ಬ್ರಿಟನ್ ಸಾಮ್ರಾಜ್ಯವನ್ನು ದೀರ್ಘಕಾಲ ಆಳಿದ ರಾಣಿ ಎಲಿಜಬೆತ್ Queen Elizabeth) ಕೆಲ ದಿನಗಳ ಹಿಂದಷ್ಟೇ ಸ್ಕಾಟ್ಲೆಂಡ್‌ನ ಬಾಲ್ಮೊರಲ್ ಕ್ಯಾಸಲ್ ನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಶ್ವಾನಪ್ರಿಯರಾಗಿದ್ದ ರಾಣಿ ಎಲಿಜಬೆತ್ ಹಲವಾರು ನಾಯಿಗಳಿಗೆ (Dog) ಆಶ್ರಯ ನೀಡಿದ್ದಾರೆ. ಆದರೆ ಪ್ರಸ್ತುತ ರಾಣಿ ಎಲಿಜಬೆತ್ ಸಾವಿನ ನಂತರ ಈಗ ನಾಯಿಗಳು ಅನಾಥವಾಗಿದ್ದು, ಇವುಗಳನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ದೊಡ್ಡ ಪ್ರಶ್ನೆ ಎದುರಾಗಿತ್ತು. ಮೊದಲಿನಿಂದಲೂ ನಾಯಿಗಳ ಸಾಕುವಿಕೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ರಾಣಿ ಎಲಿಜಬೆತ್ ಕೊರ್ಗಿಸ್ (Corgis) ತಳಿಯ ನಾಯಿಗಳನ್ನು ಸಾಕಿದ್ದರು. ಆದರೆ ಇವರ ಸಾವಿನ (Death) ನಂತರ ಈ ನಾಯಿಗಳಿಗೆ ದಿಕ್ಕಿಲ್ಲದಂತಾಗಿತ್ತು. ಆದರೆ ಕೊರ್ಗಿ ನಾಯಿಗಳನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ರಾಣಿಯ ಕೊರ್ಗಿಸ್ ನಾಯಿ ನೋಡಿ ಕೊಳ್ಳುವವರು ಯಾರು?
ರಾಣಿಯ ಮರಣದ ನಂತರ ಅವರ ಮಗ ರಾಜಕುಮಾರ ಪ್ರಿನ್ಸ್ ಆ್ಯಂಡ್ರ್ಯೂ ಮತ್ತು ಅವರ ಮಾಜಿ ಸಂಗಾತಿ ಸಾರಾ ಫರ್ಗುಸನ್, ರಾಣಿಯ ಕೊರ್ಗಿಸ್ ನಾಯಿಗಳನ್ನು ನೋಡಿಕೊಳ್ಳುತ್ತಾರೆ ಎನ್ನಲಾಗುತ್ತಿದೆ. ಎರಡನೇ ಎಲಿಜಬೆತ್ ರಾಣಿಯ ಕೊರ್ಗಿಸ್ ತಳಿಯ ನಾಯಿಗಳಾದ ಮುಯಿಕ್ ಮತ್ತು ಸ್ಯಾಂಡಿಯನ್ನು ಪ್ರಿನ್ಸ್ ಆ್ಯಂಡ್ರ್ಯೂ ಮತ್ತು ಸಾರಾ ಫರ್ಗುಸನ್ ನೋಡಿಕೊಳ್ಳಲಿದ್ದಾರೆ ಎಂದು ಆಂಡ್ರ್ಯೂ ಅವರ ವಕ್ತಾರರು ತಿಳಿಸಿದ್ದಾರೆ. ಇಂಗ್ಲೆಂಡ್‌ನ ವಿಂಡ್ಸರ್‌ನಲ್ಲಿರುವ ರಾಯಲ್ ಲಾಡ್ಜ್‌ನಲ್ಲಿ ವಿಚ್ಛೇದಿತ ದಂಪತಿಗಳೊಂದಿಗೆ ನಾಯಿಗಳು ವಾಸಿಸುತ್ತವೆ ಎನ್ನಲಾಗಿದೆ.
ರಾಣಿಯ ನೆಚ್ಚಿನ ನಾಯಿಗಳು
ರಾಣಿ ಎಲಿಜಬೆತ್ ನಾಲ್ವರು ಮಕ್ಕಳು, 8 ಮೊಮ್ಮಕ್ಕಳನ್ನು 12 ಮರಿ ಮೊಮ್ಮಕ್ಕಳನ್ನು ಹೊಂದಿದ್ದರು. ಆಂಡ್ರ್ಯೂ ರಾಣಿಯ ಮೂರನೆಯ ಮತ್ತು ಪ್ರೀತಿಯ ಮಗನಾಗಿದ್ದರು. ಫರ್ಗುಸನ್, ಮುಯಿಕ್ ಅನ್ನು ರಾಣಿಗೆ ಉಡುಗೊರೆಯಾಗಿ ನೀಡಿದ್ದರು. ರಾಣಿಯು ಶ್ವಾನಗಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಕರೋನ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ವಿಂಡ್ಸರ್ ಕ್ಯಾಸಲ್‌ನಲ್ಲಿರುವಾಗ ಸಾಕುಪ್ರಾಣಿಗಳು ರಾಣಿಗೆ ಉತ್ತಮವಾದ ಸಮಯ ಕಳೆಯಲು ಜೊತೆಯಾಗಿದ್ದವು ಎಂದು ಅವರ ಡ್ರೆಸ್ಸರ್ ಏಂಜೆಲಾ ಕೆಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Queen Elizabeth II: ಅಬ್ಬಬ್ಬಾ, ರಾಣಿ ಎಲಿಜಬೆತ್ ಒಟ್ಟು ಆಸ್ತಿ ಇಷ್ಟು ಇದೆಯಂತೆ! ಆದಾಯದ ಮೂಲವೇನು ಗೊತ್ತಾ?
ತಮ್ಮ ಅಧಿಕಾರವಧಿಯ ಉದ್ದಕ್ಕೂ ರಾಣಿ ವಿಕ್ಟೋರಿಯಾ ಸುಮಾರು 30 ಕೊರ್ಗಿಗಳನ್ನು ಸಾಕಿದ್ದರು. ಏಳು ವರ್ಷದಿಂದಲೇ ಅವರು ಕೊರ್ಗಿಸ್ ಶ್ವಾನಗಳೊಂದಿಗೆ ಒಡನಾಟ ಹೊಂದಿದ್ದರು. ಮುಯಿಕ್ ನಾಯಿ 2021 ರ ಆರಂಭದಲ್ಲಿ ರಾಜಮನೆತನಕ್ಕೆ ಸೇರಿಕೊಂಡಿತು. ಎರಡು ಕೊರ್ಗಿಸ್ ತಳಿಯ ಶ್ವಾನಗಳಾದ ಮುಯಿಕ್ ಮತ್ತು ಸ್ಯಾಂಡಿ ಹಾಗೂ ಡೊರ್ಗಿ ತಳಿಯ ಶ್ವಾನ ಕ್ಯಾಂಡಿ ಜೊತೆಗೆ ಕಾಕರ್ ಸ್ಪೇನಿಯಲ್ ತಳಿಯ ಶ್ವಾನವನ್ನು ರಾಣಿ ಹೊಂದಿದ್ದರು.
ಉಡುಗೊರೆಯಾಗಿ ಬಂದ ಕೊರ್ಗಿ ನಾಯಿಗಳು
ಈ ಡೊರ್ಗಿ ತಳಿಯ ಶ್ವಾನವೂ ಕೊರ್ಗಿ ಹಾಗೂ ಡಚ್ ಹಂಡ್ ತಳಿಯ ಶ್ವಾನಗಳ ಮಿಶ್ರಣವಾಗಿದೆ. ರಾಣಿಯ ಅಧಿಕೃತ 95 ನೇ ಜನ್ಮದಿನದಂದು ಆಂಡ್ರ್ಯೂ ಮತ್ತು ಅವರ ಪುತ್ರಿಯರಾದ ರಾಜಕುಮಾರಿ, ಬೀಟ್ರಿಸ್ ಮತ್ತು ಯುಜೆನಿಯ ಸ್ಯಾಂಡಿ ಎಂಬ ಹೊಸ ಕೊರ್ಗಿ ನಾಯಿಮರಿಯನ್ನು ಅಜ್ಜಿಗೆ ನೀಡಿದ್ದರು. ಶಿಕ್ಷೆಗೊಳಗಾದ ಯುಎಸ್ ಶಿಶುಕಾಮಿ ಜೆಫ್ರಿ ಎಪ್ಸ್ಟೀನ್ ಅವರೊಂದಿಗಿನ ಸಂಬಂಧದ ಹಗರಣದಿಂದಾಗಿ ಪ್ರಿನ್ಸ್ ಆಂಡ್ರ್ಯೂ ತನ್ನ ಸಾರ್ವಜನಿಕ ಕರ್ತವ್ಯಗಳಿಂದ ಹಿಂದೆ ಸರಿದ ಅದೇ ವರ್ಷದಲ್ಲಿ ಕೊರ್ಗಿ ನಾಯಿಗಳು ಉಡುಗೊರೆಯಾಗಿ ಬಂದವು.
ಫೆಬ್ರವರಿಯಲ್ಲಿ, ಆಂಡ್ರ್ಯೂ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಲೈಂಗಿಕ ನಿಂದನೆಯ ಮೊಕದ್ದಮೆಯನ್ನು ಎದುರಿಸಿದರು. ಫರ್ಗುಸನ್, ಫ್ರಿನ್ಸ್ ಆಂಡ್ರ್ಯೂ ಜೊತೆಗೆ ಹತ್ತು ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿ ನಂತರ ವಿಚ್ಛೇದನ ಪಡೆದರು. ಆಂಡ್ರ್ಯೂನಿಂದ ವಿಚ್ಛೇದನದ ನಂತರವೂ ರಾಣಿ ಫರ್ಗುಸನ್ ಅವರೊಟ್ಟಿಗೆ ಸ್ನೇಹವನ್ನು ಉಳಿಸಿಕೊಂಡಿದ್ದರು.
ರಾಣಿಯ ಮರಣದ ಸಮಯದಲ್ಲಿ, ರಾಣಿಯು ನಾಲ್ಕು ನಾಯಿಗಳನ್ನು ಹೊಂದಿದ್ದರು: ಕ್ಯಾಂಡಿ ಎಂಬ ವಯಸ್ಸಾದ ಡೋರ್ಗಿ (ಡ್ಯಾಶ್‌ಹಂಡ್-ಕೊರ್ಗಿ ಮಿಶ್ರಣ); ಎರಡು ಕೊರ್ಗಿಸ್, ಮುಯಿಕ್ ಮತ್ತು ಸ್ಯಾಂಡಿ; ಮತ್ತು ವೋಲ್ಫರ್ಟನ್ ಸ್ಪ್ಲಾಶ್ ("ಲಿಸ್ಸಿ" ಎಂಬ ಅಡ್ಡಹೆಸರು) ಹೆಸರಿನ ಚಾಂಪಿಯನ್ ಕಾಕರ್ ಸ್ಪೈನಿಯೆಲ್ ನಾಯಿಗಳನ್ನು ಹೊಂದಿದ್ದರು. ಕೊರ್ಗಿಸ್ ನಾಯಿಗಳನ್ನು ರಾಣಿಯ ಮಗ ಮತ್ತು ಮಾಜಿ ಸೊಸೆ ನೋಡಿಕೊಳ್ಳಲಿದ್ದು, ಕ್ಯಾಂಡಿ ಮತ್ತು ಲಿಸ್ಸಿಯನ್ನು ಯಾರು ನೋಡಿಕೊಳ್ಳುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ