ಅಮೆರಿಕಾದ ಮ್ಯಾಸಚೂಸೆಟ್ಸ್ ರಾಜ್ಯದಲ್ಲಿ ಮಹತ್ವದ ನೀತಿಯನ್ನು ಜಾರಿಗೆ ತರಲು ಅಲ್ಲಿನ ಸರ್ಕಾರ ಚಿಂತಿಸಿದೆ. ಅಂಗಾಂಗ ದಾನಗಳ (Organ Donation) ಪ್ರಾಮುಖ್ಯತೆ ತಿಳಿಸುವ ನಿಟ್ಟಿನಲ್ಲಿ ಹೊಸದಾದ ಒಂದು ನೀತಿಯನ್ನು ಜಾರಿಗೆ ತರುವ ಪ್ರಸ್ತಾಪವನ್ನು ಅಲ್ಲಿನ ಇಬ್ಬರು ಶಾಸಕರು ಮಂಡಿಸಿದ್ದಾರೆ. ಮ್ಯಾಸಚೂಸೆಟ್ಸ್‌ನಲ್ಲಿ (Massachusetts) ಕೈದಿಗಳು ತಮ್ಮ ಅಂಗಗಳನ್ನು ಮತ್ತು ಮೂಳೆ ಮಜ್ಜೆಯನ್ನು ದಾನ ಮಾಡಿದ್ದಲ್ಲಿ ಜೈಲು (Prison) ಶಿಕ್ಷೆಯನ್ನು ಕಡಿಮೆ ಮಾಡುವ ಪ್ರಸ್ತಾಪವನ್ನು ಸರ್ಕಾರದ ಮುಂದೆ ಇಡಲಾಗಿದೆ.
ಅಂಗಾಗ ದಾನ ಮಾಡಿದ ಕೈದಿಗಳಿಗೆ ಜೈಲು ಶಿಕ್ಷೆ ಕಡಿತ:
ಹೌದು, ಕೈದಿಗಳು ಸ್ವಯಃಪ್ರೇರಿತವಾಗಿ ಅಂಗಾಂಗ ದಾನಕ್ಕೆ ಮುಂದಾದಲ್ಲಿ ಅವರಿಗೆ ವಿಧಿಸಲಾದ ಶಿಕ್ಷೆ ಸಮಯವನ್ನು ಕಡಿಮೆ ಮಾಡುವ ಮಸೂದೆಯನ್ನು ಸ್ಪ್ರಿಂಗ್‌ಫೀಲ್ಡ್ ರಾಜ್ಯದ ಪ್ರತಿನಿಧಿ ಕಾರ್ಲೋಸ್ ಗೊನ್ಜಾಲೆಸ್ ಚೆಲ್ಸಿಯಾ ಮತ್ತು ಎವೆರೆಟ್‌ನ ಪ್ರತಿನಿಧಿ ಜುಡಿತ್ ಗಾರ್ಸಿಯಾ ಪ್ರಸ್ತಾಪಿಸಿದ್ದಾರೆ.
ರಾಜ್ಯದ ತಿದ್ದುಪಡಿಗಳ ಇಲಾಖೆಯಲ್ಲಿ ಅಂಗಾಂಗ ಮತ್ತು ದಾನ ಕಾರ್ಯಕ್ರಮವನ್ನು ಸ್ಥಾಪಿಸುವ ಗುರಿಯೊಂದಿಗೆ ಹೊಸ ಮಸೂದೆಯನ್ನು ಇಬ್ಬರು ರಾಜ್ಯ ಶಾಸಕರು ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಇಬ್ಬರು ಶಾಸಕರು ಮಂಡಿಸಿದ ಮಸೂದೆಗೆ ಅಂಗೀಕಾರ ದೊರೆತರೆ ರಾಜ್ಯದ ತಿದ್ದುಪಡಿಗಳ ಇಲಾಖೆಯಲ್ಲಿ ಅಂಗಾಂಗ ಮತ್ತು ದಾನ ಕಾರ್ಯಕ್ರಮವನ್ನು ಸ್ಥಾಪಿಸಲಾಗುವುದು ಎಂದು ಪ್ರಸ್ತಾಪಿಸಿದ್ದಾರೆ.
ಇದನ್ನೂ ಓದಿ: Spying Balloon: ಅಮೆರಿಕಾದಲ್ಲಿ ಹಾರಾಡ್ತಿದೆ ಚೀನಾದ ಬೇಹುಗಾರಿಕಾ ಬಲೂನ್! ಪತ್ತೆ ಹಚ್ಚಿದ ಪೆಂಟಗಾನ್
ಶಾಸಕರು ಮಂಡಿಸಿದ ಹೊಸ ಘೋಷಣೆಯಲ್ಲಿ ಏನಿದೆ?:
ಜಾರಿಗೆ ಬಂದರೆ, ಹೊಸ ನೀತಿಯು 60 ಕ್ಕಿಂತ ಕಡಿಮೆಯಿಲ್ಲದ ಮತ್ತು 365 ದಿನಗಳಿಗಿಂತ ಹೆಚ್ಚಿಲ್ಲದಂತೆ ಅವರ ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡಲು ಸೆರೆವಾಸದಲ್ಲಿರುವ ವ್ಯಕ್ತಿಗಳಿಗೆ ಅವಕಾಶ ನೀಡುತ್ತದೆ. ಅಂದರೆ 60 ಕ್ಕಿಂತ ಹೆಚ್ಚಿನ ಮತ್ತು 365 ದಿನಗಳ ಒಳಗೆ ಅವರು ಮಾಡಿರುವ ಅಂಗಾಂಗ ದಾನದ ಆಧಾರದ ಮೇಲೆ ಶಿಕ್ಷೆ ಸಮಯವನ್ನು ಕಡಿತಗೊಳಿಸಲಾಗುತ್ತದೆ ಎಂದು ವರದಿಗಳು ಹೇಳಿವೆ.
ಐದು ಸದಸ್ಯರನ್ನು ಒಳಗೊಂಡಿರುವ ಸಮಿತಿ ರಚನೆ:
ಜೊತೆಗೆ ಯೋಜನೆಯ ಮೇಲ್ವಿಚಾರಣೆಗೆ ಜವಾಬ್ದಾರರಾಗಿರುವ ಐದು ಸದಸ್ಯರನ್ನು ಒಳಗೊಂಡಿರುವ ಸಮಿತಿಯನ್ನು ಸ್ಥಾಪಿಸಲಾಗುವುದು. ಕಾರ್ಯಕ್ರಮದಲ್ಲಿ ಆಸಕ್ತಿ ಹೊಂದಿರುವ ಜೈಲಿನ ಕೈದಿಗಳಿಗೆ ಅರ್ಹತಾ ಮಾನದಂಡಗಳನ್ನು ಸಮಿತಿಯು ನಿರ್ಧರಿಸುತ್ತದೆ ಎಂದು ಕಾರ್ಯಕ್ರಮದ ರೂಪುರೇಷೆಗಳನ್ನು ಶಾಸಕರು ಮಂಡಿಸಿದ್ದಾರೆ.
US ಫೆಡರಲ್ ಬ್ಯೂರೋ ಆಫ್ ಪ್ರಿಸನ್ಸ್, ಕೈದಿಗಳ ಅಂಗಾಂಗ ದಾನವನ್ನು ಸ್ವೀಕರಿಸುವವರು ಅವರ ಹತ್ತಿರದ ಕುಟುಂಬದ ಸದಸ್ಯರಾಗಿದ್ದರೆ ಮಾತ್ರ ಅನುಮತಿಸುತ್ತದೆ ಎಂದು ಗಾರ್ಡಿಯನ್ ವರದಿ ಹೇಳಿದೆ. ಅನೇಕ ರಾಜ್ಯ ಕಾರಾಗೃಹಗಳು ಅಂಗ ಅಥವಾ ಅಸ್ಥಿಮಜ್ಜೆ ದಾನವನ್ನು ಸುಲಭಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ದಿ ಗಾರ್ಡಿಯನ್ ತನ್ನ ವರದಿಯಲ್ಲಿ ಹೇಳಿದೆ. ಮರಣದಂಡನೆಗೆ ಒಳಗಾದ ಕೈದಿಗಳು ಅಂಗಾಂಗ ದಾನಿಗಳಾಗಿದ್ದರೂ ಸಹ, ಯಾವುದೇ ಯುಎಸ್ ರಾಜ್ಯವು ಅಂಗಾಂಗ ದಾನವನ್ನು ಅನುಮತಿಸುವುದಿಲ್ಲ ಎಂದು ವರದಿಯು ತಿಳಿಸಿದೆ.
ಯುಎಸ್‌ನಲ್ಲಿ ಅಂಗಾಂಗಗಳಿಗೆ ಬೇಡಿಕೆ:
ಯುನೈಟೆಡ್ ನೆಟ್‌ವರ್ಕ್ ಫಾರ್ ಆರ್ಗನ್ ಶೇರಿಂಗ್ (ಯುಎನ್‌ಒಎಸ್) ಪ್ರಕಾರ, ಯುಎಸ್‌ನಲ್ಲಿ ಕನಿಷ್ಠ 104,413 ಜನರಿಗೆ ಅಂಗಾಂಗ ಕಸಿ ಅಗತ್ಯವಿದೆ ಮತ್ತು 58,970 ಜನರು ಅಂಗಾಂಗಗಳನ್ನು ಪಡೆಯಲು ಪ್ರತಿನಿತ್ಯ ಹೆಣಗಾಡುತ್ತಿದ್ದಾರೆ. ಹೀಗಾಗಿ ಅಂಗಾಂಗ ದಾನದ ಮಹತ್ವವನ್ನು ತಿಳಿಸುವ ಸಲುವಾಗಿ ಈ ನೀತಿ ಜಾರಿಗೆ ಸರ್ಕಾರ ಮುಂದಾಗಬೇಕು ಎಂದು ಶಾಸಕರು ಪ್ರತಿಪಾದಿಸಿದ್ದಾರೆ.
ಎವೆರೆಟ್‌ನ ಪ್ರತಿನಿಧಿ ಜುಡಿತ್ ಗಾರ್ಸಿಯಾ ಅವರು, ಮಸೂದೆಯು "ಅಂಗಾಂಗಗಳು ಮತ್ತು ಮೂಳೆ ಮಜ್ಜೆಯನ್ನು ದಾನ ಮಾಡಲು ಕೈದಿಗಳಿಗೆ ಅವಕಾಶವನ್ನು ಒದಗಿಸುವ ಮೂಲಕ ಸೆರೆವಾಸದಲ್ಲಿರುವ ಜನರಿಗೆ ದೈಹಿಕ ಸ್ವಾಯತ್ತತೆಯನ್ನು ಮರುಸ್ಥಾಪಿಸುತ್ತದೆ ಮತ್ತು ಕಡಿಮೆ ಶಿಕ್ಷೆಯನ್ನು ನೀಡುವ ಮೂಲಕ ಸೆರೆವಾಸದಲ್ಲಿರುವವರಿಗೆ ಜೀವನದ ಭರವಸೆ ನೀಡುತ್ತದೆ" ಎಂದು ತಮ್ಮ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಮಸೂದೆಗೆ ವಿರೋಧ:
ಕೆಲವು ತಜ್ಞರು ಕಾರ್ಯಕ್ರಮದ ಬಗ್ಗೆ ಚಕಾರ ಎತ್ತಿದ್ದು, ಕಾರ್ಯಕ್ರಮದ ಸುತ್ತ ನೈತಿಕ ಸಮಸ್ಯೆಗಳಿವೆ, ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಮಸೂದೆಗೆ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರಾಜ್ಯವು ಮರಣದಂಡನೆಗೊಳಗಾದ ಕೈದಿಗಳಿಂದ ಅಂಗಾಂಗ ದಾನವನ್ನು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ