news18-kannada Updated:December 15, 2020, 9:00 AM IST
ನರೇಂದ್ರ ಮೋದಿ
ನವದೆಹಲಿ (ಡಿ. 15): ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಗುಜರಾತಿನ ಕಚ್ಗೆ ಭೇಟಿ ನೀಡಲಿದ್ದಾರೆ. ಗುಜರಾತ್ನ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಇಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರ ಜೊತೆಗೆ ದೇಶಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಿಖ್ ರೈತರು ಸೇರಿದಂತೆ ಗುಜರಾತ್ನ ರೈತ ಸಮುದಾಯಗಳ ಮುಖಂಡರನ್ನು ಪ್ರಧಾನಿ ಮೋದಿ ಭೇಟಿಯಾಗಿ, ಮಾತುಕತೆ ನಡೆಸಲಿದ್ದಾರೆ. ಕಚ್ನ ದೋರ್ಡೋಗೆ ತೆರಳಲಿರುವ ಪ್ರಧಾನಿ ಮೋದಿ ಗುಜರಾತ್ನ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಮೋದಿ ಇಂದು ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಘಟಕ, ಹೈಬ್ರೀಡ್ ನವೀಕರಿಸಬಹುದಾದ ಇಂಧನ ಉದ್ಯಾನ, ಸ್ವಯಂಚಾಲಿತ ಹಾಲು ಸಂಸ್ಕರಣಾ ಘಟಕಗಳ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಪ್ರಧಾನಮಂತ್ರಿಗಳ ಸಚಿವಾಲಯ ಖಚಿತಪಡಿಸಿದೆ.
ಕರಾವಳಿ ತೀರವನ್ನು ಸದ್ಬಳಕೆ ಮಾಡಿಕೊಳ್ಳಲು ಗುಜರಾತ್ನಲ್ಲಿರುವ ಕಚ್ನ ಮಾಂಡ್ವಿಯಲ್ಲಿ ಉಪ್ಪು ನೀರು ಶುದ್ಧೀಕರಣ ಘಟಕದ ಮೂಲಕ ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಲಾಗುತ್ತದೆ. ಪ್ರತಿದಿನ 10 ಕೋಟಿ ಲೀಟರ್ (100 ಎಂಎಲ್.ಡಿ) ಸಾಮರ್ಥ್ಯ ಹೊಂದಿರುವ ಈ ಉಪ್ಪು ನೀರು ಶುದ್ಧೀಕರಣ ಘಟಕವು ನರ್ಮದಾ ಗ್ರಿಡ್, ಸೌನಿ ನೆಟ್ ವರ್ಕ್ ಮತ್ತು ಸಂಸ್ಕರಿಸಿದ ತ್ಯಾಜ್ಯ ನೀರಿನ ಮೂಲಸೌಕರ್ಯಗಳಿಗೆ ಪೂರಕವಾಗಿ ಗುಜರಾತ್ನಲ್ಲಿ ನೀರಿನ ಸುರಕ್ಷತೆಯನ್ನು ಬಲಪಡಿಸುತ್ತದೆ. ಮುಂಡ್ರಾ, ಲಖಪತ್, ಅಬ್ದಾಸಾ ಮತ್ತು ನಖತ್ರಾನಾ ತಾಲೂಕು ಪ್ರದೇಶಗಳ ಸುಮಾರು 8 ಲಕ್ಷ ಜನರು ಈ ಸ್ಥಾವರದಿಂದ ಉಪ್ಪಿನ ಅಂಶ ಇಲ್ಲದ ನೀರನ್ನು ಪಡೆಯಲಿದ್ದಾರೆ. ಇದು ಭಚೌ, ರಾಪರ್ ಮತ್ತು ಗಾಂಧಿ ಧಾಮ ಮೇಲ್ದಂಡೆ ಜಿಲ್ಲೆಗಳಿಗೆ ಹೆಚ್ಚುವರಿ ನೀರಿನ ಹಂಚಿಕೆಗೂ ಸಹಕಾರಿಯಾಗುತ್ತದೆ.
ಇದನ್ನೂ ಓದಿ: ದೆಹಲಿ ಗಡಿಯಲ್ಲಿ 20 ದಿನದಿಂದ ರೈತರ ಪ್ರತಿಭಟನೆ; ಸರ್ಕಾರಕ್ಕೆ ಉಪವಾಸ ಸತ್ಯಾಗ್ರಹದ ಎಚ್ಚರಿಕೆ ನೀಡಿದ ಅಣ್ಣಾ ಹಜಾರೆ
ಕಚ್ನ ಸರ್ಹಾದ್ ಡೈರಿ ಅಂಜರ್ನಲ್ಲಿ ಸಂಪೂರ್ಣ ಸ್ವಯಂಚಾಲಿತ ಹಾಲು ಸಂಸ್ಕರಣೆ ಮತ್ತು ಪೊಟ್ಟಣೀಕರಣ ಘಟಕಕ್ಕೆ ಶಂಕುಸ್ಥಾಪನೆಯನ್ನು ಕೂಡ ಪ್ರಧಾನ ಮಂತ್ರಿ ಮೋದಿ ನೆರವೇರಿಸಲಿದ್ದಾರೆ. ಈ ಸ್ಥಾವರಕ್ಕೆ 121 ಕೋಟಿ ರೂ. ವೆಚ್ಚವಾಗಲಿದ್ದು, ದಿನಕ್ಕೆ 2 ಲಕ್ಷ ಲೀಟರ್ ಹಾಲು ಸಂಸ್ಕರಿಸುವ ಸಾಮರ್ಥ್ಯ ಹೊಂದಿರುತ್ತದೆ. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಇಂದು ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸದ ವೇಳೆ ಜೊತೆಗಿರುತ್ತಾರೆ.
ವಿಘಕೋಟ್ ಗ್ರಾಮದ ಬಳಿಯ ಹೈಬ್ರೀಡ್ ನವೀಕರಿಸಬಹುದಾದ ಇಂಧನ ಉದ್ಯಾನ ದೇಶದ ಅತಿ ದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದನಾ ಪಾರ್ಕ್ ಆಗಲಿದೆ. ಇದು 30 ಗಿ.ವ್ಯಾ. ನವೀಕರಿಸಬಹುದಾದ ಇಂಧನ ಉತ್ಪಾದಿಸಲಿದೆ. 72,600 ಹೆಕ್ಟೇರ್ ಭೂಮಿಯಲ್ಲಿರುವ ಈ ಉದ್ಯಾನವನವು ಪವನ ಮತ್ತು ಸೌರವಿದ್ಯುತ್ ಸಂಗ್ರಹಣೆಗಾಗಿ ಮೀಸಲಾದ ಹೈಬ್ರೀಡ್ ಪಾರ್ಕ್ ವಲಯವನ್ನು ಹೊಂದಿರುತ್ತದೆ, ಜೊತೆಗೆ ಪವನ ಪಾರ್ಕ್ ಚಟುವಟಿಕೆಗಳಿಗೆ ವಿಶೇಷ ವಲಯವನ್ನು ಹೊಂದಿರುತ್ತದೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್ನ ಕಚ್ಗೆ ಇಂದು ಭೇಟಿ ನೀಡಲಿದ್ದಾರೆ. ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅವರು ಕಚ್ನ ಕೃಷಿ ಸಮುದಾಯದ ಜೊತೆಗೆ ಗುಜರಾತ್ನ ಸಿಖ್ ರೈತರನ್ನು ಭೇಟಿಯಾಗಲಿದ್ದಾರೆ.
ಅಂದಹಾಗೆ, ಇಂದು ಇಂಡೋ-ಪಾಕ್ ಗಡಿಯ ಬಳಿ ಇರುವ ಸಿಖ್ ರೈತರನ್ನು ಪ್ರಧಾನ ಮಂತ್ರಿ ಮೋದಿಯೊಂದಿಗೆ ಮಾತುಕತೆ ನಡೆಸಲು ಆಹ್ವಾನಿಸಲಾಗಿದೆ. ಕಚ್ ಜಿಲ್ಲೆಯ ಲಖಪತ್ ತಾಲೂಕು ಮತ್ತು ಸುತ್ತಮುತ್ತ ಸುಮಾರು 5,000 ಸಿಖ್ ಕುಟುಂಬಗಳು ವಾಸಿಸುತ್ತಿವೆ. ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಸಾವಿರಾರು ರೈತರು ಕಳೆದ 20 ದಿನಗಳಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ, ರೈತರೊಂದಿಗಿನ ಇಂದಿನ ಪ್ರಧಾನಿ ಮಾತುಕತೆ ಕುತೂಹಲಕ್ಕೆ ಕಾರಣವಾಗಿದೆ.
Published by:
Sushma Chakre
First published:
December 15, 2020, 9:00 AM IST