ಎಸ್​ಪಿಜಿ ಹಿಂಪಡೆದ ವಾರದೊಳಗೆ ಪ್ರಿಯಾಂಕಾ ಗಾಂಧಿ ಭದ್ರತೆಗೆ ಧಕ್ಕೆ: ಮನೆಯೊಳಗೆ ನುಗ್ಗಿದ ಐವರು

ಯಾವುದೇ ಪೂರ್ವಾನುಮತಿ ಪಡೆಯದೇ ಅವರು ಏಕಾಏಕಿ ಬಂದು ಫೋಟೊ ತೆಗೆದುಕೊಂಡ ಬಗ್ಗೆ ಪ್ರಿಯಾಂಕ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಅವರಿಗೆ ಝೆಡ್​ ಪ್ಲಸ್​ ರಕ್ಷಣೆ ಒದಗಿಸುವ ಸಿಆರ್​ಪಿಎಫ್​ ಸಿಬ್ಬಂದಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ. ಅಚ್ಚರಿಗೆ ಒಳಗಾದ ಪ್ರಿಯಾಂಕ ಬಂದವರಿಗೆ ಹೇಗೆ ಒಳಗೆ ಬರಲು ಸಾಧ್ಯವಾಯಿತು ಎಂದು ಕೇಳಿದ್ದಾರೆ.

Seema.R | news18-kannada
Updated:December 2, 2019, 5:25 PM IST
ಎಸ್​ಪಿಜಿ ಹಿಂಪಡೆದ ವಾರದೊಳಗೆ ಪ್ರಿಯಾಂಕಾ ಗಾಂಧಿ ಭದ್ರತೆಗೆ ಧಕ್ಕೆ: ಮನೆಯೊಳಗೆ ನುಗ್ಗಿದ ಐವರು
ಪ್ರಿಯಾಂಕಾ ಗಾಂಧಿ
  • Share this:
ನವದೆಹಲಿ (ಡಿ.02): ಗಾಂಧಿ ಕುಟುಂಬಕ್ಕೆ ನೀಡಿದ ವಿಶೇಷ ಭದ್ರತಾ ಪಡೆಯನ್ನು  ಕೇಂದ್ರ ಸರ್ಕಾರ ಹಿಂಪಡೆದು ಕೇವಲ ವಾರ ಕಳೆದಿದೆ. ಈ ನಡುವೆ ಪ್ರಿಯಾಂಕ ಗಾಂಧಿ ಅವರ ಮನೆಯೊಳಗೆ ಅಪರಿಚಿತ ಕಾರೊಂದು ಪ್ರವೇಶಿಸಿ, ಆತಂಕ ಸೃಷ್ಟಿಸಿದ್ದು,  ಅವರ ಭದ್ರತೆ ಕುರಿತು ಪ್ರಶ್ನೆ ಮೂಡುವಂತಾಗಿದೆ. ಪ್ರಿಯಾಂಕ ಗಾಂಧಿ ಅವರಿಗೆ ನೀಡಲಾಗಿದ್ದ ಎಸ್​ಪಿಜಿ ಭದ್ರತೆಯನ್ನು ಹಿಂಪಡೆದು  ಜೆಡ್​ ಪ್ಲಸ್​ ಭದ್ರತೆಯನ್ನು ಕೇಂದ್ರ ಸರ್ಕಾರ ನೀಡಿತ್ತು. ಇದರ ಬೆನ್ನಲ್ಲೇ ಆತಂಕಕಾರಿ ಘಟನೆ ನಡೆದಿದ್ದು, ಎಸ್​ಪಿಜಿ ಹಿಂಪಡೆದ ಕೇಂದ್ರ ನಡೆಯನ್ನು ಪ್ರಶ್ನಿಸುವಂತೆ ಮಾಡಿದೆ.

ನವೆಂಬರ್​ 25ರಂದು ಕಾರೊಂದು ಏಕಾಏಕಿ ಪ್ರಿಯಾಂಕ ಗಾಂಧಿ ವಾದ್ರಾ ಅವರ ಮನೆಯೊಳಗೆ ನುಗ್ಗಿದ್ದು, ಭದ್ರತಾ ಲೋಪವನ್ನು ಎತ್ತಿ ತೋರಿಸಿದೆ. ಪೊರ್ಚ್​ಬಳಿಯ ಅವರ ಮನೆಗೆ ಐದು ಜನರ ಗುಂಪೊಂದು ಕಾರಿನಲ್ಲಿ ನುಗ್ಗಿದೆ. ಇದರಲ್ಲಿ ಓರ್ವ ಯುವತಿ ಕೂಡ ಇದ್ದಳು. ಅವರ ಮನೆಯ ಉದ್ಯಾನದೊಳಗೆ ಏಕಾಏಕಿ ನುಗ್ಗಿದ ಈ ಐವರು ಯಾವುದೇ ಅನುಮತಿ ಇಲ್ಲದೇ ಅವರ ಫೋಟೋ ಪಡೆಯಲು ಮುಂದಾಗಿದ್ದಾರೆ ಎಂಬ ಮಾಹಿತಿಯನ್ನು ಪ್ರಿಯಾಂಕ ಗಾಂಧಿಯವರ ಕಚೇರಿ ಮೂಲಗಳು ಹೇಳಿವೆ ಎನ್ನಲಾಗಿದೆ.

ಇವರೆಲ್ಲಾ ಉತ್ತರ ಪ್ರದೇಶದ ನಗರವೊಂದರಿಂದ ಬಂದವರು ಎಂದು ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಪ್ರಿಯಾಂಕ ಗಾಂಧಿಯವರ ಜತೆ ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿಯೇ ಉತ್ತರ ಪ್ರದೇಶದಿಂದ ಬಂದಿದ್ದೇವೆ ಎಂದು ಆಗಂತುಕರು ಹೇಳಿದ್ದಾರೆ.

ಯಾವುದೇ ಪೂರ್ವಾನುಮತಿ ಪಡೆಯದೇ ಅವರು ಏಕಾಏಕಿ ಬಂದು ಫೋಟೊ ತೆಗೆದುಕೊಂಡ ಬಗ್ಗೆ ಪ್ರಿಯಾಂಕ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಅವರಿಗೆ ಝೆಡ್​ ಪ್ಲಸ್​ ರಕ್ಷಣೆ ಒದಗಿಸುವ ಸಿಆರ್​ಪಿಎಫ್​ ಸಿಬ್ಬಂದಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ. ಅಚ್ಚರಿಗೆ ಒಳಗಾದ ಪ್ರಿಯಾಂಕ ಬಂದವರಿಗೆ ಹೇಗೆ ಒಳಗೆ ಬರಲು ಸಾಧ್ಯವಾಯಿತು ಎಂದು ಕೇಳಿದ್ದಾರೆ.

ಇದನ್ನು ಓದಿ: ಮಹಿಳಾ ಸುರಕ್ಷತೆ ಬಗ್ಗೆ ಸಲಹೆ ನೀಡಿದ ಹೈದರಾಬಾದ್​ ಪೊಲೀಸರು; ಪುರುಷರಿಗೆ ಮೊದಲು ಪಾಠ ಹೇಳಿ ಎಂದ ಟ್ವೀಟಿಗರು

ಘಟನೆ ಬೆನ್ನಲ್ಲೇ ತಪ್ಪಿನ ಅರಿವಾಗಿ ಸಿಆರ್​ಪಿಎಫ್​ ಸಿಬ್ಬಂದಿ ಕಾಪೌಂಡ್​ ಸುತ್ತ ಬಿಗಿಭದ್ರತೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಗಾಂಧಿ ಕುಟುಂಬದಿಂದ ವಿಶೇಷ ಭದ್ರತಾ ಪಡೆ ದುರ್ಬಳಕೆ ಆರೋಪದ ಮೇಲೆ ಕೇಂದ್ರ ಸರ್ಕಾರ ಎಸ್​ಪಿಜಿಯನ್ನು ಹಿಂಪಡೆದಿತ್ತು. ಕೇಂದ್ರ ಸರ್ಕಾರದ ಈ ನಡೆಗೆ ವಿಪಕ್ಷಗಳು ಖಂಡಿಸಿದ್ದವು. ಆದರೆ, ಸದನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಇದನ್ನು ಸರ್ಮರ್ಥಿಸಿಕೊಂಡಿದ್ದರು.
Loading...

ರಾಜೀವ್​​ ಗಾಂಧಿ ಹತ್ಯೆಯ ನಂತರ ಗಾಂಧಿ ಕುಟುಂಬಕ್ಕೆ ಬಿಗಿ ಭದ್ರತೆಯನ್ನು ನೀಡಲಾಗಿತ್ತು. ಎಸ್​ಪಿಜಿ ಭದ್ರತೆ ಸದ್ಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತ್ರ ನೀಡಲಾಗುತ್ತಿದ್ದು, ಸೋನಿಯಾ ಗಾಂಧಿ, ರಾಹುಲ್​ ಗಾಂಧಿ ಮತ್ತು ಪ್ರಿಯಾಂಕ ಅವರ ಭದ್ರತಾ ಶ್ರೇಣಿಯನ್ನು ಎಸ್​ಪಿಜಿಯಿಂದ ಝಡ್​ ಪ್ಲಸ್​ ಶ್ರೇಣಿಗೆ ಇಳಿಸಲಾಗಿದೆ.
First published:December 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...