ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬ್ರಿಟನ್ ಪ್ರಧಾನಿ ರಿಷಿ ಸುನಕ್ (Rishi Sunak) ಅವರಿಗೆ ದೂರವಾಣಿ ಕರೆ ಮಾಡಿ ಅನೇಕ ದ್ವಿಪಕ್ಷೀಯ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ. ಗುರುವಾರ ರಾತ್ರಿ ಪ್ರಧಾನಿ ಮೋದಿ ಅವರು ರಿಷಿ ಸುನಕ್ ಅವರಿಗೆ ದೂರವಾಣಿ ಕರೆ ಮಾಡಿದ್ದು, ವ್ಯಾಪಾರ, ಆರ್ಥಿಕ ಕ್ಷೇತ್ರ ಸೇರಿದಂತೆ ವಿವಿಧ ದ್ವಿಪಕ್ಷೀಯ ವಿಚಾರಗಳ ಪ್ರಗತಿಯ ಬಗ್ಗೆ ಮಾತುಕತೆ ನಡೆಸಿದರು.
ಇದೇ ವೇಳೆ ಲಂಡನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಖಲಿಸ್ತಾನ್ ಪರ ಬೆಂಬಲಿಗರು ದಾಳಿ ನಡೆಸಿ ರಾಷ್ಟ್ರಧ್ವಜವನ್ನು ಕೆಳಗಿಳಿಸಿ, ರಾಜತಾಂತ್ರಿಕ ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡಿರುವ ವಿಚಾರಗಳ ಬಗ್ಗೆಯೂ ಚರ್ಚಿಸಿ ಪ್ರಧಾನಿ ಮೋದಿ ಮಾಹಿತಿ ಪಡೆದುಕೊಂಡರು.
ಇದನ್ನೂ ಓದಿ: Rishi Sunak: 130 ವರ್ಷಗಳ ಹಿಂದೆ ಪ್ರಾರಂಭವಾದ ಪಯಣ ; ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತೀಯ ಮೂಲದ ರಿಷಿ ಸುನಕ್!
ರಾಯಭಾರ ಕಚೇರಿಗೆ ಭದ್ರತೆಯ ಭರವಸೆ
ಅಲ್ಲದೇ, ಯುಕೆಯಲ್ಲಿರುವ ಭಾರತೀಯ ರಾಜತಾಂತ್ರಿಕ ಸಂಸ್ಥೆಗಳ ಭದ್ರತೆಯ ವಿಷಯವನ್ನು ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ, ಭಾರತ ವಿರೋಧಿ ಕೃತ್ಯಗಳ ವಿರುದ್ಧ ಯುಕೆ ಸರ್ಕಾರ ಬಲವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಈ ವೇಳೆ ಮೋದಿ ಅವರಿಗೆ ಸಕರಾತ್ಮಕವಾಗಿ ಸ್ಪಂದಿಸಿ ಪ್ರತ್ಯುತ್ತರ ನೀಡಿದ ರಿಷಿ ಸುನಕ್ ಅವರು, ಭಾರತೀಯ ಹೈಕಮಿಷನ್ ಮೇಲಿನ ದಾಳಿಯನ್ನು ನಮ್ಮ ರಾಷ್ಟ್ರ (ಯುಕೆ) ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಈ ಬಗ್ಗೆ ಭಾರತೀಯರು ಮತ್ತು ಭಾರತದ ರಾಯಭಾರ ಕಚೇರಿಗೆ ಅಗತ್ಯ ಭದ್ರತೆಯನ್ನು ನೀಡುತ್ತೇವೆ ಭರವಸೆ ಎಂದು ಆಶ್ವಾಸನೆ ನೀಡಿದರು.
ಇನ್ನು, ರಿಷಿ ಸುನಕ್ ಅವರ ಜೊತೆಗಿನ ಮಾತುಕತೆ ವೇಳೆ, ಭಾರತಕ್ಕೆ ಕೋಟ್ಯಂತರ ರುಪಾಯಿ ವಂಚಿಸಿ ಪರಾರಿಯಾಗಿ ಬ್ರಿಟನ್‌ನಲ್ಲಿ ಆಶ್ರಯ ಪಡೆದಿರುವ ಭಾರತದ ಆರ್ಥಿಕ ಅಪರಾಧಿಗಳನ್ನು ಸ್ವದೇಶಕ್ಕೆ ಮರಳಿಸುವ ಬಗ್ಗೆಯೂ ಪ್ರಧಾನಿ ಮೋದಿ ಚರ್ಚೆ ನಡೆಸಿದರು. ಮುಖ್ಯವಾಗಿ ಉಭಯ ಪ್ರಧಾನ ಮಂತ್ರಿಗಳು ಹಲವಾರು ದ್ವಿಪಕ್ಷೀಯ ವಿಷಯಗಳು, ವಿಶೇಷವಾಗಿ ವ್ಯಾಪಾರ ಮತ್ತು ಆರ್ಥಿಕ ವಲಯಗಳಲ್ಲಿನ ಪ್ರಗತಿಯನ್ನು ಪರಿಶೀಲಿಸಿದರು.
ಇದನ್ನೂ ಓದಿ: Explainer: ಅಕ್ರಮ ವಲಸಿಗರ ನಿಯಂತ್ರಣಕ್ಕೆ ಬ್ರಿಟನ್ ಕಠಿಣ ಕ್ರಮ: ವಿವಾದಾತ್ಮಕ ಮಸೂದೆ ಏನು? ಕ್ರಮ ಕೈಗೊಳ್ಳಲು ಕಾರಣವೇನು?
ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಗೆ
ಭಾರತ ಮತ್ತು ಯುಕೆ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಶೀಘ್ರ ಒಂದು ಒಳ್ಳೆಯ ತೀರ್ಮಾನವನ್ನು ಕೈಗೊಳ್ಳಲು ರಿಷಿ ಸುನಕ್ ಅವರು ಒಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು, ನರೇಂದ್ರ ಮೋದಿ ಅವರು ರಿಷಿ ಸುನಕ್ ಅವರಿಗೆ ಬೈಸಾಖಿಯ ಶುಭಾಶಯಗಳನ್ನು ತಿಳಿಸಿದರು. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಿ 20 ಶೃಂಗಸಭೆಗೆ ರಿಷಿ ಸುನಕ್ ಅವರನ್ನು ಆಹ್ವಾನಿಸಿದರು. ಜೊತೆಗೆ ಭಾರತದಲ್ಲಿ ನಡೆಯುತ್ತಿರುವ ಜಿ 20 ಪ್ರೆಸಿಡೆನ್ಸಿಗೆ ಯುಕೆ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಸುನಕ್ ಹೇಳಿದರು.
ಇದನ್ನೂ ಓದಿ: Rishi Sunak: ಯುಕೆ ಆಡಳಿತವನ್ನು ಸಂಗೀತ ಕುರ್ಚಿ ಆಟಕ್ಕೆ ಹೋಲಿಸಿದ ಬ್ರಿಟನ್ ಮಾಧ್ಯಮಗಳು, ರಿಷಿ ಸುನಕ್ ಮುಂದಿನ ನಡೆ ಏನು?
ಕಳೆದ ನವೆಂಬರ್‌ನಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ20 ಸಭೆಯಲ್ಲಿ ಉಭಯ ನಾಯಕರು ಕೊನೆಯ ಬಾರಿ ಭೇಟಿಯಾಗಿದ್ದರು. ಸದ್ಯ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಜೊತೆಗೆ ನಡೆಸಿದ ದೂರವಾಣಿ ಸಂಭಾಷಣೆ ಭಾರೀ ಕುತೂಹಲ ಮೂಡಿಸಿದ್ದು, ಉಭಯ ನಾಯಕರ ಪರಸ್ಪರ ಮಾತುಕತೆ ಭಾರತದ ಅಭಿವೃದ್ಧಿಯ ವಿಚಾರದಲ್ಲಿ ಎಷ್ಟರ ಮಟ್ಟಿಗೆ ಫಲಪ್ರದ ಆಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ