ನವದೆಹಲಿ (ಜೂನ್ 24): ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಚುನಾವಣೆ ಮುಂತಾದ ರಾಜಕೀಯ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಜಮ್ಮು ಕಾಶ್ಮೀರದ ರಾಜಕೀಯ ನಾಯಕರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ. ಈಗಾಗಲೇ ಕಣಿವೆ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಗಿದೆ. ಅದಾಗಿ 2 ವರ್ಷಗಳ ಬಳಿಕ ಇದೀಗ ಜಮ್ಮು ಕಾಶ್ಮೀರದ 14 ರಾಜಕೀಯ ಪಕ್ಷಗಳ ನಾಯಕರ ಜೊತೆ ಪ್ರಧಾನಿ ಮೋದಿ ಸಭೆ ನಡೆಸುತ್ತಿರುವುದು ಕುತೂಹಲ ಮೂಡಿಸಿದೆ.
ಜಮ್ಮು ಕಾಶ್ಮೀರದ 14 ವಿವಿಧ ಪಕ್ಷಗಳ ನಾಯಕರನ್ನು ಈ ಸಭೆಗೆ ಮೋದಿ ಆಹ್ವಾನಿಸಿದ್ದಾರೆ. ಇದರಲ್ಲಿ ಕಣಿವೆ ರಾಜ್ಯದ ಮಾಜಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು, ಜಮ್ಮು ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಸೇರಿದ್ದಾರೆ. 2019ರ ಆಗಸ್ಟ್ನಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು (ಆರ್ಟಿಕಲ್ 370) ತೆರವುಗೊಳಿಸಿದ ಬಳಿಕ ಪ್ರಧಾನಿ ಮೋದಿ ಅಲ್ಲಿನ ನಾಯಕರ ಜೊತೆ ನಡೆಸುತ್ತಿರುವ ಮೊದಲ ಸಭೆ ಇದಾಗಿದೆ.
ಜಮ್ಮು ಮತ್ತು ಕಾಶ್ಮೀರದ ಪ್ರಸ್ತುತ ಪರಿಸ್ಥಿತಿ, ಕೊರೊನಾವೈರಸ್ ಸೋಂಕಿನ ನಿರ್ವಹಣೆ, 370ನೇ ವಿಧಿ ರದ್ದು ಸೇರಿದಂತೆ ಹಲವು ನಿಚಾರಗಳು ಸರ್ವಪಕ್ಷ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಗಳಿವೆ. ಈ ಸರ್ವಪಕ್ಷ ಸಭೆಯ ಅಜೆಂಡಾ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಯಾವುದೇ ಮಾಹಿತಿ ನೀಡಿಲ್ಲ. ಈ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೊತೆಗೆ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಸಚಿವರು ಕೂಡ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: Ramesh Jarkiholi: ಮುಂಬೈನಲ್ಲಿ ಬೀಡುಬಿಟ್ಟಿದ್ದ ಬಿಜೆಪಿ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಮುಂದಿನ ನಡೆಯತ್ತ ಎಲ್ಲರ ಚಿತ್ತ
ಈಗಾಗಲೇ ಈ ಸರ್ವಪಕ್ಷ ಸಭೆಯಲ್ಲಿ ಭಾಗಿಯಾಗುವಂತೆ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ಜಮ್ಮು ಕಾಶ್ಮೀರದ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್ (ಪಿಎಜಿಡಿ), ಮಾಜಿ ಸಿಎಂ ಗುಲಾಂ ನಬಿ ಆಜಾದ್, ಕಾಂಗ್ರೆಸ್ ಮತ್ತು ಹಲವು ಸ್ಥಳೀಯ ರಾಜಕೀಯ ಪಕ್ಷಗಳ ನಾಯಕರನ್ನು ಸಭೆಗೆ ಆಹ್ವಾನಿಸಲಾಗಿದೆ. ಈ ಸಭೆಗೂ ಮುನ್ನೆ ತಮ್ಮ ಪಕ್ಷದವರ ಜೊತೆ ಆಯಾ ಪಕ್ಷದ ನಾಯಕರು ಸಭೆ ನಡೆಸಿದ್ದು, ಇಂದಿನ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಯಾವ ಬೇಡಿಕೆಗಳನ್ನು ಇಡಬೇಕೆಂಬ ಬಗ್ಗೆ ಚರ್ಚಿಸಲಾಗಿದೆ. ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಮತ್ತೆ ನೀಡುವಂತೆ ಅಲ್ಲಿನ ಪಕ್ಷಗಳ ನಾಯಕರು ಇಂದಿನ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಒತ್ತಾಯಿಸುವ ಸಾಧ್ಯತೆ ಹೆಚ್ಚಾಗಿದೆ.
ಇದನ್ನೂ ಓದಿ: ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಕೊಳ್ಳೆ ಹೊಡೆದಿದ್ದ 18,170 ಕೋಟಿ ರೂ. ವಾಪಾಸ್!
ಜಮ್ಮು-ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ಅಡಿ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಕಾಶ್ಮೀರದ ರಕ್ಷಣೆ, ವಿದೇಶಾಂಗ ವ್ಯವಹಾರ, ಸಂಪರ್ಕ ಕ್ಷೇತ್ರಗಳು ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಟ್ಟರೆ ಉಳಿದೆಲ್ಲ ಅಧಿಕಾರಗಳು ರಾಜ್ಯದಲ್ಲಿ ಉಳಿದಿತ್ತು. ಈ ವಿಧಿಯನ್ನು ಎರಡು ವರ್ಷಗಳ ಹಿಂದೆಯಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರದ್ದುಗೊಳಿಸಲಾಗಿತ್ತು. 2018ರಲ್ಲಿ ಪಿಡಿಪಿ ಜೊತೆಗಿನ ಮೈತ್ರಿಯಿಂದ ಬಿಜೆಪಿ ದೂರ ಸರಿದ ನಂತರ ಮೆಹಬೂಬ ಮುಫ್ತಿ ನೇತೃತ್ವದ ಸರ್ಕಾರ ಪತನವಾಗಿತ್ತು. ಅದಾದ ಬಳಿಕ ಜಮ್ಮು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಚುನಾವಣೆ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ