ಅಗರ್ತಲ: ತ್ರಿಪುರಾ ವಿಧಾನಸಭಾ ಚುನಾವಣೆಗೆ ಮುನ್ನ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ (Congress) ವಿರುದ್ಧ ದಾಳಿ ನಡೆಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (Trinamool Congress) ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banarjee) ಕಾಂಗ್ರೆಸ್ (Congress) ಪಕ್ಷ ಬಿಜೆಪಿಯ(BJP) ಬಿ ಟೀಮ್ ಎಂದು ಅಚ್ಚರಿಕೆಯ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಆಡಳಿತ ಪಕ್ಷಕ್ಕೆ ಪ್ರಬಲ ಎದುರಾಳಿಯಾಗಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಪಕ್ಷವನ್ನೇ ಮಮತಾ ಬ್ಯಾನರ್ಜಿ ಬಿಜೆಪಿ ಜೊತೆಗಾರ ಎಂದು ಹೇಳಿದ್ದಾರೆ.
ಫೆಬ್ರವರಿ 16 ರಂದು ತ್ರಿಪುರಾ ವಿಧಾನಸಭಾ ಚುನಾವಣೆ ನಡೆಯಲಿದ್ದು ಮಾರ್ಚ್ 2ರಂದು ಫಲಿತಾಂಶ ಬರಲಿದೆ. ಮಮತಾ ಬ್ಯಾನರ್ಜಿ ಇತರ ರಾಜ್ಯಗಳಲ್ಲಿ ತಮ್ಮ ಪಕ್ಷದ ಹೆಜ್ಜೆಗುರುತನ್ನು ವಿಸ್ತರಿಸಲು ಉತ್ಸುಕರಾಗಿದ್ದಾರೆ. ಮಂಗಳವಾರ ತ್ರಿಪುರಾದ ಅಗರ್ತಲಾದಲ್ಲಿ ಟಿಎಂಸಿ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಮಮತಾ ಬ್ಯಾನರ್ಜಿ ಪಾಲ್ಗೊಂಡಿದ್ದರು.
ಬಂಗಾಳದಂತೆ ಅಭಿವೃದ್ಧಿ
ಈ ವೇಳೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮಮತಾ, ಬಂಗಾಳದಲ್ಲಿ ನಾವು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಆರೋಗ್ಯ ವಿಮೆಗಾಗಿ ಸ್ವಾಸ್ಥ್ಯ ಸತಿ ಕಾರ್ಡ್ ನೀಡುತ್ತೇವೆ. ಕೇಂದ್ರ ಸರ್ಕಾರ ನೀಡಿರುವ ಆಯುಷ್ಮಾನ್ ಭಾರತ್ ಕಾರ್ಡ್ನಲ್ಲಿ ವಿಶ್ವಾಸ ಇಲ್ಲ. ಬಂಗಾಳದ ಮಾದರಿಯನ್ನುಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ. ತ್ರಿಪುರಾವನ್ನು ಹಾಗೆ ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: Narendra Modi: ಆಡಳಿತ ವಿರೋಧಿ ಅಲೆ ತಪ್ಪಿಸಲು ಮೋದಿ ಕೊಟ್ಟ ಸಲಹೆ ಇದು!
ಎದುರಾಳಿಗಳನ್ನು ಎದುರಿಸುವುದು ಬಿಜೆಪಿ ಕೆಲಸ
ಡಬಲ್ ಇಂಜಿನ್ ಆಡಳಿತದಲ್ಲಿ ದೇಶದಲ್ಲಿ ಶೇ.40 ರಷ್ಟು ನಿರುದ್ಯೋಗ ಹೆಚ್ಚಾಗಿದೆ, ಅವರು ನೀಡಿದ ಭರವಸೆಗಳನ್ನು ಈಡೇರಿಸಿದ್ದಾರೆಯೇ? ನಿಮ್ಮ ಖಾತೆಗೆ 15 ಲಕ್ಷ ರೂಪಾಯಿ ಬಂದಿದೆಯೇ ಎಂದು ಅವರು ಪ್ರಶ್ನಿಸಿದರು. ಬಿಜೆಪಿಗೆ ರಾಜಕೀಯವಾಗಿ ಹೋರಾಡಲು ಸಾಧ್ಯವಾಗುತ್ತಿಲ್ಲ, ಅದಕ್ಕಾಗಿಯೇ ಅದು ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯದಂತಹ (ED) ಕೇಂದ್ರೀಯ ಸಂಸ್ಥೆಗಳನ್ನು ವಿರೋಧ ಪಕ್ಷದ ನಾಯಕರ ಮೇಲೆ ದಾಳಿ ಮಾಡಿಸುತ್ತಿದೆ ಎಂದು ಅವರು ಹೇಳಿದರು.
" ನೋಟು ಅಮಾನ್ಯೀಕರಣದ ನಂತರ ಕಪ್ಪುಹಣ ವಾಪಸ್ ಬರಲಿದೆ ಎಂದಿದ್ದರು, ಬಂದಿದೆಯೇ? ಒಂದು ವೇಳೆ ಭಾರತೀಯ ಜೀವ ವಿಮಾ ನಿಗಮ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಳುಗಿದರೆ, ನಮ್ಮ ಹಣವನ್ನು ಮರಳಿ ಪಡೆಯುತ್ತೇವೆಯೇ? ಇಡಿ ಮತ್ತು ಸಿಬಿಐ ಸಹಾಯದಿಂದ ನಮ್ಮನ್ನು ನಾಶಮಾಡುತ್ತೇವೆ ಎಂದು ನೀವು ಯೋಚಿಸುತ್ತಿದ್ದರೆ, ಅದು ಸುಲಭವಲ್ಲ" ಎಂದು ಬಿಜೆಪಿಗೆ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ, ಕೇಂದ್ರ ಸರ್ಕಾರ ನಮ್ಮ 100 ದಿನಗಳ ಯೊಜನೆಗೆ ಹಣವನ್ನು ನೀಡುತ್ತಿಲ್ಲ. ರಾಜ್ಯ ಸರ್ಕಾರದ ತೆರಿಗೆಯನ್ನು ಕೇಂದ್ರ ಸರ್ಕಾರ ಕಬಳಿಸುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಟಿಎಂಸಿ ಮುಖ್ಯಸ್ಥೆ, ಕಾಂಗ್ರೆಸ್ ಈಗ ಬಿಜೆಪಿಯ ಟೀಮ್ ಬಿ ಆಗಿದೆ. ಈ ಕಾಂಗ್ರೆಸ್ ನಾನು ಹಿಂದೆ ಒಡನಾಟ ಹೊಂದಿದ್ದ ಕಾಂಗ್ರೆಸ್ನಂತೆ ಇದ್ದಿದ್ದರೆ, ನಾನು ಎಂದಿಗೂ ಆ ಪಕ್ಷವನ್ನು ಬಿಡುತ್ತಿರಲಿಲ್ಲ. ಆದರೆ ಈಗಿರುವ ಕಾಂಗ್ರೆಸ್ ಬಿಜೆಪಿಯ 'ಬಿ' ಟೀಮ್" ನಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಟಿಎಂಸಿ ಬಿಜೆಪಿಯನ್ನು ದೇಶದಿಂದಲೇ ಕಿತ್ತೊಗೆಯಲಿದೆ
ತೃಣಮೂಲ ಕಾಂಗ್ರೆಸ್(ಟಿಎಂಸಿ) ಬಿಜೆಪಿಯ 'ಡಬಲ್ ಇಂಜಿನ್' ಸರ್ಕಾರವನ್ನು ದೇಶದಿಂದ ಕಿತ್ತೊಗೆಯಲಿದೆ. ಟಿಎಂಸಿ ಏನು ಹೇಳುತ್ತದೋ ಅದನ್ನು ಒಮ್ಮೆ ನೆನಪಿಟ್ಟುಕೊಳ್ಳಿ . ಇದು ದೇಶದಿಂದ ಡಬಲ್ ಎಂಜಿನ್ ಸರ್ಕಾರವನ್ನು ಮುಂದೊಂದು ದಿನ ಕಿತ್ತೊಗೆಯುತ್ತದೆ. ತ್ರಿಪುರಾ, ಮೇಘಾಲಯ ಮತ್ತು ಇತರ ರಾಜ್ಯಗಳು ಬಂಗಾಳದ ಪರವಾಗಿ ನಿಲ್ಲುತ್ತವೆ ಎಂದು ಪಶ್ಚಿಮ ಬಂಗಾಳ ಸಿಎಂ ಹೇಳಿದ್ದಾರೆ.
ಸ್ವಾತಂತ್ರ್ಯ ಕಸಿದುಕೊಳ್ಳುತ್ತಿರುವ ಬಿಜೆಪಿ
ಬಿಜೆಪಿ ಆಡಳಿತದಲ್ಲಿ ವಿರೋಧ ಪಕ್ಷಗಳಿಗೆ ಸಭೆ ನಡೆಸಲು ಅವಕಾಶ ಕೊಡುತ್ತಿಲ್ಲ, ಪತ್ರಕರ್ತರ ಸ್ವಾತಂತ್ರ್ಯ ಇಲ್ಲಂದಂತಾಗಿದೆ. ಎರಡೂ ವರ್ಷಗಳ ಹಿಂದೆ ಇಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ದಾಳಿ ಮಾಡಿ, ಅವರ ವಾಹನಗಳನ್ನು ಪುಡಿಗಟ್ಟಲಾಗಿದೆ. ಕೆಲವರನ್ನು ಅಕ್ರಮವಾಗಿ ಜೈಲಿಗೆ ಕಳುಹಿಸಲಾಗಿದೆ. ಈ ರಾಜ್ಯದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವ ಕಳೆದುಕೊಂಡಿದೆ. ನಮ್ಮ ನಾಯಕರು ಮತ್ತು ಸದಸ್ಯರನ್ನು ಹಿಂಸಿಸಲಾಗುತ್ತಿದೆ ಎಂದು ಮಮತಾ ಬಿಜೆಪಿ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ