (ತಡೆಗಟ್ಟುವಿಕೆ) ಕಾಯಿದೆ 1956ರ ಅಡಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ನೆನಪಲ್ಲಿಟ್ಟುಕೊಳ್ಳಬೇಕು ಎಂದು ತ್ರಿಸದಸ್ಯ ಪೀಠ ಹೇಳಿದೆ.
ಲೈಂಗಿಕ ಕಾರ್ಯಕರ್ತರ ಹಕ್ಕುಗಳ ಬಗ್ಗೆ ಸಂವೇದನಾಶೀಲವಾಗಿರಬೇಕು
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯಾವುದೇ ಲೈಂಗಿಕ ಕಾರ್ಯಕರ್ತೆಗೆ ಕಾನೂನಿನ ಪ್ರಕಾರ ತಕ್ಷಣದ ವೈದ್ಯಕೀಯ ನೆರವು ಸೇರಿ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ. “ಪೊಲೀಸರು ಸಾಮಾನ್ಯವಾಗಿ ಲೈಂಗಿಕ ಕಾರ್ಯಕರ್ತೆಯರನ್ನು ಕ್ರೂರ ಮತ್ತು ಹಿಂಸಾತ್ಮಕವಾಗಿ ನಡೆಸಿಕೊಳ್ಳುತ್ತಾರೆ ಎಂಬುದನ್ನು ಗಮನಿಸಲಾಗಿದೆ. ಇದು ಅವರ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ. ಪೊಲೀಸ್ ಮತ್ತು ಇತರೆ ಕಾನೂನು ಜಾರಿ ಸಂಸ್ಥೆಗಳು ಲೈಂಗಿಕ ಕಾರ್ಯಕರ್ತರ ಹಕ್ಕುಗಳ ಬಗ್ಗೆ ಸಂವೇದನಾಶೀಲವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮೌಖಿಕ ಮತ್ತು ದೈಹಿಕವಾಗಿ ನಿಂದನೆ ಮಾಡುವಂತಿಲ್ಲ
ಅದಲ್ಲದೇ, ಎಲ್ಲ ನಾಗರಿಕರಿಗೆ ಸಂವಿಧಾನದಲ್ಲಿ ನೀಡಿದ ಎಲ್ಲ ಮೂಲಭೂತ ಮಾನವ ಹಕ್ಕುಗಳು ಮತ್ತು ಇತರ ಹಕ್ಕುಗಳನ್ನು ಲೈಂಗಿಕ ಕಾರ್ಯಕರ್ತೆಯರು ಕೂಡ ಅನುಭವಿಸಲು ಅನುವು ಮಾಡಿಕೊಡಬೇಕು. ಪೊಲೀಸರು ಎಲ್ಲ ಲೈಂಗಿಕ ಕಾರ್ಯಕರ್ತೆಯರನ್ನು ಘನತೆಯಿಂದ ನಡೆಸಿಕೊಳ್ಳಬೇಕು. ಹಾಗೂ ಅವರನ್ನು ಯಾವುದೇ ರೀತಿ ಮೌಖಿಕ ಮತ್ತು ದೈಹಿಕವಾಗಿ ನಿಂದನೆ ಮಾಡಬಾರದು. ಲೈಂಗಿಕ ಕಾರ್ಯಕರ್ತೆಯರಿಗೆ ಹಿಂಸೆ ನೀಡಬಾರದು, ಯಾವುದೇ ಲೈಂಗಿಕ ಚಟುವಟಿಕೆಗೆ ಅವರನ್ನು ಒತ್ತಾಯಿಸಬಾರದು ಎಂದು ಪೀಠ ಹೇಳಿದೆ.
ಕಾರ್ಯಕರ್ತೆಯರ ಗುರುತನ್ನು ಬಹಿರಂಗಪಡಿಸದಂತೆ ಮಾಧ್ಯಮಗಳಿಗೆ ಮಾರ್ಗಸೂಚಿ ಜಾರಿ
ದಾಳಿ ಅಥವಾ ರಕ್ಷಣಾ ಕಾರ್ಯಾಚರಣೆಗಳ ಸಂದರ್ಭದಲ್ಲಿ ಲೈಂಗಿಕ ಕಾರ್ಯಕರ್ತೆಯರ ಗುರುತನ್ನು ಬಹಿರಂಗಪಡಿಸದಂತೆ ಮಾಧ್ಯಮಗಳಿಗೆ ಸೂಕ್ತ ಮಾರ್ಗಸೂಚಿಯನ್ನು ಜಾರಿ ಮಾಡುವಂತೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ಸೂಚನೆ ನೀಡಿದೆ. ಅದು ಸಂತ್ರಸ್ತರಾಗಿರಲಿ ಅಥವಾ ಆರೋಪಿಯಾಗಿರಲಿ ಲೈಂಗಿಕ ಕಾರ್ಯಕರ್ತೆಯರ ಗುರುತನ್ನು, ಫೋಟೋಗಳನ್ನು ಯಾವುದೇ ಕಾರಣಕ್ಕೂ ಪ್ರಸಾರ ಮಾಡಬಾರದು ಎಂದು ಸುಪ್ರೀಂ ಕಟ್ಟಪ್ಪಣೆ ನೀಡಿದೆ.
ಇದನ್ನೂ ಓದಿ: Leopard Burnt Alive: ಚಿರತೆಯನ್ನು ಜೀವಂತ ಸುಟ್ಟ ಮಂದಿ! 150 ಜನರ ವಿರುದ್ಧ FIR
ಇನ್ನು, ಹೊಸದಾಗಿ ಪರಿಚಯಿಸಲಾದ ಐಪಿಸಿ ಸೆಕ್ಷನ್ 354ಸಿ ಪ್ರಕಾರ ವಯೋರಿಸಂ ಕ್ರಿಮಿನಲ್ ಅಪರಾಧವಾಗುತ್ತದೆ. ಈ ಸೆಕ್ಷನ್ ಅನ್ನು ವಿದ್ಯುನ್ಮಾನ ಮಾಧ್ಯಮಗಳ ವಿರುದ್ಧ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿರುವ ಸುಪ್ರೀಂ ಕೋರ್ಟ್, ರಕ್ಷಣಾ ಕಾರ್ಯಾಚರಣೆಯನ್ನು ಸೆರೆಹಿಡಿಯುವ ನೆಪದಲ್ಲಿ ಲೈಂಗಿಕ ಕಾರ್ಯಕರ್ತೆಯರ ಫೋಟೋಗಳನ್ನು ಪ್ರಸಾರ ಮಾಡುವುದನ್ನು ನಿಷೇಧಿಸಬೇಕು ಎಂದು ತಿಳಿಸಿದೆ.
ಬಂಧನವಾದ ಲೈಂಗಿಕ ಕಾರ್ಯಕರ್ತೆಯರ ಬಿಡುಗಡೆ
ತಮ್ಮ ಇಚ್ಛೆಗೆ ವಿರುದ್ಧವಾಗಿ ಬಂಧನವಾದ ಲೈಂಗಿಕ ಕಾರ್ಯಕರ್ತೆಯರ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿ, ಅವರನ್ನು ಕಾಲಮಿತಿಯಲ್ಲಿ ಬಿಡುಗಡೆ ಮಾಡಿ ಎಂದು ರಾಜ್ಯ ಸರ್ಕಾರಗಳಿಗೆ ತ್ರಿಸದಸ್ಯ ಪೀಠ ನಿರ್ದೇಶನ ನೀಡಿದೆ. ಲೈಂಗಿಕ ಕಾರ್ಯಕರ್ತರು ತಮ್ಮ ಆರೋಗ್ಯ ಮತ್ತು ಸುರಕ್ಷತೆಗಾಗಿ ಬಳಸಿಕೊಳ್ಳುವ ಕ್ರಮಗಳನ್ನು (ಕಾಂಡೋಮ್ಗಳ ಬಳಕೆ, ಇತ್ಯಾದಿ.) ಅಪರಾಧಗಳೆಂದು ಪರಿಗಣಿಸಬಾರದು ಅಥವಾ ಅವುಗಳನ್ನು ಸಾಕ್ಷಿಗಳನ್ನಾಗಿಯೂ ಪರಿಗಣಿಸಬಾರದು ಎಂದು ಪೊಲೀಸರಿಗೆ ಸೂಚಿಸಿದೆ.
ಇದನ್ನೂ ಓದಿ: Untouchability: 'ಹೇ ನನ್ನ ಮುಟ್ಟಬೇಡ, ನೀನು ಅಸ್ಪೃಷ್ಯ'! ಆಶಿರ್ವಾದ ಪಡೆಯೋಕೆ ಬಂದ್ರೆ ಹೀಗಾ ಹೇಳೋದು?
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ, ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ಮೂಲಕ ಲೈಂಗಿಕ ಕಾರ್ಯಕರ್ತೆಯರಿಗೆ ಕಾರ್ಯಗಾರಗಳನ್ನು ನಡೆಸಬೇಕು. ಈ ಮೂಲಕ ಲೈಂಗಿಕ ಕಾರ್ಯದ ಕಾನೂನು ಬದ್ಧತೆ, ಪೊಲೀಸರ ಹಕ್ಕುಗಳು ಮತ್ತು ಆಕ್ಷೇಪಗಳು ಹಾಗೂ ಕಾನೂನಿನಡಿಯಲ್ಲಿ ಯಾವುದನ್ನು ಅನುಮತಿಸಲಾಗಿದೆ, ನಿಷೇಧಿಸಲಾಗಿದೆ ಎಂಬುದನ್ನು ತಿಳಿಸಬೇಕು. ಅದಲ್ಲದೇ ಲೈಂಗಿಕ ಕಾರ್ಯಕರ್ತೆಯರು ತಮ್ಮ ಹಕ್ಕುಗಳು ಉಲ್ಲಂಘನೆಯಾದಲ್ಲಿ, ಅಥವಾ ಪೊಲೀಸರಿಂದ ಅನಗತ್ಯ ಕಿರುಕುಳ ಎದುರಿಸಿದಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ಯಾವ ರೀತಿ ಸಂಪರ್ಕಿಸಬಹುದನ್ನು ಸಹ ಅವರಿಗೆ ತಿಳಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ