ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ತಾಯಿಯ 99ನೇ ಹುಟ್ಟುಹಬ್ಬ (Birthday) ದಿನವಾದ ಜೂನ್ 18 ರಂದು ಭಾವನಾತ್ಮಕ ಪತ್ರವೊಂದನ್ನು ಟ್ವಿಟ್ಟರ್ ನಲ್ಲಿ (Twitter) ಹಂಚಿಕೊಂಡಿದ್ದರು. ಬ್ಲಾಗ್‌ನಲ್ಲಿ, ಪ್ರಧಾನಿ ಮೋದಿ, ಅವರ ತಾಯಿ ಹೀರಾಬೆನ್ ಮೋದಿ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿ ಕೊಂಡಾಡಿದ್ದರು. ಇದೇ ವೇಳೆ ಬ್ಲಾಗ್‌ನಲ್ಲಿ ಮೋದಿಯವರು ಅಬ್ಬಾಸ್ (Abbas) ಎಂಬ ಮತ್ತೊಂದು ಹೆಸರನ್ನು ಸಹ ಉಲ್ಲೇಖಿಸಿದ್ದರು. ಅಂದಿನಿಂದ ಈ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹಾಗಾದರೆ ಅಬ್ಬಾಸ್ ಮಿಯಾಂಜಿಭಾಯಿ ರಾಮ್ಸಾದಾ ಮೊಮಿನ್ ಯಾರು? ಮೋದಿಯವರಿಗೆ ಇವರು ಹೇಗೆ ಗೊತ್ತು? ಎಂಬುದರ ಬಗ್ಗೆ ಇಲ್ಲಿದೆ ವಿವರ.
ಬಾಲ್ಯದ ಗೆಳೆಯನನ್ನು ನೆನಪಿಸಿಕೊಂಡ ಮೋದಿ
ಬ್ಲಾಗ್‌ನಲ್ಲಿ ಉಲ್ಲೇಖಿಸಿರುವ ಅಬ್ಬಾಸ್ ಪಿಎಂ ಮೋದಿ ಅವರ ಬಾಲ್ಯದ ಗೆಳೆಯ. ಮೋದಿ ಅವರ ತಂದೆಯ ಸ್ನೇಹಿತನ ಮಗ. ಅಬ್ಬಾಸ್ ತನ್ನ ತಂದೆಯ ನಿಧನದ ನಂತರ ಮೋದಿ ಕುಟುಂಬದ ಜೊತೆಯಲ್ಲಿಯೇ ಒಟ್ಟಿಗೆ ಇದ್ದರು. ವಾಡ್‌ನಗರದಲ್ಲಿರುವ ತಮ್ಮ ಪುಟ್ಟ ಮನೆಯನ್ನು ನೆನಪಿಸಿಕೊಂಡ ಮೋದಿ, "ಅದಕ್ಕೆ ಕಿಟಕಿಯೂ ಇರಲಿಲ್ಲ, ಶೌಚಾಲಯ, ಸ್ನಾನಗೃಹದಂತಹ ಐಷಾರಾಮಿ ವ್ಯವಸ್ಥೆ ಇರಲಿಲ್ಲ. ಮಣ್ಣಿನ ಗೋಡೆಗಳು ಮತ್ತು ಹಂಚಿನ ಛಾವಣಿ ಇದ್ದ ಒಂದು ಕೋಣೆಯ ವಠಾರವನ್ನು ನಾವು ನಮ್ಮ ಮನೆ ಎಂದು ಕರೆಯುತ್ತಿದ್ದೆವು. ಈ ಪುಟ್ಟ ಮನೆಯಲ್ಲಿ ನನ್ನ ತಾಯಿ ಇತರರ ಸಂತೋಷದಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತ ಖುಷಿಯಾಗಿದ್ದರು. "ನಮ್ಮ ಮನೆ ಚಿಕ್ಕದಾಗಿರಬಹುದು, ಆದರೆ ನನ್ನ ತಾಯಿಗೆ ವಿಶಾಲವಾದ ಹೃದಯವಿತ್ತು” ಎಂದು ಬರೆದಿದ್ದರು. ಹೀಗೆ ಮುಂದುವರಿದ ಪತ್ರದಲ್ಲಿ ಮೋದಿ ತಮ್ಮ ಬಾಲ್ಯದ ಗೆಳೆಯನನ್ನು ಸಹ ನೆನಪಿಸಿಕೊಂಡಿದ್ದಾರೆ.
ಅಬ್ಬಾಸ್ ಯಾರು?
ತಮ್ಮ ಬಾಲ್ಯದ ಗೆಳೆಯನ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ನನ್ನ ತಂದೆಯ ಸ್ನೇಹಿತರು ವಾಸಿಸುತ್ತಿದ್ದ ಹಳ್ಳಿಯೊಂದಿತ್ತು. ಅವರ ಮಗ ಅಬ್ಬಾಸ್. ಅವರ ತಂದೆಯ ಅಕಾಲಿಕ ಮರಣದ ನಂತರ, ನಮ್ಮ ತಂದೆ ಅಬ್ಬಾಸ್ಭಾಯ್ ಅವರನ್ನು ನಮ್ಮ ಮನೆಗೆ ಕರೆತಂದರು. ಅಬ್ಬಾಸ್ ತಮ್ಮೊಟ್ಟಿಗೆಯೇ ವಾಸಿಸುತ್ತಾ ಬೆಳೆದರು ಎಂದಿದ್ದಾರೆ.
ಇದನ್ನೂ ಓದಿ: Monica Khanna: ಬೆಂಕಿ ತಗುಲಿದ ವಿಮಾನ, ಒಂದೇ ಎಂಜಿನ್ನಲ್ಲಿ ವಿಮಾನ ಹಾರಿಸಿ 191 ಜೀವ ಉಳಿಸಿದ ದಿಟ್ಟ ಪೈಲಟ್
“ನಮ್ಮೆಲ್ಲ ಒಡಹುಟ್ಟಿದವರಂತೆಯೇ ತಾಯಿಯೂ ಸಮನಾಗಿ ಅಬ್ಬಾಸ್‌ಗೆ ಪ್ರೀತಿ ಕೊಟ್ಟಿದ್ದರು, ಕಾಳಜಿ ಮಾಡುತ್ತಿದ್ದರು. ಪ್ರತಿ ವರ್ಷ ಈದ್‌ನಲ್ಲಿ ಅವನ ನೆಚ್ಚಿನ ಭಕ್ಷ್ಯಗಳನ್ನು ತಯಾರಿಸುತ್ತಿದ್ದರು. ಹಬ್ಬಗಳಂದು ನೆರೆಹೊರೆಯ ಮಕ್ಕಳು ನಮ್ಮ ಮನೆಗೆ ಬಂದು ನನ್ನ ತಾಯಿ ಮಾಡಿದ ಸಿಹಿಯನ್ನು ಸವಿಯುತ್ತಿದ್ದರು”ಎಂದು ಪ್ರಧಾನಿ ಮೋದಿ ಹೇಳಿದರು. ಮಾಧ್ಯಮಗಳು ವರದಿ ಮಾಡಿದಂತೆ ಅಬ್ಬಾಸ್, ಗುಜರಾತ್ ಸರ್ಕಾರದ ವರ್ಗ-II ಉದ್ಯೋಗಿ, ಅಬ್ಬಾಸ್ ಕೆಲವು ತಿಂಗಳ ಹಿಂದಷ್ಟೇ ಸೇವೆಯಿಂದ ನಿವೃತ್ತರಾದರು. ಇಂಡಿಯಾ ಟುಡೇ ವರದಿ ಪ್ರಕಾರ, ಅಬ್ಬಾಸ್ ಆಹಾರ ಮತ್ತು ಸರಬರಾಜು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಅಬ್ಬಾಸ್ ಅವರು ಮೋದಿಯವರ ಕಿರಿಯ ಸಹೋದರ ಪಂಕಜಭಾಯ್ ಅವರ ಸಹಪಾಠಿ ಮತ್ತು ಸ್ನೇಹಿತರಾಗಿದ್ದರು.
Maa…this isn’t a mere word but it captures a range of emotions. Today, 18th June is the day my Mother Heeraba enters her 100th year. On this special day, I have penned a few thoughts expressing joy and gratitude. https://t.co/KnhBmUp2se
— Narendra Modi (@narendramodi) June 18, 2022
ಅಬ್ಬಾಸ್ ಬಗ್ಗೆ ಪಂಕಜಭಾಯ್ ಹೇಳಿದ್ದು ಹೀಗೆ
ಅಬ್ಬಾಸ್ ಬಗ್ಗೆ ಮಾತನಾಡಿದ ಪಂಕಜಭಾಯ್ ಅವರು ತುಂಬಾ ಒಳ್ಳೆಯವರು. ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಾರೆ ಮತ್ತು ಹಜ್ ಮಾಡುತ್ತಿದ್ದರು ಎಂದು ಅಬ್ಬಾಸ್ ಅವರನ್ನು ಹೊಗಳಿದರು.
“ಅಬ್ಬಾಸ್ ಅವರ ತಂದೆ ಮತ್ತು ನನ್ನ ತಂದೆ ಸ್ನೇಹಿತರು. ಅವರ ಹಳ್ಳಿಯಲ್ಲಿ ಯಾವುದೇ ಹೈಸ್ಕೂಲ್ ಇರಲಿಲ್ಲ. ಹೀಗಾಗಿ ತಂದೆ ಸಾವಿನ ನಂತರ ಅಬ್ಬಾಸ್ ಅವರು ನಮ್ಮ ಮನೆಗೆ ಬಂದು 8-9ನೇ ತರಗತಿಯನ್ನು ನಮ್ಮೊಂದಿಗೇ ವ್ಯಾಸಾಂಗ ಮಾಡಿದರು” ಎಂದು ಪಂಕಜ್‌ಭಾಯ್ ತಿಳಿಸಿದರು.
ಕುಟುಂಬದ ಸದಸ್ಯರಂತೆ ಇದ್ದ ಅಬ್ಬಾಸ್
ಅಬ್ಬಾಸ್ ಜೊತೆಗೆ ಕುಟುಂಬವು ಒಟ್ಟಿಗೆ ಹಬ್ಬಗಳನ್ನು ಆಚರಿಸುತ್ತಿದ್ದ ದಿನಗಳನ್ನು ಸಹ ಪಂಕಜಭಾಯ್ ನೆನಪಿಸಿಕೊಂಡರು.“ಅಬ್ಬಾಸ್ ಕುಟುಂಬದ ಸದಸ್ಯರಂತೆ ಇದ್ದರು. ಹಬ್ಬ ಹರಿದಿನಗಳಲ್ಲಿ ಅಮ್ಮ ಅವನಿಗೆ ಅಡುಗೆ ಮಾಡುತ್ತಿದ್ದರು. ಮೊಹರಮ್ ವೇಳೆಯಲ್ಲಿ ನನ್ನ ಬಳಿ ಇದ್ದ ಕಪ್ಪು ಶರ್ಟ್ ಅನ್ನು ಅಬ್ಬಾಸ್ ಧರಿಸುತ್ತಿದ್ದರು” ಎಂದು ಪಂಕಜ್‌ಭಾಯ್ ಹೇಳಿದರು.
ಇದನ್ನೂ ಓದಿ: PM Modi Childhood Friend: ಪ್ರಧಾನಿ ಮೋದಿ ಬಾಲ್ಯದ ಗೆಳೆಯ ಅಬ್ಬಾಸ್ ಈಗೆಲ್ಲಿದ್ದಾರೆ? ಮೋದಿಗೆ ಗೆಳೆಯನ ನೆನಪಿದೆಯೇ?
ದಿ ಇಂಡಿಯನ್ ಎಕ್ಸ್‌ಪ್ರೆಸ್ ಮಾಡಿರುವ ವರದಿ ಪ್ರಕಾರ, ಈಗ 64 ವರ್ಷದ ಅಬ್ಬಾಸ್ ತನ್ನ ಕಿರಿಯ ಮಗನ ಜೊತೆ ಇರಲು ಕಳೆದ ವಾರ ಸಿಡ್ನಿಗೆ ತೆರಳಿದ್ದಾರೆ. ಹಿರಿಯ ಮಗ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಖೇರಾಲು ತಹಸಿಲ್‌ನಲ್ಲಿ ವಾಸಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ