ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ; ಇನ್ಮುಂದೆ ಟಿಕೆಟ್​ ಜೊತೆ ಐಷಾರಾಮಿ ಹೋಟೆಲ್​​ ಕೂಡ ಬುಕ್ ಮಾಡಬಹುದು...!

ಪ್ರೈಡ್ ಹೊಟೇಲ್ ಪ್ರಕಾರ, ವಸತಿ ಸೌಕರ್ಯಗಳ ಹೊರತಾಗಿ ಅತಿಥಿಗಳಿಗೆ ಉಚಿತ ವೈಫೈ, ಹವಾನಿಯಂತ್ರಣ ಸೌಕರ್ಯ ಮತ್ತು 24 ಗಂಟೆಗಳ ಗ್ರಾಹಕ ಸೇವಾ ಸೌಲಭ್ಯ ಸೇರಿ ಪಂಚತಾರಾ ಹೋಟೆಲ್ ತರಹದ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ(ಫೆ.13): ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗಾಗಿ ವಿಭಿನ್ನ ಸೇವೆಗಳನ್ನು ಪರಿಚಯಿಸುತ್ತಿದೆ. ಪ್ರಯಾಣಿಕರ ಸುಖಕರ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ಈಗಾಗಲೇ ರೈಲುಗಳಲ್ಲಿ ಅನೇಕ ಸೇವೆಗಳನ್ನು ನೀಡುತ್ತಿದೆ. ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಕೂಡ ಇಲಾಖೆ ಮುಂಚೂಣಿಯಲ್ಲಿದೆ. ಆ ಮೂಲಕ ರೈಲು ಪ್ರಯಾಣವನ್ನು ಮತ್ತಷ್ಟು ಆರಾಮಗೊಳಿಸುವ ನಿಟ್ಟಿನಲ್ಲಿ ಇಲಾಖೆ ಹೆಜ್ಜೆ ಇಡುತ್ತಿದೆ. ಇದೀಗ ಪ್ರಯಾಣಿಕರು ತಮ್ಮ ರೈಲು ಟಿಕೆಟ್‌ಗಳೊಂದಿಗೆ ಸುರಕ್ಷಿತ ಮತ್ತು ಐಷಾರಾಮಿ ವಾಸ್ತವ್ಯವನ್ನು ಕಾಯ್ದಿರಿಸುವ ಸೌಲಭ್ಯವನ್ನು ಇಲಾಖೆ ಒದಗಿಸುತ್ತಿದೆ.

  ಹೌದು, ಇತ್ತೀಚೆಗೆ ಪ್ರೈಡ್ ಗ್ರೂಪ್ ಆಫ್ ಹೋಟೆಲ್ ರೈಲ್ವೆ ಪ್ರಯಾಣಿಕರಿಗೆ ಐಷಾರಾಮಿ ಮತ್ತು ಸುರಕ್ಷಿತ ವಾಸ್ತವ್ಯವನ್ನು ನೀಡುವ ಉದ್ದೇಶದಿಂದ ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಮ್ ಕಾರ್ಪೊರೇಷನ್(ಐಆರ್‌ಸಿಟಿಸಿ)ನ ಇ-ಟಿಕೆಟಿಂಗ್ ಮತ್ತು ಅಡುಗೆ ವಿಭಾಗದೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ಪ್ರೈಡ್ ಹೋಟೆಲ್ ಗ್ರೂಪ್ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ಈ ಯೋಜನೆಯಡಿ ರೈಲು ಪ್ರಯಾಣಿಕರು ಇನ್ನು ಮುಂದೆ ತಮ್ಮ ರೈಲು ಟಿಕೆಟ್‌ಗಳೊಂದಿಗೆ ದೇಶಾದ್ಯಂತ ತಮಗಿಷ್ಟವಾದ ಹೋಟೆಲ್​ನಲ್ಲಿ ವಸತಿ ಸೌಕರ್ಯವನ್ನು ಕಾಯ್ದಿರಿಸಲು ಸಾಧ್ಯವಾಗುತ್ತದೆ.

  ಐಆರ್‌ಸಿಟಿಸಿಯೊಂದಿಗಿನ ಈ ಸಹಭಾಗಿತ್ವದ ಭಾಗವಾಗಿ ಪ್ರೈಡ್ ಗ್ರೂಪ್ ಆಫ್ ಹೊಟೇಲ್, ಭಾರತೀಯ ರೈಲ್ವೆಯ ಪ್ರಯಾಣಿಕರಿಗೆ ಭಾರತದಾದ್ಯಂತ ಇರುವ ಪ್ರೈಡ್ ಪ್ರಾಪರ್ಟಿಗಳಲ್ಲಿ ಹೋಟೆಲ್ ಕೊಠಡಿಗಳನ್ನು ಕಾಯ್ದಿರಿಸಲು ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಪ್ರೈಡ್ ಹೊಟೇಲ್ ಪ್ರಕಾರ, ವಸತಿ ಸೌಕರ್ಯಗಳ ಹೊರತಾಗಿ ಅತಿಥಿಗಳಿಗೆ ಉಚಿತ ವೈಫೈ, ಹವಾನಿಯಂತ್ರಣ ಸೌಕರ್ಯ ಮತ್ತು 24 ಗಂಟೆಗಳ ಗ್ರಾಹಕ ಸೇವಾ ಸೌಲಭ್ಯ ಸೇರಿ ಪಂಚತಾರಾ ಹೋಟೆಲ್ ತರಹದ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

  ಹೆಚ್ಚು ವಿದ್ಯುತ್​​​ ​ಬಿಲ್​​ನಿಂದ ಖಿನ್ನತೆಗೆ ಒಳಗಾದ ರೈತ ಆತ್ಮಹತ್ಯೆಗೆ ಶರಣು

  ಈ ಯೋಜನೆಯಡಿ ಐಆರ್‌ಸಿಟಿಸಿಯ ಗ್ರಾಹಕರು ರಾಷ್ಟ್ರದಾದ್ಯಂತದ ಯಾವುದೇ ಪ್ರೈಡ್ ಪ್ರಾಪರ್ಟೀಸ್‌ನಲ್ಲಿ ವಸತಿ ಸೌಕರ್ಯಗಳಿಗೆ ಮುಕ್ತ ಪ್ರವೇಶವನ್ನು ಹೊಂದಿರುತ್ತಾರೆ. ಈ ಉಪಕ್ರಮವು ಭಾರತೀಯ ರೈಲ್ವೆ ಪ್ರಯಾಣಿಕರಿಗೆ ತಮ್ಮ ಪ್ರಯಾಣಕ್ಕೆ ಬೇಕಾಗುವ ಸೌಲಭ್ಯಗಳನ್ನು ಒಂದೇ ವೇದಿಕೆಯಡಿ ಪಡೆಯಲು ಸಹಕಾರಿಯಾಗುತ್ತದೆ ಎಂದು ಪ್ರೈಡ್ ಗ್ರೂಪ್ ಆಫ್ ಹೋಟೆಲ್‌ಗಳ ಸೇಲ್ಸ್ ಅಂಡ್ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷ ಅಮಿತ್ ಸಿದಾನಾ ಹೇಳಿದ್ದಾರೆ.

  ಈ ಮಧ್ಯೆ ಪ್ರಸಕ್ತ ಸಮಯವನ್ನು ಗಮನದಲ್ಲಿಟ್ಟುಕೊಂಡು ಪ್ರೈಡ್ ಗ್ರೂಪ್‌ನಿಂದ ‘ಪ್ರೈಡ್ ಸೇಫ್ಟಿ ಅಶ್ಯೂರೆನ್ಸ್’ ಉಪಕ್ರಮವನ್ನು ಕೂಡ ಪ್ರಾರಂಭಿಸಲಾಗಿದೆ. ಜನರು ಪ್ರಯಾಣಿಸುವಾಗ ತಮ್ಮ ವಾಸ್ತವ್ಯದ ಬಗ್ಗೆ ಹೆಚ್ಚು ಚಿಂತನೆ ನಡೆಸುತ್ತಿರುವುದರಿಂದ ಇದನ್ನು ರೂಪಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಸುಖಕರ ಪ್ರಯಾಣ ಖಚಿತಪಡಿಸಿಸಲು ಬುಕಿಂಗ್ ನೀತಿಗಳು, ನೈರ್ಮಲ್ಯ ಮಾರ್ಗಸೂಚಿಗಳು, ಸಿಬ್ಬಂದಿ ಮತ್ತು ಅತಿಥಿಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಒಳಗೊಳ್ಳಲು ಪ್ರೈಡ್ ಸೇಫ್ಟಿ ಅಶ್ಯೂರೆನ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ.

  2020ರ ಡಿಸೆಂಬರ್ 31 ರಂದು ಐಆರ್‌ಸಿಟಿಸಿಯ ನವೀಕರಿಸಿದ ಇ-ಟಿಕೆಟಿಂಗ್ ವೆಬ್ ಪೋರ್ಟಲ್ ಅನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಉದ್ಘಾಟಿಸಿದ್ದರು. ಭಾರತೀಯ ರೈಲ್ವೆ ಇಲಾಖೆ ಮುಂಗಡ ಟಿಕೆಟ್‌ ಕಾಯ್ದಿರಿಸಲು, ಟಿಕೆಟ್ ಖರೀದಿಸಲು, ಬೋಗಿ ಸ್ವಚ್ಛತೆ, ಪ್ರಯಾಣದ ಸಂಬಂಧ ಮಾಹಿತಿ, ರೈಲ್ವೆ ಆಹಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಆಪ್‌ಗಳನ್ನು ಸಿದ್ಧಪಡಿಸಿ ಬಿಡುಗಡೆ ಮಾಡಿದೆ. ಗ್ರಾಹಕ ಸ್ನೇಹಿಯಾಗಿಸಲು ಸ್ಮಾರ್ಟ್‌ಫೋನ್‌, ಮೊಬೈಲ್‌ ಫೋನ್‌ಗಳಲ್ಲಿ ಸುಲಭವಾಗಿ ಬಳಕೆ ಮಾಡುವಂತೆ ಈ ಆಪ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.
  Published by:Latha CG
  First published: