ದ್ವೇಷ ರಾಜಕಾರಣ vs ಅಭಿವೃದ್ಧಿ; ದೆಹಲಿಯಲ್ಲಿ ಆಮ್ ಆದ್ಮಿ ಮತ್ತೊಮ್ಮೆ ಗೆಲುವು ಸಾಧಿಸಲು ಈ ಎಲ್ಲಾ ವಿಚಾರಗಳು ಕಾರಣ!

ಕೇಂದ್ರ ಸರ್ಕಾರ ಹಿಂದೂ-ಮುಸ್ಲಿಂ, ಸಿಎಎ-ಎನ್​ಆರ್​ಸಿ-ಎನ್​ಪಿಆರ್​, ಕಾಶ್ಮೀರ, ಕಲಂ 370, ಪಾಕಿಸ್ತಾನ-ಚೀನಾ, ತಲಾಖ್ ಎಂದು ಮಾತನಾಡುತ್ತಿದ್ದ ಸಂದರ್ಭದಲ್ಲಿ ದೆಹಲಿ ಸರ್ಕಾರ ಕೋಮು ಹೇಳಿಕೆಗಳನ್ನು ಪಕ್ಕಕ್ಕಿಟ್ಟು ಶಿಕ್ಷಣ, ವೈದ್ಯಕೀಯ, ಸಾರಿಗೆ, ಮಹಿಳಾ ರಕ್ಷಣೆ ಮತ್ತು ಸಬಲೀಕರಣ ಎಂದು ಅಭಿವೃದ್ಧಿಯ ಮಾತುಗಳನ್ನು ಆಡುತ್ತಿತ್ತು. ಜನರಿಗೆ ಅವಶ್ಯಕವಾದ ವಿಚಾರಗಳ ಕುರಿತು ಧ್ವನಿ ಎತ್ತಿತ್ತು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್.

 • Share this:
  ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಹೋರಾಟದಿಂದ ರೂಪಗೊಂಡ ಆಮ್ ಆದ್ಮಿ ಎಂಬ ಪ್ರಾದೇಶಿಕ ಪಕ್ಷ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಅವಧಿಗೆ ಅಧಿಕಾರ ಹಿಡಿಯುವಲ್ಲಿ ಸಫಲವಾಗಿದೆ. ಅರವಿಂದ ಕೇಜ್ರಿವಾಲ್ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ.

  ಆದರೆ, ಯಕಶ್ಚಿತ್ ಆಗ ತಾನೆ ಕಣ್ಣುಬಿಟ್ಟಿದ್ದ ಪ್ರಾದೇಶಿಕ ಪಕ್ಷವೊಂದು ರಾಷ್ಟ್ರೀಯ ಪಕ್ಷಗಳ ಎದುರು ಸೆಣಸಿ ತಾನು ಎದುರಿಸಿದ ಮೊದಲ ಚುನಾವಣೆಯಲ್ಲೇ ದೆಹಲಿಯ ಅಧಿಕಾರ ಹಿಡಿದದ್ದು, ಕೇಂದ್ರದ ಜೊತೆಗಿನ ನಿರಂತರ ಸಂಘರ್ಷದ ನಡುವೆಯೂ ಮತ್ತೊಂದು ಅವಧಿಗೆ ಗೆಲವು ಸಾಧಿಸಿದ್ದು ಸುಮ್ಮನೆಯ ಮಾತಲ್ಲ.

  ಇಡೀ ದೇಶ ಪ್ರಧಾನಿ ನರೇಂದ್ರ ಮೋದಿಯ ಅಲೆಯಲ್ಲಿ ತೇಲುತ್ತಿದ್ದ ಸಂದರ್ಭದಲ್ಲೂ ದೇಶದ ಅಧಿಕಾರದ ಕೇಂದ್ರ ಎನಿಸಿಕೊಂಡಿರುವ ದೆಹಲಿಯಲ್ಲಿ ಕೊನೆಗೂ ಕಮಲ ಅರಳಲೇ ಇಲ್ಲ. ಮೋದಿ ಅಲೆ ಮತದಾರನನ್ನು ಪ್ರಭಾವಿಸಲೇ ಇಲ್ಲ. ಹೀಗೆ ಮೋದಿ ಅಲೆ ಮತ್ತು ಇತ್ತೀಚೆಗೆ ಬಲಪಂಥೀಯ ವಿಚಾರಧಾರೆಗಳು ರಾಷ್ಟ್ರದಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತಿದ್ದಾಗ್ಯೂ ದೆಹಲಿಯಲ್ಲಿ ಆಪ್ ಮತ್ತೊಮ್ಮೆ ಗೆಲುವು ಸಾಧಿಸಿ ಇಡೀ ರಾಷ್ಟ್ರ ರಾಜಕಾರಣ ಹುಬ್ಬೇರುವಂತೆ ಮಾಡಿದೆ.

  ಕೇಂದ್ರ ಸರ್ಕಾರ ಹಿಂದೂ-ಮುಸ್ಲಿಂ, ಸಿಎಎ-ಎನ್​ಆರ್​ಸಿ-ಎನ್​ಪಿಆರ್​, ಕಾಶ್ಮೀರ, ಕಲಂ 370, ಪಾಕಿಸ್ತಾನ-ಚೀನಾ, ತಲಾಖ್ ಎಂದು ಮಾತನಾಡುತ್ತಿದ್ದ ಸಂದರ್ಭದಲ್ಲಿ ದೆಹಲಿ ಸರ್ಕಾರ ಕೋಮು ಹೇಳಿಕೆಗಳನ್ನು ಪಕ್ಕಕ್ಕಿಟ್ಟು ಶಿಕ್ಷಣ, ವೈದ್ಯಕೀಯ, ಸಾರಿಗೆ, ಮಹಿಳಾ ರಕ್ಷಣೆ ಮತ್ತು ಸಬಲೀಕರಣ ಎಂದು ಅಭಿವೃದ್ಧಿಯ ಮಾತುಗಳನ್ನು ಆಡುತ್ತಿತ್ತು. ಜನರಿಗೆ ಅವಶ್ಯಕವಾದ ವಿಚಾರಗಳ ಕುರಿತು ಧ್ವನಿ ಎತ್ತಿತ್ತು. ಭಾಗಶಃ ಈ ಮಾತುಗಳು ದೆಹಲಿ ಚುನಾವಣೆ 2020 ರಲ್ಲೂ ಪ್ರಭಾವ ಬೀರಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

  ಹಾಗಾದರೆ ಆಮ್​ ಆದ್ಮಿ ಪಕ್ಷದ ನಿರಂತರ ಗೆಲುವಿಗೆ ಕಾರಣವೇನು? ಅಸಲಿಗೆ ಅರವಿಂದ ಕೇಜ್ರಿವಾಲ್ ಮಾಡಿದ ಕಮಲ್ ಏನು? ನಿಜಕ್ಕೂ ಕಳೆದ 5 ವರ್ಷದ ಅವಧಿಯಲ್ಲಿ ದೆಹಲಿಯಲ್ಲಾದ ಅಭಿವೃದ್ಧಿ ಎಂತಾದ್ದು? ಇಲ್ಲಿದೆ ಮಾಹಿತಿ.

  ಇದನ್ನೂ ಓದಿ : Delhi Election Results; ಮುಂದುವರೆದ ಕೇಜ್ರಿವಾಲ್ ಕಮಾಲ್​; ಮೂರನೇ ಬಾರಿ ದೆಹಲಿ ಗದ್ದುಗೆಯತ್ತ ಆಮ್​ ಆದ್ಮಿ?

  ಸ್ವಾಯತ್ತ ಸರ್ಕಾರ ಮತ್ತು ದೂರದೃಷ್ಟಿ:

  ಕೇಂದ್ರಾಡಳಿತ ಪ್ರದೇಶಗಳು ಸಾಮಾನ್ಯವಾಗಿ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುವುದು ಸಾಮಾನ್ಯ. ಏಕೆಂದರೆ ಇಲ್ಲಿ ನೆಪಕ್ಕೆ ಮುಖ್ಯಮಂತ್ರಿ ಎಂಬ ಅಧಿಕಾರ ಇದ್ದಗ್ಯೂ ಆಡಳಿತ ವಿಭಾಗದ ಪ್ರಮುಖ ಶಾಖೆಗಳು ಕೇಂದ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರ ನಿಯೋಜಿಸುವ ಗವರ್ನರ್ ಕೈಲಿರುತ್ತದೆ. ಇದಲ್ಲದೆ, ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕೇಂದ್ರಾಡಳಿತ ಪ್ರದೇಶಗಳ ಬಜೆಟ್ ಮತ್ತು ತೆರಿಗೆ ರೂಪದ ಆದಾಯ ತೀರಾ ಕಡಿಮೆ.

  2014-15ರ ಅವಧಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೊದಲ ಬಜೆಟ್ ಮಂಡಿಸುವಾಗ ಅಂದಿನ ಬಜೆಟ್​ನ ಒಟ್ಟಾರೆ ಮೌಲ್ಯ ಕೇವಲ 30 ಸಾವಿರ ಕೋಟಿ. ನೆನಪಿರಲಿ ರಾಜ್ಯದಲ್ಲಿ ನೀರಾವರಿ ಯೋಜನೆಗೆ ಇದಕ್ಕಿಂತ ಹೆಚ್ಚಿನ ಹಣ ವ್ಯಯವಾಗುತ್ತದೆ.

  ಆದರೆ, 2019-20ರ ದೆಹಲಿ ಬಜೆಟ್ ಮೊತ್ತ 60 ಸಾವಿರ ಕೋಟಿ. ಈ 5 ವರ್ಷದ ಅವಧಿಯಲ್ಲಿ ದೆಹಲಿ ಸರ್ಕಾರದ ಯೋಜನೆಗಳು ಎರಡು ಪಟ್ಟು ಹೆಚ್ಚಾಗಿದೆ. ತೆರಿಗೆ ಸಂಗ್ರಹ ಹಾಗೂ ಸರ್ಕಾರದ ಸ್ವಾಯತ್ತತೆ ಹಾಗೂ ಸುಸ್ಥಿರ ಅಭಿವೃದ್ಧಿ ಕುರಿತು ಹೆಚ್ಚಿನ ಗಮನ ನೀಡಿದ್ದೆ ಹಣಕಾಸು ಕ್ರೂಢೀಕರಣಕ್ಕೆ ಪ್ರಮುಖ ಕಾರಣ.

  ಶಿಕ್ಷಣ-ವೈದ್ಯಕೀಯ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಒತ್ತು:

  ಶಿಕ್ಷಣ, ವೈದ್ಯಕೀಯ, ಸಾರಿಗೆ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳನ್ನು ಸೇವೆ ಎಂದೇ ಪರಿಗಣಿಸಿದ್ದ ದೆಹಲಿ ಆಮ್ ಆದ್ಮಿ ಪಕ್ಷ ಕಳೆದ 5 ವರ್ಷದಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ನೀಡಿರುವ ಒತ್ತು ಅತ್ಯಂತ ಗಮನಾರ್ಹ. ಮೂಲಭೂತ ಸೌಲಭ್ಯಗಳ ವಿಚಾರದಲ್ಲಿ ದೇಶದ ಇತರೆ ಯಾವ ರಾಜ್ಯವೂ ಮಾಡದ ವಿನೂತನ ಪ್ರಯೋಗಕ್ಕೆ ಪ್ರಾಮಾಣಿಕ ಕೆಲಸಕ್ಕೆ ಆಪ್ ಸರ್ಕಾರ ಮುಂದಾಗಿತ್ತು.

  ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಯೋಜನೆಗಳ ಜಾರಿಗೆ ಮುಂದಾಗಿದ್ದ ದೆಹಲಿ ಸರ್ಕಾರ ಮೊದಲು ಮಾಡಿದ್ದೇ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಕಲಿಕಾ ವಿಧಾನಗಲ್ಲಿನ ಬದಲಾವಣೆ. ಶಾಲಾ ಮಕ್ಕಳ ಕಲಿಕೆಯನ್ನು ದ್ವಿಗುಣಗೊಳಿಸುವ ಸಲುವಾಗಿ ಶಾಲಾ ಮಟ್ಟದಲ್ಲೇ ಕುಟುಂಬ ವ್ಯವಹಾರಗಳ ಪಠ್ಯಕ್ರಮ ಅಳವಡಿಸಲಾಗಿತ್ತು. ಇದಕ್ಕೆಂದು ಶಿಕ್ಷಕರಿಗೆ ವಿಶೇಷ ತರಬೇತಿ, ಅನ್ವಯಿಕ ವಿಜ್ಞಾನಗಳ ವಿಶ್ವಾವಿದ್ಯಾಲಯ ಸ್ಥಾಪಿಸಲಾಗಿತ್ತು. ಇದಕ್ಕೆಂದು 15 ಸಾವಿರ ಕೋಟಿ ಹಣ ವ್ಯಯಿಸಲಾಗಿತ್ತು.

  ಶಿಕ್ಷಣದ ಜೊತೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಗಮನವಹಿಸಿದ್ದ ಆಪ್ ಸರ್ಕಾರ ದೆಹಲಿಯಲ್ಲಿರುವ ಸರ್ಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಿತ್ತು. ಅತ್ಯಂತ ಕಡಿಮೆ ದರದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವ ಯೋಜನೆಗಳನ್ನು ಜಾರಿಗೆ ತರಲಾಗಿತ್ತು.

  ಮನೆ ಬಾಗಿಲಿನ ವಿತರಣಾ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದ ಅರವಿಂದ ಕೇಜ್ರಿವಾಲ್ ಪಡಿತರ ವಸ್ತು ಸೇರಿದಂತೆ ಸುಮಾರು 100 ಸೇವೆಗಳನ್ನು ಮನೆಗೆ ತಲುಪಿಸುವ ಯೋಜನೆಗೆ ಮುಂದಾಗಿದ್ದರು. ಇದಕ್ಕೆಂದು 500 ಕೋಟಿ ಮೀಸಲಿಡಲಾಗಿತ್ತು.

  ಸಾರಿಗೆ ಕ್ಷೇತ್ರಕ್ಕೆಂದು ಬಜೆಟ್​ನಲ್ಲಿ ಶೇಕಡಾ 73 ರಷ್ಟು ಹಣ ಮೀಸಲಿಡಲಾಗಿತ್ತು. ಅಲ್ಲದೆ, ಸುಮಾರು 4,000 ಹೊಸ ಬಸ್​ಗಳನ್ನು ಖರೀದಿಸಲಾಗಿತ್ತು, ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಉಚಿತ ಬಸ್ ಪಾಸ್, ಮಹಿಳೆಯರಿಗೆ ಉಚಿತ ಮೆಟ್ರೋ, ವಿಕಲಚೇತನ ಪೋಷಕರಿಗೆ ತಮ್ಮ ಹೆಣ್ಣುಮಕ್ಕಳ ಮದುವೆಗೆ ಹಣಕಾಸಿನ ನೆರವು. 300 ಯುನಿಟ್ ವರೆಗೆ ಉಚಿತ ವಿದ್ಯುತ್. ವಾಯುಮಾಲಿನ್ಯ ತಡೆಗೆ ಕ್ರಮ. ಒಂದು ಕಾರ್ಖಾನೆಗೆ ಬದಲಾಗಿ 800 ಮರ ನೆಡುವುದು ಹೀಗೆ ಸಾಲು ಸಾಲು ಅಭಿವೃದ್ಧಿ ಕಾರ್ಯಗಳು ಆಪ್ ಸರ್ಕಾರದ ಕೈ ಹಿಡಿದಿವೆ.

  ರೈತರಿಗಾಗಿ ಸ್ವಾಮಿನಾಥನ್ ವರದಿ ಜಾರಿ:

  ರೈತರಿಗೆ ವೈಜ್ಞಾನಿಕವಾದ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂಬ ಸ್ವಾಮಿನಾಥನ್ ಆಯೋಗದ ಶಿಫಾರಸ್ಸನ್ನು ಇಡೀ ದೇಶದಲ್ಲೇ ಮೊದಲು ಜಾರಿಗೆ ತಂದ ಕೀರ್ತಿ ದೆಹಲಿಯ ಅರವಿಂದ ಕೇಜ್ರಿವಾಲ್ ಸರ್ಕಾರಕ್ಕೆ ಸಲ್ಲುತ್ತದೆ.

  ರೈತರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಿದ್ದ ಆಪ್ ಸರ್ಕಾರ ರೈತರ ಬೆಳೆಗಳನ್ನು ಸರ್ಕಾರವೇ ನೇರವಾಗಿ ಖರೀದಿಸುವ ಕ್ರಮಕ್ಕೆ ಒತ್ತು ನೀಡಿತ್ತು. ಯಾವುದೇ ಬೆಳೆಯಾದರೂ ಅದಕ್ಕೆ ವೈಜ್ಞಾನಿಕ ಬೆಂಬಲ ಬೆಲೆ ನೀಡುವ ಮೂಲಕ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿತ್ತು. ಈ ಕೆಲಸಗಳಿಗಾಗಿ ಸುಮಾರು 100 ಕೋಟಿ ಹಣವನ್ನು ಹೆಚ್ಚುವರಿಯಾಗಿ ಬಜೆಟ್​ನಲ್ಲಿ ಮೀಸಲಿಡಲಾಗಿತ್ತು.

  ಹೀಗೆ ಕೇಂದ್ರಾಡಳಿತ ಪ್ರದೇಶಕ್ಕೆ ಮೀಸಲಿರುವ ಅಲ್ಪ ಸಂಪನ್ಮೂಲದಲ್ಲೇ ಪರಿಣಾಮಕಾರಿ ಬಜೆಟ್​ ನಿರ್ಮಿಸಿ ಅದನ್ನು ಶೇ.100 ರಷ್ಟು ಜಾರಿಗೆ ತಂದ ಕೀರ್ತಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸಲ್ಲುತ್ತದೆ. ಇದೇ ಕಾರಣಕ್ಕೆ ದೆಹಲಿ ಇತರೆ ಕೇಂದ್ರಾಡಳಿತ ಪ್ರದೇಶಕ್ಕಿಂತ ಅಭಿವೃದ್ಧಿ ವಿಚಾರದಲ್ಲಿ ಭಿನ್ನವಾಗಿ ನಿಲ್ಲುತ್ತದೆ.

  ಆದರೆ, ಕಳೆದ 5 ವರ್ಷಗಳಿಂದ ದೆಹಲಿಗೆ ಸ್ವಾಯತ್ತ ರಾಜಸ್ವ ಬೇಕು, ಸ್ವಾತಂತ್ರ್ಯ ರಾಜ್ಯ ಎಂಬ ಸ್ಥಾನಮಾನ ಬೇಕು  ಎಂಬುದು ಅರವಿಂದ ಕೇಜ್ರಿವಾಲ್ ಅವರ ಬೇಡಿಕೆ. ಇದೇ ಕಾರಣಕ್ಕಾಗಿ ಕೇಜ್ರಿವಾಲ್ ಮತ್ತು ಕೇಂದ್ರ ಸರ್ಕಾರದ ನಡುವೆ ನಿರಂತರ ಹಗ್ಗಾ ಜಗ್ಗಾಟ ನಡೆಯುತ್ತಲೇ ಇದೆ. ಆದರೆ, ಇದೀಗ ಸತತ ಮೂರನೇ ಅವಧಿಗೆ ಕೇಜ್ರಿವಾಲ್ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ರಾಜಸ್ವ ವಿವಾದ ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪಲಿದೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

  ಇದನ್ನೂ ಓದಿ : ನಿಜವಾದ ರಾಷ್ಟ್ರೀಯತೆ ಎಂದರೆ ಜನರಿಗಾಗಿ ಕೆಲಸ ಮಾಡುವುದು, ಆ ಕೆಲಸವೇ ಆಪ್ ಗೆಲ್ಲಿಸಿದೆ; ಮನೀಶ್ ಸಿಸೋಡಿಯಾ
  First published: