• Home
 • »
 • News
 • »
 • national-international
 • »
 • Narendra Modi: ಅಮ್ಮನ ಅಗಲಿಕೆ ನೋವಿನಲ್ಲೂ ಕರ್ತವ್ಯ ಮರೆಯದ ಮೋದಿ, ಹೀರಾಬೆನ್ ಅಂತ್ಯಸಂಸ್ಕಾರದ ಬಳಿಕ ಪ್ರಧಾನಿ ಬ್ಯಾಕ್ ಟು ವರ್ಕ್!

Narendra Modi: ಅಮ್ಮನ ಅಗಲಿಕೆ ನೋವಿನಲ್ಲೂ ಕರ್ತವ್ಯ ಮರೆಯದ ಮೋದಿ, ಹೀರಾಬೆನ್ ಅಂತ್ಯಸಂಸ್ಕಾರದ ಬಳಿಕ ಪ್ರಧಾನಿ ಬ್ಯಾಕ್ ಟು ವರ್ಕ್!

ತಾಯಿ ಅಂತ್ಯಸಂಸ್ಕಾರದ ಬಳಿಕ ಕರ್ತವ್ಯಕ್ಕೆ ಹಾಜರಾದ ಪ್ರಧಾನಿ

ತಾಯಿ ಅಂತ್ಯಸಂಸ್ಕಾರದ ಬಳಿಕ ಕರ್ತವ್ಯಕ್ಕೆ ಹಾಜರಾದ ಪ್ರಧಾನಿ

ತಮ್ಮ ತಾಯಿ ಹೀರಾಬೆನ್ ಅವರ ಅಂತ್ಯಕ್ರಿಯೆಯ ವಿಧಿ-ವಿಧಾನಗಳನ್ನು ಪೂರ್ಣಗೊಳಿಸಿದ ಪ್ರಧಾನಿಯವರು ಎಂದಿನಂತೆ ತಮ್ಮ ಕರ್ತವ್ಯಕ್ಕೆ ಹಾಜರಾದರು. ಮೋದಿ ಅವರ ಇಂತಹ ವಿಶಿಷ್ಟ ವ್ಯಕ್ತಿತ್ವವೇ ಇಂದು ಅವರನ್ನು ಜಗತ್ತಿನಲ್ಲಿ ಒಬ್ಬ ವಿಶಿಷ್ಟ ನಾಯಕನನ್ನಾಗಿ ರೂಪಿಸಿದೆ.

 • Trending Desk
 • 3-MIN READ
 • Last Updated :
 • Share this:

  ನವದೆಹಲಿ: ಮಹಾನಾಯಕ (Great Leader) ಎಂದೆನಿಸಿಕೊಳ್ಳುವುದು ಸುಲಭದ ಮಾತಲ್ಲ. ಅದಕ್ಕಾಗಿ ಹಲವು ಕಠಿಣ ತ್ಯಾಗಗಳನ್ನು, ಬಲಿದಾನಗಳನ್ನು ಮಾಡಿ ಕರ್ತವ್ಯದ ಹಾದಿಯಲ್ಲೇ ಮುನ್ನುಗ್ಗಬೇಕಾಗುತ್ತದೆ. ಅಂತಹ ಒಬ್ಬ ಮಹಾನಾಯಕರಲ್ಲಿ ಒಬ್ಬರಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಗುರುತಿಸಿಕೊಳ್ಳುತ್ತಾರೆಂದರೆ ಅತಿಶಯೋಕ್ತಿಯಾಗಲಾರದು. ಈ ದಿನ ಪ್ರಧಾನಿ ಮೋದಿ ಅವರಿಗೆ ದುಃಖಕರ ದಿನ. ಇಂದು ಬೆಳಗ್ಗೆ ಅವರ ಶತಾಯುಷಿಯಾಗಿದ್ದ ತಾಯಿ (Mother) ಹೀರಾಬೆನ್ ಮೋದಿ (Heeraben Modi) ದೈವಾಧೀನರಾದರು. ಸದಾ ಕರ್ತವ್ಯಪರವಾಗಿರಬೇಕೆಂಬ ನೀತಿ ಪಾಠವನ್ನು ಕಲಿಸಿದ್ದ ಹೀರಾಬೇನ್ ಅವರ ಅಗಲಿಕೆ ನಿಜಕ್ಕೂ ಪುತ್ರರಾದ ಮೋದಿಯವರಿಗೆ ಭರಿಸಲಾರದಂತಹ ನಷ್ಟವೇ ಆಗಿತ್ತು. ಆದಾಗ್ಯೂ, ತಮ್ಮ ತಾಯಿ ಹೇಳಿಕೊಟ್ಟಂತಹ ಮಾರ್ಗದಲ್ಲೇ ನಡೆಯುತ್ತಿರುವ ಮೋದಿ ಅವರಿಗೆ ಈ ದಿನವನ್ನು ಹಾಗೆಯೇ ದುಖದಲ್ಲಿ ಕಳೆಯಲು ಅಕ್ಷರಶಃ ಮನಸ್ಸಾಗಲಿಲ್ಲ, ಹಾಗಾಗಿ ಅವರು ಇಂತಹ ಕಷ್ಟದ ದಿನದಲ್ಲೂ ಸಹ ತಮ್ಮ ಕರ್ತವ್ಯಪರತೆಯನ್ನು ಮೆರೆಯುತ್ತ ಕರ್ತವ್ಯಕ್ಕೆ (work) ಹಾಜರಾದರು.


  ತಾಯಿ ಅಂತ್ಯಸಂಸ್ಕಾರದ ಬಳಿಕ ಕರ್ತವ್ಯಕ್ಕೆ ಹಾಜರು


  ತಮ್ಮ ತಾಯಿ ಹೀರಾಬೆನ್ ಅವರ ಅಂತ್ಯಕ್ರಿಯೆಯ ವಿಧಿ-ವಿಧಾನಗಳನ್ನು ಪೂರ್ಣಗೊಳಿಸಿದ ಪ್ರಧಾನಿಯವರು ಎಂದಿನಂತೆ ತಮ್ಮ ಪ್ರಜೆಗಳ ಕಲ್ಯಾಣಕ್ಕಾಗಿ ಮೀಸಲಾಗಿದ್ದ ಕರ್ತವ್ಯಗಳಿಗೆ ಹಾಜರಾದರು. ಮೋದಿ ಅವರ ಇಂತಹ ವಿಶಿಷ್ಟ ವ್ಯಕ್ತಿತ್ವವೇ ಇಂದು ಅವರನ್ನು ಜಗತ್ತಿನಲ್ಲಿ ಒಬ್ಬ ವಿಶಿಷ್ಟ ನಾಯಕನನ್ನಾಗಿ ರೂಪಿಸಿದೆ ಎಂದು ಹೇಳಬಹುದು. ಇಂದು ಏನೆಲ್ಲ ನಡೆಯಿತು ಎಂಬುದರ ಬಗ್ಗೆ ಒಂದು ಇಣುಕು ನೋಟ ನಿಮಗಾಗಿ ಇಲ್ಲಿದೆ. ತಪ್ಪದೆ ಮುಂದೆ ಓದಿ.


  ಮುಕ್ತಿಧಾಮ, ಸಮಯ ಬೆಳಗ್ಗೆ 9 ಗಂಟೆ


  ತೀರಿಕೊಂಡಿದ್ದ ಹೀರಾಬೆನ್ ಅವರನ್ನು ಚಟ್ಟದ ಮೇಲೆ ಇರಿಸಲಾಗಿತ್ತು. ಈ ಸಮಯದಲ್ಲಿ ಬಂದ ಮೋದಿ ಅವರು ತಮ್ಮ ಬಲ ಹೆಗಲ ಮೇಲೆ ಚಟ್ಟವನ್ನು ಹೊತ್ತುಕೊಂಡು ಮುಂದೆ ಸಾಗಿ ತಮ್ಮ ಕರ್ತವ್ಯ ನಿರ್ವಹಿಸಿದರು. ಅವರು ಗುಜರಾತಿನ ಮುಖ್ಯಮಂತ್ರಿಯಾಗಿ ಹಾಗೂ ಕಳೆದ ಎಂಟು ವರ್ಷಗಳಿಂದ ದೇಶದ ಪ್ರಧಾನಿಯಾಗಿ ತಮ್ಮ ಉತ್ತಮ ಆಡಳಿತದ ಮೂಲಕ ಕೋಟ್ಯಂತರ ಜನರ ಮನ ಗೆದ್ದಿದ್ದಾರೆ. ಆದರೆ, ಇಂದು ಅವರು ಪ್ರಧಾನಿಯಾಗಿರಲಿಲ್ಲ, ಬದಲಾಗಿ ಅವರು ತಮ್ಮ ತಾಯಿ ಹೀರಾಬಾ ಅವರ ಪ್ರೀತಿಯ ಪುತ್ರ ನರೇಂದ್ರನಾಗಿದ್ದರು.


  ತಾಯಿ ಕಲಿಸಿದ ಪಾಠಕ್ಕೆ ಸದಾ ನಿಷ್ಠ


  ತಮ್ಮ ತಾಯಿಯ ಅಗಲಿಕೆಯ ನೋವು ಪ್ರಧಾನಿ ಅವರ ಕಣ್ಣುಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆ ಸಮಯದಲ್ಲಿ ಅಲ್ಲಿ ಉಪಸ್ಥಿತರಿದ್ದ ಇತರರು ಇದನ್ನು ಸ್ಪಷ್ಟವಾಗಿ ಗಮನಿಸಬಹುದಾಗಿತ್ತು. ಜೀವನದಲ್ಲಿ ಎಂತೆಂತಹ ಕಷ್ಟದ ಪರಿಸ್ಥಿತಿಗಳನ್ನು ಎದುರಿಸಿಕೊಂಡು ಬಂದಂತಹ ವ್ಯಕ್ತಿಗೆ ಈ ಕ್ಷಣ ನಿಜಕ್ಕೂ ಸಹಿಸಲಾರದಂತಿತ್ತು.


  ಐದು ದಶಕಗಳ ಅವರ ರಾಜಕೀಯ ಜೀವನ ಕೇವಲ ಜನರ ಹಿತಕ್ಕಾಗಿಯೇ ಮುಡಿಪಾಗಿದ್ದು ವೈಯಕ್ತಿಕವಾಗಿ ಅವರಿಗೆ ಹತ್ತಿರವಾಗಿದ್ದವರೆಂದರೆ ಅವರ ತಾಯಿ ಮಾತ್ರ. ಆ ಮಹಾನ್ ತಾಯಿ ಸದಾ ಸರಳತೆಯ ಹಾಗೂ ಕರ್ತವ್ಯ ನಿಷ್ಠೆಯ ಪಾಠವನ್ನು ಮೋದಿ ಅವರಿಗೆ ಕಲಿಸಿದ್ದರು ಹಾಗೂ ಅದರಂತೆಯೇ ಮೋದಿ ಇಂದಿಗೂ ಬದುಕುತ್ತಿದ್ದಾರೆ.


  ಇದನ್ನೂ ಓದಿ: PM Modi Mother Funeral: ತಾಯಿಯ ಅಂತಿಮಯಾತ್ರೆಗೆ ಹೆಗಲುಕೊಟ್ಟ ಪ್ರಧಾನಿ, ಹೀರಾಬೆನ್ ಪಂಚಭೂತಗಳಲ್ಲಿ ಲೀನ


  ತಾಯಿಯ ಅಗಲಿಕೆ ತುಂಬಲಾರದ ನಷ್ಟ


  ಬೆಳಗ್ಗೆ ಸರಿಯಾಗಿ 9:22 ಕ್ಕೆ ಹೀರಾಬೆನ್ ಅವರ ಚಿತೆಗೆ ಅಗ್ನಿಯನ್ನು ಸ್ಪರ್ಷಿಸಲಾಯಿತು. ಅವರ ಹಿರಿಯ ಮಗ ಸೋಮ್ ಭಾಯ್ ಅವರು ಒಂದೆಡೆಯಲ್ಲಿ ನಿಂತಿದ್ದರೆ ಕಿರಿಯ ಮಗನಾದ ಪಂಕಜ್ ಮೋದಿ ಅವರು ಇನ್ನೊಂದು ಕೊನೆಯಲ್ಲಿ ನಿಂತಿದ್ದರು. ಇವರಿಬ್ಬರ ಮಧ್ಯದಲ್ಲಿ ಪ್ರೀತಿಯ ಮಗನಾದ ನರೇಂದ್ರ ಮೋದಿ ಅವರು ನಿಂತಿದ್ದರು.


  ಸುಮಾರು ಅರ್ಧ ಗಂಟೆಗಳ ಕಾಲ ಮೋದಿ ಅವರು ಆ ಚಿತಾಗ್ನಿಯನ್ನೇ ನೋಡುತ್ತ, ಅದಕ್ಕೆ ಆಗಾಗ ತುಪ್ಪ ಸುರಿಯುತ್ತಿದ್ದರು. ಅಕ್ಷರಶಃ ಅವರು ಮೌನಕ್ಕೆ ಶರಣಾಗಿದ್ದರು ಹಾಗೂ ಆ ಅಗ್ನಿಯನ್ನೇ ನೋಡುತ್ತಿದ್ದರು. ಈ ಅಗಲಿಕೆ ಮೋದಿ ಅವರ ಜೀವನದ ಎಂದಿಗೂ ತುಂಬಲಾರದ ನಷ್ಟವಾಗಿದೆ.


  ಜನ್ಮದಿನದಂದೂ ಸಹ ನೀತಿ ಪಾಠ ಕಲಿಸಿದ್ದ ತಾಯಿ


  ಬೆಳಗ್ಗೆ ಆರು ಗಂಟೆಯ ಸಮಯದಲ್ಲಿ ಸ್ವಯಂ ಆಗಿ ಪ್ರಧಾನಿ ಮೋದಿಯವರೇ ಟ್ವಿಟ್ ಮೂಲಕ ತಮ್ಮ ತಾಯಿಯ ಅಗಲಿಕೆಯ ಸುದ್ದಿ ತಿಳಿಸಿದಾಗ ಜಗತ್ತಿಗೇ ಈ ಸಂಗತಿ ಗೊತ್ತಾಗಿತ್ತು. ಈ ಸಂದರ್ಭದಲ್ಲಿ ಅವರು ತಮ್ಮ ತಾಯಿ ಕಳೆದ ಬಾರಿ ಅಂದರೆ ಜೂನ್ 18, 2022 ರಂದು ಅವರ ನೂರನೇಯ ಜನ್ಮದಿನದಂದು ಹೇಳಿದ್ದ ಪಾಠವನ್ನೇ ಮತ್ತೆ ಮೋದಿ ಟ್ವಿಟ್ ನಲ್ಲಿ ಪುನರುಚ್ಛರಿಸಿದ್ದರು. ಹೀರಾಬಾ ಅವರು ಅಂದು ಮೋದಿಯನ್ನು ಕುರಿತು, "ಬುದ್ಧಿಯಿಂದ ನಡೆ ಹಾಗೂ ಪರಿಶುದ್ಧ ಬದುಕನ್ನು ಬಾಳು" ಎಂದು ಮೋದಿಗೆ ನೀತಿಪಾಠ ಹೇಳಿದ್ದರು.


  ಮೋದಿ ಅವರಿಗೆ ತಾಯಿಯೇ ತ್ರಿಮೂರ್ತಿಗಳ ಶಕ್ತಿಯಾಗಿದ್ದರು


  ಮೋದಿಯವರು ತಮ್ಮ ತಾಯಿಯಲ್ಲೇ ತ್ರಿಮೂರ್ತಿ ದೈವಗಳ ಶಕ್ತಿಯನ್ನು ಕಾಣುತ್ತಿದ್ದರು. ತಾಯಿಯ ಬಗ್ಗೆ ಅವರು ಹೊಂದಿದ್ದ ಭಾವನೆಗಳನ್ನು ಅವರು ಟ್ವಿಟ್ ಮೂಲಕವೇ ತಿಳಿಸಿದ್ದರು. ಸಾಧು-ಸಂತರಂತಹ ಅತಿ ಸರಳವಾದ ಅವರ ತಾಯಿಯ ಬದುಕಿನಿಂದ ಮೋದಿಯವರು ಸಾಕಷ್ಟು ಪ್ರಭಾವಿತರಾಗಿದ್ದರು. ಹಾಗಾಗಿಯೇ ಅವರು ತಮ್ಮ ಕುಟುಂಬದೊಂದಿಗಿನ ಬಾಂಧವ್ಯವನ್ನು ಕಡಿತಗೊಳಿಸಿದ್ದರೂ ಸಹ ತಮ್ಮ ತಾಯಿಯನ್ನು ಆಗಾಗ ಭೇಟಿಯಾಗುತ್ತಿದ್ದರು.


  ತಾಯಿಯ ಭೇಟಿ


  ಮೋದಿಯವರು ತಮ್ಮ ತಾಯಿಯೊಂದಿಗೆ ವಿಶಿಷ್ಟವಾಗಿ ಬಾಂಧವ್ಯವನ್ನು ಹೊಂದಿದ್ದರು. ಅವರು ಸದಾ ಕೆಲಸದ ನಿಮಿತ್ತಿನಿಂದಾಗಿ ಅನೇಕ ಕಡೆ ತೆರಳುತ್ತಿದ್ದರೂ ಸಹ ಸಮಯ ಸಿಕ್ಕಾಗಲೆಲ್ಲ ತಮ್ಮ ತಾಯಿಯನ್ನು ತಪ್ಪದೆ ಭೇಟಿ ಮಾಡುತ್ತಿದ್ದರು ಹಾಗೂ ಆಶೀರ್ವಾದ ಪಡೆಯುತ್ತಿದ್ದರು.


  ಅವರ ತಾಯಿ ಅಷ್ಟೊಂದು ಕಲಿತವರಾಗಿಲ್ಲದೆ ಇದ್ದರೂ ಜೀವನದ ಮೌಲ್ಯಗಳು ಹಾಗೂ ಬುದ್ಧಿಮತ್ತೆಯನ್ನು ಚೆನ್ನಾಗಿ ಹೊಂದಿದ್ದರು. ಅವರು ಮಕ್ಕಳನ್ನು ಬೆಳೆಸುವಾಗ ಸಾಕಷ್ಟು ಕಷ್ಟಗಳನ್ನು ಪಟ್ಟರೂ ಸಹ ಜೀವನದ ಆದರ್ಶ ಮೌಲ್ಯಗಳನ್ನು ಸದಾ ಒಗ್ಗೂಡಿಕೊಳ್ಳುವಂತೆ ಮಕ್ಕಳಿಗೆ ನೀತಿ ಬೋಧೆ ಮಾಡುತ್ತಿದ್ದರು.


  ಭ್ರಷ್ಟಾಚಾರದ ವಿರುದ್ಧ ಹೋರಾಡಲು ತಾಯಿಯೇ ಪ್ರೇರಣೆ


  ಅಕ್ಟೋಬರ್ 7, 2001 ರಲ್ಲಿ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ತಮ್ಮ ತಾಯಿಯ ಆಶೀರ್ವಾದ ಪಡೆಯಲು ತೆರಳಿದ್ದರು. ಆಗ ಅವರ ತಾಯಿ ಮೋದಿಗೆ ಮೊದಲು ಹೇಳಿದ್ದ ನೀತಿಯೆಂದರೆ ಎಂದಿಗೂ ಲಂಚ ಸ್ವೀಕರಿಸದಿರು ಎಂದು. ಈ ಮೊದಲ ನೀತಿಯನ್ನು ಮೋದಿ ಎಂದೆಂದಿಗೂ ಮರೆತಿಲ್ಲ. ಹಾಗಾಗಿಯೇ ಅವರು ಭ್ರಷ್ಟಾಚಾರದ ವಿರುದ್ಧ ಹಲವಾರು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತ ಬಂದಿದ್ದಾರೆ. ಹಾಗಾಗಿಯೇ ಇಂದಿಗೂ ಅವರು ನಾನು ತಿನ್ನುವುದಿಲ್ಲ ಇತರರಿಗೂ ತಿನ್ನಲು ಬಿಡುವುದಿಲ್ಲ ಎಂಬುದನ್ನು ಪಾಲಿಸುತ್ತ ಬಂದಿದ್ದಾರೆ.


  ವೈಯಕ್ತಿಕ ನಷ್ಟಕ್ಕಿಂತಲೂ ಸಾರ್ವಜನಿಕ ಹಿತವೇ ಮುಖ್ಯ


  ಮೋದಿಯವರ ತಾಯಿ ಕಲಿಸಿದ್ದ ಇನ್ನೊಂದು ಪಾಠವೆಂದರೆ ದೇವರು ಎಷ್ಟೇ ಸಮಯ ಕೊಟ್ಟರೂ ಅದನ್ನು ಇತರರ ಹಿತಕ್ಕಾಗಿ ಮೀಸಲಿಡು ಎಂಬುದನ್ನು. ಈ ಪಾಠವನ್ನೂ ಸಹ ಮೋದಿ ಮರೆತಿಲ್ಲ. ಹಾಗಾಗಿಯೇ ಅವರು ತಮ್ಮ ಅತಿಯಾದ ವೈಯಕ್ತಿಕ ನಷ್ಟದ ಹೊರತಾಗಿಯೂ ಈ ದಿನದ ಕರ್ತವ್ಯವನ್ನು ಮರೆಯಲಿಲ್ಲ.


  ಇತರೆ ನಾಯಕರಂತೆ ಈ ಘಟನೆಯನ್ನು ಅವರು ಅತಿಯಾದ ಜನಸಂಗ್ರಹಕ್ಕೆ ಬಳಸಲಿಲ್ಲ. ಬದಲಾಗಿ ಇದೊಂದು ವೈಯಕ್ತಿಕ ಪ್ರಕ್ರಿಯೆಯಾಗಿತ್ತು ಮೋದಿ ಅವರ ಪಾಲಿಗೆ. ಅಂತೆಯೇ ಈ ಅಂತಿಮ ಸಂದರ್ಭದಲ್ಲಿ, ಅವರು ಪ್ರಚಾರಕರಾಗಿದ್ದ ಸಮಯದಲ್ಲಿದ್ದ ಕೆಲ ಸಹೋದ್ಯೋಗಿಗಳು, ಗುಜರಾತಿನ ಕೆಲ ಮುಖಂಡರು ಹಾಗೂ ಬಂಧುಗಳು ಮಾತ್ರವೇ ಉಪಸ್ಥಿತರಿದ್ದರು.


  1988 ರಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡಿದ್ದ ಮೋದಿ


  ವೈಯಕ್ತಿಕ ವಿಷಯಗಳು ಮೋದಿ ಅವರ ಪಾಲಿಗೆ ಸದಾ ವೈಯಕ್ತಿಕವಾಗಿಯೇ ಉಳಿದಿವೆ. 1988 ರಲ್ಲಿ ಮೋದಿಯವರು ಕೈಲಾಶ್-ಮಾನಸರೋವರ ಯಾತ್ರೆಗೆ ತೆರಳಿದ್ದರು. ಯಾತ್ರೆಯಿಂದ ತಿರುಗಿಬಂದನಂತರ ಅವರಿಗೆ ಅವರ ತಂದೆಯ ತೀವ್ರ ಅನಾರೋಗ್ಯದ ಬಗ್ಗೆ ತಿಳಿಯಿತು.


  ತದನಂತರ ಮೋದಿಯವರು ತಡ ಮಾಡದೆ ತಮ್ಮ ತಂದೆ ದಾಮೋದರ್ ದಾಸ್ ಮೋದಿಯವರನ್ನು ನೋಡಲು ತೆರಳಿದರು. ದಾಮೋದರ್ ಅವರು ಮೋದಿಯನ್ನು ಒಮ್ಮೆ ಕಣ್ತುಂಬ ನೋಡಿ ತಮ್ಮ ಪ್ರಾಣಬಿಟ್ಟರು. ಅದರ ಮರುದಿನವೇ ಮೋದಿ ಅವರು ಎಂದಿನಂತೆ ತಮ್ಮ ಪ್ರಚಾರಕ ಕರ್ತವ್ಯಕ್ಕೆ ಹಾಜರಾಗಿದ್ದರು.


  ತಾಯಿಯ ಅನಾರೋಗ್ಯದ ಸ್ಥಿತಿಯಲ್ಲೂ ಕೆಲಸಗಳನ್ನು ಮಾಡುತ್ತಿದ್ದ ಮೋದಿ


  ಡಿಸೆಂಬರ್ 28 ರಂದು ತಮ್ಮ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆಂಬ ವಿಷಯ ತಿಳಿದಾಗ ಮೋದಿ ಅವರನ್ನು ಭೇಟಿ ಮಾಡಲು ಅಹ್ಮದಾಬಾದಿಗೆ ತೆರಳಿದರು. ಈ ಸಂದರ್ಭದಲ್ಲಿ ಶತಾಯುಷಿಯಾಗಿದ್ದ ಅವರ ತಾಯಿಯ ಸ್ಥಿತಿ ಬಲು ಸೂಕ್ಷ್ಮವಾಗಿತ್ತು. ಭೇಟಿ ಮಾಡಿ ಪುನಃ ದೆಹಲಿಗೆ ಆಗಮಿಸಿದ ಮೋದಿಯವರು ಪ್ರಧಾನಿಯ ಕರ್ತವ್ಯದಲ್ಲಿ ಮತ್ತೆ ತೊಡಗಿಕೊಂಡರು.


  ಕರ್ತವ್ಯ ನಿಷ್ಠೆಗೆ ಸರ್ದಾರ್ ಅವರೇ ಪ್ರೇರಣೆ


  ಈ ಮೇಲಿನ ಎಲ್ಲ ಅಂಶಗಳನ್ನು ಗಮನಿಸಿದಾಗ ಮೋದಿಯವರಿಗೆ ತಮ್ಮ ಕರ್ತವ್ಯದ ಮೇಲೆ ನಿಷ್ಠೆ ಹೇಗಿದೆ ಎಂಬುದು ಸರಳವಾಗಿ ಸಾಬೀತಾಗುತ್ತದೆ. ಆದರೆ, ಪ್ರಮುಖವಾಗಿ ಈ ಬಗ್ಗೆ ನಿಷ್ಠೆಯನ್ನು ಮೋದಿಯವರು ತಮ್ಮಲ್ಲಿ ಒಡಗೂಡಿಸಿಕೊಳ್ಳಲು ಪ್ರಮುಖ ಪ್ರೇರಣ ಸರ್ದಾರ್ ಪಟೇಲ್ ಅವರಾಗಿದ್ದಾರೆ.


  ಹಾಗಾಗಿಯೇ ಪಟೇಲ್ ಅವರ ಗೌರವಾರ್ಥವಾಗಿ ಮೋದಿಯವರು ಸರ್ದಾರ್ ಸರೋವರ್ ಡ್ಯಾಂ ಬಳಿ ವಿಶ್ವದ ಅತಿ ಎತ್ತರದ ಪಟೇಲ್ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದಾರೆನ್ನಬಹುದು. ಸರ್ದಾರ್ ಪಟೇಲ್ ಅವರು ಎಷ್ಟೊಂದು ಕರ್ತವ್ಯ ನಿಷ್ಠರಾಗಿದ್ದರು ಎಂಬುದಕ್ಕೆ ಒಂದು ಪ್ರಸಂಗ ನೆನಪಿಸಿಕೊಳ್ಳಬಹುದು.


  1909 ರಲ್ಲಿ ಗುಜರಾತಿನ ನ್ಯಾಯಾಲಯವೊಂದರಲ್ಲಿ ವಕೀಲರಾಗಿದ್ದ ಪಟೇಲ್ ಅವರು ತಮ್ಮ ಕೇಸನ್ನು ಮಂಡಿಸುತ್ತಿದ್ದರು. ಕೇಸಿನ ಮಧ್ಯದಲ್ಲಿರುವಾಗಲೇ ಅವರಿಗೆ ಅವರ ಮಡದಿ ತೀರಿಕೊಂಡ ಟೆಲಿಗ್ರಾಂ ಬಂದಿತು. ಅದನ್ನು ನೋಡಿದ ಪಟೇಲ್ ಅವರು ಆ ಟೆಲಿಗ್ರಾಂ ಅನ್ನು ತಮ್ಮ ಪಾಕೆಟಿನಲ್ಲಿ ಹಾಕಿ ಮತ್ತೆ ತಮ್ಮ ಕೇಸನ್ನು ಮಂಡಿಸಲು ಪ್ರಾರಂಭಿಸಿದರು. ತದನಂತರ ಅಲ್ಲಿದ್ದ ನ್ಯಾಯಮೂರ್ತಿ ಹಾಗೂ ಜನರಿಗೆ ಈ ವಿಷಯ ತಿಳಿದಾಗ ಅವರೆಲ್ಲ ಬೆರಗಾಗಿದ್ದರು.


  ಇನ್ನು ಮೋದಿ ಅವರ ವಿಷಯಕ್ಕೆ ಬಂದಾಗಲೂ ಸಹ ಮೋದಿ ಅವರು ಸರ್ದಾರ್ ಅವರ ಹಾದಿಯಲ್ಲೇ ನಡೆಯುತ್ತಿರುವುದು ಮನದಟ್ಟಾಗುತ್ತದೆ. ತಮ್ಮ ತಾಯಿಗೆ ಅಂತಿಮ ನಮನ ಸಲ್ಲಿಸಲು ಅವರು ಇಂದು ಬೆಳಗ್ಗೆ ಅವರ ಕಿರಿಯ ಸಹೋದರ ಪಂಕಜ್ ಮೋದಿಯವರ ಮನೆ ಸ್ಥಿತವಿರುವ ರಾಯ್ಸನ್ ಪ್ರದೇಶಕ್ಕೆ ತೆರಳಬೇಕಾಗಿತ್ತು. ಅಹ್ಮದಾಬಾದ್ ತಲುಪುತ್ತಿದ್ದಂತೆ ಮೋದಿಯವರು ಈ ದಿನದ ಯಾವ ಕಾರ್ಯಕ್ರಮಗಳನ್ನು ಕ್ಯಾನ್ಸಲ್ ಮಾಡದಂತೆ ದಿಟ್ಟ ನಿರ್ಧಾರ ತೆಗೆದುಕೊಂಡರು.


  ಮೋದಿಯವರು ತಮ್ಮ ಕಿರಿಯ ಸಹೋದರನ ಮನೆಗೆ ಭೇಟಿ ನೀಡಿದಾಗಲೂ ಹೆಚ್ಚು ಸಮಯ ವ್ಯಯಿಸಲಿಲ್ಲ. ಬಂದ ಕರ್ತವ್ಯವನ್ನಷ್ಟೇ ಮುಗಿಸುವ ಹೊಣೆಗಾರಿಕೆ ಹೊತ್ತಿದ್ದರು. ತಾಯಿಯ ಪಾರ್ಥಿವ ಶರೀರವನ್ನು ವಾಹನದಲ್ಲಿರಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಸೆಕ್ಟರ್ 30, ಗಾಂಧಿನಗರದ ಮುಕ್ತಿಧಾಮಕ್ಕೆ ತೆರಳಿದರು.


  ಇದನ್ನೂ ಓದಿ: Heeraben Modi Life: ಮಗ ಪ್ರಧಾನಿಯಾದ್ರೂ ಅಮ್ಮ ಹೀರಾಬೆನ್ ಇಷ್ಟು ಸಿಂಪಲ್ಲಾಗಿದ್ರು!


  ಈ ಅಂತಿಮ ಸಂಸ್ಕಾರದ ಸಂದರ್ಭದಲ್ಲಿ ಕೇವಲ ಅಲ್ಪ ಸಂಖ್ಯೆಯಲ್ಲಿ ಗಣ್ಯರು ಮಾತ್ರವೇ ಉಪಸ್ಥಿತರಿದ್ದರು. ಚಿತೆಗೆ ಅಗ್ನಿ ಸ್ಪರ್ಷಿಸಿ ಅರ್ಧ ಗಂಟೆ ಕಳೆಯುವಷ್ಟರಲ್ಲಿ ಮೋದಿಯವರು ಅಲ್ಲಿ ನೆರೆದಿದ್ದ ರಾಜ್ಯ ಸಚಿವರು ಹಾಗೂ ಪಕ್ಷದ ಮುಖಂಡರನ್ನು ಉದ್ದೇಶಿಸಿ ಮರಳಿ ಕರ್ತವ್ಯಕ್ಕೆ ತೆರಳುವಂತೆಯೂ ತಮ್ಮ ವೈಯಕ್ತಿಕ ಕಾರಣದಿಂದಾಗಿ ಅವರ ಕರ್ತವ್ಯಕ್ಕೆ ಅಡ್ಡಿಯಾಗದಂತೆ ಸೂಚಿಸಿ ಕಳುಹಿಸಿದರು. ಕೊನೆಯಲ್ಲಿ ಆ ಸ್ಥಳದಲ್ಲಿ ಕುಟುಂಬ ಸದಸ್ಯರು ಹಾಗೂ ಕೆಲ ಆಪ್ತ ಬಂಧು-ಬಳಗ ಸೇರಿದಂತೆ ಕೇವಲ 25-30 ಜನರು ಮಾತ್ರವೇ ಉಪಸ್ಥಿತರಿದ್ದರು.


  ಮತ್ತೆ ಕರ್ತವ್ಯಕ್ಕೆ ಮರಳಿದ ಮೋದಿ


  ತನ್ನ ತಾಯಿಯ ಚಿತೆಗೆ ಬೆಂಕಿ ನೀಡಿ ಕೇವಲ ಕೆಲವೆ ನಿಮಿಷಗಳಿಂದ ಅಲ್ಲಿಂದ ತೆರಳಿ ಮತ್ತೆ ಕರ್ತವ್ಯಕ್ಕೆ ಹಾಜರಾಗುವಂತಹ ಪುತ್ರ ಇಂದು ಸಿಗುವುದು ಅತ್ಯಂತ ದುರ್ಲಭ. ಆದರೆ ಮೋದಿಯವರು ಮಾತ್ರ ಸದ್ಯ ಇಂತಹ ಘಟನೆಗೆ ಸಾಕ್ಷಿ. ಚಿತಾಗ್ನಿಯನ್ನು ಸ್ವಲ್ಪ ಸಮಯದವರೆಗೆ ನೋಡಿ ತಮ್ಮ ತಾಯಿಯನ್ನು ಮನದಲ್ಲೇ ನೆನೆದು ಮತ್ತೆ ಕರ್ತವ್ಯಕ್ಕೆ ಹಾಜರಾದ ಮೋದಿಯವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪಶ್ಚಿಮ ಬಂಗಾಳದ ಜನತೆಯ ಹಿತಕ್ಕಾಗಿದ್ದ 7,800 ಕೋಟಿ ರೂಪಾಯಿಗಳ ಹಲವು ಯೋಜನೆಗಳಿಗೆ ಚಾಲನೆ ನೀಡಿದರು.


  (ವರದಿ: ಬ್ರಜೇಶ್ ಕುಮಾರ್ ಸಿಂಗ್)

  First published: