Farmers Protest: ರೈತ ಹೋರಾಟದ ಕಿಚ್ಚಿಗೆ ಬೀಳುತ್ತಾ ಹರಿಯಾಣದ ಬಿಜೆಪಿ ಸರ್ಕಾರ: ಅವಿಶ್ವಾಸ ನಿಲುವಳಿ ಪರ ಮತ ಚಲಾಯಿಸಲು ರೈತರ ಕರೆ

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಅಭಿಯಾನ ನಡೆಸುವುದಾಗಿ ಘೋಷಿಸಿರುವ ರೈತ ಮುಖಂಡರು, ಮಾರ್ಚ್ 13 ರಂದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ವಿರುದ್ಧ ಪ್ರಚಾರ ಆರಂಭಿಸಲಿದ್ದಾರೆ. ಸ್ಥಳೀಯ ರೈತರೊಂದಿಗೆ ಮಾತನಾಡಿ, ಕೃಷಿ ಕಾನೂನುಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ದೆಹಲಿಯಲ್ಲಿ ರೈತರ ಪ್ರತಿಭಟನೆ.

ದೆಹಲಿಯಲ್ಲಿ ರೈತರ ಪ್ರತಿಭಟನೆ.

 • Share this:
  ಪಂಜಾಬ್​ (ಮಾರ್ಚ್​ 08); ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಮೂರು ಕೃಷಿ ಮಸೂದೆಗಳ ವಿರುದ್ಧ ದೇಶದ ರೈತರು ಕಳೆದ 102 ದಿನಗಳಿಂದ ವ್ಯಾಪಕ ಹೋರಾಟ ನಡೆಸುತ್ತಿದ್ದಾರೆ. ಈ ಕಾಯ್ದೆಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಆದರೆ, ರೈತರ ಹೋರಾಟಕ್ಕೆ ಅವರ ಬೇಡಿಕೆಗೆ ಸರ್ಕಾರ ಈ ವರೆಗೆ ಮಣಿದಿಲ್ಲ. ಹೀಗಾಗಿ ಈವರೆಗೆ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳ ವಿರುದ್ಧದ ಹೋರಾಟ, ಇದೀಗ ಸರ್ಕಾರದ ವಿರುದ್ಧದ ಹೋರಾಟವಾಗಿ ಬದಲಾಗಿದೆ. ರೈತರ ಮಾತು ಕೇಳದ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ರೈತರು ನಿರ್ಧರಿಸಿದ್ದಾರೆ. ಹರಿಯಾಣ ಸರ್ಕಾರ ಮಾರ್ಚ್ 10ಕ್ಕೆ ವಿಶ್ವಾಸಮತ ಯಾಚನೆ ಮಾಡಲಿದ್ದು, ಅವಿಶ್ವಾಸ ನಿಲುವಳಿ ಪರ ಮತ ಚಲಾಯಿಸಲು ಸಂಯುಕ್ತ ಕಿಸಾನ್ ಮೋರ್ಚಾ ರಾಜ್ಯದ ಎಲ್ಲಾ ಶಾಸಕರಿಗೂ ಕರೆ ನೀಡಿದೆ.

  ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಅಭಿಯಾನ ನಡೆಸುವುದಾಗಿ ಘೋಷಿಸಿರುವ ರೈತ ಮುಖಂಡರು, ಮಾರ್ಚ್ 13 ರಂದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ವಿರುದ್ಧ ಪ್ರಚಾರ ಆರಂಭಿಸಲಿದ್ದಾರೆ. ಸ್ಥಳೀಯ ರೈತರೊಂದಿಗೆ ಮಾತನಾಡಿ, ಕೃಷಿ ಕಾನೂನುಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

  ಮಾರ್ಚ್ 10 ರಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್‌, ವಿಶ್ವಾಸಮತ ಯಾಚಿಸಲಿದ್ದಾರೆ. ಅಂದು ರಾಜ್ಯದ ಬಿಜೆಪಿ-ಜೆಜೆಪಿ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ತಮ್ಮ ಸ್ಥಳೀಯ ಶಾಸಕರ ಮೇಲೆ ಒತ್ತಡ ಹೇರುವಂತೆ ಎಸ್‌ಕೆಎಂ ರೈತರಲ್ಲಿ ಮನವಿ ಮಾಡಿದೆ.

  ಬಿಜೆಪಿ- ಜೆಜೆಪಿ ನೇತೃತ್ವದ ಮೈತ್ರಿ ಸರ್ಕಾರವನ್ನು ಒತ್ತಡಕ್ಕೆ ಸಿಲುಕಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರವನ್ನು ಒತ್ತಡಕ್ಕೆ ಸಿಲುಕಿಸಬೇಕು ಎಂಬುದು ಸಂಯುಕ್ತ ಕಿಸಾನ್ ಮೋರ್ಚಾದ ಆಲೋಚನೆಯಾಗಿದೆ. ಹರಿಯಾಣದ ಹಲವು ಶಾಸಕರು ರೈತ ಹೋರಾಟಕ್ಕೆ ಮುಕ್ತ ಬೆಂಬಲ ನೀಡಿದ್ದಾರೆ.

  "ರೈತರ ಚಳವಳಿಯ ಈ ನಿರ್ಣಾಯಕ ಹಂತದಲ್ಲಿ ರೈತರೊಂದಿಗೆ ನಿಲ್ಲದವರಿಗೆ ಭವಿಷ್ಯದಲ್ಲಿ ಜನರು ಪಾಠ ಕಲಿಸುತ್ತಾರೆ ಎಂದು ಹರಿಯಾಣದ ಶಾಸಕರಿಗೆ ತಿಳಿಸಿ" ಎಂದು ಎಸ್‌ಕೆಎಂ ತನ್ನ ಹೇಳಿಕೆಯಲ್ಲಿ ಹರಿಯಾಣದ ರೈತರಿಗೆ ತಿಳಿಸಿದೆ.

  ಇದನ್ನೂ ಓದಿ: BS Yediyurappa: ಮುಂದಿನ ಚುನಾವಣೆಯಲ್ಲಿ 135 ಸೀಟುಗೆದ್ದು, ಸಿದ್ದರಾಮಯ್ಯರನ್ನು ವಿಪಕ್ಷ ಸ್ಥಾನದಲ್ಲಿ ಕೂರಿಸುತ್ತೇವೆ; ಸಿಎಂ ಬಿಎಸ್​ವೈ ಸವಾಲ್​

  90 ಸದಸ್ಯರ ವಿಧಾನಸಭೆಯಲ್ಲಿ 50 ಶಾಸಕರೊಂದಿಗೆ ಬಿಜೆಪಿ-ಜನ್‌ನಾಯಕ್ ಜನತಾ ಪಕ್ಷ (ಜೆಜೆಪಿ) ಮೈತ್ರಿಕೂಟದಲ್ಲಿ ಬಹುಮತವಿದೆ. ಆದರೆ ರೈತ ಹೋರಾಟ ಬೆಂಬಲಿಸಿ ಸ್ವತಂತ್ರ ಶಾಸಕರು ಸೇರಿದಂತೆ ಹಲವರು ರಾಜೀನಾಮೆ ನೀಡಿದ್ದರು. ಹಾಗಾಗಿ ಕಳೆದ ವಾರ ವಿಧಾನಸಭೆಯ ಬಜೆಟ್ ಅಧಿವೇಶನದ ಮೊದಲ ದಿನದಂದು ಹರಿಯಾಣದ ವಿರೋಧ ಪಕ್ಷವಾದ ಕಾಂಗ್ರೆಸ್, ಮನೋಹರ್ ಲಾಲ್ ಖಟ್ಟರ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿತ್ತು.

  ಬಿಜೆಪಿಯಲ್ಲಿ 40 ಶಾಸಕರು ಇದ್ದರೆ, ಜೆಜೆಪಿಯಲ್ಲಿ 10 ಶಾಸಕರು ಇದ್ದಾರೆ. ಉಳಿದ 38 ಜನರಲ್ಲಿ ಕಾಂಗ್ರೆಸ್‌ನಲ್ಲಿ 30 ಶಾಸಕರು, ಹರಿಯಾಣ ಲೋಖಿತ್ ಪಕ್ಷಕ್ಕೆ ಒಬ್ಬ ಶಾಸಕರು ಇದ್ದರೆ ಏಳು ಮಂದಿ ಸ್ವತಂತ್ರ ಶಾಸಕರು ಇದ್ದಾರೆ. ಈ ಒಕ್ಕೂಟವು ಏಳು ಸ್ವತಂತ್ರರಲ್ಲಿ ಐವರು ಮತ್ತು ಸದನದಲ್ಲಿ ಹರಿಯಾಣ ಲೋಖಿತ್ ಪಕ್ಷದ ಬೆಂಬಲವನ್ನು ಹೊಂದಿದೆ. ಸರಳ ಬಹುಮತಕ್ಕೆ 45 ಸದಸ್ಯರ ಅಗತ್ಯವಿದೆ.
  Published by:MAshok Kumar
  First published: