ಉಗಾಂಡಾ: ವಿಶ್ವದಲ್ಲಿ ನಡೆಯುವ ಕೆಲವೊಂದು ಘಟನೆಗಳು ಎಷ್ಟೊಂದು ಕುತೂಹಲಕಾರಿಯಾಗಿರುತ್ತವೆ ಎಂಥವರಿಗೂ ಅಚ್ಚರಿ ಹುಟ್ಟಿಸುತ್ತೆ. ಕೆಲವೊಂದು ಘಟನೆಗಳು ಕಾರಣವೇ ಇಲ್ಲದ ಜರುಗಿ ಹೋಗುತ್ತವೆ. ಇಂತಹ ಘಟನೆಗಳಿಗೆ ತಲೆಬುಡ ಎಂಬುದೇ ಇರುವುದಿಲ್ಲ. ನಾವು ಇಷ್ಟೆಲ್ಲಾ ಪೀಠಿಕೆ ಹಾಕುತ್ತಿರುವುದಕ್ಕೆ ಒಂದು ಬಲವಾದ ಕಾರಣವಿದೆ. 2020 ರಲ್ಲಿ ಉಗಾಂಡಾದಲ್ಲಿ (Uganda) ನಡೆದ ಘಟನೆ (Prison Escape) ಕೂಡ ಅತ್ಯಂತ ವಿಲಕ್ಷಣ ಹಾಗೂ ನಿಗೂಢ ಎಂಬುದಾಗಿ ಬಹಿರಂಗಗೊಂಡಿದೆ. ಉಗಾಂಡಾದ ಜೈಲಿನ ಸಿಬ್ಬಂದಿಗಳಲ್ಲಿ ಆತಂಕ ಸೃಷ್ಟಿಸಿದ ಈ ಘಟನೆ ಅಂದಿನ ದಿನಗಳ ಸುದ್ದಿಪತ್ರಿಕೆಗಳಲ್ಲಿ (Viral News) ಚಿತ್ರವಿಚಿತ್ರವಾಗಿ ಸುದ್ದಿಯಾಗಿತ್ತು.
ಉಗಾಂಡಾದ ಸೆರೆಮನೆಯಲ್ಲಿದ್ದ ಸರಿಸುಮಾರು 200 ಕೈದಿಗಳು ಕಾರ್ಯನಿರತ ವಾರ್ಡನ್‌ಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದರು. ಇದರಲ್ಲೇನು ನಿಗೂಢವಿದೆ ಅಂತೀರಾ? ಇಲ್ಲಿದೆ ನೋಡಿ.
ಯಾಕೆ ಹೀಗೆ ಮಾಡಿದ್ರು ಅನ್ನೋದೇ ಅಚ್ಚರಿ!
ಇವರು ಹಾಗೆಯೇ ಪರಾರಿಯಾಗುತ್ತಿದ್ದರೆ ಅದೊಂದು ಅಷ್ಟೊಂದು ದೊಡ್ಡ ಮಟ್ಟದ ಸುದ್ದಿಯಾಗುತ್ತಿರಲಿಲ್ಲ. ಆದರೆ ಈ ಖೈದಿಗಳು ತಮ್ಮ ಹಳದಿ ಬಣ್ಣದ ಸಮವಸ್ತ್ರಗಳನ್ನು ಬಿಚ್ಚಿ ಬೆತ್ತಲೆಯಾಗಿ ಸೆರೆಮನೆಯಿಂದ ಪರಾರಿಯಾಗಿದ್ದರು. ಹೆಚ್ಚಿನವರು ಈ ಘಟನೆಯಿಂದ ಬೆಚ್ಚಿಬಿದ್ದರು. ಇನ್ನು ಕೆಲವರು ಖೈದಿಗಳು ಈ ರೀತಿ ಮಾಡಲು ಕಾರಣವಾದರೂ ಏನು? ಏನಿದರ ರಹಸ್ಯ ಎಂಬ ಕುತೂಹಲವನ್ನು ತೋರ್ಪಡಿಸಿದ್ದರು.
ತಮ್ಮನ್ನು ಯಾರೂ ಗುರುತಿಸಬಾರದು ಎಂದು ಬಟ್ಟೆ ಬಿಚ್ಚಿದ್ರು!
ವರದಿಗಳ ಪ್ರಕಾರ ಖೈದಿಗಳು ಸಿಕ್ಕಿಹಾಕಿಕೊಳ್ಳಬಾರದು. ತಮ್ಮನ್ನು ಯಾರೂ ಗುರುತಿಸಬಾರದು ಎಂಬ ಕಾರಣಕ್ಕೆ ಜೈಲಿನ ಸಮವಸ್ತ್ರವನ್ನು ಬಿಚ್ಚಿ ನಗ್ನರಾಗಿ ಪರಾರಿಯಾಗಿದ್ದಾರೆ. ಇವರು ಈಶಾನ್ಯ ಉಗಾಂಡಾದ ಮೌಂಟ್ ಮೊರೊಟೊದಲ್ಲಿನ ಅರಣ್ಯದತ್ತ ಪಲಾಯನಗೈದಿದ್ದರು. ಇನ್ನು ಅಪರಾಧಿಗಳು ಜೈಲಿನಿಂದ ಪರಾರಿಯಾಗುತ್ತಿರುವುದನ್ನು ಕಂಡ ಪ್ರತ್ಯಕ್ಷದರ್ಶಿಗಳು ಭಯಭೀತರಾಗಿದ್ದರು.
ಭಯಭೀತಗೊಂಡ ಪ್ರತ್ಯಕ್ಷದರ್ಶಿಗಳು
ಪ್ರತ್ಯಕ್ಷದರ್ಶಿಯಾದ ಕೆವಿನ್ ನಕರು ಎಂಬ ವ್ಯಕ್ತಿ ಖೈದಿಗಳು ಅರಣ್ಯದತ್ತ ಓಡಿಹೋಗುತ್ತಿದ್ದುದನ್ನು ನೋಡಿದ್ದು, ಜನರು ವಿವಸ್ತ್ರರಾಗಿ ಹುಚ್ಚರಂತೆ ಓಡುತ್ತಿದ್ದರು. ನಿಜಕ್ಕೂ ನಾವು ಭಯಗೊಂಡಿದ್ದೆವು ಎಂದು ತಿಳಿಸಿದ್ದರು.
ಇನ್ನು ತಪ್ಪಿಸಿಕೊಂಡ ಖೈದಿಗಳೆಲ್ಲರೂ ಸಾಮಾನ್ಯ ಖೈದಿಗಳಲ್ಲ. ಇವರೆಲ್ಲರೂ ಗಂಭೀರ ಅಪರಾಧವನ್ನೆಸಗಿದ ಭಯಾನಕ ಖೈದಿಗಳಾಗಿದ್ದರು. ಅಂತೆಯೇ ಬಹಳಷ್ಟು ಸಮಯದಿಂದ ಹೊಂಚು ಹಾಕಿ ಹಿಡಿದ ನಟೋರಿಯಸ್ ಕ್ರಿಮಿನಲ್‌ಗಳಾಗಿದ್ದರು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದರು. ಜಾನುವಾರು ಕಳ್ಳತನಕ್ಕೆ ಸಂಬಂಧಿಸಿದ ಅಪರಾಧದಲ್ಲಿ ಇವರೆಲ್ಲರನ್ನೂ ಬಂಧಿಸಲಾಗಿತ್ತು. ಜೈಲಿನಿಂದ ಪರಾರಿಯಾಗಿರುವ ಖೈದಿಗಳ ಕುರಿತು ವಿವರವನ್ನು ಸೇನೆಗೆ ರವಾನಿಸಲಾಗಿರುವುದಾಗಿ ಅಂದು ಜೈಲಿನ ಅಧಿಕಾರಿಗಳು ತಿಳಿಸಿದ್ದರು.
ಸಾರ್ವಜನಿಕರಿಗೆ ಎಚ್ಚರಿಕೆ ರವಾನೆ
ಜೈಲಿನ ಸಿಬ್ಬಂದಿಗಳು ಸೇನೆಯ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ರವಾನಿಸಿದ್ದರು. ಸಾರ್ವಜನಿಕರು ಮೈಯೆಲ್ಲಾ ಕಣ್ಣಾಗಿರುವಂತೆ ತಿಳಿಸಲಾಗಿತ್ತು ಎಂದು ಉಗಾಂಡಾ ಪೀಪಲ್ಸ್ ಡಿಫೆನ್ಸ್ ಫೋರ್ಸ್‌ನ ವಕ್ತಾರ ಡಿಯೋ ಅಕಿಕಿ ತಿಳಿಸಿದ್ದರು. ಅದೂ ಅಲ್ಲದೆ ಖೈದಿಗಳು ಶಸ್ತ್ರಾಗಾರದಲ್ಲಿದ್ದ 15 ಎಕೆ-47 ರೈಫಲ್‌ಗಳನ್ನು ಕದ್ದು ಪರಾರಿಯಾಗಿದ್ದು ಕಳವಳಕಾರಿಯಾದ ವಿಷಯವಾಗಿರುವುದಾಗಿ ಡಿಯೋ ತಿಳಿಸಿದ್ದರು.
ಇದನ್ನೂ ಓದಿ: Bird Love: ಬಾಲಕಿಯೊಂದಿಗೆ ಮೈನಾ ಹಕ್ಕಿಯ ವಿಶೇಷ ಪ್ರೀತಿ; ಶಾಲೆಗೂ ಹೋಗತ್ತೆ, ಆಟದ ಮೈದಾನದಲ್ಲೂ ಪಕ್ಷಿ ಹಾಜರ್!
ಖೈದಿಗಳು ಹಾಗೂ ಸೇನೆಯ ನಡುವೆ ಗುಂಡಿನ ಚಕಮಕಿ ಕೂಡ ನಡೆದಿತ್ತು. ಘರ್ಷಣೆಯು ತೀವ್ರವಾಗಿತ್ತು ಎಂಬುದಾಗಿ ತಿಳಿಸಿದ್ದ ಡಿಯೋ ಅಂತೆಯೇ ಖೈದಿಗಳ ಬಳಿ ಆಧುನಿಕ ಶಸ್ತ್ರಾಸ್ತ್ರಗಳಿವೆ ಎಂಬುದು ತಿಳಿದುಬಂದಿರುವುದಾಗಿ ಹೇಳಿದ್ದರು. ಸೇನೆಯ ಪ್ರಕಾರ ಈ ಹೋರಾಟದಲ್ಲಿ ಒಬ್ಬ ಯೋಧ ಮತ್ತು ಇಬ್ಬರು ತಪ್ಪಿಸಿಕೊಂಡವರು ಪ್ರಾಣ ಕಳೆದುಕೊಂಡಿದ್ದಾರೆ ಎಂಬುದು ವರದಿಯಾಗಿತ್ತು.
ಸೇನೆಯು ಹಲವು ಖೈದಿಗಳನ್ನು ಬಂಧಿಸಿತ್ತು
ಸೇನೆಯು ಘರ್ಷಣೆಯಿಂದ ಹಾನಿಗೆ ಒಳಗಾಗಿದ್ದರೂ ಖೈದಿಗಳಲ್ಲಿ ಹಲವರನ್ನು ಸೆರೆಹಿಡಿದಿತ್ತು. ಇಡೀ ಪರ್ವತದ ದೃಶ್ಯವನ್ನು ಸುತ್ತುವರೆಯುವ ಮೂಲಕ ಇತರ ಅಪರಾಧಿಗಳನ್ನು ಸೆರೆಹಿಡಿಯಲು ಮಿಲಿಟರಿಯು ಬೃಹತ್ ಜಾಲವನ್ನೇ ನಿರ್ಮಿಸಿತ್ತು. ಈ ಜಾಲ ಎಷ್ಟು ಕಠಿಣವಾಗಿತ್ತು ಎಂದರೆ ಖೈದಿಗಳು ತಪ್ಪಿಸಿಕೊಳ್ಳುವ ಪ್ರಮೇಯವೇ ಇರಲಿಲ್ಲ ಎಂದು ಡಿಯೋ ವಿಶ್ವಾಸ ತೋರ್ಪಡಿಸಿದ್ದರು.
ಇದನ್ನೂ ಓದಿ: Viral News: 1300 ರೂಪಾಯಿಗೆ ಮಾರಾಟಕ್ಕಿದೆ ಬುರ್ಜ್ ಖಲೀಫಾ!
ಅರಣ್ಯ ವಲಯಗಳಲ್ಲಿ ಆಹಾರ ಸಿಗದೇ ಇರುವುದರಿಂದ ಕೂಡ ಖೈದಿಗಳು ಸೆರೆಸಿಕ್ಕುವುದು ಖಚಿತವಾಗಿರುವುದಾಗಿ ಡಿಯೋ ಅಭಿಪ್ರಾಯವಾಗಿತ್ತು. ಇಂತಹ ಸ್ಥಿತಿಯಲ್ಲಿ ಖೈದಿಗಳು ಎರಡು ದಿನಗಳಿಗಿಂತ ಹೆಚ್ಚು ಕಾಲ ಉಳಿಯುವುದು ಸಂಶಯ ಎಂದು ಡಿಯೋ ತಿಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ