ಪುದುಚೇರಿ (ಏಪ್ರಿಲ್ 02); ಪ್ರಸ್ತುತ ದೇಶದಲ್ಲಿ ಪಂಚರಾಜ್ಯಗಳ ಚುನಾವಣೆ ಎಲ್ಲರ ಗಮನ ಸೆಳೆದಿದೆ. ಬಿಜೆಪಿ ಪಕ್ಷ ಎಲ್ಲಾ ರಾಜ್ಯದಲ್ಲೂ ಅಧಿಕಾರ ಹಿಡಿಯಲು ಸಾಕಷ್ಟು ಕಸರತ್ತು ನಡೆಸುತ್ತಿದೆ. ಆದರೆ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಬಿಜೆಪಿ ಪಕ್ಷ ಬೂತ್ ಮಟ್ಟದಿಂದ ಬಲವಾಗಿಲ್ಲ. ಹೀಗಾಗಿ ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಅಷ್ಟು ಸುಲಭದ ಮಾತಲ್ಲ. ಇದೇ ಕಾರಣಕ್ಕೆ ಬಿಜೆಪಿಯ ಪುದುಚೇರಿ ಘಟಕವು ಆಧಾರ್ ಮಾಹಿತಿಯನ್ನು ಚುನಾವಣಾ ಪ್ರಚಾರಕ್ಕಾಗಿ ಬಳಸಿದೆ ಎಂಬ ಆರೋಪ ಇದೀಗ ಬಲವಾಗಿ ಕೇಳಿ ಬಂದಿದೆ. ಈ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದ್ದಂತೆ ಈ ಬಗ್ಗೆ ತನಿಖೆ ನಡೆಸುವಂತೆ ಮದ್ರಾಸ್ ಹೈಕೋರ್ಟ್ ಗುರುವಾರ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಮತ್ತು ಭಾರತದ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
"ಚುನಾವಣಾ ಪ್ರಚಾರಕ್ಕೆ ಆಧಾರ್ ಮಾಹಿತಿಗಳನ್ನು ಬಳಸಿಕೊಳ್ಳುವುದು ಅಕ್ಷಮ್ಯ. ಹೀಗಾಗಿ ಈ ಸಂಬಂಧ ಸೂಕ್ತ ತನಿಖೆಯಾಗಿ ಸತ್ಯಾಸತ್ಯತೆಗಳು ಬಯಲಿಗೆ ಬರಬೇಕು" ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ ಈ ಮಧ್ಯಂತರ ಆದೇಶ ನೀಡಿದ್ದಾರೆ.
ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಬಿಜೆಪಿಯ ಪ ಸ್ಥಳೀಯ ಘಟಕವು, "ಈ ಮಾಹಿತಿಯನ್ನು ತಾವು ಮನೆ ಬಾಗಿಲಿಗೆ ತೆರಳಿ ಅಭಿಯಾನದ ಮೂಲಕ ಪಡೆದುಕೊಂಡಿದ್ದೇವೆ" ಎಂದು ಹೇಳಿಕೊಂಡಿತ್ತಾದರೂ ಹೈಕೋರ್ಟ್ ಅದನ್ನು ಒಪ್ಪಿಕೊಳ್ಳಲು ನಿರಾಕರಿಸಿತು.
ಈ ವಿಷಯದ ಬಗ್ಗೆ ಚುನಾವಣಾ ಆಯೋಗವು ನೀತಿ ಸಂಹಿತೆಯ ಉಲ್ಲಂಘನೆ ಎಂದೇ ವ್ಯವಹರಿಸಬೇಕು ಮತ್ತು ಪಕ್ಷದ ವಿರುದ್ಧ ಪ್ರತ್ಯೇಕ ತನಿಖೆ ಪ್ರಾರಂಭಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪ್ರಕರಣವನ್ನು ನ್ಯಾಯಾಲಯವು, “ನಾಗರಿಕರ ಗೌಪ್ಯತೆಯ ಉಲ್ಲಂಘನೆಯ ಗಂಭೀರ ವಿಷಯ” ಎಂದು ಉಲ್ಲೇಖಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ