ದೆಹಲಿ: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಬ್ರಿಟನ್ ರಾಣಿ ಎಲಿಜಬೆತ್ 2 ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತ ಸರ್ಕಾರದ ಪರವಾಗಿ ಅಧಿಕೃತವಾಗಿ ಕ್ವೀನ್ ಎಲಿಜಬೆತ್ 2 ಅವರ ಅಂತ್ಯಕ್ರಿಯೆಯಲ್ಲಿ (Queen Elizabeth Funeral) ಅವರು ಭಾಗವಹಿಸಲಿದ್ದಾರೆ. ಸೆಪ್ಟೆಂಬರ್ 17ರಂದು ಲಂಡನ್ಗೆ ಭೇಟಿ ನೀಡಲಿರುವ ಅವರು ಸೆಪ್ಟೆಂಬರ್ 19ರಂದು ಕ್ವೀನ್ ಎಲಿಜಬೆತ್ 2 ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬ್ರಿಟನ್ ರಾಣಿ ಎಲಿಜಬೆತ್ II ನಿಧನಕ್ಕೆ ಬ್ರಿಟನ್ನಲ್ಲಿ 10 ದಿನಗಳ ಶೋಕಾಚರಣೆ ಘೋಷಿಸಲಾಗಿತ್ತು. ಭಾರತದಲ್ಲೂ 1 ದಿನಗಳ ಶೋಕಾಚರಣೆ ಮಾಡುವಂತೆ ಕೇಂದ್ರ ಸರ್ಕಾರ ಆದೇಶಿಸಿತ್ತು. ಬ್ರಿಟನ್ ರಾಣಿ ಎಲಿಜಬೆತ್ II ನಿಧನದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 11 ರಂದು ಭಾರತದಾದ್ಯಂತ ಒಂದು ದಿನದ ಶೋಕಾಚರಣೆಯನ್ನು ಆಚರಿಸಲು ಭಾರತ ಸರ್ಕಾರ ನಿರ್ಧರಿಸಿತ್ತು.
ಬ್ರಿಟನ್‍ನ ರಾಣಿ ಎಲಿಜಬೆತ್ II ಅವರು ನವೆಂಬರ್ 13, 2015 ರಂದು ಲಂಡನ್‍ನಲ್ಲಿರುವ ಬಕಿಂಗ್‍ಹ್ಯಾಮ್ ಅರಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು.
ಕೊಹಿನೂರ್ ವಜ್ರ ಭಾರತಕ್ಕೆ ಮರಳಲಿದೆಯೇ?
800 ವರ್ಷಗಳ ಭಾರತದ ಇತಿಹಾಸ ಹೊಂದಿರುವ ಕೊಹಿನೂರು ವಜ್ರ 1937ರಲ್ಲಿ ಬ್ರಿಟಿಷ್ ರಾಣಿಯ ಕಿರೀಟ ಸೇರಿತ್ತು. ಈ ಬೆಲೆಬಾಳುವ ವಜ್ರ ಇಲ್ಲಿಯವರೆಗೂ ರಾಣಿ ಎಲಿಜಬೆತ್ 2ರ ಬಳಿ ಇತ್ತು. ಪ್ರಸ್ತುತ ರಾಣಿಯ ಮರಣದ ನಂತರ ಪ್ರತಿಷ್ಠಿತ ಕಿರೀಟ ಯಾರ ಕೈಗೆ ಸಿಗಲಿದೆ ಎಂಬ ಬಗ್ಗೆ ಭಾರಿ ಕೂತೂಹಲ ವ್ಯಕ್ತವಾಗಿತ್ತು. ಬ್ರಿಟನ್ ರಾಣಿ ಎಲಿಜಬೆತ್ II ರ ಮರಣದ ನಂತರ ರಾಜಮನೆತನದ ಜವಾಬ್ದಾರಿ ಚಾರ್ಲ್ಸ್ಗೆ ವರ್ಗಾವಣೆಯಾಗಿದೆ. ರಾಜಕುಮಾರ ಚಾರ್ಲ್ಸ್ ಅವರನ್ನು ಔಪಚಾರಿಕವಾಗಿ ಬ್ರಿಟನ್‌ನ ಹೊಸ ರಾಜ ಎಂದು ಘೋಷಣೆ ಮಾಡಲಾಗುವುದು.
ಕೆಮಿಲ್ಲಾ ಮುಡಿಗೇರಲಿದೆ ಕೊಹಿನೂರ್ ಕಿರೀಟ
ರಾಜಕುಮಾರ ಚಾರ್ಲ್ಸ್ ಪತ್ನಿ, ಡಚೆಸ್ ಆಫ್ ಕಾರ್ನ್‌ವಾಲ್ ಕೆಮಿಲ್ಲಾ, ಕ್ವೀನ್ ಕನ್ಸಾರ್ಟ್ ಎಂಬ ಬಿರುದು ಪಡೆದಿದ್ದಾರೆ. ಅದರ ಅರ್ಥ ರಾಜಕುಮಾರ ಚಾರ್ಲ್ಸ್ ಅವರ ಪತ್ನಿ ಬ್ರಿಟನ್ನಿನ ರಾಣಿ ಆಗಲಿದ್ದು ಪ್ರತಿಷ್ಠಿತ ಕೊಹಿನೂರ್ ಕಿರೀಟ ಕೂಡ ಕೆಮಿಲ್ಲಾ ಮುಡಿಗೇರಲಿದೆ.
ಬ್ರಿಟನ್ ರಾಣಿ ಎಲಿಜಬೆತ್ II ತಮ್ಮ 96 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ಸ್ಕಾಟ್ಲೆಂಡ್‌ನ ಬಾಲ್ಮೋರಲ್ ಪ್ಯಾಲೇಸ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ. ರಾಣಿ ಎಲಿಜಬೆತ್ II ಸುದೀರ್ಘ ಸೇವೆ ಸಲ್ಲಿಸಿದ ಬ್ರಿಟನ್‌ನ ರಾಣಿಯಾಗಿದ್ದು, ಲಂಡನ್‌ನ ಮೇಫೇರ್‌ನಲ್ಲಿ ಡ್ಯೂಕ್ ಮತ್ತು ಡಚೆಸ್ ಆಫ್ ಯಾರ್ಕ್‌ನ ಮೊದಲ ಮಗುವಾಗಿ ಜನಿಸಿದ್ದರು.
21ನೇ ವಯಸ್ಸಲ್ಲಿ ಪ್ರತಿಜ್ಞೆ ಮಾಡಿದ್ದ ರಾಣಿ
ರಾಣಿ ಎಲಿಜಬೆತ್ ತನ್ನ 21 ನೇ ಹುಟ್ಟುಹಬ್ಬದಂದು ತನ್ನ ಇಡೀ ಜೀವನವನ್ನು ಸಾರ್ವಜನಿಕ ಸೇವೆಗೆ ಮುಡಿಪಾಗಿಡುವುದಾಗಿ ಪ್ರತಿಜ್ಞೆ ಮಾಡಿದರು. ಯುಕೆಯಲ್ಲಿರುವ ಎಲ್ಲಾ ಪಾಸ್‌ಪೋರ್ಟ್‌ಗಳನ್ನು ರಾಣಿಯ ಹೆಸರಿನಲ್ಲಿ ನೀಡಲಾಗುತ್ತದೆ. ಆದ್ದರಿಂದ, ಅವರು ಪ್ರಯಾಣಿಸಲು ಪಾಸ್ಪೋರ್ಟ್ ಅಗತ್ಯವಿಲ್ಲ. ಅವರ ವಾಹನಕ್ಕೂ ಪರವಾನಗಿ ಫಲಕ ಮತ್ತು ಚಾಲನಾ ಪರವಾನಗಿ ಅಗತ್ಯವಿರಲಿಲ್ಲ.
ಇದನ್ನೂ ಓದಿ: UK Currency: ಯುಕೆ ರಾಣಿಯ ಚಿತ್ರವಿರುವ ನೋಟುಗಳು ಬದಲಾಗುತ್ತಾ? ಇನ್ಮುಂದೆ ಹೇಗಿರಲಿದೆ ಇಲ್ಲಿನ ಕರೆನ್ಸಿ
ರಾಣಿ ಎಲಿಜಬೆತ್ ತನ್ನ ಮೊದಲ ಇ-ಮೇಲ್ ಅನ್ನು 1976 ರಲ್ಲಿ ಕಳುಹಿಸಿದ್ದರು. ಅಲ್ಲದೇ 2019 ರಲ್ಲಿ ತನ್ನ Instagram ಪೋಸ್ಟ್ ಅನ್ನು ಪ್ರಕಟಿಸಿದ್ದರು. 2010 ರಲ್ಲಿ, ಅವರು The British Monarchy ಎಂಬ ಹೆಸರಿನ ಪೇಜ್ ಮೂಲಕ ಫೇಸ್‌ಬುಕ್‌ಗೆ ಎಂಟ್ರಿ ಕೊಟ್ಟಿದ್ದರು.
ಪ್ರತಿಷ್ಠಿತ ನಿಯತಕಾಲಿಕೆ ಫಾರ್ಚೂನ್ ಪ್ರಕಾರ, ರಾಣಿ ಎಲಿಜಬೆತ್ 500 ಮಿಲಿಯನ್ ಡಾಲರ್ (ಸುಮಾರು 4,000 ಕೋಟಿ ರೂಪಾಯಿ) ವೈಯಕ್ತಿಕ ಸಂಪತ್ತನ್ನು ಹೊಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ