ಮದ್ಯವರ್ತಿಗಳಿಂದ ರೈತರಿಗೆ ಮುಕ್ತಿ, ಕೃಷಿ ಕ್ಷೇತ್ರದ ಗೆಲುವು: ಕೃಷಿ ಮಸೂದೆ ಸಂಬಂಧ ಪ್ರಧಾನಿ ಮೋದಿ ಪ್ರತಿಕ್ರಿಯೆ

Rajya Sabha Passes Farm Bill: ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅಂಗೀಕಾರವಾದ ಕೃಷಿ ಮಸೂದೆಗಳಿಂದ ರೈತರು ಇಷ್ಟು ವರ್ಷ ಅನುಭವಿಸುತ್ತಿದ್ದ ಮದ್ಯವರ್ತಿಗಳ ಕಾಟಕ್ಕೆ ಕಡಿವಾಣ ಬೀಳಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನರೇಂದ್ರ ಮೋದಿ

ನರೇಂದ್ರ ಮೋದಿ

 • Share this:
  ನವದೆಹಲಿ: ಸಾಕಷ್ಟು ವಿರೋಧ, ರೈತ ಪ್ರತಿಭಟನೆ ನಡುವೆ ರಾಜ್ಯಸಭೆಯಲ್ಲೂ ಕೃಷಿ ಮಸೂದೆಗಳಿಗೆ ಅಂಗೀಕಾರ ಸಿಕ್ಕಿದ್ದು, ಪರ ವಿರೋಧದ ಚರ್ಚೆಗೆ ವೇದಿಕೆಯಾಗಿದೆ. ಈ ನಡುವೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಕೃಷಿ ಮಸೂದೆಗಳು ಅಂಗೀಕಾರ ಆಗಿರುವುದು ಭಾರತೀಯ ಕೃಷಿ ಕ್ಷೇತ್ರಕ್ಕೆ ಸಿಕ್ಕ ಅಭೂತಪೂರ್ವ ಗೆಲುವು ಎಂದಿದ್ದಾರೆ. ಟ್ವಿಟ್ಟರ್​ ಮೂಲಕ ಪ್ರತಿಕ್ರಿಯಿಸಿರುವ ಅವರು, ಭಾರತ ಕೃಷಿ ಕ್ಷೇತ್ರದಲ್ಲಿ ಎಂದೂ ಕಂಡರಿಯದ ಬದಲಾವಣೆಗೆ ಈ ಮಸೂದೆ ನಾಂದಿ ಹಾಡಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜತೆಗೆ ಕೋಟ್ಯಂತರ ರೈತರಿಗೆ ಈ ಮಸೂದೆಯಿಂದ ಲಾಭವಾಗಲಿದೆ. ದೇಶದ ಎಲ್ಲಾ ರೈತಾಪಿ ಜನರಿಗೂ ಅಭಿನಂದನೆ ಸಲ್ಲಿಸುವುದಾಗಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ಈ ಮಸೂದೆಯ ಬಗ್ಗೆ ದೇಶಾದ್ಯಂತ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪಂಜಾಬ್​ ಮತ್ತು ಹರಿಯಾಣದಲ್ಲಿ ಪ್ರತಿಭಟನೆ ವಿಕೋಪಕ್ಕೆ ಹೋಗಿದೆ. ಮಸೂದೆಯನ್ನು ವಿರೋಧಿಸಿ ಶಿರೋಮಣಿ ಅಕಾಲಿ ದಳದ ಸಂಸದೆ ಮತ್ತು ಕೇಂದ್ರ ಸಚಿವೆ ಹರ್ಸಿಮ್ರತ್​ ಕೌರ್​ ಬಾದಲ್​ ಈಗಾಗಲೇ ರಾಜೀನಾಮೆ ನೀಡಿದ್ದಾರೆ.

  ಗುರುವಾರ ರಾಜ್ಯಸಭೆಯಲ್ಲಿ ಕೃಷಿ ಮಸೂದೆಯನ್ನು ಮಂಡನೆ ಮಾಡಲಾಗಿತ್ತು. ಮಸೂದೆ ಕುರಿತು ಚರ್ಚೆಗೆ ಇಂದು ಅವಕಾಶ ನೀಡಲಾಗಿತ್ತು. ರಾಜ್ಯಸಭೆಯಲ್ಲಿ ಮಸೂದೆಯನ್ನು ಕಾಂಗ್ರೆಸ್​​, ತೃಣಮೂಲ ಕಾಂಗ್ರೆಸ್​ ಸೇರಿದಂತೆ ಹಲವು ವಿರೋಧ ಪಕ್ಷಗಳು ವಿರೋಧಿಸಿದ್ದವು. ಇಷ್ಟೆಲ್ಲಾ ವಿರೋಧ, ಗದ್ದಲದ ನಡುವೆಯೂ ಕೃಷಿ ಮಸೂದೆಗಳು ರಾಜ್ಯಸಭೆಯಲ್ಲಿ ಅನುಮೋದನೆಯಾಗಿವೆ.

  ಪ್ರಜಾಪ್ರಭುತ್ವವವನ್ನು ಗಾಳಿಗೆ ತೂರಿ ಆಡಳಿತಾರೂಢ ಎನ್​ಡಿಎ ಮೈತ್ರಿಕೂಟ ರಾಜ್ಯ ಸಭೆಯಲ್ಲಿ ಮಸೂದೆ ಪಾಸ್​ ಮಾಡಿಕೊಂಡಿದೆ ಎಂದು ವಿರೋಧ ಪಕ್ಷಗಳ ನಾಯಕರು ಆರೋಪ ಮಾಡುತ್ತಿದ್ದರೆ, ಕಾಂಗ್ರೆಸ್​ ಮತ್ತಿತರ ಸಂಸದರು ರಾಜ್ಯಸಭೆಯಲ್ಲಿ ಗೂಂಡಾಗಿರಿ ಮಾಡಿದ್ದಾರೆ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧ ಎಂದು ಬಿಜೆಪಿ ಮುಖಂಡರು ಆರೋಪಿಸುತ್ತಿದ್ದಾರೆ.

  ರಾಜ್ಯಸಭೆ ನಡೆಯುತ್ತಿರುವ ವೇಳೆ ಇದೇ ಮೊದಲ ಬಾರಿಗೆ ಟಿವಿ ಲೈವ್​ ಕವರೇಜ್​ ಕೂಡ ನಿಲ್ಲಿಸಲಾಗಿತ್ತು. ಈ ವೇಳೆ ಮೋಸದಿಂದ ಬಿಲ್ಲನ್ನು ಪಾಸ್​ ಮಾಡಿಕೊಳ್ಳಲಾಗಿದೆ, ಜನರಿಗೆ ಸತ್ಯವನ್ನು ತಲುಪದಂತೆ ಮಾಡಲು ಬಿಜೆಪಿ ಈ ರೀತಿ ಮಾಡಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ.

  ರೈತರಿಗೆ ಮೋದಿ ಆಶ್ವಾಸನೆ:

  ಈ ಎರಡು ಕೃಷಿ ಮಸೂದೆಗಳಿಂದ ರೈತರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್​ ತೋಮರ್​ ಸ್ಪಷ್ಟಪಡಿಸಿದ್ದಾರೆ. ರೈತರಿಗೆ ಈ ಹಿಂದೆ ನೀಡಲಾಗುತ್ತಿದ್ದ ಕನಿಷ್ಟ ಬೆಂಬಲ ಬೆಲೆ ಮುಂದುವರೆಯಲಿದೆ, ರೈತರು ಈ ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

  ಇದನ್ನೂ ಓದಿ: ಭಾರೀ ವಿರೋಧದ ನಡುವೆ ರಾಜ್ಯಸಭೆಯಲ್ಲಿ ವಿವಾದಿತ ಕೃಷಿ ಮಸೂದೆಗೆ ಅಂಗೀಕಾರ: ವಿಪಕ್ಷಗಳ ಖಂಡನೆ

  ವಿರೋಧ ಪಕ್ಷಗಳ ಟೀಕೆಗೆ ಉತ್ತರಿಸಿರುವ ಕರ್ನಾಟಕ ಬಿಜೆಪಿ ಸಂಸದ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್​ ಜೋಶಿ, ವಿರೋಧ ಪಕ್ಷಗಳು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ. ಈ ರೀತಿಯ ಗೂಂಡಾವರ್ತನೆ ದೇಶದ ಜನರ ತೀರ್ಪಿಗೆ ವಿರೋಧವಾಗಿದ್ದು, ಕೇಂದ್ರ ಸರ್ಕಾರ ವಿಪಕ್ಷಗಳ ದುರ್ವರ್ತನೆಯನ್ನು ಸಹಿಸುವುದಿಲ್ಲ ಎಂದಿದ್ದಾರೆ.

  ಇದನ್ನೂ ಓದಿ: ಉಡುಪಿ, ದಕ್ಷಿಣ ಕನ್ನಡ, ಮಲೆನಾಡು, ಕೊಡಗಿನಲ್ಲಿ ಭಾರೀ ಮಳೆ; ಉತ್ತರ ಕರ್ನಾಟಕದಲ್ಲೂ ವರುಣನ ಆರ್ಭಟ

  ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್​ ತೋಮರ್​ ಕೂಡ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್​ ಮತ್ತು ತೃಣಮೂಲ ಕಾಂಗ್ರೆಸ್​ ರಾಜ್ಯಸಭೆಯಲ್ಲಿ ಗೂಂಡಾಗಳಂತೆ ವರ್ತಿಸಿದರು. ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ರೈತರಿಗೆ ಎಂದೂ ಒಳ್ಳೆಯ ಕೆಲಸ ಮಾಡಿಲ್ಲ, ಇಂದು ರಾಜ್ಯಸಭೆಯಲ್ಲಿ ಬಹುತ್ವ ಇಲ್ಲ ಎಂದು ಅರಿವಾದಾಗ ಕಾಂಗ್ರೆಸ್​ ಗೂಂಡಾಗಿರಿ ಪ್ರದರ್ಶಿಸಿದೆ ಎಂದಿದ್ದಾರೆ.

  ಪಂಜಾಬ್​ - ಹರಿಯಾಣ ಗಡಿಯಲ್ಲಿ ಸಂಚಾರ ನಿಷೇಧ:

  ಅತ್ತ ರಾಜ್ಯಸಭೆಯಲ್ಲಿ ಬಿಲ್​ ಪಾಸ್​ ಆಗುತ್ತಲೇ ಇತ್ತ ಪಂಜಾಬ್​ ಮತ್ತು ಹರಿಯಾಣದಲ್ಲಿ ರೈತರ ಪ್ರತಿಭಟನೆಯ ಕಾವು ದುಪ್ಪಟ್ಟಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಎರಡೂ ರಾಜ್ಯಗಳ ನಡುವಿನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಪ್ರತಿಭಟನೆ ತಾರಕಕ್ಕೇರಿದೆ.
  Published by:Sharath Sharma Kalagaru
  First published: