ಮುಂಬೈನಲ್ಲಿ ಒಂದೇ ದಿನ ಪೌರತ್ವ ಕಾಯ್ದೆ ಪರ ಮತ್ತು ವಿರೋಧಿ ಮೆರವಣಿಗೆಗಳು

ಆಜಾದ್ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಲ ಬಾಲಿವುಡ್ ನಟರು, ಸೆಲಬ್ರಿಟಿಗಳು ಬೆಂಬಲವಾಗಿ ನಿಂತರೆ, ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಪೌರತ್ವ ಕಾಯ್ದೆಗೆ ಬೆಂಬಲಿಸುವ ಸಮಾವೇಶ ನಡೆಯಿತು.

Vijayasarthy SN | news18
Updated:December 27, 2019, 10:29 PM IST
ಮುಂಬೈನಲ್ಲಿ ಒಂದೇ ದಿನ ಪೌರತ್ವ ಕಾಯ್ದೆ ಪರ ಮತ್ತು ವಿರೋಧಿ ಮೆರವಣಿಗೆಗಳು
ಮುಂಬೈನ ಆಜಾದ್ ಮೈದಾನದಲ್ಲಿ ಸಿಎಎ ವಿರುದ್ಧ ಪ್ರತಿಭಟನೆ
  • News18
  • Last Updated: December 27, 2019, 10:29 PM IST
  • Share this:
ಮುಂಬೈ(ಡಿ. 27): ವಾಣಿಜ್ಯ ನಗರಿ ಇಂದು ಎರಡು ಬೃಹತ್ ಮೆರವಣಿಗೆಗಳಿಗೆ ಸಾಕ್ಷಿಯಾಯಿತು. ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಪೌರತ್ವ ಕಾಯ್ದೆ ವಿರುದ್ಧವಾಗಿ ಪ್ರತಿಭಟನೆ ನಡೆಯಿತು. ಅಲ್ಲಿಂದ 4 ಕಿಮೀ ದೂರದಲ್ಲಿರುವ ಐತಿಹಾಸಿಕ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಪೌರತ್ವ ಕಾಯ್ದೆ ಪರವಾಗಿ ಬೃಹತ್ ಸಮಾವೇಶ ನಡೆಯಿತು. ಎರಡೂ ಕೂಡ ಶಾಂತಿಯುತವಾಗಿದ್ದು, ಯಾವುದೇ ಹಿಂಸಾಚಾರಕ್ಕೆ ಅವಕಾಶ ಕೊಡದಿದ್ದುದು ಗಮನಾರ್ಹ.

ಆಜಾದ್ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಲ ಬಾಲಿವುಡ್ ನಟರು, ಸೆಲಬ್ರಿಟಿಗಳು ಬೆಂಬಲವಾಗಿ ನಿಂತರೆ, ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಪೌರತ್ವ ಕಾಯ್ದೆಗೆ ಬೆಂಬಲಿಸುವ ಸಮಾವೇಶ ನಡೆಯಿತು.

ಇದನ್ನೂ ಓದಿ: ದೆಹಲಿಯ ಜಾಮಾ ಮಸೀದಿಯಲ್ಲಿ ಪೌರತ್ವ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ

ವಿರೋಧಿ ಹೋರಾಟ:

“ಇದು ನಿರಂಕುಶಮಯ ಆಡಳಿತವಾಗಿದೆ. ತಾನು ಏನು ಬೇಕಾದರೂ ಮಾಡಬಹುದು ಎಂದು ಭಾವಿಸಿದೆ. ಸಂವಿಧಾನವನ್ನು ವಿರೋಧಿಸುವುದಲ್ಲ, ಅದಕ್ಕೆ ರಕ್ಷಣೆ ಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ” ಎಂದು ಒಬ್ಬ ವಿದ್ಯಾರ್ಥಿ ಆಕ್ರೋಶ ವ್ಯಕ್ತಪಡಿಸಿದರು.

ಈ ಪೌರತ್ವ ಕಾಯ್ದೆಯು ಕೇವಲ ಒಂದು ಸಮುದಾಯವಲ್ಲ, ಇಡೀ ದೇಶಕ್ಕೇ ವಿರುದ್ಧವಾಗಿದೆ ಎಂದು ಮತ್ತೊಬ್ಬ ಪ್ರತಿಭಟನಾಕಾರ ವ್ಯಾಖ್ಯಾನಿಸಿದರು.

“ಸಿಎಎ, ಎನ್​ಆರ್​ಸಿ ಮತ್ತು ಎನ್​ಪಿಆರ್ ಕೇವಲ ಧಾರ್ಮಿಕ ವಿಚಾರಗಳಲ್ಲ. ಅವು ದೇಶದ ಪ್ರತಿಯೊಬ್ಬರನ್ನೂ ಬಾಧಿಸುತ್ತದೆ. ನಮಗೆ ನೋಟ್ ಬ್ಯಾನ್​ನ ಎರಡನೇ ಭಾಗ ಬೇಕಾಗಿಲ್ಲ” ಎಂದು ಇನ್ನೊಬ್ಬ ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು..“ಎನ್​ಪಿಆರ್ ಎಂಬುದು ಎನ್​ಆರ್​ಸಿಯತ್ತ ಮೊದಲ ಹೆಜ್ಜೆಯಾಗಿದೆ. ನಮ್ಮನ್ನು ಮೂರ್ಖರನ್ನಾಗಿಸಲಾಗುತ್ತಿದೆ. ಈ ಪ್ರತಿಬಟನೆ ಇಲ್ಲಿಗೇ ನಿಲ್ಲುವುದಿಲ್ಲ. ಕಾಯ್ದೆಯನ್ನು ಹಿಂಪಡೆಯುವವರೆಗೂ ಹೋರಾಟ ಮುಂದುವರಿಯುತ್ತದೆ” ಎಂದು ಮಗದೊಬ್ಬರು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಕಾಂಗ್ರೆಸ್ ಜನರ ದಿಕ್ಕು ತಪ್ಪಿಸುತ್ತಿದೆ, ಪೌರತ್ವ ತಿದ್ದುಪಡಿ ಕಾಯ್ದೆ ಯಾರೊಬ್ಬರ ನಾಗರಿಕತ್ವ ಕಸಿದುಕೊಳ್ಳುವುದಿಲ್ಲ; ಅಮಿತ್ ಶಾ

ಪರ ಹೋರಾಟ:

ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಪೌರತ್ವ ಕಾಯ್ದೆ ಪರ ಸಮಾವೇಶವನ್ನು ಆಯೋಜಿಸಿದ್ದು ಬಿಜೆಪಿಯ ಸಂವಿಧಾನ್ ಸನ್ಮಾನ್ ಮಂಚ್ ವಿಭಾಗ. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಜನರ ಕೈಯಲ್ಲಿ ರಾಷ್ಟ್ರಧ್ವಜಗಳು ರಾರಾಜಿಸಿದವು. ವೀರ್ ಸಾವರ್ಕರ್, ಜ್ಯೋತಿಬಾ ಫುಲೆ ಮೊದಲಾದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳು ನಳನಳಿಸಿದವು. ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಸಾವರ್ಕರ್ ಮೊಮ್ಮದ ರಂಜಿತ್ ಸಾವರ್ಕರ್ ಮೊದಲಾದವರು ಈ ರ್ಯಾಲಿಯಲ್ಲಿ ಭಾಗಿಯಾಗಿದ್ದರು.

Pro CAA rally at August Kranti maidan at Mumbai
ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಸಿಎಎ ಪರವಾಗಿ ಜಮಾಯಿಸಿದ ಜನರು


“ಭಾರತದ ವಿಪಕ್ಷಗಳು ಪೌರತ್ವ ಕಾಯ್ದೆ ವಿಚಾರದಲ್ಲಿ ಸುಳ್ಳು ಮಾಹಿತಿ ಹರಡುತ್ತಿವೆ. ನೆರೆಯ ದೇಶಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೊಳಗಾದ ಅಲ್ಪಸಂಖ್ಯಾತರಿಗೆ ಸಹಾಯ ಮಾಡಲು ಈ ಕಾಯ್ದೆ ರೂಪಿಸಲಾಗಿದೆ ಎಂಬುದನ್ನು ಜನರಿಗೆ ನಾವು ತಿಳಿಸಿಕೊಡುತ್ತಿದ್ದೇವೆ” ಎಂದು ಫಡ್ನವಿಸ್ ತಿಳಿಸಿದರು.

“ದೇಶದ ವಿಭಜನೆಯ ವೇಳೆ, ಅಲ್ಪಸಂಖ್ಯಾತರಿಗೆ ರಕ್ಷಣೆ ಕೊಡುತ್ತೇವೆಂದು ಭರವಸೆ ನೀಡಿದ್ದ ಪಾಕಿಸ್ತಾನ ಈಗ ಮಾತು ತಪ್ಪಿದೆ. ಆ ಅಲ್ಪಸಂಖ್ಯಾತರು ನಮ್ಮವರೇ ಆಗಿರುವುದರಿಂದ ಅವರ ಯೋಗಕ್ಷೇಮ ನಮ್ಮ ಜವಾಬ್ದಾರಿಯೇ ಆಗಿದೆ” ಎಂದವರು ವಿವರಿಸಿದರು.

ಬಿಜೆಪಿಯ ಸಂವಿಧಾನ್ ಸನ್ಮಾನ್ ಮಂಚ್​ನಿಂದ ದೇಶಾದ್ಯಂತ ಸಿಎಎ ಪರ ರ್ಯಾಲಿಗಳನ್ನು ಆಯೋಜಿಸಲಾಗುತ್ತಿದೆ. ಕಳೆದ ವರವಷ್ಟೇ ದಾದರ್​ನಲ್ಲಿ ಇಂಥದ್ದೊಂದು ಸಮಾವೇಶ ನಡೆದಿತ್ತು. ಮುಂದಿನ ದಿನಗಳಲ್ಲಿ ದೇಶದ ವಿವಿಧೆಡೆ ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ಸಮಾವೇಶಗಳನ್ನು ಆಯೋಜಿಸುವ ಯೋಜನೆ ಇದೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:December 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ