ವಾಷಿಂಗ್ಟನ್(ನ. 13): ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ವರ್ಕ್ ಫ್ರಂ ಹೋಮ್ ಮಾಡುತ್ತಿರುವ ಉದ್ಯೋಗಿಗಳಿಗೆ ತೆರಿಗೆ ಹೇರುವ ಪ್ರಸ್ತಾವ ಅಮೆರಿಕದಲ್ಲಿದೆ. ಮನೆಯಿಂದಲೇ ಕೆಲಸ ಮಾಡುವ ಭಾಗ್ಯ ಇಲ್ಲದ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಇಂಥದ್ದೊಂದು ತೆರಿಗೆ ಪರಿಕಲ್ಪನೆಯನ್ನು ಅಮೆರಿಕದ ಡ್ಯೂಷೆ ಬ್ಯಾಂಕ್ನ ತಂತ್ರಗಾರರು ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್-19 ನಂತರ ಆರ್ಥಿಕತೆಯನ್ನು ಹೇಗೆ ಮರುನಿರ್ಮಿಸಬೇಕು ಎಂದು ಅಧ್ಯಯನ ನಡೆಸಿರುವ ಡ್ಯೂಷೆ ಬ್ಯಾಂಕ್ನ ಆರ್ಥಿಕ ಪರಿಣಿತರ ತಂಡ ತನ್ನ ವರದಿಯಲ್ಲಿ ಕೆಲ ಶಿಫಾರಸುಗಳನ್ನ ಮಾಡಿದೆ. ಅದರಲ್ಲಿ ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳಿಗೆ ನಿತ್ಯ ತೆರಿಗೆ ವಿಧಿಸಬೇಕೆಂಬುದು ಒಂದು ಸಲಹೆ ಮುಂದಿಟ್ಟಿದೆ.
ವರ್ಕ್ ಫ್ರಂ ಹೋಮ್ ಮಾಡುವ ಪ್ರತಿಯೊಬ್ಬ ಉದ್ಯೋಗಿಗೂ 5%ರಷ್ಟು ತೆರಿಗೆ ವಿಧಿಸಿದರೆ ಸರ್ಕಾರಗಳ ಖಜಾನೆಗಳಿಗೆ ಕೋಟ್ಯಂತರ ಡಾಲರ್ಗಳಷ್ಟು ಹಣ ಸೇರುತ್ತದೆ. ಮನೆಯಿಂದ ಕೆಲಸ ಮಾಡಲು ಸಾಧ್ಯವಿಲ್ಲದ ಕಡಿಮೆ ವರಮಾನದ ಮಂದಿಗೆ ಈ ಹಣವನ್ನು ಸಹಾಯವಾಗಿ ನೀಡಬಹುದು ಎಂಬುದು ಡ್ಯೂಷೆ ಬ್ಯಾಂಕ್ನ ಪರಿಣಿತರ ಅನಿಸಿಕೆ.
ಇದನ್ನೂ ಓದಿ: Barack Obama: ‘ಕಲಿತ ಪಾಠ ಒಪ್ಪಿಸುವ ತವಕದ ವಿದ್ಯಾರ್ಥಿಯಂತೆ…’; ರಾಹುಲ್ ಬಗ್ಗೆ ಬರಾಕ್ ಒಬಾಮ ಅನಿಸಿಕೆ
ಕೋವಿಡ್ ಬಿಕ್ಕಟ್ಟು ಮುಗಿದರೂ ಸಾಕಷ್ಟು ಸಮಯದವರೆಗೆ ವರ್ಕ್ ಫ್ರಂ ಹೋಮ್ ನಡೆಯುವ ಸಾಧ್ಯತೆ ಇರುತ್ತದೆ. ಉದ್ಯೋಗಿಗಳಿಗೆ ಸಂಚಾರ ವೆಚ್ಚ, ಹೋಟೆಲ್ ಊಟ, ಬಟ್ಟೆ ಸ್ವಚ್ಛತೆ ವೆಚ್ಚ ಇತ್ಯಾದಿಗಳು ಮಿಕ್ಕುತ್ತವೆ. ಆದರೆ, ಇವರ ಈ ವೆಚ್ಚಗಳ ಮೇಲೆ ವ್ಯವಹಾರ ಇಟ್ಟುಕೊಂಡಿದ್ದ ಮಂದಿಗೆ ತೀರಾ ಪೆಟ್ಟುಬೀಳಲಿದೆ. ಉದಾಹರಣೆಗೆ, ಕಚೇರಿಗಳ ಸಮೀಪ ಇರುವ ಹೋಟೆಲ್ಗಳು, ಕ್ಯಾಬ್ಗಳು ಇತ್ಯಾದಿ ಉದ್ಯಮಗಳಿಗೆ ನಷ್ಟವಾಗಿದೆ. ಇಂಥ ಜನರಿಗೆ ನೆರವಿನ ಹಸ್ತ ಚಾಚುವುದು ಸಮಂಜಸ ಎನಿಸುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಭ್ರಷ್ಟಾಚಾರ ಬಯಲು ಮಾಡಿದ್ದ ಅಸ್ಸಾಂ ಪತ್ರಕರ್ತ ಸಾವು; ಸಿಐಡಿ ತನಿಖೆಗೆ ಆದೇಶಿಸಿದ ಸಿಎಂ ಸೋನೊವಾಲ್
ಅಮೆರಿಕದಲ್ಲಿ ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳ ಸರಾಸರಿ ಸಂಬಳ 55 ಸಾವಿರ ಡಾಲರ್ ಇದೆ. ಇದಕ್ಕೆ ನಿತ್ಯ ಶೇ. 5 ತೆರಿಗೆ ಎಂದರೆ 10 ಡಾಲರ್ ಆಗುತ್ತದೆ. ಅಂದರೆ, ಭಾರತೀಯ ರೂಪಾಯಿ ದರದಲ್ಲಿ ಸುಮಾರು 750 ರೂ ಆಗುತ್ತದೆ. ದಿನಕ್ಕೆ 750 ರೂ ತೆರಿಗೆ. ಈ ತೆರಿಗೆ ಕ್ರಮದ ಮೂಲಕ 48 ಬಿಲಿಯನ್ ಡಾಲರ್ ಹಣ ಹೊಂದಿಸಬಹುದು ಎಂಬುದು ಅಮೆರಿಕದ ಡ್ಯೂಷೆ ಬ್ಯಾಂಕ್ನ ತಜ್ಞರ ವರದಿಯ ಅಭಿಪ್ರಾಯ.
ಇದನ್ನೂ ಓದಿ: ಮುಖ್ಯಮಂತ್ರಿ ಕುರ್ಚಿಗೆ ಅಂಟಿಕೊಂಡಿಲ್ಲ; ಈ ಬಗ್ಗೆ ಎನ್ಡಿಎ ತೀರ್ಮಾನ ಅಂತಿಮ; ನಿತೀಶ್ ಕುಮಾರ್
ಅದರೆ, ಈ ತೆರಿಗೆ ಪ್ರಸ್ತಾಪಕ್ಕೆ ಕೆಲ ಕಡೆಗಳಿಂದ ವಿರೋಧವೂ ವ್ಯಕ್ತವಾಗಿದೆ. ಇದು ತಪ್ಪಾದ ಪರಿಕಲ್ಪನೆಯಾಗಿದ್ದು ಜನಪ್ರಿಯವಾಗುವ ಸಾಧ್ಯತೆ ಇಲ್ಲ. ತೆರಿಗೆ ವಿಧಿಸಲು ಬೇರೆ ಉತ್ತಮ ಮಾರ್ಗಗಳು ಇವೆ ಎಂದು ಆಡ್ಜುನಾ ಎಂಬ ಜಾಬ್ ಪೋರ್ಟಲ್ನ ಸಹ-ಸಂಸ್ಥಾಪಕ ಆಂಡ್ರ್ಯೂ ಹಂಟರ್ ಹೇಳುತ್ತಾರೆ.
ಎಪಿ ಸುದ್ದಿ ಸಂಸ್ಥೆ ವರದಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ