ಓಲ್ಡ್ ನಂಗಲ್ ಪ್ರದೇಶದ ಪ್ರಕರಣದಲ್ಲಿ ದೆಹಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದು, 9 ವರ್ಷದ ಬಾಲಕಿಯನ್ನು ಪೂಜಾರಿ ಮತ್ತು ಇತರ ಮೂವರು ಸೇರಿ ಈ ತಿಂಗಳ ಆರಂಭದಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದರು ನಂತರ ಅವರ ಪೋಷಕರಿಗೆ ಹೆದರಿಸಿ ಶವಸಂಸ್ಕಾರ ಮಾಡಿದ್ದರು. ಅಂತಿಮ ವರದಿಯಲ್ಲಿ ಶ್ಮಶಾನದ 55 ವರ್ಷದ ಪೂಜಾರಿ ಮತ್ತು ಅದರ ಮೂವರು ಉದ್ಯೋಗಿಗಳನ್ನು ಆರೋಪಿಗಳೆಂದು ಚಾರ್ಜ್ ಸಲ್ಲಿಸಲಾಗಿದೆ. ಪ್ರಕರಣದಲ್ಲಿ ಎಲ್ಲ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಅಪರಾಧ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು CNN-News18 ಗೆ ಈ ವಿಚಾರವಾಗಿ ಮಾಹಿತಿ ತಿಳಿಸಿದರು. ಮತ್ತು ತನಿಖೆಯನ್ನು ಪೂರ್ಣಗೊಳಿಸಿದ್ದು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದೇವೆ ಎಂದು ಹೇಳಿದರು.
ಆಗಸ್ಟ್ 1 ರಂದು ಈ ಘಟನೆ ನಡೆದಿದ್ದು, 9 ವರ್ಷದ ಬಾಲಕಿ ವಾಟರ್ ಕೂಲರ್ ನಿಂದ ತಣ್ಣೀರು ತರಲು ಓಲ್ಡ್ ನಂಗಲ್ ಪ್ರದೇಶದಲ್ಲಿ ಇರುವ ತನ್ನ ಮನೆಯ ಸಮೀಪದ ಶ್ಮಶಾನಕ್ಕೆ ಹೋಗಿದ್ದಳು. ಕೆಲವು ಗಂಟೆಗಳ ನಂತರ ಶ್ಮಶಾನದಲ್ಲಿ ಕೆಲಸ ಮಾಡುತ್ತಿದ್ದ ಪೂಜಾರಿ ಮತ್ತು ಇತರ ಮೂವರು ಬಂದು ಮಗುವಿನ ತಾಯಿಗೆ, ನಿಮ್ಮ ಮಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದರು.
ಪೂಜಾರಿ ಮತ್ತು ಇತರ ಮೂವರು ಪುರುಷರು ಬಾಲಕಿಯ ತಾಯಿಗೆ ಈ ಅಪಘಾತವನ್ನು ಪೊಲೀಸರಿಗೆ ವರದಿ ಮಾಡದಂತೆ ಹೇಳಿದರು, ಅಲ್ಲದೆ ಇದು ಪೊಲೀಸ್ ಪ್ರಕರಣಕ್ಕೆ ಕಾರಣವಾಗುತ್ತದೆ ಮತ್ತು ಅಂತಿಮವಾಗಿ ಮರಣೋತ್ತರ ಪರೀಕ್ಷೆ ಮಾಡಲಾಗುತ್ತದೆ, ಅಲ್ಲಿ ಹುಡುಗಿಯ ಅಂಗಗಳನ್ನು ಕದಿಯಲಾಗುತ್ತದೆ ಎಂದು ತಾಯಿಯನ್ನು ಹೆದರಿಸಿದರು. ನಂತರ ಪೂಜಾರಿ ಹಾಗೂ ಇತರ ಮೂವರು ಆರೋಪಿಗಳು ಹುಡುಗಿಯನ್ನು ಸುಡಲು ಆರಂಭಿಸಿದರು ಆದರೆ ತಾಯಿ ಅದೇ ಹೊತ್ತಿಗೆ ತನ್ನ ಗಂಡನನ್ನು ಕರೆದರು. ಆಗ 100 ಕ್ಕೂ ಹೆಚ್ಚು ಗ್ರಾಮಸ್ಥರು ಸ್ಮಶಾನದಲ್ಲಿ ಜಮಾಯಿಸಿದರು. ಇದೆಲ್ಲಾ ಬೆಳವಣಿಗೆಗಳ ನಂತರ ಈ ವಿಚಾರವಾಗಿ ಪೊಲೀಸರಿಗೆ ಮಾಹಿತಿ ನೀಡಿದರು.
ಸ್ಥಳಕ್ಕಾಗಮಿಸಿದ ಪೊಲೀಸ್ ತಂಡ ಚಿತೆಯಿಂದ ಮಗುವಿನ ಅರ್ಧ ಸುಟ್ಟ ದೇಹವನ್ನು ಹೊರತೆಗೆದು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಯಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಲ್ಲಾ ನಾಲ್ವರನ್ನು ಬಂಧಿಸಲಾಯಿತು.
ಮರುದಿನ ಪೊಲೀಸರ ಮುಂದೆ ತನ್ನ ಹೇಳಿಕೆಯಲ್ಲಿ ಮೃತ ಹುಡುಗಿಯ ತಾಯಿಯು ನಾಲ್ಕು ಪುರುಷರು ತನ್ನ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದರು. ಈ ಆರೋಪಗಳನ್ನು ಆದರಿಸಿ, ಪೋಕ್ಸೊ ಕಾಯ್ದೆ ಮತ್ತು ಐಪಿಸಿ 376 ಡಿ ಸೆಕ್ಷನ್ ಗಳನ್ನು ಪೊಲೀಸರು ಪ್ರಕರಣದಲ್ಲಿ ಸಾಮೂಹಿಕ ಅತ್ಯಾಚಾರ ಎಂದು ಕೇಸು ದಾಖಲಿಸಿದರು. ನಂತರ ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಯಿತು.
ಮೂರು ದಿನಗಳ ನಂತರ, ಆಗಸ್ಟ್ 4 ರಂದು, ಸ್ಥಳೀಯ ಮಹಿಳೆಯರು ಮತ್ತು ಹುಡುಗಿಯ ಪೋಷಕರು ಹಳೆಯ ನಂಗಲ್ ಪ್ರದೇಶದಲ್ಲಿ, ಕ್ರಿಮಟೋರಿಯಂನ ಹತ್ತಿರ ಅಂದರೆ, ಅಪರಾಧದ ಸ್ಥಳದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು.
ಅದೇ ದಿನ ಬೆಳಿಗ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹುಡುಗಿಯ ಪೋಷಕರನ್ನು ಭೇಟಿಯಾದರು. ಈ ಪ್ರಕರಣದಲ್ಲಿ ಸಾಧ್ಯವಿರುವ ಎಲ್ಲಾ ಕಾನೂನಿನ ಸಹಾಯವನ್ನು ನೀಡುವುದಾಗಿ ರಾಹುಲ್ ಗಾಂಧಿ ಆಕೆಯ ಪೋಷಕರಿಗೆ ಭರವಸೆ ನೀಡಿದ್ದರು. ನಂತರ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಕೂಡ ಪೋಷಕರನ್ನು ಭೇಟಿ ಮಾಡಿದರು ಮತ್ತು ಕುಟುಂಬಕ್ಕೆ 10 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದರು.
ತ್ವರಿತ ಮತ್ತು ಶೀಘ್ರ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಎಲ್ಲಾ ತಾಂತ್ರಿಕ ಮತ್ತು ಇತರ ಪುರಾವೆಗಳನ್ನು ವಿಶ್ಲೇಷಿಸಲಾಗಿದೆ ಮತ್ತು ದಾಖಲೆಯನ್ನು ಈಗ ಸಲ್ಲಿಸಲಾಗಿದೆ. ಹಿರಿಯ ಅಧಿಕಾರಿಗಳು ಸಹ ದಿನನಿತ್ಯವೂ ಸಹ ತನಿಖೆಯ ಮೇಲ್ವಿಚಾರಣೆ ನಡೆಸಿದರು. ವಿವರವಾದ ತಪಾಸಣೆ, ವಿಧಿವಿಜ್ಞಾನ ಪರೀಕ್ಷೆ ಮತ್ತು ಸಮಗ್ರ ತನಿಖೆಯ ನಂತರ ಚಾರ್ಜ್ಶೀಟ್ ಅನ್ನು ಸಲ್ಲಿಸಲಾಗಿದೆ, ”ಎಂದು ಅಧಿಕಾರಿ ಹೇಳಿದರು.
ತನಿಖೆಯ ಸಮಯದಲ್ಲಿ, ಸಂಬಂಧಿತ ಸಾಕ್ಷ್ಯಗಳನ್ನು ದಾಖಲಿಸುವುದರ ಜೊತೆಗೆ ವೈಜ್ಞಾನಿಕ, ತಾಂತ್ರಿಕ ಮತ್ತು ಇತರ ಸಾಕ್ಷ್ಯಗಳನ್ನು ಸಂಗ್ರಹಿಸಿ ವಿಶ್ಲೇಷಿಸಲಾಗಿದೆ. ಇದರ ಜೊತೆಯಲ್ಲಿ, ವಿಧಿ ವಿಜ್ಞಾನ ಪ್ರಯೋಗಾಲಯ, ರೋಹಿಣಿ ಹಾಗೂ ದೆಹಲಿ ಪೊಲೀಸರ ಜೀವಶಾಸ್ತ್ರ ಮತ್ತು ಒಡೊಂಟಾಲಜಿಯ ವಿಧಿವಿಜ್ಞಾನ ತಜ್ಞರಿಂದ ನೆರವು ಪಡೆಯಲಾಗಿತ್ತು, ಆರೋಪಿಗಳ ವಿಚಾರಣೆಯ ಸಮಯದಲ್ಲಿ ವಿಧಿವಿಜ್ಞಾನ ಮನೋವಿಜ್ಞಾನಿಗಳನ್ನು ಸಹ ಈ ಕೇಸಿನಲ್ಲಿ ತೊಡಗಿಸಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ