news18-kannada Updated:February 27, 2021, 8:56 PM IST
ಕೊರೋನಾ ಲಸಿಕೆ
ನವದೆಹಲಿ (ಫೆ. 27): ಖಾಸಗಿ ಆಸ್ಪತ್ರೆಗಳು ಕೋವಿಡ್ ಸಲಿಕೆಗೆ ಒಂದು ಡೋಸ್ಗೆ ಹೆಚ್ಚೆಂದರೆ 250ರೂ ವರೆಗೆ ಮಾತ್ರ ಶುಲ್ಕ ವಿಧಿಸಬಹುದು ಎಂದು ಸರ್ಕಾರ ತಿಳಿಸಿದೆ. ಈ ಲಸಿಕೆಗಳನ್ನು ಸರ್ಕಾರಿ ಕೇಂದ್ರದಲ್ಲಿ ಉಚಿತವಾಗಿ ನೀಡಲಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಬೇಕೆಂದರೆ ಹಣ ಪಾವತಿ ಮಾಡಬೇಕು ಎಂದು ತಿಳಿಸಿದೆ. ಇನ್ನು ಇದೇ ಮಾರ್ಚ್ 1 ರಿಂದ ಕೋವಿಡ್ ಲಸಿಕೆಯನ್ನು 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ದೇಶಾದ್ಯಂತ ನೀಡಲು ಸಿದ್ಧತೆ ನಡೆಸಲಾಗಿದೆ. ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಲಸಿಕೆ ಮೊತ್ತದ ಬಗ್ಗೆ ತಯಾರಕರು ಮತ್ತು ಆಸ್ಪತ್ರೆಗಳೊಂದಿಗೆ ಚರ್ಚಿಸಲಾಗುತ್ತಿದ್ದು, ಇನ್ನು ಮೂರು-ನಾಲ್ಕು ದಿನಗಳಲ್ಲಿ ಈ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಲಸಿಕೆ ಪಡೆಯುವವರು ಸರ್ಕಾರದ CoWIN 2.0 ಪೋರ್ಟ್ಲ್, ಆರೋಗ್ಯ ಸೇತು ಆ್ಯಪ್ ಮೂಲಕ ನೋಂದಾಯಿಸಿಕೊಳ್ಳಬಹುದು ಅಥವಾ ನೇರವಾಗಿ ವ್ಯಾಕ್ಸಿನೇಷನ್ ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಪಡೆಯಬಹುದು. ಸರ್ಕಾರಿ ಕೇಂದ್ರಗಳಲ್ಲಿ ಲಸಿಕೆ ಉಚಿತವಾಗಿರಲಿದ್ದು, ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಒಂದು ಡೋಸ್ ಗೆ 250ರೂ ದರ ನಿಗದಿ ಮಾಡಲಾಗಿದೆ. ಲಸಿಕೆ ಪಡೆದ ವ್ಯಕ್ತಿಗಳಿಗೆ QR Code ಹೊಂದಿರುವ ಡಿಜಿಟಲ್ ಪ್ರಮಾಣ ಪತ್ರ ನೀಡಲಾಗುವುದು.
ಸರ್ಕಾರಿ ಆಸ್ಪತ್ರೆಗಳ ಹೊರತು ಪಡಿಸಿ ದೇಶದಲ್ಲಿ 10 ಸಾವಿರಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿದ್ದು ಅಲ್ಲಿ ಕೂಡ ಲಸಿಕೆ ನೀಡಲು ಅನುಮತಿ ನೀಡಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ವಯಸ್ಸಿನ ದಾಖಲೆಯನ್ನು ಸಲ್ಲಿಸಬೇಕಾಗುತ್ತದೆ. 45 ವರ್ಷಕ್ಕಿಂತ ಮೇಲ್ಪಟ್ಟ ಅನಾರೋಗ್ಯ ಪೀಡಿತರು ಕೂಡ ಲಸಿಕೆ ಪಡೆಯಲು ಅರ್ಹರಾಗಿದ್ದು, ಅವರ ಆರೋಗ್ಯ ಸ್ಥಿತಿ ಬಗ್ಗೆ ನೋಂದಾಯಿತ ವೈದ್ಯರಿಂದ ಸಹಿ ಮಾಡಿದ ದಾಖಲೆ ಸಲ್ಲಿಸಿ ಲಸಿಕೆ ಪಡೆಯಬಹುದು.
ಜನವರಿ 16ರಂದು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. ಸುಮಾರು 1.15 ಕೋಟಿ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದಿದ್ದಾರೆ. ಆದರೆ, ಲಸಿಕೆ ಪಡೆಯಲು ಕೆಲವರು ಹಿಂಜರಿದ ಕಾರಣ ಇದು ಸಂಪೂರ್ಣ ಯಶಸ್ಸು ಕಂಡಿಲ್ಲ
Published by:
Seema R
First published:
February 27, 2021, 8:52 PM IST